ಜಾನ್ ಹಂಟರ್ | On the birth anniversary of great surgeon of 18th century Jhon Hunter |

ಜಾನ್ ಹಂಟರ್
On the birth anniversary of great surgeon of 18th century Jhon Hunter
ಜಾನ್ ಹಂಟರ್ ಸ್ಕಾಟಿಷ್ ಶಸ್ತ್ರವೈದ್ಯರು, ಖ್ಯಾತ ಅಂಗರಚನಾವಿಜ್ಞಾನಿ ಹಾಗೂ ಪ್ರಾಯೋಗಿಕ ರೋಗವಿಜ್ಞಾನದ (ಪೆತಾಲಜಿ) ಪಿತಾಮಹರೆನಿಸಿದವರು. ಶಸ್ತ್ರಕ್ರಿಯೆಯನ್ನು ವೈಜ್ಞಾನಿಕ ತಳಹದಿಯ ಮೇಲೆ ಸ್ಥಾಪಿಸಿದ ಇವರು, ಮುಂದಿನ ಶತಮಾನಗಳಲ್ಲಿನ ವೈದ್ಯಕೀಯ ವಿಜ್ಞಾನದ ಬೆಳೆವಣಿಗೆಗಳಿಗೆ ಅಗತ್ಯ ಹಂದರ (ಫ್ರೇಮ್ವರ್ಕ್) ನಿರ್ಮಿಸಿದವರು. “ಆಲೋಚಿಸಬೇಡ, ಪ್ರಯೋಗಮಾಡು” ಇದು ಶಸ್ತ್ರವೈದ್ಯರಿಗೆ ಇವರು ನೀಡುತ್ತಿದ್ದ ಉಪದೇಶ.
ಜಾನ್ ಹಂಟರ್ ಹತ್ತು ಮಕ್ಕಳಿದ್ದ ಕುಟುಂಬದ ಕೊನೆಯ ಸದಸ್ಯರಾಗಿ 1728ರ ಫೆಬ್ರವರಿ 13ರಂದು ಸ್ಕಾಟ್ಲೆಂಡಿನಲ್ಲಿ ಜನಿಸಿದರು. ಹಂಟರ್ ಶಾಲೆ ಮತ್ತು ಪುಸ್ತಕ ದ್ವೇಷಿ. ಸ್ಥಳೀಯ ಗ್ರಾಮರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಸಹೋದರರು ಸಂಭಾವಿತರಂತೆ ಶಿಕ್ಷಣಾಸಕ್ತರಾಗಿದ್ದಾಗ ಕಿರಿಯನಾದ ಈತ ಬಯಲಿನಲ್ಲಿ ಕೀಟಗಳ, ಪ್ರಾಣಿಗಳ ಗೂಡುಗಳಲ್ಲಿ ಆಸಕ್ತನಾಗಿದ್ದ. 13 ವರ್ಷ ವಯಸ್ಸಿನಲ್ಲಿ ತಂದೆ ನಿಧನನಾದಾಗ ಶಾಲೆ ಬಿಟ್ಟು ಮನೆಯಲ್ಲಿಯೇ ಉಳಿದ. ಮುಂದಿನ ಆರು ವರ್ಷ ಮೇಲ್ನೋಟಕ್ಕೆ ನಿರುಪಯುಕ್ತವಾಗಿದ್ದ ಆತನ ಚಟುವಟಿಕೆಗಳು ಮುಂದೆ ಆತ ಕೈಗೊಂಡ ಅಧ್ಯಯನಗಳಿಗೆ ಬುನಾದಿಯಾದುವು. 17 ವರ್ಷ ವಯಸ್ಸಾದಾಗ ಬಡಗಿ ಹಾಗೂ ಮರ ವ್ಯಾಪಾರೀ ಸಂಬಂಧಿಯೊಬ್ಬನ ಜೊತೆಗೂಡಿ ಮರಗೆಲಸದ ಸಲಕರಣೆಗಳ ಬಳಕೆಯ ಅನುಭವ ಪಡೆದ.
ಜಾನ್ ಹಂಟರ್ 20ನೆಯ ವಯಸ್ಸಿನಲ್ಲಿ ಲಂಡನ್ನಲ್ಲಿ ಖ್ಯಾತ ಪ್ರಸವ ವಿಜ್ಞಾನಿಯಾಗಿದ್ದ ಅಣ್ಣ ವಿಲಿಯಮ್ನ ಸಹಾಯಕರಾಗಿ ವೃತ್ತಿಜೀವನ ಆರಂಭ ಮಾಡಿದರು (1748). ಖಾಸಗಿಯಾಗಿ ಅಂಗಛೇದನೆ ಮತ್ತು ಅಂಗರಚನಾವಿಜ್ಞಾನ ಬೋಧಿಸುತ್ತಿದ್ದ ಅಣ್ಣನ ಉಪನ್ಯಾಸಗಳಿಗೆ ಅಗತ್ಯವಾದ ಪೂರ್ವಸಿದ್ಧತೆ ಮಾಡಲು ನೆರವು ನೀಡುವುದು ಇವರ ಕೆಲಸವಾಗಿತ್ತು. ಇಂಥ ಕೆಲಸಗಳಲ್ಲಿ ಇವರ ವಿಶೇಷ ಪ್ರತಿಭೆಯನ್ನು ಗುರುತಿಸಿದ ವಿಲಿಯಮ್ ಇವರನ್ನು ಸೇಂಟ್ ಜಾರ್ಜ್ ಮತ್ತು ಸೇಂಟ್ ಬಾರ್ತಲೊಮ್ಯು ಆಸ್ಪತ್ರೆಗಳಲ್ಲಿ ಶಸ್ತ್ರಕ್ರಿಯಾ ತರಗತಿಗಳಿಗೆ ಸೇರಿಸಿದರು.
ಜಾನ್ ಹಂಟರ್ ಮೊದಲು ಚೆಲ್ಸಿಯ ಆಸ್ಪತ್ರೆಯಲ್ಲಿ ಅಂದಿನ ಖ್ಯಾತ ಶಸ್ತ್ರವೈದ್ಯ ವಿಲಿಯಮ್ ಚೆಸೆಲ್ಡೆನ್ನ (1688-1752) ಬಳಿ ಶಿಷ್ಯವೃತ್ತಿ, ತದನಂತರ (1751) ಸೇಂಟ್ ಬಾರ್ತಲೊಮ್ಯು ಆಸ್ಪತ್ರೆಯ ಜಾನ್ ಪರ್ಸಿವಲ್ ಪಾಟ್ (1714-88) ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದರು. ಸರ್ಜನ್ಸ್ ಹಾಲ್ನಲ್ಲಿ ಸಿದ್ಧಪಡಿಸಿದ ಉಪನ್ಯಾಸಗಳನ್ನು ಓದುವ ಅಂಗರಚನಾ ವಿಜ್ಞಾನ ಬೋಧಕ ಹುದ್ದೆ ಇವರಿಗೆ ಪ್ರಾಪ್ತಿಯಯಿತು (1753). ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ (1754-56) ಪ್ರಾಯೋಗಿಕ ತರಬೇತಿ ಪಡೆದರು. ಆ ಅವಧಿಯಲ್ಲಿ ಘ್ರಾಣನರದ ಶಾಖೆಗಳು ತಲೆಬುರುಡೆಯಿಂದ ಹೊರಬರುವ ಪಥಗಳನ್ನು ನಿಖರವಾಗಿ ಗುರುತಿಸುವುದರಲ್ಲಿ ತಲ್ಲೀನರಾದರು. ಇವರು ಅಂಗಛೇದನ ಮಾಡಿದ ನಮೂನೆಯೊಂದು ಇಂದಿಗೂ ವಸ್ತುಸಂಗ್ರಹಾಲಯದಲ್ಲಿ ಲಭ್ಯವಿದೆ.
ಜಾನ್ ಹಂಟರ್ ಸೇಂಟ್ ಜಾರ್ಜ್ ಆಸ್ಪತ್ರೆಯ ಶಸ್ತ್ರವೈದ್ಯರಾಗಿ ನೇಮಕಗೊಂಡರು (1758). ಬೋಧನೆಯ ಜವಾಬ್ದಾರಿಯ (1768) ನಿರ್ವಹಣೆಯೊಂದಿಗೆ ಶಸ್ತ್ರ ಕ್ರಿಯೆಯ ತತ್ತ್ವಗಳು ಮತ್ತು ಅಭ್ಯಾಸ ಕುರಿತು ಖಾಸಗಿ ಉಪನ್ಯಾಸಗಳ ನೀಡಿಕೆ ಆರಂಭ (1770) ಮಾಡಿದರು. ಏತನ್ಮಧ್ಯೆ ಸೇನಾಪಡೆಗಳ ಶಸ್ತ್ರವೈದ್ಯ ವೃತ್ತಿ (1760-63) ಮಾಡಿದರು. ಮೂರನೆಯ ಜಾರ್ಜ್ ಅವರಿಂದ
ರಾಜವೈದ್ಯ ಗೌರವ ಪ್ರಾಪ್ತಿಯಾಯಿತು (1776).
ಶಸ್ತ್ರಕ್ರಿಯೆ ಕ್ಷೇತ್ರಕ್ಕೆ ಬಲು ಮುಖ್ಯ ನಿರ್ದಿಷ್ಟ ಕೊಡುಗೆಗಳನ್ನು ನೀಡುವುದರೊಂದಿಗೆ, ವೈಜ್ಞಾನಿಕವೃತ್ತಿಗೆ ಸ್ಥಾನಮಾನ ದೊರಕಿಸಿಕೊಟ್ಟ ಕೀರ್ತಿಯೂ ಜಾನ್ ಹಂಟರ್ ಅವರಿಗೆ ಸಲ್ಲುತ್ತದೆ. ಇವರು, ಗಾನೊರೀಯ ಮತ್ತು ಫರಂಗಿ ರೋಗಗಳು (ಸಿಫಿಲಿಸ್) ಒಂದೇ ರೋಗದ ವಿಭಿನ್ನ ಮೈದೋರಿಕೆಗಳು ಎಂಬುದನ್ನು ಸಿದ್ಧಪಡಿಸಲೋಸುಗ ಒಂದನ್ನು ತಗಲಿಸಿಕೊಂಡು ಸುದೀರ್ಘ ಕಾಲ ನರಳಿದರೆಂಬ ಐತಿಹ್ಯವಿದೆ.
ಅಂಗರಚನಾ ವಿಜ್ಞಾನ ಮತ್ತು ಶರೀರಕ್ರಿಯಾ ವಿಜ್ಞಾನಗಳ ತುಲನಾತ್ಮಕ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಇದ್ದ ಜಾನ್ ಹಂಟರ್ ಇವೆರಡರ ತಳಹದಿಯ ಮೇಲೆ ಶಸ್ತ್ರಕ್ರಿಯೆಯನ್ನು ವಿಜ್ಞಾನದಂತೆ ಬೋಧಿಸಬೇಕೆಂದು ಪ್ರತಿಪಾದಿಸುತ್ತಿದ್ದರು. ಇವರ ಸಂಶೋಧನೆಗಳ ವ್ಯಾಪ್ತಿ ಬಲು ವಿಸ್ತಾರವಾಗಿತ್ತು. ಅನ್ಯೂರಿಸಮ್ನ ಶಸ್ತ್ರಕ್ರಿಯಾ ಚಿಕಿತ್ಸೆ, ಊತಕಗಳ ನಾಟಿ ಮಾಡುವಿಕೆ ಹಾಗೂ ಪುನರುದ್ಭವ, ರತಿ ರೋಗಗಳು ಈ ಪೈಕಿ ಕೆಲವು. ಅತ್ಯಂತ ಮುಂಬರಿದ ಕುಶಲೀ ತಂತ್ರ ಎಂದು ಇವರ ಶಸ್ತ್ರಕ್ರಿಯಾ ವಿಧಾನ ಮನ್ನಣೆ ಗಳಿಸಿತ್ತು.
ಪ್ರಪಂಚದ ಮೂಲೆಮೂಲೆಗಳಿಂದ ಪ್ರಾಣಿಗಳನ್ನು ಸಂಗ್ರಹಿಸಿ ಅಭ್ಯಸಿಸುವುದು ಜಾನ್ ಹಂಟರ್ ಅವರ ಹವ್ಯಾಸವಾಗಿತ್ತು. ಅಂಗರಚನಾ ವಿಜ್ಞಾನ, ಶರೀರಕ್ರಿಯಾ ವಿಜ್ಞಾನ ಮತ್ತು ರೋಗ ವಿಜ್ಞಾನಗಳ ಅಧ್ಯಯನಕ್ಕೆ ಉಪಯುಕ್ತವಾದ 10,000ಕ್ಕೂ ಹೆಚ್ಚಿನ ಸಂರಕ್ಷಿತ ನಮೂನೆಗಳು ಇವರ ಖಾಸಗಿ ಸಂಗ್ರಹಾಲಯದಲ್ಲಿದ್ದವು. ಇವರ ಮರಣಾನಂತರ ಸರ್ಕಾರ ಅವನ್ನು ಖರೀದಿಸಿ ರಾಯಲ್ ಕಾಲೇಜ್ ಆಫ್ ಸರ್ಜನ್ಸಿಗೆ ದಾನಮಾಡಿತು.
ಜಾನ್ ಹಂಟರ್ ಅವರ ಮೊದಲನೆಯ ಸಂಶೋಧನ ಪ್ರಬಂಧ ‘ದಿ ಸ್ಟೇಟ್ ಆಫ್ ದಿ ಟೆಸ್ಟಿಸ್ ಇನ್ ದಿ ಫೀಟಸ್ ಆ್ಯಂಡ್ ಆನ್ ದಿ ಹರ್ನಿಯ ಕಂಜೆನಿಟ್’ ಪ್ರಕಟವಾದದ್ದು ಅಣ್ಣ ವಿಲಿಯಮ್ ಹಂಟರ್ ಅವರ ಮೆಡಿಕಲ್ ಕಮೆಂಟರೀಸ್ ನಿಯತಕಾಲಿಕದಲ್ಲಿ (1762). ದಿ ನ್ಯಾಚುರಲ್ ಹಿಸ್ಟರಿ ಆಫ್ ದಿ ಹ್ಯೂಮನ್ ಟೀತ್ (1771), ಆನ್ ದಿ ಡೈಜೆಶನ್ ಆಫ್ ದಿ ಸ್ಟಮಕ್ ಆಫ್ಟರ್ ಡೆತ್ (1772), ಅಕೌಂಟ್ ಆಫ್ ಎ ವುಮನ್ ಹು ಹ್ಯಾಡ್ ದಿ ಸ್ಮಾಲ್ಫಾಕ್ಸ್ ಡ್ಯೂರಿಂಗ್ ಪ್ರೆಗ್ನೆನ್ಸಿ ಆ್ಯಂಡ್ ಹು ಸೀಮ್ಡ್ ಟು ಹ್ಯಾವ್ ಕಮ್ಯೂನಿಕೇಟೆಡ್ ದಿ ಸೇಮ್ ಡಿಸೀಸ್ ಟು ದಿ ಫೀಟಸ್ (1780), ಎ ಟ್ರೀಟಿಸ್ ಆನ್ ದಿ ವಿನಯ್ರಿಯಲ್ ಡಿಸೀಸ್ (1786), ಅಬ್ಸರ್ವೇಶನ್ಸ್ ಆನ್ ಸರ್ಟೆನ್ ಪಾರ್ಟ್ಸ್ ಆಫ್ ದಿ ಆ್ಯನಿಮಲ್ ಇಕಾನಮಿ (1786), ಎ ಪ್ರ್ಯಾಕ್ಟಿಕಲ್ ಟ್ರೀಟಿಸ್ ಆನ್ ದಿ ಡಿಸೀಸಸ್ ಆಫ್ ದಿ ಟೀತ್ (1778) ಇವು ಇವರ ಪ್ರಕಟಣೆಗಳು. ಇವರ ಮರಣಾನಂತರ ಪ್ರಕಟವಾದದ್ದು ಎ ಟ್ರೀಟಿಸ್ ಆನ್ ದಿ ಬ್ಲಡ್, ಇನ್ಫ್ಲಮೇಶನ್ ಆ್ಯಂಡ್ ಗನ್ಶಾಟ್ ವೂಂಡ್ಸ್ (1794). ಮಾನವ ತೊಡೆಯಲ್ಲಿರುವ ಅಧಿಕರ್ಷಕ ನಾಲೆಗೆ (ಅ್ಯಡಕ್ಟರ್ ಕೆನಾಲ್) ಹಂಟರ್ಸ್ ಕೆನಾಲ್ ಎಂದೂ ಒಂದು ರತಿರೋಗವನ್ನು ಹಂಟರ್ಸ್ ಷ್ಯಾಂಕರ್ ಎಂದೂ ಹೆಸರಿಸಲಾಗಿದೆ.
ಜಾನ್ ಹಂಟರ್ 1793ರ ಅಕ್ಟೋಬರ್ 16ರಂದು ನಿಧನರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಶ್ವ ರೇಡಿಯೋದಿನದಂದು ರೇಡಿಯೋ ಸವಿನೆನಪು...

Fri Mar 4 , 2022
ನಮ್ಮ ಬದುಕಿನ ಅಮೂಲ್ಯ ನೆನಪುಗಳಲ್ಲಿ ರೇಡಿಯೋಗೆ ವಿಶಿಷ್ಟ ಸ್ಥಾನವಿದೆ. ರೇಡಿಯೋ ಅಂದರೆ ನೆನಪುಗಳೊಂದಿಗೆ ನಾನೂ ಚಿಕ್ಕವನಾದ ಭಾವ ಮೂಡಿ ಮನ ಬಾಲ್ಯದತ್ತ ಹಿಂದಕ್ಕೋಡುತ್ತದೆ. ನಾಲ್ಕೈದು ವರ್ಷದ ಹುಡುಗನಿರಬೇಕು. ನಮ್ಮ ಮನೆಗೆ ಒಂದು ಸೆಕೆಂಡ್ ಹ್ಯಾಂಡ್ ಮರ್ಫಿ ರೇಡಿಯೋ ಬಂತು. ಆ ಯಂತ್ರ “ವಾರ್ತೆಗಳು ಓದುತ್ತಿರುವವರು ರಂಗರಾವ್” ಎಂದು ನುಡಿಯಲು ಪ್ರಾರಂಭಿಸಿದ್ದು ಕೂಡಾ ಅಚ್ಚರಿಯ ವಿಷಯವಾಗಿ ಈಗಲೂ ನೆನಪಿದೆ. ಅದರೊಳಗೆ ಯಾರು ಹೋಗಿ ಕೂತಿದ್ದಾರೆ ಎಂದು ನೋಡುವ ಎಂದರೆ ಅದನ್ನು ಐದು […]

Advertisement

Wordpress Social Share Plugin powered by Ultimatelysocial