ನಿದ್ರೆಯ ಬಗ್ಗೆ ಎಚ್ಚರವಾಗಿರಿ!

ನಿದ್ರೆಯ ಬಗ್ಗೆ ಎಚ್ಚರವಾಗಿರಿ!

ಇತ್ತೀಚಿನ ದಿನಗಳಲ್ಲಿ, ಅದೂ ವಿಶೇಷವಾಗಿ ನಗರ ಜೀವನದಲ್ಲಿ ಸರಿಯಾದ, ಶಿಸ್ತಿನ ನಿದ್ರೆ ಇಲ್ಲದಿರುವುದು ಬಹಳಷ್ಟು ಜನರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡಿದೆ.

ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿದ್ರೆ ಜಾಸ್ತಿಯಾದರೂ ಅಪಾಯ. ನಿದ್ರೆ ಕಡಿಮೆಯಾದರೂ ಅಪಾಯ. ಒಳ್ಳೆಯ ನಿದ್ರೆ ಒಳ್ಳೆಯ ಆರೋಗ್ಯಕ್ಕೆ ಅನಿವಾರ್ಯ. ಹಣ ಕೊಟ್ಟು ಹಾಸಿಗೆಯನ್ನು ಖರೀದಿಸಬಹುದು. ಆದರೆ ಅದೇ ಹಣವನ್ನು ಕೊಟ್ಟು ನಿದ್ರೆಯನ್ನು ಖರೀದಿಸಲಿಕ್ಕಾಗುವುದಿಲ್ಲ. ಹಣದಿಂದ ನಿದ್ರೆ ಮಾತ್ರೆಗಳನ್ನು ಕೊಂಡು, ತಿಂದು ನಿದ್ರಿಸಬಹುದು. ಆದರೆ ಅದರಿಂದ ಮುಂದೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾಗಿ ಸಹಜ ನಿದ್ರೆಯೇ ಸಹಜ ಆರೋಗ್ಯದ ಸೋಪಾನ. ಅದೂ ಪ್ರತಿ ರಾತ್ರಿ ಸಹಜ ನಿದ್ರೆ ಬಹಳ ಮುಖ್ಯ.

ನಗರದಲ್ಲಿ, ಅದೂ ಸಾಫ್ಟ್‌ವೇರ್‌ ಸಂಸ್ಕೃತಿ ಹೆಚ್ಚಾಗುತ್ತಿದ್ದಂತೆ ಜನರಲ್ಲಿ ರಾತ್ರಿನಿದ್ರೆ ಕಡಿಮೆಯಾಗುತ್ತಿದೆ. ಕೆಲಸ ಮಾಡುವವರದ್ದು ಅನಿವಾರ್ಯ ಆದರೆ, ಮೊಬೈಲು ಗೀಳಿಗೆ ಬಿದ್ದವರದ್ದು ಮತ್ತೊಂದು ರೀತಿಯ ಗೋಳು. ಅಂಥ ಯುವಕರು ಪಾಲಕರ ಮಾತನ್ನು ಕೇಳುವುದಿಲ್ಲ. ರಾತ್ರಿ ಮೊಬೈಲ್‌ ಜೊತೆಗೆ ಜಾಗರಣೆ ಮಾಡುತ್ತಾರೆ. ಸ್ಲೀಪ್‌ಲೆಸ್‌ ನೈಟ್‌ಗಳಲ್ಲಿ ಸ್ಕ್ರೀನ್‌ಟೈಮ್‌ ಜಾಸ್ತಿ ಮಾಡಿಕೊಳ್ಳುತ್ತಾರೆ. ಹಗಲು ನಿದ್ರೆಗೆ ಜಾರುತ್ತಾರೆ. ಇದರಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾರೆ.

ರಾತ್ರಿ ನಿದ್ರೆ ಮಾಡುವಾಗ ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ಮೊಬೈಲಿಗೆ ಬ್ಯಾಟರಿ ಚಾರ್ಜ್‌ ಮಾಡಿದಂತೆ ನಮ್ಮ ದೇಹವನ್ನು ಸರಿಯಾದ ನಿದ್ರೆಯಿಂದ ಚಾರ್ಜ್‌ ಮಾಡಿಕೊಳ್ಳಲಾಗುತ್ತದೆ. ಸರಿಯಾದ ನಿದ್ರೆ ಬರದಿದ್ದರೆ ಮರುದಿನ ಮೂಡ್‌ ಹಾಳಾಗಿರುತ್ತದೆ. ದೇಹದಲ್ಲಿ ಉತ್ಸಾಹ ಇರುವುದಿಲ್ಲ. ತಲೆ ನೋಯುತ್ತದೆ. ಇಡೀ ದಿವಸ ಅಸುಖ ಮತ್ತು ಅಶಾಂತಿಯಿಂದ ಕಿರಿಕಿರಿಯಾಗುತ್ತ ಇರುತ್ತದೆ. ಅದೇ ಸರಿಯಾಗಿ ನಿದ್ರೆ ಮಾಡಿ ಎದ್ದರೆ ದಿನವಿಡೀ ಉತ್ಸಾಹದಿಂದ ಇರಲಿಕ್ಕಾಗುತ್ತದೆ. ಮನಸ್ಸು ಮುದವಾಗಿರುತ್ತದೆ. ಖುಷಿ ಖುಷಿಯಾಗಿ ಕೆಲಸ‍-ಕಾರ್ಯಗಳನ್ನು ಮಾಡಿಕೊಂಡಿರಲಿಕ್ಕೆ ಸಾಧ್ಯ ಆಗುತ್ತದೆ.

ರಾತ್ರಿ ನಿದ್ರೆ ಮಾಡಿದಾಗ ಹೃದಯಬಡಿತ ಮತ್ತು ಉಸಿರಾಟದ ವೇಗ ಏರುಪೇರಾಗುತ್ತಿರುತ್ತದೆ. ನಿಧಾನಗತಿಯದಾಗಿರುತ್ತದೆ. ರಕ್ತದಲ್ಲಿ ದೇಹವನ್ನು ಆರೋಗ್ಯದಿಂದ ಇಡಲು ಬೇಕಾದ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ಶಕ್ತಿ ಉತ್ಪಾದನೆಯಾಗುತ್ತದೆ. ದೇಹಕ್ಕೇನಾದರೂ ತೊಂದರೆ ಆಗಿದ್ದಿದ್ದರೆ ಅದು ಗುಣವಾಗುತ್ತದೆ.

ಸರಿಯಾದ ನಿದ್ರೆಯಿಂದ ಸಾಕಷ್ಟು ರೋಗನಿರೋಧಕ ಶಕ್ತಿಯು ಇರುತ್ತದೆ. ಸರಿಯಾದ ನಿದ್ರೆ ಮಾಡುವವರು ಪದೆ ಪದೇ ಅನಾರೋಗ್ಯಕ್ಕೀಡಾಗುವುದಿಲ್ಲ. ಸಮತೋಲನದ ನಿದ್ರೆ ಮಾಡುವವರಿಗೆ ಆರೋಗ್ಯಪೂರ್ಣವಾದ ದೇಹತೂಕವಿರುತ್ತದೆ. ಕೊಬ್ಬು, ಬೊಜ್ಜು ಹೆಚ್ಚಾಗುವುದಿಲ್ಲ. ಹೃದಯದ ಕಾಯಿಲೆ, ಕ್ಯಾನ್ಸರ್‌, ಮಧುಮೇಹದಂತಹ ರೋಗಗಳು ಬರುವ ಸಾಧ್ಯತೆ ಕಡಿಮೆ ಎಂದು ಸಂಶೋಧನೆಗಳಿಂದ ತಿಳಿದಿದೆ.

ಸರಿಯಾದ ನಿದ್ರೆಯಿಂದ ಗ್ರಹಣಶಕ್ತಿಯು ಹೆಚ್ಚುತ್ತದೆ. ನೆನಪಿನ ಶಕ್ತಿಯು ಹೆಚ್ಚುತ್ತದೆ. ಮರೆಗುಳಿತನ ಬರುವುದಿಲ್ಲ. ಮನಸ್ಸು ನೆಮ್ಮದಿಯಿಂದ ಇರುತ್ತದೆ. ಉದ್ವೇಗ, ಒತ್ತಡ ಆಗುವುದಿಲ್ಲ. ಕೂದಲು ಮತ್ತು ಚರ್ಮವು ಕಾಂತಿಯುತವಾಗಿರುತ್ತದೆ. ಎಲ್ಲರೊಟ್ಟಿಗೆ ಉತ್ಸಾಹದಿಂದ ಬೆರೆತು ಬದುಕುವುದು ಸಹಜವಾಗಿರುತ್ತದೆ. ಹೊಸ ಹೊಸ ಆಲೋಚನೆಗಳು ಬರುತ್ತವೆ. ವ್ಯಕ್ತಿಯು ಕ್ರಿಯಾಶೀಲನಾಗುತ್ತಾನೆ. ನಿದ್ರಾಹೀನತೆಯಿಂದ ಕೊಬ್ಬು, ಬೊಜ್ಜು ಬರುತ್ತದೆ. ಮನಃಸ್ಥಿತಿಯು ಅಸ್ತವ್ಯಸ್ತವಾಗಿರುತ್ತದೆ. ಅಜೀರ್ಣರೋಗವು ಶುರುವಾಗುತ್ತದೆ. ಅಮೂಲಕ ಇನ್ನಿತರೆ ರೋಗಗಳು ಬರುತ್ತವೆ. ಹಾರ್ಮೋನುಗಳಲ್ಲಿ ವ್ಯತ್ಯಾಸವಾಗುತ್ತದೆ. ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ.

ಕೆಲವರ ಪ್ರಕಾರ ದಿನಕ್ಕೆ ಐದು ಗಂಟೆಗಳಷ್ಟು ನಿದ್ರೆ ಸಾಕು. ಆದರೆ ಸಂಶೋಧನೆಗಳ ಪ್ರಕಾರ ಆರೋಗ್ಯಪೂರ್ಣ ವ್ಯಕ್ತಿಗೆ ದಿನಕ್ಕೆ ಸರಾಸರಿ ಆರರಿಂದ ಎಂಟು ಗಂಟೆಗಳಷ್ಟು ನಿದ್ರೆಯ ಅಗತ್ಯವಿದೆ. ಮಕ್ಕಳು ಹೆಚ್ಚು ನಿದ್ರೆ ಮಾಡಿದಷ್ಟೂ ಒಳ್ಳೆಯದು ಎನ್ನುವುದು ನಮ್ಮ ಹಳ್ಳಿಗರ ಹಳೆಯ ನಂಬಿಕೆ. ಅದೂ ರಾತ್ರಿ ಕಡುಗತ್ತಲೆಯಲ್ಲಿ ನಿದ್ರೆ ಮಾಡುವುದು ಬಹಳ ಒಳ್ಳೆಯದು. ಟಿವಿ ಬಂದ ಮೇಲೆ ಅರ್ಧ ನಿದ್ರೆ ಹೋಯಿತು. ಮೊಬೈಲು ಬಂದ ಮೇಲಂತೂ ಜೀವನದಲ್ಲಿ ನೆಮ್ಮದಿಯೇ ಹೋಯ್ತು ಎನ್ನುವ ಹಂತವನ್ನು ಈಗ ತಲುಪುತ್ತಿದ್ದೇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಾಲು ಎಂಬ ಅಮೃತ

Tue Dec 28 , 2021
ಮಾನವನ ಉಪಯೋಗಕ್ಕೆ ದೇಶಕಾಲಗಳಿಗೆ ತಕ್ಕಂತೆ ಹಸು, ಆಡು, ಒಂಟೆ, ಕುರಿ, ಎಮ್ಮೆ – ಇನ್ನೂ ಹಲವು ಪ್ರಾಣಿಗಳ ಹಾಲು ಬಳಕೆಯಲ್ಲಿದೆ. ಹಾಲನ್ನು ಆಹಾರವಾಗಿಯೂ ಔಷಧವಾಗಿಯೂ ಮನುಷ್ಯ ಬಳಸುತ್ತ ಬಂದಿದ್ದಾನೆ. ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ ಮೇಲೆಕೆನೆಗೆಡೆದರೆ ಬೆಣ್ಣೆಯಾದೆ ಮೇಲಾದ ತುಪ್ಪವೂ ನಾನದೆ ಕಾಸಿದರೆ ನೀನಾರಿಗಾದೆಯೋ ಎಲೆ ಮಾನವಾ ಇದು ನಾವು ಚಿಕ್ಕವರಿದ್ದಾಗ ಕಲಿತ ಪದ್ಯ. ಇದರ ವಿವರಣೆಯ ಆಳ-ಅರಿವು ಅರಿಯಲು ಬಲು ಕಠಿಣ. ಹಾಲು ಎಂದೊಡನೆ ನೆನಪಿಗೆ ಬರುವುದು ತಾಯಿಯ […]

Advertisement

Wordpress Social Share Plugin powered by Ultimatelysocial