ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರ: ಅಂಜುಮನ್ ಇಸ್ಲಾಂ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಧಾರವಾಡ, ಸೆಪ್ಟೆಂಬರ್‌, 15: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ 5 ವರ್ಷಗಳ ಅವಧಿಗೆ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಬಂಧ ಪಾಲಿಕೆ ಹೊರಡಿಸಿದ್ದ ಠರಾವು ಪ್ರಶ್ನಿಸಿ ಅಂಜುಮನ್ ಇಸ್ಲಾಂ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್‌ ವಜಾಗೊಳಿಸಿದೆ.

 

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ 5 ವರ್ಷಗಳ ಕಾಲ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಪಾಲಿಕೆಯಲ್ಲಿ ಠರಾವು ಪಾಸು ಮಾಡಲಾಗಿತ್ತು. ಈ ಠರಾವನ್ನು ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆಯು ಈ ಠರಾವಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಇಂದು ಪ್ರಕರಣದ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಆ ಮೂಲಕ ಈದ್ಗಾ ಮೈದಾನದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡುವುದು ಪಾಲಿಕೆಗೆ ಬಿಟ್ಟಂತಾಗಿದೆ.

31 ರೌಡಿಗಳ ಗಡಿಪಾರು

ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಈ ವರ್ಷ 10 ದಿನದ ಗಣೇಶೋತ್ಸವ ನಡೆಯಲಿದ್ದು, ಈ ವೇಳೆ ಶಾಂತಿ ಸೌಹಾರ್ದತೆ ಕಾಪಾಡಲು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 31 ರೌಡಿಗಳನ್ನು ಗಡಿಪಾರು ಮಾಡಿದ್ದಾರೆ.

ಡಿಸಿಪಿ, ಎಸಿಪಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳು 700ಕ್ಕೂ ಹೆಚ್ಚು ರೌಡಿಗಳನ್ನು ಠಾಣೆಗಳಿಗೆ ಕರೆಸಿ ಎಚ್ಚರಿಕೆ ನೀಡಿದ್ದು, 16 ರೌಡಿಗಳಿಂದ ಬಾಂಡ್‌ ಬರೆಸಿಕೊಂಡು ₹4.70ಲಕ್ಷ ದಂಡ ವಿಧಿಸಿದ್ದಾರೆ. ಇಬ್ಬರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ 1,150 ಮಂದಿ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿವಿಧ ಠಾಣೆಯ 900ಕ್ಕೂ ಹೆಚ್ಚು ಬೀಟ್‌ಗಳಲ್ಲಿ ಎಲ್ಲ ಸಮುದಾಯದವರನ್ನು ಒಟ್ಟುಗೂಡಿಸಿ, ಸಭೆಯಲ್ಲಿ ಶಾಂತಿಮಂತ್ರ ಬೋಧಿಸಿದ್ದಾರೆ. ಪ್ರೀತಿ-ವಿಶ್ವಾಸದಿಂದ ಹಬ್ಬ ಆಚರಿಸಲು ಸೂಚಿಸಿದ್ದು, ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಸಂಭವನೀಯ ಕಿಡಿಗೇಡಿಗಳ ಮಾಹಿತಿ ಸಂಗ್ರಹಿಸಿ ಅವರ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದಾರೆ. ಬೀಟ್‌ನಲ್ಲಿ ಪೊಲೀಸರಿಗೆ ಮಾಹಿತಿ ನೀಡುವ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಾತ್ಮಿದಾರರನ್ನಾಗಿ ಮಾಡಿಕೊಂಡಿದ್ದಾರೆ.

5 ಡಿಸಿಪಿ, 15 ಎಸಿಪಿ, 50 ಪಿಐ, 150 ಪಿಎಸ್‌ಐ, 250 ಎಎಸ್‌ಐ, 2,000 ಹೆಡ್‌ ಕಾನ್‌ಸ್ಟೇಬಲ್ಸ್‌ ಹಾಗೂ 1,000 ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಮುಂದಾಗಿದೆ. 20 ಕೆಎಸ್‌ಆರ್‌ಪಿ ಮತ್ತು 5 ಕೇಂದ್ರ ಮೀಸಲು ಪಡೆ ತುಕಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗಣೇಶಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೂ 5ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಬಂದೋಬಸ್ತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಡಿಸಿಪಿ, ಎಸಿಪಿಗಳು ಇನ್‌ಸ್ಪೆಕ್ಟರ್‌, ಎಸ್‌ಐ, ಎಎಸ್‌ಐ ಜೊತೆ ಸಭೆ ನಡೆಸಿ ಕೆಲವು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಸೂಕ್ಷ್ಮ ಪ್ರದೇಶ, ಅತಿಸೂಕ್ಷ್ಮ ಪ್ರದೇಶಗಳ ಮಾಹಿತಿ ಸಂಗ್ರಹಿಸಿ ಅಲ್ಲಿರುವ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಲಾಗಿದೆ. ಪೆಂಡಾಲ್‌ ಹಾಗೂ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸೂಚಿಸಿದ್ದು, ಅಹಿತಕರ ಘಟನೆಗಳು ನಡೆದರೆ ಸಮಿತಿಯವರನ್ನೇ ಜವಾಬ್ದಾರರನ್ನಾಗಿ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದು ಕಮಿಷನರ್‌ ರೇಣುಕಾ ಸುಕುಮಾರ ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬ, ಈದ್ ಮೀಲಾದ್ ಆಚರಿಸಬೇಕು.‌ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ

ಅವಳಿನಗರದ ಸುಮಾರು 900ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಬೃಹತ್‌ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಮೂರ್ತಿಗಳನ್ನು ವಿಸರ್ಜನೆ ಮಾಡುತ್ತಾರೆ. ಪ್ರಸ್ತುತ ವರ್ಷ ಈದ್‌ ಮೀಲಾದ್‌ ಮತ್ತು ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಒಂದೇ ದಿನ (ಸೆ. 28) ನಡೆಯುವುದರಿಂದ ಪೊಲೀಸ್‌ ಇಲಾಖೆ ಮೆರವಣಿಗೆಗೆ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್‌ ಮಾಡಲು ನಿರ್ಧರಿಸಿದೆ. ಮೂರು ವರ್ಷಗಳ ಹಿಂದೆ ಗಣೇಶಮೂರ್ತಿ ವಿಸರ್ಜನೆ ವೇಳೆ 10ಕ್ಕೂ ಹೆಚ್ಚು ಚಾಕು ಇರಿತದ ಪ್ರಕರಣಗಳು ನಡೆದಿದ್ದು, ಚರ್ಚೆಗೆ ಕಾರಣವಾಗಿತ್ತು.

ಚನ್ನಮ್ಮ ವೃತ್ತ ಮತ್ತು ಈದ್ಗಾ ಮೈದಾನದ ಸುತ್ತ ಸಶಸ್ತ್ರ ಮೀಸಲು ಪಡೆ ಹಾಗೂ ಪೊಲೀಸ್‌ ಸಿಬ್ಬಂದಿಯಿಂದ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಗಣೇಶಮೂರ್ತಿ ವಿಸರ್ಜನಾ ಸ್ಥಳದಲ್ಲಿ ಬ್ಯಾರಿಕೇಡ್‌, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಅಗ್ನಿಶಾಮಕ ವಾಹನ, ಆಂಬುಲೆನ್ಸ್‌ ಹಾಗೂ ಕ್ರೇನ್‌ ವ್ಯವಸ್ಥೆ ಮಾಡಲಾಗಿದೆ. ಗಣೇಶಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಡ್ರೋನ್‌ ಕ್ಯಾಮೆರಾದಿಂದ ವಿಡಿಯೊ ಚಿತ್ರೀಕರಣ ಹಾಗೂ ಕಿಡಿಗೇಡಿಗಳ ಚಲನವಲನದ ಬಗ್ಗೆ ನಿಗಾ ಇಡಲಾಗಿದೆ.

ಅಲ್ಲದೆ ನಗರದ ಪ್ರಮುಖ ಬೀದಿ ಹಾಗೂ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ನಿಯಂತ್ರಣ ಕೊಠಡಿಯಿಂದ 24 ಗಂಟೆಯೂ ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿದೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ಭಯೋತ್ಪಾದಕರಿಗೆ ಕೈಗೆ ಚೀನಾ ಶಸ್ತ್ರಾಸ್ತ್ರ

Fri Sep 15 , 2023
ಶ್ರೀನಗರ,ಸೆ.15- ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳಲ್ಲಿರುವ ಭಯೋತ್ಪಾದಕರಿಗೆ ಚೀನಾದಲ್ಲಿ ತಯಾರಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದ ಗುಪ್ತಚರ ವಿಭಾಗ(ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಒದಗಿಸಿರುವುದು ಬೆಳಕಿಗೆ ಬಂದಿದೆ. ಭಯೋತ್ಪಾದಕರಿಗೆ ನೀಡಲಾಗುತ್ತಿರುವ ಶಸ್ತ್ರಾಸ್ತ್ರಗಳಲ್ಲಿ ಪಿಸ್ತೂಲ್ಗಳು, ಗ್ರೆನೇಡ್ಗಳು, ರಾತ್ರಿ ದೃಷ್ಟಿ ಸಾಧನಗಳು ಮತ್ತು ಹೆಚ್ಚಿನವು ಸೇರಿವೆ. ಇವುಗಳನ್ನು ಚೀನಾದ ಡ್ರೋನ್ಗಳ ಮೂಲಕ ಭೂಪ್ರದೇಶಕ್ಕೆ ಸಾಗಿಸಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಇದಲ್ಲದೆ ಭಯೋತ್ಪಾದಕರಿಗೆ ಭೂಪ್ರದೇಶದೊಳಗೆ ನುಸುಳಲು ಸಹಾಯ ಮಾಡಲು ಡಿಜಿಟಲ್ ಮ್ಯಾಪ್ಶೀಟ್ಗಳು ಮತ್ತು ನ್ಯಾವಿಗೇಷನ್ ಸಿಸ್ಟಮ್ಗಳನ್ನು […]

Advertisement

Wordpress Social Share Plugin powered by Ultimatelysocial