ಗೋಪಾಲಕೃಷ್ಣ ಗೋಖಲೆ | On Remembrance Day of Gopalakrishna Gokhale |

ಗೋಪಾಲಕೃಷ್ಣ ಗೋಖಲೆ
On Remembrance Day of Gopalakrishna Gokhale
ಗೋಪಾಲಕೃಷ್ಣ ಗೋಖಲೆಯವರನ್ನು ತಮ್ಮ ಆದರ್ಶವೆಂದು ಪರಿಗಣಿಸಿದ್ದ ಡಿ. ವಿ. ಜಿಯವರು ಹೇಳುತ್ತಾರೆ “ಜನರಿಗೆ ಬದುಕು ಸಹ್ಯವೂ ಪ್ರಿಯವೂ ಅರ್ಥಪೂರಿತವೂ ಆಗಬೇಕೆಂಬ ಮಹೋದ್ದೆಶಕ್ಕೆ ಸಾರ್ವಜನಿಕ ಕ್ಷೇತ್ರದೊಳಗಿದ್ದು ಅಪರಿಮಿತವಾಗಿ ಶ್ರಮಿಸಿದವರು ಗೋಪಾಲಕೃಷ್ಣ ಗೋಖಲೆಯವರು. ಅವರೊಬ್ಬ ಪೂರ್ಣಾಕಾರಿಗಳು” ಎಂದು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.
ಗೋಪಾಲಕೃಷ್ಣ ಗೋಖಲೆಯವರು 1866ರ ಮೇ 9ರಂದು ಕೊಲ್ಹಾಪುರದಲ್ಲಿ ಜನಿಸಿದರು. ಭಾರತೀಯರಿಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವುದು ಮಾತ್ರವಲ್ಲದೆ, ಸಮಾಜದಲ್ಲಿ ಸುಧಾರಣೆ ಮುಖ್ಯ ಎಂದು ಮನಗಂಡವರು ಗೋಖಲೆ. ಈ ಉದ್ದೇಶಕ್ಕಾಗಿ ಅವರು ಸೂಚಿಸಿದ ಪ್ರಮಖ ಕಾರ್ಯವಿಧಾನಗಳೆಂದರೆ, ಅಹಿಂಸೆ ಮತ್ತು ಅಸ್ತಿತ್ವದಲ್ಲಿರುವ ಸರ್ಕಾರಿ ಸಂಸ್ಥೆಗಳ ಆಡಳಿತದಲ್ಲಿ ಮೌಲ್ಯಯುತ ಕಾರ್ಯವಿಧಾನದ ಅನುಸರಣೆ.
ಗೋಖಲೆಯವರು ಸಾಮಾನ್ಯ ಕುಟುಂಬಕ್ಕೆ ಸೇರಿದವರಾಗಿದ್ದರೂ ಅವರ ಹಿರಿಯರು ಅವರಿಗೆ ಇಂಗ್ಲಿಷ್ ಶಿಕ್ಷಣ ದೊರಕುವಂತೆ ಮಾಡಿದರು. ಪದವಿ ಶಿಕ್ಷಣ ಪಡೆದ ಪ್ರಥಮ ಭಾರತೀಯ ತಲೆಮಾರಿಗೆ ಸೇರಿದ ಗೋಖಲೆಯವರು ಪಾಶ್ಚಾತ್ಯ ರಾಜಕೀಯ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಬ್ರಿಟಿಷರ ವಸಾಹತುಶಾಹಿ ಆಡಳಿತವ್ಯವಸ್ಥೆಗಳನ್ನು ಅವರು ವಿರೋಧಿಸುತ್ತಿದ್ದಾಗ್ಯೂ ಇಂಗ್ಲಿಷರ ರಾಜಕೀಯ ಸಿದ್ಧಾಂತಗಳ ಕುರಿತಾಗಿ ಗೌರವವುಳ್ಳ ನಿಲುವು ತಾಳಿದ್ದರು.
ಗೋಖಲೆಯವರು 1889 ವರ್ಷದಲ್ಲಿ ಮಹಾನ್ ಸಮಾಜ ಸುಧಾರಕರಾದ ಮಹಾದೇವ ಗೋವಿಂದ ರಾನಡೆಯವರಿಂದ ಪ್ರಭಾವಿತರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾದರು. ತಮ್ಮ ಸಮಕಾಲೀನರಾದ ಬಾಲ ಗಂಗಾಧರ ತಿಲಕ್, ದಾದಾಬಾಯ್ ನವರೋಜಿ, ಬಿಪಿನ್ ಚಂದ್ರ ಪಾಲ್, ಲಾಲಾ ಲಜಪತ್ ರಾಯ್ ಮತ್ತು ಅನ್ನಿ ಬೆಸೆಂಟ್ ಮುಂತಾದವರ ಜೊತೆಗೂಡಿ ಹಲವಾರು ವರ್ಷಗಳ ಕಾಲ ಬ್ರಿಟಿಷ್ ರಾಜಕೀಯ ವ್ಯವಸ್ಥೆಯಲ್ಲಿ ಭಾರತೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರಕಿಸಿಕೊಡಲು ಹೋರಾಡಿದರು. ಬ್ರಿಟಿಷರೊಡನೆ ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದು ಗೋಖಲೆಯವರ ಸಹನಶೀಲ ನಡೆಯಾಗಿತ್ತು. ಐರ್‍ಲ್ಯಾಂಡ್ ದೇಶಕ್ಕೆ ಭೇಟಿಕೊಟ್ಟ ಗೋಖಲೆಯವರು ಆ ದೇಶದ ಆಲ್ಫ್ರೆಡ್ ಎಂಬಾತನನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಕೆಲಸ ಮಾಡುವ ಏರ್ಪಾಡು ಮಾಡಿದ್ದರು. ಅದರ ಮುಂದಿನ ವರ್ಷದಲ್ಲಿ ಬಾಲ ಗಂಗಾಧರ ತಿಲಕ್ಕರ ಜೊತೆಗೆ ಕಾಂಗ್ರೆಸ್ಸಿನ ಜಂಟಿ ಕಾರ್ಯದರ್ಶಿಯಾದರು. ತಿಲಕ್ ಮತ್ತು ಗೋಖಲೆಯವರು ಒಂದೇ ರೀತಿಯ ಕೌಟುಂಬಿಕ ಹಿನ್ನಲೆಯಿಂದ ಬಂದವರು. ಇಬ್ಬರೂ ವಿದ್ಯಾಭ್ಯಾಸದಲ್ಲಿ ಸಮಾನ ಸಾಧಕರು. ಗಣಿತ ಶಾಸ್ತ್ರದ ಮಹಾನ್ ವಿದ್ವಾಂಸರು. ಇಬ್ಬರೂ ಡೆಕ್ಕನ್ ಎಜುಕೇಶನ್ ಸೊಸೈಟಿಯ ಪ್ರಮುಖ ಸದಸ್ಯರಾಗಿದ್ದವರು. ಇಷ್ಟಾದರೂ ಕಾಂಗ್ರೆಸ್ಸಿನಲ್ಲಿ ಈ ಈರ್ವರೂ ನಾಯಕರಾದಾಗ, ಭಾರತೀಯ ಸಮುದಾಯಕ್ಕೆ ಯಾವ ರೀತಿಯಲ್ಲಿ ಉಪಯುಕ್ತತೆ ದೊರಕಿಸಿಕೊಡಬಹುದು ಎಂಬ ನಿಲುವಿನಲ್ಲಿ ತೀವ್ರ ಭಿನ್ನಾಭಿಪ್ರಾಯಗಳನ್ನು ತಳೆದಿದ್ದರು.
1905 ವರ್ಷದಲ್ಲಿ ಗೋಖಲೆಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾದರು. ಈ ಸಮಯದಲ್ಲಿ ಅವರು ತಮ್ಮ ಹೃದಯಕ್ಕೆ ಆಪ್ತವಾಗಿದ್ದ ಸಮಾಜ ಸುಧಾರಣಾ ಚಟುವಟಿಕೆಗಳಿಗಾಗಿ ‘ಸರ್ವೆಂಟ್ಸ್ ಆಫ್ ಇಂಡಿಯನ್ ಸೊಸೈಟಿ’ ಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲ ಉದ್ದೇಶ ಹೆಚ್ಚು ಹೆಚ್ಚು ಭಾರತೀಯರನ್ನು ವಿದ್ಯಾವಂತರನ್ನಾಗಿ ಮಾಡುವುದಾಗಿತ್ತು. “ಭಾರತದಲ್ಲಿ ಹೆಚ್ಚು ಹೆಚ್ಚು ಭಾರತೀಯರು ವಿದ್ಯಾವಂತರಾಗಿ ದೇಶಕ್ಕಾಗಿ, ಸಮಾಜಕ್ಕೆ ಮತ್ತು ಪಾರಸ್ಪರಿಕವಾಗಿ ದುಡಿಯುವಂತಾದಾಗ ಮಾತ್ರ ನಿಜವಾದ ರಾಜಕೀಯ ಬದಲಾವಣೆ ಸಾಧ್ಯ” ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಅಂದಿನ ದಿನಗಳಲ್ಲಿ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಇಂಡಿಯನ್ ಸಿವಿಲ್ ಸರ್ವಿಸಸ್ ವ್ಯವಸ್ಥೆಯು ಹೆಚ್ಚು ಜನರಿಗೆ ವಿದ್ಯಾಭ್ಯಾಸದ ಸೌಲಭ್ಯಗಳನ್ನು ಒದಗಿಸಲು ಅಸಮರ್ಥವಾಗಿದ್ದ ಹಿನ್ನಲೆಯಲ್ಲಿ, ಆ ಕಾರ್ಯವನ್ನು ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ ಮೂಲಕ ಸಾಧ್ಯವಾಗಿಸುವುದು ಅವರ ಧ್ಯೇಯವಾಗಿತ್ತು. ಈ ಧ್ಯೇಯ ಸಾಧನೆಗಾಗಿ ಅವರು ಅಹರ್ನಿಶಿ ದುಡಿದರು.
ಗೋಖಲೆಯವರು ಭಾರತೀಯ ಸ್ವತಂತ್ರ ಚಳುವಳಿಯ ನಾಯಕರಾಗಿದ್ದಾಗಿಯೂ ಅವರ ಧ್ಯೇಯ ಸ್ವಾತಂತ್ರ್ಯಕ್ಕಿಂತ ಹೆಚ್ಚಿನದಾಗಿ ಸಮಾಜ ಸುಧಾರಣೆಯ ಕುರಿತಾಗಿತ್ತು. ಇಂಥಹ ಸಮಾಜ ಸುಧಾರಣೆಗಾಗಿ ಬ್ರಿಟಿಷ್ ಆಡಳಿತ ವ್ಯವಸ್ಥೆಯೊಂದಿಗೆ ಸೌಹಾರ್ದಯುತವಾಗಿ ನಡೆಯುವುದೇ ಉತ್ತಮವಾದ ದಾರಿ ಎಂಬ ನಿಲುವು ಅವರದಾಗಿತ್ತು. ಈ ಕಾರಣದಿಂದಾಗಿ ಗೋಖಲೆ ಮತ್ತು ತಿಲಕ್ಕರಂತಹ ಸ್ವಾತಂತ್ರ್ಯಪರ ಚಿಂತಕರ ನಡುವೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಈ ವಿರೋಧಗಳ್ಯಾವುವನ್ನೂ ಲೆಕ್ಕಿಸದ ಗೋಖಲೆಯವರು ತಾವು ಬಯಸಿದ್ದ ಸಮಾಜಸುಧಾರಣೆಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ತಮ್ಮ ಕೊನೆಯವರೆಗೆ ಬ್ರಿಟಿಷ್ ಸರ್ಕಾರದ ಜೊತೆ ಜೊತೆಗೆ ಸೌಹಾರ್ದಯುತವಾಗಿಯೇ ಕಾರ್ಯನಿರ್ವಹಿಸಿದರು.
1899ರಲ್ಲಿ ಗೋಖಲೆಯವರು ಬಾಂಬೆ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ಆಯ್ಕೆಗೊಂಡರು. 1903ರಲ್ಲಿ ಅವರು ಭಾರತದ ಗೌರ್ನರ್ ಜನರಲ್ ಅವರ ‘ಕೌನ್ಸಿಲ್ ಆಫ್ ಇಂಡಿಯಾ’ಗೆ ಮುಂಬೈ ಪ್ರಾಂತ್ಯದ ಪ್ರತಿನಿಧಿಯಾಗಿ ಆಯ್ಕೆಗೊಂಡರು. 1909ರಲ್ಲಿ ಅವರು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ಲಿನಲ್ಲಿ ಸೇವೆ ಸಲ್ಲಿಸಿದರು. ಆ ಸಮಯದಲ್ಲಿ ಅವರು ಅತ್ಯಂತ ಮಹಾನ್ ಮೇಧಾವಿಗಳೆಂದು ಪ್ರಖ್ಯಾತಿ ಪಡೆದರು. ವಾರ್ಷಿಕ ಆಯವ್ಯಯಗಳ ಕುರಿತಾದ ಚರ್ಚೆಯಲ್ಲಿ ಅವರ ಪಾಂಡಿತ್ಯಕ್ಕೆ ಮಾರುಹೋದ ಬ್ರಿಟಿಷ್ ಅಧಿಕಾರಿಗಳು ಅವರಿಗೆ ಅಪಾರವಾದ ಗೌರವ ನೀಡತೊಡಗಿದರು. ಹೀಗಾಗಿ ಅವರನ್ನು ಬ್ರಿಟಿಷ್ ಸರ್ಕಾರದ ಕಾರ್ಯದರ್ಶಿಗಳಾದ ಲಾರ್ಡ್ ಜಾನ್ ಮಾರ್ಲೇ ಅವರು ಲಂಡನ್ನಿಗೆ ಆಹ್ವಾನಿಸಿದರು. ಮಾರ್ಲೇ ಅವರೊಂದಿಗೆ ಗೋಖಲೆಯವರು ಉತ್ತಮವಾದ ಬಾಂಧವ್ಯ ಹೊಂದಿದ್ದರು. ಈ ಸೌಹಾರ್ದಯುತ ಸಂಬಂಧದಿಂದಾಗಿ 1909 ವರ್ಷದಲ್ಲಿ ಮಾರ್ಲೇ-ಮಿಂಟೋ ಸುಧಾರಣೆಗಳು ಜಾರಿಗೆ ಬರುವಂತಾದವು. 1904ರಲ್ಲಿ ಗೋಖಲೆಯವರನ್ನು ಬ್ರಿಟಿಷ್ ಸರ್ಕಾರವು ಸಿ ಐ ಇ ಅಂದರೆ ಕಂಪಾನಿಯನ್ ಆಫ್ ದಿ ಆರ್ಡರ್ ಆಫ್ ಇಂಡಿಯನ್ ಎಂಪೈರ್ ಎಂದು ನಿಯೋಜಿಸಿ ಅತ್ಯಂತ ಗೌರವಾನ್ವಿತ ಮಹನೀಯರ ಪಟ್ಟಿಯಲ್ಲಿ ಹೆಸರಿಸಿತು. ಇದು ಗೋಪಾಲಕೃಷ್ಣ ಗೋಖಲೆಯವರ ಪರಿಶ್ರಮ ಮತ್ತು ಕಾರ್ಯಗಳಿಗೆ ಸಂದ ಗೌರವವಾಗಿತ್ತು.
ಗೋಪಾಲಕೃಷ್ಣ ಗೋಖಲೆಯವರು ಮಹಾತ್ಮ ಗಾಂಧಿಯವರಿಗೆ ಭಾರತೀಯ ರಾಜಕೀಯ ಜೀವನದ ಪ್ರಾರಂಭಿಕ ವರ್ಷಗಳ ಮಾರ್ಗದರ್ಶಕರಾಗಿದ್ದರು. 1912ರಲ್ಲಿ ಗೋಖಲೆಯವರು ಗಾಂಧಿಯವರ ಆಹ್ವಾನದ ಮೇರೆಗೆ ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿದರು. ಯುವ ಬ್ಯಾರಿಸ್ಟರ್ ಆಗಿ ದಕ್ಷಿಣ ಆಫ್ರಿಕಾದ ಹೋರಾಟಗಳ ನಂತರ ಭಾರತಕ್ಕೆ ಬಂದ ಗಾಂಧೀಜಿಯವರಿಗೆ ಸ್ವಯಂ ಗೋಖಲೆಯವರೇ ಜೊತೆ ನಿಂತು ಕೈಹಿಡಿದು ಮಾರ್ಗದರ್ಶನ ಮಾಡಿದರು. ಈ ನಿಟ್ಟಿನಲ್ಲಿ ಅವರು ಮಾಡಿದ ಪ್ರಮುಖ ಕಾರ್ಯವೆಂದರೆ ಗಾಂಧಿಯವರಲ್ಲಿ ಭಾರತದ ಕುರಿತಾಗಿ ನೀಡಿದ ಸಂಪೂರ್ಣ ಚಿತ್ರಣ ಮತ್ತು ಭಾರತವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತಾಗಿ ನೀಡಿದ ಸಮಗ್ರ ತಿಳುವಳಿಕೆ. 1920ರ ವೇಳೆಗೆ ಗಾಂಧೀಜಿ ಭಾರತೀಯ ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದರು. ತಮ್ಮ ಆತ್ಮ ಚರಿತ್ರೆಯಲ್ಲಿ ಗಾಂಧೀಜಿಯವರು ಗೋಪಾಲ ಕೃಷ್ಣ ಗೋಖಲೆಯವರನ್ನು ತಮ್ಮ ಗುರು ಮತ್ತು ಮಾರ್ಗದರ್ಶಕ ಎಂದು ಬಣ್ಣಿಸಿದ್ದಾರೆ. ಗೋಖಲೆಯವರ ಕುರಿತಾಗಿ ಗಾಂಧೀಜಿ “ಅವರೊಬ್ಬ ಶ್ರೇಷ್ಠ ನಾಯಕ, ರಾಜಕೀಯ ಮುತ್ಸದ್ದಿ, ಸ್ಫಟಿಕದಂತೆ ಸ್ವಚ್ಛ, ಕುರಿಯಂತೆ ಮೆದು, ಸಿಂಹದಂತೆ ಧೈರ್ಯಸ್ಥ, ತಪ್ಪು ಮಾಡಿದಾಗ ಸಹನಶೀಲ ಮತ್ತು ರಾಜಕೀಯ ಕ್ಷೇತ್ರದ ಸತ್ಪಾತ್ರರು” ಎಂದು ಕೊಂಡಾಡಿದ್ದಾರೆ. ಹಾಗಿದ್ದಾಗ್ಯೂ ಗಾಂಧೀಜಿಯವರು ಗೋಖಲೆಯವರಿಗಿದ್ದ ಪಾಶ್ಚಾತ್ಯ ಸಂಸ್ಥೆಗಳ ಕುರಿತಾಗಿದ್ದ ನಂಬುಗೆಗಳು ತಮಗೆ ಒಪ್ಪಿಗೆಯಾಗಿಲ್ಲ ಎಂದು ತಿಳಿಸುತ್ತಾರೆ.
ಪುಣೆಯಲ್ಲಿರುವ ದಿ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕ್ಸ್ ಅಂಡ್ ಎಕನಾಮಿಕ್ಸ್ ಎಂಬುದು ಭಾರತದಲ್ಲಿ ಅರ್ಥಶಾಸ್ತ್ರದ ಸಂಶೋಧನೆ, ಅಧ್ಯಯನ ಮತ್ತು ತರಬೇತಿಗಾಗಿ ಸ್ಥಾಪಿತವಾಗಿರುವ ಅತ್ಯಂತ ಹಳೆಯ ಮತ್ತು ಮಹತ್ವದ ಸಂಸ್ಥೆಯಾಗಿದೆ. ಇದನ್ನು ಆರ್ ಆರ್ ಕಾಳೆ ಎಂಬುವರು ತಮಗೆ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಕೊಟ್ಟ ಸಹಾಯದ ಮುಖೇನ ಸ್ಥಾಪಿಸಿದರು. ಇದನ್ನು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಕಾರ್ಯನಿರ್ವಾಹಕ ಪ್ರತಿನಿಧಿಗಳೇ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಗೋಪಾಲಕೃಷ್ಣ ಗೋಖಲೆಯವರ ಅಭಿಮಾನಿಗಳಾದ ಡಿವಿಜಿ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ನಿರ್ಮಿಸಿ ಕನ್ನಡ ನಾಡಿಗೆ ಕೊಡುಗೆಯಾಗಿ ಕೊಟ್ಟು ಹೋಗಿದ್ದಾರೆ.
ತಮ್ಮ ಜೀವಿತಾವಧಿಯ ಕೊನೆಯವರೆಗೆ ನಿರಂತರ ಕಾರ್ಯಶೀಲರಾಗಿದ್ದ ಗೋಪಾಲಕೃಷ್ಣ ಗೋಖಲೆಯವರು 1915ರ ಫೆಬ್ರುವರಿ 19ರಂದು ಕೇವಲ ತಮ್ಮ 49ನೆಯ ವಯಸ್ಸಿನಲ್ಲಿ ನಿಧನರಾದರು.
ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಗೋಪಾಲ ಕೃಷ್ಣ ಗೋಖಲೆಯವರು ನಿರ್ವಹಿಸಿದ ಪಾತ್ರ ಮಹತ್ವಪೂರ್ಣವಾದದ್ದು. ಅವರು ಬ್ರಿಟಿಷ್ ಸರ್ಕಾರದೊಂದಿಗೆ ಸೌಹಾರ್ದಯುತವಾಗಿದ್ದರೆಂಬುದೇನೋ ನಿಜ. ಆದರೆ ಬ್ರಿಟಿಷ್ ಚಕ್ರಾಧಿಪತ್ಯದ ಮೇಲೆ, ಭಾರತೀಯ ನವ ವಿದ್ಯಾವಂತ ಜನಾಂಗಕ್ಕೆ ಸರ್ಕಾರ ಮತ್ತು ಆಡಳಿತ ಕ್ಷೇತ್ರದಲ್ಲಿ ಹೆಚ್ಚು ಪ್ರಾತಿನಿಧ್ಯತೆ ಸಲ್ಲಬೇಕು ಎಂದು ನಿರಂತರವಾಗಿ ಒತ್ತಡ ತಂದರು. ಗೋಖಲೆಯವರು ಪರಿಶ್ರಮಗಳು ಮಹಾತ್ಮ ಗಾಂಧಿಯವರನ್ನೊಳಗೊಂಡಂತೆ ಅಂದಿನ ಯುವ ತಲೆಮಾರುಗಳನ್ನು ಪ್ರೇರೇಪಿಸಿದವು. ಸ್ವಾತಂತ್ರ್ಯಾನಂತರದಲ್ಲಿ ಜಾರಿಗೊಂಡ ಶಿಕ್ಷಣ ವ್ಯವಸ್ಥೆಯಲ್ಲಿ ಗೋಖಲೆಯವರ ಚಿಂತನೆಗಳಾದ ಪಾಶ್ಚಿಮಾತ್ಯ ರೀತಿಯ ಶಿಕ್ಷಣ ವ್ಯವಸ್ಥೆಗೆ ಸಾಕಷ್ಟು ಮಹತ್ವ ದೊರೆತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದನ್ ಲಾಲ್ ಧಿಂಗ್ರ

Tue Mar 8 , 2022
ಮದನ್ ಲಾಲ್ ಧಿಂಗ್ರ ಭಾರತ ದೇಶಕ್ಕೋಸ್ಕರ ಹೋರಾಡಿದ ಮಹಾನ್ ವ್ಯಕ್ತಿ ಮದನ್ ಲಾಲ್ ಧಿಂಗ್ರ. ಬಹುಶಃ ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ ಮರಣ ದಂಡನೆಗೆ ಗುರಿಯಾದ ಮೊದಲ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ. ಮದನ್ ಲಾಲ್ ಧಿಂಗ್ರರು ಮನಸ್ಸು ಮಾಡಿದ್ದರೆ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಜೀವಿಸಬಹುದಾಗಿತ್ತು. 1883ರ ಫೆಬ್ರುವರಿ 18ರಂದು ಅಮೃತಸರದಲ್ಲಿ ಜನಿಸಿದ ಧಿಂಗ್ರ ಅವರದ್ದು ಅತ್ಯಂತ ಶ್ರೀಮಂತ ಕುಟುಂಬ. ಅವರ ತಂದೆ ದಿತ್ತ ಮಲ್ ಸರ್ಕಾರಿ ಹಿರಿಯ ವೈದ್ಯರಾಗಿದ್ದವರು. ಅಮೃತಸರದಲ್ಲಿ ಅವರ ಅಧಿಪತ್ಯದಲ್ಲಿ […]

Advertisement

Wordpress Social Share Plugin powered by Ultimatelysocial