ದಕ್ಷಿಣ ಆಫ್ರಿಕಾದ ಗಾಂಧಿ ನೆಲ್ಸನ್ ಮಂಡೇಲಾ

 

 

ಆತ ಈ ಲೋಕದಿಂದ ದೂರವಾಗಿದ್ದು 2013ರ ಡಿಸೆಂಬರ್ 5ರಂದು. ಇದ್ದಾಗಲೂ ಸತ್ತು ಬದುಕಿದವರು. ಬದುಕು – ಸಾವು, ಜೈಲು – ರಾಷ್ಟ್ರಾಧ್ಯಕ್ಷತೆ, ನೊಬಲ್ ಪ್ರಶಸ್ತಿ – ತೆಗಳಿಕೆ ಎಲ್ಲಕ್ಕೂ ಅತೀತರಾಗಿದ್ದವರು.
ನೆಲ್ಸನ್ ಮಂಡೇಲ ಅವರು ಹುಟ್ಟಿದ್ದು 1918ರ ಜುಲೈ 18ರಂದು. ಈ ಸಂದರ್ಭದಲ್ಲಿ ಪಿ. ಲಂಕೇಶರು ಮಾರ್ಚ್ 18, 1990ರಲ್ಲಿ ಬರೆದ ‘ಟೀಕೆ – ಟಿಪ್ಪಣಿ’ ಯಲ್ಲಿರುವ ಮಾತುಗಳೊಂದಿಗೆ ಈ ಮಹಾತ್ಮನನ್ನು ನೆನೆಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
ಮೊದಲು ಆಫ್ರಿಕಾ ಜನರ ಹುಮ್ಮಸ್ಸು ಮತ್ತು ನೈಸರ್ಗಿಕ ಬದುಕು ನೋಡಿ. ತಿಂದು ಉಂಡು ಹಾಡಿಕೊಂಡು ತಮ್ಮ ಬುಡಕಟ್ಟಿನ ವಿಧಿ ಸಂಸ್ಕಾರಗಳಿಗೆ ಬದ್ಧರಾಗಿದ್ದು ಕಣ್ಣುಮುಚ್ಚುವ ಜನ ಇವರು. ಇಂಥವರ ನಡುವೆ ನುಗ್ಗಿದ ಬಿಳಿಯರು ತಮ್ಮ ಅಂತರ್ರಾಷ್ಟ್ರೀಯ ಧರ್ಮ ಮತ್ತು ಸಾಮ್ರಾಜ್ಯಶಾಹಿ ಸುಲಿಗೆಗಾಗಿ ಪುಸ್ತಕ, ಶಸ್ತ್ರ, ತಂತ್ರವನ್ನೆಲ್ಲ ತಂದರು; ಮುಗ್ಧ ಆಫ್ರಿಕನ್ನರನ್ನು ಬಗ್ಗುಬಡಿದು ಅವರ ನೆಲದ ಚಿನ್ನ, ವಜ್ರ, ತಾಮ್ರವನ್ನು ಕಿತ್ತುಕೊಂಡರು, ಎಲ್ಲಕ್ಕಿಂತ ಹೆಚ್ಚಾಗಿ ಅವರ ಸ್ವಾಭಿಮಾನಕ್ಕೆ ಸವಾಲೆಸದರು.
ಗಾಂಧೀಜಿ ಪ್ರತಿಭಟಿಸಿದ್ದು ಆಗಲೇ. ಬ್ರಿಟಿಷರ ಜಾಣತನ ಮತ್ತು ಭಾರತೀಯರ ಸಹನೆಯನ್ನು ಒಂದುಗೂಡಿಸಿಕೊಂಡ ಗಾಂಧೀಜಿ ಅಹಿಂಸೆಯನ್ನು ನೆಚ್ಚಿ ಹೋರಾಡಿದರು. ಒಂದು ಜನಾಂಗಕ್ಕೆ ಹೊಂದುವ ಅಹಿಂಸೆ ಇನ್ನೊಂದು ಜನಾಂಗಕ್ಕೆ ಸರಿಹೊಂದಲಿಕ್ಕಿಲ್ಲ ಎಂಬುದು ಗೊತ್ತಾಯಿತು. ಏಕೆಂದರೆ ಮಂಡೆಲಾ ಕೂಡ ಅಹಿಂಸೆಯಿಂದ ಹೋರಾಡತೊಡಗಿದಾಗ ಬಿಳಿಯರು ಅವನ ಜೊತೆಗಾರರನ್ನು ಕೊಚ್ಚಿ ಹಾಕಿದರು. ಗಾಂಧೀಜಿಯ ಮಾತು ಮಂಡೇಲಾ ಮತ್ತು ಮಿತ್ರರಿಗೆ ಮರಣದಂಡನೆಯಂತೆ ಕಂಡಿತು.
ಇಲ್ಲಿ ಕೆಲವು ವಿಚಿತ್ರಗಳಿವೆ. ಗಾಂಧೀಜಿ ದಿವಾನನ ಮಗನಾಗಿದ್ದರೆ ಮಂಡೇಲಾ ದೊರೆಯ ಮಗ, ರಾಜಕುಮಾರ. ದೊರೆ ಎಂದರೆ ನಮ್ಮ ಜೈಪುರ, ಮೈಸೂರಿನ ದೊರೆಗಳಂತಲ್ಲ. ಆತ ತನ್ನ ಬುಡಕಟ್ಟಿನ ದೊರೆಯ ಮಗ. ದನ ಕಾಯ್ದವನು, ಹಕ್ಕಿ ಹೊಡೆದವನು, ಮರದಿಂದ ಹಣ್ಣು ಕಿತ್ತು ತಿಂದವನು. ಹಾಗೆಯೇ ಆಫ್ರಿಕಾದ ವರ್ಣೀಯರ ಆಧುನಿಕತೆಯ ಭಾಗವಾಗಿ ವಿಶ್ವವಿದ್ಯಾನಿಲಯದಲ್ಲಿ ಓದಿದವನು. ಅಲ್ಲಿಯೇ ಮಂಡೇಲಾಗೆ ಬಿಳಿಯರ ಒಗಟು ಗೊತ್ತಾದದ್ದು; ಅವರು ಎಸಗಿದ ಅನ್ಯಾಯ ಗೊತ್ತಾದದ್ದು. ವಿಶ್ವವಿದ್ಯಾಲಯದ ವಿದ್ಯಾರ್ಥಿ ದೆಸೆಯಿಂದಲೇ ಬಿಳಿಯರ ವಿರುದ್ಧ ಸ್ನೇಹಿತರನ್ನು ಎತ್ತಿಕಟ್ಟಿದ ಮಂಡೇಲಾ ಮದುವೆಯಾದ. ಮದುವೆಯಾಗಿ ಕೆಲಕಾಲದಲ್ಲೇ ಹೆಂಡತಿಯನ್ನು ಬಿಟ್ಟು ವಿನ್ನಿಯನ್ನು ಮದುವೆಯಾದ. ಮುಂದೆ ಕೂಡಾ ಈತನ ಮೊದಲ ಹೆಂಡತಿ ನೋವನ್ನನುಭವಿಸುತ್ತ, “ನನ್ನ ಕೈಬಿಟ್ಟ ಮಂಡೇಲಾ ದೊಡ್ಡ ಮನುಷ್ಯನಾಗಲು ಹೇಗೆ ಸಾಧ್ಯ?” ಎಂದು ಕೇಳುತ್ತಿದ್ದಳು. ಆದರೆ ಈಕೆಯ ವಾದವನ್ನು ಮೀರಿದ್ದು ಮಂಡೇಲಾ ಸಮಸ್ಯೆ. ವಿನ್ನಿಯನ್ನು ಅತ್ಯಂತ ಎಚ್ಚರದಿಂದ ಪೊರೆದ ಮಂಡೇಲಾ ತನಗೆ ಅಭಿಮಾನಿಗಳು ನೀಡಿದ ಉಡುಗೊರೆಗಳನ್ನೆಲ್ಲ (ಜೈಲಿನಿಂದ ಕೂಡ) ವಿನ್ನಿಗೆ ಕಳಿಸಿದ. ಇದರ ಬಗ್ಗೆ ಕೂಡ ಆಕ್ಷೇಪಣೆ ಎತ್ತುವವರಿದ್ದಾರೆ. ಆದರೆ ಇಂಥವರಿಗೆ ಮಂಡೇಲಾನಲ್ಲಿ ಕುಟುಂಬದ ಬಗೆಗಿನ ಕಾಳಜಿ ಆಫ್ರಿಕನ್ನನ ವಿಶಿಷ್ಠ ಗುಣ ತಿಳಿದಿರಲಿಕ್ಕಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಶ್ರೀ ಅರವಿಂದರು ಮಹಾನ್ ತತ್ವಜ್ಞಾನಿ

Sat Dec 24 , 2022
    ಭಾರತದ ಸ್ವಾತಂತ್ರ್ಯ ಹೋರಾಟಗಾರರು. ಇಂದು ಈ ಮಹಾನ್ ಸಂತರ ಸಂಸ್ಮರಣಾ ದಿನ. ಅರವಿಂದರು 1872ರ ಆಗಸ್ಟ್ 15ರಂದು, ಕಲಕತ್ತೆಯಲ್ಲಿ ಕೃಷ್ಣಧನ ಘೋಷ್ ಮತ್ತು ಸ್ವರ್ಣಲತಾ ದೇವಿಯರಿಗೆ ತೃತೀಯ ಪುತ್ರರಾಗಿ ಜನಿಸಿದರು. ಆಂಗ್ಲೇಯರಿಂದ ಪ್ರಭಾವಿತರಾದ ಅವರ ತಂದೆಯವರು ಅರವಿಂದರಿಗೆ ‘ಒರೊಬಿಂದೋ ಅಕ್ರಾಯ್ಡ್ ಘೋಷ್’ ಎಂಬ ಜನ್ಮನಾಮವನ್ನು ಕೊಟ್ಟರು. ಭಾರತೀಯತೆಯ ಪ್ರಭಾವ ತಮ್ಮ ಮಕ್ಕಳ ಮೇಲೆ ಬೀಳಬಾರದೆಂಬ ಉದ್ದೇಶದಿಂದ ಅವರನ್ನು ಇಂಗ್ಲೆಂಡಿಗೆ ರವಾನಿಸಿದರು. ಇಂಗ್ಲೆಂಡಿನಲ್ಲಿಯೇ 13ವರ್ಷ ಕಳೆದ ಅರವಿಂದರು, ಪಾಶ್ಚಾತ್ಯ […]

Advertisement

Wordpress Social Share Plugin powered by Ultimatelysocial