Nipah virus: ಗುಂಡ್ಲುಪೇಟೆ ಗಡಿಯಲ್ಲಿ ತಪಾಸಣೆ ತೀವ್ರ

ಚಾಮರಾಜನಗರ, ಸೆಪ್ಟೆಂಬರ್‌, 15: ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳ ಗಡಿ ಪ್ರದೇಶದ ಕೋಯಿಕ್ಕೊಡ್ ಜಿಲ್ಲೆಯಲ್ಲಿ ನಿಪಾ ವೈರಸ್‌ ಕಾಣಿಸಿಕೊಂಡಿರುವುದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಗುಂಡ್ಲುಪೇಟೆ ತಾಲೂಕಿನ ಗಡಿ ಚೆಕ್ಪೋಸ್ಟ್ ಮೂಲೆಹೊಳೆಯಲ್ಲಿ ಅರಣ್ಯ ಸಿಬ್ಬಂದಿ ಕೇರಳದಿಂದ ಬರುವ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸುತ್ತಿದ್ದಾರೆ.

 

ಗುಂಡ್ಲುಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಅವರ ನೇತೃತ್ವದಲ್ಲಿ ಕೇರಳದಿಂದ ಬರುವ ವಾಹನಗಳ ಚಾಲಕ, ಸಹಾಯಕ ಮತ್ತು ಸಾರ್ವಜನಿಕರನ್ನು ಜ್ವರ ತಪಾಸಣೆ ಮಾಡುತ್ತಿದ್ದಾರೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ಜ್ವರದಿಂದ ಬಳಲುತ್ತಿದ್ದರೆ ಅಂತಹವರನ್ನು ಬಸ್ ಮತ್ತು ವಾಹನದಲ್ಲಿ ಕರೆದುಕೊಂಡು ಬರಬಾರದು ಎಂಬ ಎಚ್ಚರಿಕೆ ನೀಡಿ ಬಿತ್ತಿಪತ್ರವನ್ನು ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಶುಕ್ರವಾರದಿಂದ ಗಡಿ ಭಾಗದ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.

ಜ್ವರ ಕಂಡು ಬಂದಲ್ಲಿ ನಿರ್ಲಕ್ಷ್ಯ ಬೇಡ

ಕೇರಳದಲ್ಲಿ ಇಬ್ಬರನ್ನು ಬಲಿ ಪಡೆದಿರುವ ನಿಫಾ ವೈರಸ್ ಬಗ್ಗೆ ದ.ಕ.ಜಿಲ್ಲೆಯ ಜನತೆಗೆ ಆತಂಕ ಬೇಡ. ಆದರೆ ಜಾಗ್ರತೆಯಿರಲಿ. ಜ್ವರ ಕಂಡು ಬಂದಲ್ಲಿ ನಿರ್ಲಕ್ಷ್ಯ ಬೇಡ. ತಕ್ಷಣ ವೈದ್ಯರನ್ನು ಕಾಣುವಂತೆ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ‌.ಸುದರ್ಶನ್ ಸಲಹೆ ನೀಡಿದ್ದಾರೆ.

ದ.ಕ.ಜಿಲ್ಲಾ ಆರೋಗ್ಯಾಧಿಕಾರಿಯವರ ಕಚೇರಿಯಲ್ಲಿ ಮಾತನಾಡಿದ ಅವರು, ನಿಫಾ ವೈರಸ್ ಸೋಂಕು ದ.ಕ.ಜಿಲ್ಲೆಗೆ ಹರಡಿಲ್ಲ. ಆದರೆ ಮುನ್ನೆಚ್ಚರಿಕಾ ಹಿನ್ನೆಲೆಯಲ್ಲಿ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿಶೇಷ ಜ್ವರ ಸಮೀಕ್ಷೆ ನಡೆಸಲಾಗುತ್ತದೆ. ಎಲ್ಲಾ ಆಸ್ಪತ್ರೆಗಳಲ್ಲಿ ಔಷಧಿ ದಾಸ್ತಾನು ಇರಿಸಲು ಸೂಚನೆ ನೀಡಲಾಗಿದೆ. ತಾಲೂಕು, ಆಸ್ಪತ್ರೆಗಳಲ್ಲಿ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ.

ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆಯನ್ನು ಮಾಡಲಾಗಿದೆ. ಸಾಮಾನ್ಯ ವೈರಲ್ ಜ್ವರದಂತೆ ನಿಫಾ ಲಕ್ಷಣವಿದ್ದರೂ, ಜ್ಞಾನ ತಪ್ಪುವುದು, ಮಾನಸಿಕ ಗೊಂದಲ ಮತ್ತು ಫಿಟ್ಸ್ ಲಕ್ಷಣವಿದ್ದಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು ಎಂದು ಸೂಚನೆ ನೀಡಿದರು.

ಶಂಕಿತ ನಿಫಾ ಸೋಂಕಿತರಿದ್ದಲ್ಲಿ ಅವರನ್ನು ಪ್ರತ್ಯೇಕವಾಗಿಡುವುದು, ಹಸ್ತಲಾಘವ ಮಾಡಬಾರದು, ರೋಗಿಗಳ ಉಪಚಾರದ ವೇಳೆ ಮಾಸ್ಕ್ , ಗ್ಲೌಸ್ ಧರಿಸುವುದು ಕಡ್ಡಾಯ. ನಿಫಾ ಹಂದಿ, ಕುದುರೆ, ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಲ್ಲೂ ಕಂಡು ಬರುತ್ತದೆ. ಆದ್ದರಿಂದ ಪ್ರಾಣಿಗಳ ಜೊಲ್ಲು, ಮಲವನ್ನು ಸ್ಪರ್ಶಿಸಬಾರದು‌.

ಎಲ್ಲಾ ಹಣ್ಣು ಹಂಪಲುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸುಲಿದು ಬೇಯಿಸಿ ತಿನ್ನಬೇಕು. ಬಾವಲಿಯಂತಹ ಪ್ರಾಣಿಗಳು ಕಚ್ಚಿರುವ ಆಹಾರ ಬಳಸಬಾರದು. ಸೋಂಕು ಹರಡಿದ ಪ್ರದೇಶದಲ್ಲಿ ಸೇಂದಿ ಅಥವಾ ನೀರಾವನ್ನೂ ಜನ ಸೇವಿಸಬಾರದೆಂದು ಆರೋಗ್ಯಾಧಿಕಾರಿ ಡಾ.ಸುದರ್ಶನ್ ಹೇಳಿದರು.

2018ರಲ್ಲಿ ಕೇರಳದಲ್ಲಿ ಕಾಣಿಸಿಕೊಂಡಿದ್ದ ನಿಫಾ ವೈರಸ್‌ನಿಂದ ಆಗ ಕೇರಳದಲ್ಲಿ17 ಮಂದಿ ಬಲಿಯಾಗಿದ್ದರು. ಕೇರಳದ ಪಕ್ಕದ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಆಸ್ಪತ್ರೆಗೆ ಕೇರಳದಿಂದ ಅತೀ ಹೆಚ್ಚಿನ ರೋಗಿಗಳು ಬರುತ್ತಾರೆ. ಈ ಹಿನ್ನಲೆಯಲ್ಲಿ ಮಂಗಳೂರಿನಲ್ಲೂ ನಿಫಾ ವೈರಸ್ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.

ಇನ್ನು ನಿಫಾ ಆತಂಕದ ನಡುವೆಯೇ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಜಾಸ್ತಿಯಾಗುತ್ತಿದೆ.ಕಳೆದ ಎಪ್ರಿಲ್ ನಿಂದ ಜಿಲ್ಲೆಯಲ್ಲಿ198 ಡೆಂಗ್ಯೂ ಪ್ರಕರಣ ಕಾಣಿಸಿಕೊಂಡಿದೆ. ಕೇವಲ ಎರಡು ತಿಂಗಳಿನಲ್ಲೇ 60 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬಂದವರಲ್ಲೇ ಜಾಸ್ತಿ ಡೆಂಗ್ಯೂ ಪ್ರಕರಣ ಕಾಣಿಸಿದ್ದು, ಮಂಗಳವಾರ ಶಂಕಿತ ಡೆಂಗ್ಯೂ ದಿಂದ 25 ವರ್ಷದ ಯುವತಿಯೂ ಸಾವುಗೀಡಾಗಿದ್ದಾರೆ.

ದ.ಕ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಸೊಳ್ಳೆಗಳ ಉತ್ಪತ್ತಿಯೂ ಜಾಸ್ತಿಯಾಗುತ್ತಿದೆ. ಡೆಂಗ್ಯೂ ಜ್ವರದ ಬಗ್ಗೆಯೂ ಎಚ್ಚರದಿಂದ ಇರುವಂತೆ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಕುಮಾರ್ ಮನವಿ ಮಾಡಿದ್ದಾರೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರ: ಅಂಜುಮನ್ ಇಸ್ಲಾಂ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Fri Sep 15 , 2023
ಧಾರವಾಡ, ಸೆಪ್ಟೆಂಬರ್‌, 15: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ 5 ವರ್ಷಗಳ ಅವಧಿಗೆ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಬಂಧ ಪಾಲಿಕೆ ಹೊರಡಿಸಿದ್ದ ಠರಾವು ಪ್ರಶ್ನಿಸಿ ಅಂಜುಮನ್ ಇಸ್ಲಾಂ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್‌ ವಜಾಗೊಳಿಸಿದೆ.   ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ 5 ವರ್ಷಗಳ ಕಾಲ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಪಾಲಿಕೆಯಲ್ಲಿ ಠರಾವು ಪಾಸು ಮಾಡಲಾಗಿತ್ತು. ಈ ಠರಾವನ್ನು ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆಯು ಈ ಠರಾವಿಗೆ ತಡೆಯಾಜ್ಞೆ […]

Advertisement

Wordpress Social Share Plugin powered by Ultimatelysocial