ಮಹೇಂದ್ರ ಕಪೂರ್

ಮಹೇಂದ್ರ ಕಪೂರ್ ಚಿತ್ರರಂಗದ ಮಹಾನ್ ಗಾಯಕರಲ್ಲೊಬ್ಬರು. ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಅವರ ಗಾಯನ ಬಲು ಜನಪ್ರಿಯಗೊಂಡಿವೆ. ಜೊತೆಗೆ ಅವರ ಗಾಯನ ಹೃದಯಸ್ಪರ್ಶಿ ಕೂಡಾ.
ಮಹೇಂದ್ರ ಕಪೂರ್ 1934ರ ಜನವರಿ 9ರಂದು ಅಮೃತಸರದಲ್ಲಿ ಜನಿಸಿದರು.
ಅಖಿಲಭಾರತ ಗಾಯನ ಸ್ಪರ್ಧೆಯೊಂದರಲ್ಲಿ ಭಾಗವಹಿಸುವ ಮೂಲಕ ಮಹೇಂದ್ರ ಕಪೂರ್ ಹಿನ್ನಲೆ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು. ಆ ಸ್ಪರ್ಧೆಗೆ ತೀರ್ಪುಗಾರರಾಗಿದ್ದವರು ಖ್ಯಾತ ಸಂಗೀತ ನಿರ್ದೇಶಕರಾದ ನೌಶಾದ್ ಹಾಗೂ ಸಿ. ರಾಮಚಂದ್ರ. ಸ್ಪರ್ಧೆಯಲ್ಲಿ ವಿಜೇತರಾದ ಗಾಯಕನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ಇಬ್ಬರೂ ನಿಶ್ಚಯಿಸಿದ್ದರಂತೆ. ಅಂತೆಯೇ 1958ರಲ್ಲಿ ನೌಶಾದ್ ಅವರು ‘ಸೊಹನೀ ಮಹಿವಾಲ್’ ಚಿತ್ರದಲ್ಲಿ ಹಾಡಿಸಿದ ‘ಚಾಂದ್ ಛುಪಾ ಔರ್ ತಾರೆ ಡೂಬೆ’ ಮಹೇಂದ್ರ ಕಪೂರ್ ಅವರ ಮೊದಲ ಹಾಡಾಯಿತು. ಆದರೆ ಚಲನಚಿತ್ರ ಸಂಗೀತ ಪ್ರೇಮಿಗಳ ನಾಲಿಗೆಯಲ್ಲಿ ಕುಣಿದಾಡಿದ್ದು ಅದೇ ವರ್ಷ ಸಿ. ರಾಮಚಂದ್ರ ಅವರು ‘ನವರಂಗ್’ ಚಿತ್ರಕ್ಕಾಗಿ ಇವರಿಂದ ಹಾಡಿಸಿದ ‘ಆದಾ ಹೈ ಚಂದ್ರಮಾ ರಾತ್ ಆದೀ, ರೆಹೆನ ಜಾಯೆ ತೇರೀಮೇರೀ ಬಾತ್ ಆದೀ ಮುಲಾಖಾತ್ ಆದೀ’. ಇದರಿಂದ ಪ್ರಭಾವಿತರಾದ ಬಿ.ಆರ್.ಚೋಪ್ರಾ ಅವರು ಎನ್ ದತ್ತಾ ಅವರ ಸಂಗೀತದ ‘ಧೂಲ್ ಕಾ ಫೂಲ್’ ಚಿತ್ರದಲ್ಲಿ ಇವರಿಗೆ ನೀಡಿದ ಅವಕಾಶ ‘ತೆರೆ ಪ್ಯಾರ್ ಕಾ ಆಸ್‌ರಾ ಚಾಹತಾ ಹೂಂ’ದಂತಹ ಪ್ರಸಿದ್ಧ ಹಾಡಿನ ಜನನಕ್ಕೆ ಕಾರಣವಾಗುವುದರೊಂದಿಗೆ ಬಿ.ಆರ್.ಫಿಲ್ಮ್ಸ್ ಹಾಗೂ ಮಹೇಂದ್ರ ಕಪೂರ್ ಅವರ ದೀರ್ಘಕಾಲೀನ ಸಂಬಂಧಕ್ಕೂ ನಾಂದಿಯಾಯಿತು. ಮುಂದೆ ಈ ಬ್ಯಾನರ್ ನಲ್ಲಿ ರವಿ ಅವರ ಸಂಗೀತದೊಂದಿಗೆ ಬಂದ ‘ಗುಮ್‌ರಾಹ್’ ಚಿತ್ರದ ‘ಚಲೊಎಕ್ ಬಾರ್ ಫಿರ್ ಸೆ’, ‘ಇನ್ ಹವಾವೊಂ ಮೆ’, ‘ಯೆ ಹವಾ ಯೆ ಹವಾ’, ‘ಆಪ್ ಆಯೇ ತೊ ಖಯಾಲೆಂ’, ‘ಹಮ್‌ರಾಜ್’ ಚಿತ್ರದ ‘ನೀಲೆ ಗಗನ್ ಕೆ ತಲೆ’, ‘ತುಮ್ ಅಗರ್ ಸಾಥ್ ದೆನೆ ಕಾ’, ‘ಕಿಸೀ ಪತ್ಥರ್ ಕೀ ಮೂರತ್ ಸೆ’, ‘ನ ಮುಂಹ್ ಛುಪಾಕೆ ಜಿಯೊ’ ಹಾಡುಗಳಿಂದ ಮಹೇಂದ್ರ ಕಪೂರ್ ಚಿತ್ರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದರು. ಈ ಸಂಸ್ಥೆಯ ನಿರ್ಮಾಣದ ‘ವಕ್ತ್’ ಚಿತ್ರದ ‘ದಿನ್ ಹೈ ಬಹಾರ್ ಕೆ’, ‘ಆದ್ಮೀ ಔರ್ ಇನ್‌ಸಾನ್’ ಚಿತ್ರದ ‘ದಿಲ್ ಕರ್‌ತಾ’ ಹಾಗೂ ‘ಜಿಂದಗೀ ಇತ್ತೇಫಾಕ್ ಹೈ’, ‘ಧುಂದ್’ ಚಿತ್ರದ ‘ಸಂಸಾರ್ ಕೀ ಹರ್ ಶೈಕಾ’ ಮುಂತಾದವೂ ಮರೆಯದ ಹಾಡುಗಳಾದವು. ರವಿ ಅವರು ಇತರ ಬ್ಯಾನರ್ಗಳ ಚಿತ್ರವಾದ ‘ಭರೋಸಾ’ ದಲ್ಲಿ ‘ಆಜ್ ಕೀ ಮುಲಾಕಾತ್ ಬಸ್ ಇತ್‌ನೀ’, ‘ಅನ್‌ಮೋಲ್ ಮೋತಿ’ ಯಲ್ಲಿ ‘ಏ ಜಾನೆ ಚಮನ್ ತೆರಾ ಗೋರಾ ಬದನ್’ ಮುಂತಾದ ಸುಮಧುರ ಹಾಡುಗಳನ್ನು ಇವರಿಂದ ಹಾಡಿಸಿದರು.
ಮನೋಜ್ ಕುಮಾರ್ ಅವರೊಂದಿಗೆ ಮಹೇಂದ್ರ ಕಪೂರ್ ಅವರ ನಂಟು ‘ಶಹೀದ್’ ಚಿತ್ರದ ‘ಮೆರಾ ರಂಗ್ ದೇ ಬಸಂತೀ ಚೋಲಾ’ ಹಾಡಿನೊಂದಿಗೆ ಆರಂಭವಾದರೂ ಬಲಗೊಂಡದ್ದು ‘ಉಪ್‌ಕಾರ್’ ಚಿತ್ರದೊಂದಿಗೆ. ಗುಲ್‌ಶನ್ ಬಾವ್ರಾ ರಚಿಸಿ ಕಲ್ಯಾಣ್‌ಜೀ ಆನಂದ್‌ಜೀ ಸಂಗೀತ ನೀಡಿದ ‘ಮೆರೆ ದೇಶ್ ಕೀ ಧರ್‌ತೀ’ ಹಾಡು ದೇಶ ಭಕ್ತಿಗೆ ಇನ್ನಿಲ್ಲದಂತೆ ಪ್ರಸಿದ್ಧಿ ಪಡೆಯಿತು.’ಪೂರಬ್ ಔರ್ ಪಶ್ಚಿಮ್’ ನ ‘ಹೈ ಪ್ರೀತ್ ಜಹಾಂ ಕೀ ರೀತ್ ಸದಾ’ ಹಾಗೂ ‘ದುಲ್ಹನ್ ಚಲೀ’ ಹಾಡುಗಳೂ ಇದೇ ಸಾಲಿಗೆ ಸೇರಿದವು. ಮುಂದೆ ‘ರೋಟೀ ಕಪಡಾ ಔರ್ ಮಕಾನ್’ ನಲ್ಲಿ ಕಲ್ಯಾಣ್‌ಜೀ ಆನಂದ್‌ಜೀ ಅವರ ಸ್ಥಾನಕ್ಕೆ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರು ಬಂದು ಮುಖೇಶ್ ಅವರು ಮುಖ್ಯ ಗಾಯಕರಾದರೂ ಮಹೇಂದ್ರ ಕಪೂರ್ ಅವರಿಗಾಗಿ ‘ಔರ್ ನಹೀಂ ಬಸ್ ಔರ್ ನಹೀಂ’ ಹಾಡು ಇತ್ತು. ಕಲ್ಯಾಣ್‌ಜೀ ಆನಂದ್‌ಜೀ ಅವರು ತಮ್ಮ ಇತರ ಚಿತ್ರಗಳಾದ ‘ಪರಿವಾರ್’ನಲ್ಲಿ ‘ಹಮ್‌ನೆ ಜೊ ದೇಖೆ ಸಪ್‌ನೆ’, ‘ಗೀತ್’ನಲ್ಲಿ ‘ಜಿಸ್‌ಕೆ ಸಪನೆ ಹಮೆ ರೋಜ್ ಆತೇ ರಹೆ’ ,’ಯಾದ್‌ಗಾರ್’ ನಲ್ಲಿ ‘ಎಕ್ ತಾರಾ ಬೊಲೆ’ ಗೀತೆಗಳನ್ನು ಹಾಡಿಸಿದರೂ ವಿಶೇಷವಾಗಿ ಉಲ್ಲೇಖಿಸಬೇಕಾದದ್ದು ದಿಲೀಪ್‌ಕುಮಾರ್ ನಟನೆಯ ‘ಗೋಪಿ’ ಚಿತ್ರ. ಇದರಲ್ಲಿ ‘ಸುಖ್ ಕೆ ಸಬ್ ಸಾಥೀ’ ಮಾತ್ರ ರಫಿ ಧ್ವನಿಯಲ್ಲಿದ್ದು ‘ಜಂಟಲ್ ಮೆನ್ ಜಂಟಲ್ ಮೆನ್’, ‘ರಾಮಚಂದ್ರ್ ಕಹ ಗಯೇ ಸಿಯಾ ಸೆ’ ಹಾಗೂ ‘ಏಕ್ ಪಡೋಸನ್ ಪೀಛೇ ಪಡ್‌ಗಯಿ’ ಹಾಡುಗಳು ಮಹೇಂದ್ರ ಕಪೂರ್ ಪಾಲಾಗಿ ಜಯಭೇರಿ ಬಾರಿಸಿದವು. ಯಾವುದೋ ರೆಕಾರ್ಡಿಂಗ್‌ಗೆ ತಡವಾಗಿ ಬಂದ ಕಾರಣಕ್ಕಾಗಿ ತನ್ನ ಅಚ್ಚುಮೆಚ್ಚಿನ ಗಾಯಕ ರಫಿಯೊಡನೆ ವಿರಸ ಬೆಳೆಸಿಕೊಂಡ ಓ. ಪಿ. ನಯ್ಯರ್ ಅವರು ಮುಂದೆ ಬಹಳ ವರ್ಷಗಳ ಕಾಲ ಮಹೇಂದ್ರಕಪೂರ್ ಅವರನ್ನು ಬಳಸಿಕೊಂಡರು. ಈ ಅವಧಿಯಲ್ಲಿ ‘ಯೆ ರಾತ್ ಫಿರ್ ನ ಆಯೇಗೀ’ ಚಿತ್ರದ ‘ಮೇರಾ ಪ್ಯಾರ್ ವೊ ಹೈ ಕೆ’, ‘ಬಹಾರೆ ಫಿರ್ ಭೀ ಆಯೇಂಗೀ’ ಚಿತ್ರದ ‘ಬದಲ್ ಜಾಯೆ ಅಗರ್ ಮಾಲೀ’, ‘ಕಿಸ್ಮತ್’ ಚಿತ್ರದ ‘ಲಾಖೋಂ ಹೈ ಯಹಾಂ ದಿಲ್‌ವಾಲೆ’ ಹಾಗೂ ‘ಆಂಖೊಂ ಮೆ ಕಯಾಮತ್ ಕೆ ಕಾಜಲ್’, ‘ಸಂಬಂಧ್’ ಚಿತ್ರದ ‘ಜೊ ದಿಯಾ ಥಾ ತುಮ್ ನೆ ಎಕ್ ದಿನ್’ ಹಾಗೂ ‘ಅಂಧೇರೆ ಮೆ ಜೊ ಬೈಠೇ ಹೈಂ’, ‘ ಕಹೀಂ ದಿನ್ ಕಹೀಂ ರಾತ್’ ನ ‘ತುಮ್ಹಾರಾ ಚಾಹನೆ ವಾಲಾ’ ದಂತಹ ಹಾಡುಗಳು ಜನ್ಮತಾಳಿದವು. ಶಂಕರ್ ಜೈಕಿಶನ್ ಆವರ ಸಂಗೀತ ನಿರ್ದೇಶನದ ‘ಹರಿಯಾಲೀ ಔರ್ ರಾಸ್ತಾ’ ದಲ್ಲಿ ‘ಖೋ ಗಯಾ ಹೈ ಮೆರಾ ಪ್ಯಾರ್’, ‘ಜಿಸ್ ದೇಶ್ ಮೆ ಗಂಗಾ ಬಹತೀ ಹೈ’ ಯಲ್ಲಿ ‘ಹಮ್ ಭೀ ಹೈಂ ತುಮ್ ಭೀ ಹೋ’ ಮುಂತಾದ ಹಾಡುಗಳಲ್ಲಿ ಮಹೇಂದ್ರ ಕಪೂರ್ ಧ್ವನಿ ಕೇಳಿಸಿದರೂ ಅವರಿಗೆ ದೊರಕಿದ ಬಂಪರ್ ಅವಕಾಶವೆಂದರೆ ‘ಸಂಗಂ’ ಚಿತ್ರದ ಮುಕೇಶ್ ಲತಾ ಅವರೊಂದಿಗಿನ ‘ಹರ್ ದಿಲ್ ಜೊ ಪ್ಯಾರ್ ಕರೇಗಾ’ ಹಾಡು. ಮೊತ್ತ ಮೊದಲ ಅವಕಾಶ ನೀಡಿದ ನೌಶಾದ್ ಅವರು ಆ ಮೇಲೆ ಮಹೇಂದ್ರ ಕಪೂರ್ ಅವರನ್ನು ಬಳಸಿಕೊಂಡದ್ದು ಕಡಿಮೆಯೇ. ಆದರೆ ಇವರ ನಿರ್ದೇಶನದಲ್ಲಿ ತನ್ನ ಆರಾಧ್ಯ ದೈವ ಹಾಗೂ ಗುರು ರಫಿಯವರೊಡನೆ ‘ಆದ್ಮೀ’ ಚಿತ್ರಕ್ಕಾಗಿ ‘ಕೈಸೀ ಹಸೀನ್ ಆಜ್’ ಎಂಬ ಒಂದು ಯುಗಳ ಗೀತೆಯನ್ನು ಹಾಡುವ ಅವಕಾಶ ಮಹೇಂದ್ರ ಕಪೂರ್ ಅವರಿಗೆ ದೊರಕಿತು. ಆದರೆ ಇದೇ ಹಾಡನ್ನು ಧ್ವನಿಮುದ್ರಿಕೆಗಾಗಿ ಹಾಡಿದ್ದು ರಫಿ ಹಾಗೂ ತಲತ್ ಮಹಮೂದ್! ಮಹೇಂದ್ರ ಕಪೂರ್ ಅವರು ಮನ್ನಾಡೆ ಅವರೊಂದಿಗೆ ‘ದಾದಿಮಾ’ ಚಿತ್ರಕ್ಕಾಗಿ ಹಾಡಿದ ‘ಉಸ್ ಕೊ ನಹಿಂ ದೇಖಾ ಹಮ್ ನೆ ಕಭೀ’, ಕಿಶೋರ್ ಕುಮಾರ್ ಅವರೊಂದಿಗೆ ‘ವಿಕ್ಟೋರಿಯ ನಂಬರ್ 203’ ನಲ್ಲಿ ಹಾಡಿದ ‘ದೊ ಬೆಚಾರೇ ಬಿನಾ ಸಹಾರೆ’ ಹಾಡುಗಳೂ ಮರೆಯುವಂಥವುಗಳಲ್ಲ. ಕಿರುತೆರೆಯ ಸಾರ್ವಕಾಲಿಕ ಪ್ರಸಿದ್ಧ ಸರಣಿ ‘ಮಹಾಭಾರತ’ದ ಶೀರ್ಷಿಕಾ ಗೀತೆಯ ಧ್ವನಿಯೂ ಮಹೇಂದ್ರ ಕಪೂರ್ ಅವರದ್ದೇ.
ಇತರ ಗಾಯಕರಿಗೆ ಹೋಲಿಸಿದರೆ ಮಹೇಂದ್ರ ಕಪೂರ್ ಹಾಡಿದ ಹಾಡುಗಳ ಸಂಖ್ಯೆ ಕಮ್ಮಿ ಇರಬಹುದು. ಆದರೆ ರಫಿ, ಮನ್ನಾಡೆ, ಮುಖೇಶ್, ತಲತ್, ಹೇಮಂತ್ ಕುಮಾರ್, ಕಿಶೋರ್ ಕುಮಾರ್ ಅವರಂತಹ ದಿಗ್ಗಜರು ಹಿನ್ನೆಲೆ ಗಾಯನ ಕ್ಷೇತ್ರವನ್ನಾಳುತ್ತಿದ್ದ ಸಮಯದಲ್ಲಿ ತಮ್ಮದೇ ಒಂದು ಸ್ಥಾನವನ್ನು ನಿರ್ಮಿಸಿಕೊಂಡು ಬಹಳಷ್ಟು ವರ್ಷಗಳ ಕಾಲ ಮಾಧುರ್ಯವನ್ನು ಉಣಬಡಿಸಿದ ಕೀರ್ತಿ ಮಹೇಂದ್ರ ಕಪೂರ್ ಅವರದ್ದು.
ಮಹೇಂದ್ರ ಕಪೂರ್ ಅವರಿಗೆ ಪದ್ಮಶ್ರೀ, ಪುರಸ್ಕಾರ, ಫಿಲಂಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಮಹೇಂದ್ರ ಕಪೂರರು 2008ರ ಸೆಪ್ಟೆಂಬರ್ 27ರಂದು ಈ ಲೋಕವನ್ನಗಲಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ಗಲಾಟೆ: ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ವಿದ್ಯಾರ್ಥಿ ಪಾಕ್ ಧ್ವಜವನ್ನು ಪೋಸ್ಟ್ ಮಾಡಿದ್ದರಿಂದ ಕಾಲೇಜಿನಲ್ಲಿ ಉದ್ವಿಗ್ನತೆ;

Wed Mar 9 , 2022
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕಾಲೇಜೊಂದರಲ್ಲಿ ಬುಧವಾರವೂ ಉದ್ವಿಗ್ನತೆ ಮುಂದುವರೆದಿದೆ, ಹಿಂದಿನ ದಿನ ಹಿಜಾಬ್ ಸರಣಿಯ ಬಗ್ಗೆ ಬಿಸಿ ಚರ್ಚೆಯ ಸಂದರ್ಭದಲ್ಲಿ ಪಾಕಿಸ್ತಾನದ ಧ್ವಜದ ಚಿತ್ರವನ್ನು ವಾಟ್ಸಾಪ್‌ನಲ್ಲಿ ಅಧ್ಯಯನದ ಗುಂಪಿನಲ್ಲಿ ಪೋಸ್ಟ್ ಮಾಡಿದ ವಿದ್ಯಾರ್ಥಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಸಾಕ್ಷಿಯಾಯಿತು. ವಿದ್ಯಾರ್ಥಿನಿಯ ವಿರುದ್ಧ ದೇಶದ್ರೋಹದ ಆರೋಪ ಹೊರಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದು, ಕಾಲೇಜಿನಿಂದ ವಜಾಗೊಳಿಸುವಂತೆಯೂ ಒತ್ತಾಯಿಸಿದ್ದಾರೆ. ಈ ಕುರಿತು ಮಂಗಳವಾರ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. […]

Advertisement

Wordpress Social Share Plugin powered by Ultimatelysocial