ಅಪ್ಪು ಜನ್ಮದಿನದಂದು | On the birth anniversary of our lovely star Appu, the Puneeth Rajkumar |

 
ಇಂದು ನಮ್ಮ ಅಪ್ಪು ಜನ್ಮದಿನ. ನಮ್ಮಗಳ ಮನೆಹುಡುಗನಂತಿದ್ದು ಕಳೆದ ವರ್ಷ ನಮ್ಮನ್ನಗಲಿದ ಅವಿಸ್ಮರಣೀಯ ಹುಡುಗ.
ರಾಜ್ಕುಮಾರ್ ಅಂದರೆ ಕನ್ನಡದಲ್ಲಿ ಒಂದು ಅಗಾಧ ಶಕ್ತಿ. ಆ ರಾಜ್ಕುಮಾರ್ ಅವರ ಮಗನಾಗಿ ಬಂದು ಇಂದು ಕನ್ನಡ ಚಿತ್ರರಂಗದಲ್ಲಿ ಅಪಾರ ಯಶಸ್ಸಿನಿಂದ ಮಿನುಗುತ್ತಿದ್ದ ಹುಡುಗ ಪುನೀತ್.
ಪುನೀತ್ ಹುಟ್ಟಿದ್ದು 1975ರ ಮಾರ್ಚ್ 17ರಂದು.
ಪುನೀತ್ ಬಾಲ್ಯದಲ್ಲೇ ತಂದೆ ರಾಜ್ ಅವರೊಂದಿಗೆ ಬಾಲನಟನಾಗಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡು ಚಿತ್ರರಂಗದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟ ಹುಡುಗ. ರಾಜ್ ಕುಟುಂಬದ ನಿರ್ಮಾಣವಾದ ಎನ್ ಲಕ್ಷ್ಮೀನಾರಾಯಣರ ನಿರ್ದೇಶನದ ‘ಬೆಟ್ಟದ ಹೂವು’ ಚಿತ್ರದಲ್ಲಿ ಪುನೀತ್ ಬಾಲನಟನಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ. ಈ ಹುಡುಗನ ಚಲಿಸುವ ಮೋಡಗಳು ಚಿತ್ರದ ‘ಕಾಣದಂತೆ ಮಾಯವಾದನೋ’ ಗೀತೆ ನಮಗೆ ಅಪಾರವಾಗಿ ಮೋಡಿ ಮಾಡಿತ್ತು.
ಪುನೀತ್ ಓದುವ ದಿನಗಳಲ್ಲಿ ಸರಳ ಸಾಮಾನ್ಯ ಹುಡುಗನಂತೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಮ್ಮ ಕಚೇರಿ ಬಳಿಯಲ್ಲಿದ್ದ ಬ್ರಿಟಿಷ್ ಇನ್ಸ್ಟಿಟ್ಯೂಟಲ್ಲಿ ಪಾಠಕ್ಕೆ ಬಂದು, ಸಾಮಾನ್ಯ ಹುಡುಗನ ಹಾಗೆ ಅಲ್ಲಿದ್ದ ಜನಸಾಮಾನ್ಯರ ಅರಸು ಹೋಟಲಲ್ಲಿ ನಮ್ಮಂತಹವರ ನಡುವೆ ಕಾಫಿ ತಿಂಡಿಗೆ ತನ್ನ ಸಹಪಾಠಿಗಳೊಂದಿಗೆ ಬಂದು ಹೋಗುತ್ತಿದ್ದ ಎಂಬುದು ಇಂದೂ ಕಣ್ಣಿಗೆ ಕಟ್ಟಿದ ಹಾಗಿದೆ.
ನಾಯಕನಾಗಿ ಬಂದ ಮೇಲಂತೂ ಒಂದಕ್ಕಿಂದ ಒಂದು ಎಂಬಂತೆ ಪುನೀತರ ಅಪ್ಪು, ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್, ಅಜಯ್, ಅರಸು, ಮಿಲನ, ವಂಶಿ, ರಾಮ್, ಜಾಕಿ, ಹುಡುಗರು, ಪರಮಾತ್ಮ, ಅಣ್ಣಾ ಬಾಂಡ್, ಯಾರೇ ಕೂಗಾಡಲಿ, ಮೈತ್ರಿ, ರಾಜಕುಮಾರ, ಅಂಜನಿ ಪುತ್ರ ಹೀಗೆ ಬಹಳಷ್ಟು ಚಿತ್ರಗಳು ಜಯಭೇರಿ ಬಾರಿಸಿದವು. ಜೊತೆಗೆ ಕನ್ನಡಿಗರಿಗೂ ಕೋಟ್ಯಾಧಿಪತಿಗಳಾಗಬೇಕೆಂಬ ಕನಸಿನ ಕಿಡಿ ಹಚ್ಚಿಸುತ್ತಾ ‘ಕೋಟ್ಯಾಧಿಪತಿ’ ಎಂಬ ‘ಕೌನ್ ಬನೇಗಾ ಕ್ರೋರ್ ಪತಿ ಮಾದರಿಯ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ಮೂಡಿಸಿದ್ದರು. ನಂದಿನಿ ಹಾಲಿನ ಜಾಹೀರಾತಿನಲ್ಲೂ ತಮ್ಮ ಸಾಹಸದ ನಟನೆ ಬಿಂಬಿಸಿದ್ದರು.
ರಾಜ್ ಅವರ ಕುಟುಂಬ ಪುನೀತರನ್ನು ಅತ್ಯಂತ ವ್ಯವಸ್ಥಿತವಾಗಿ ಚಿತ್ರರಂಗದಲ್ಲಿ ಬೆಳೆಸಿರುವುದನ್ನ ಅವರ ಚಿತ್ರಜೀವನದ ಬಹಳಷ್ಟು ಯಶಸ್ಸುಗಳು ಸೂಚಿಸುವಂತದ್ದಾಗಿವೆ. ಈ ಗೆಲುವುಗಳು ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಭರವಸೆಯ ಶಕ್ತಿಯನ್ನು ನೀಡಿದಂತಹವು. ವ್ಯವಹಾರದ ಯಶಸ್ಸಿನ ಜೊತೆಗೆ ಪುನೀತರಿಗೆ ಅರಸು, ಹುಡುಗರು ಚಿತ್ರಗಳಿಗೆ ದೊರೆತ ಫಿಲಂ ಫೇರ್ ಪ್ರಶಸ್ತಿ ಮತ್ತು ಮಿಲನ, ಪೃಥ್ವಿ , ಜಾಕಿ ಚಿತ್ರಗಳಿಗೆ ದೊರೆತ ರಾಜ್ಯಪ್ರಶಸ್ತಿ ಮುಂತಾದವು ಅವರು ಅಭಿನಯ ಕಲೆಯಲ್ಲಿ ಕಲಿಯುವುದಕ್ಕೆ ತೋರಿರುವ ಚುರುಕುತನಕ್ಕೆ ಸಂದ ಪುರಸ್ಕಾರಗಳಾಗಿದ್ದವು.
ಇಷ್ಟೆಲ್ಲಾ ಯಶಸ್ಸುಗಳು ಜೊತೆಗಿದ್ದರೂ ರಾಜ್ ಕುಮಾರ್ ಅವರ ಹೆಸರಿಗೆ ತಕ್ಕಂತೆ ಗೌರವಯುತವಾಗಿ ನಡೆದುಕೊಳ್ಳುತ್ತಾ ಹಂತಹಂತವಾಗಿ ಅಭಿನಯ ಕಲೆಗಳನ್ನು ರೂಢಿಸಿಕೊಳ್ಳುತ್ತಾ ಸಾಗಿದ್ದರು ಪುನೀತ್. ಇನ್ನೂ ಯುವ ವಯಸ್ಸಿನಲ್ಲೇ ಸಾಕಷ್ಟು ಸಾಧಿಸಿದ್ದ ಪುನೀತರ ಮುಂದೆ ಕಾಲ ತನ್ನ ವಿಶಾಲವಾದ ನೆಲೆಯನ್ನು ಹರಡಿಕೊಂಡಿದ್ದು, ಇವರ ಮುಂದಿನ ಸಾಧನೆಗಳಿಗಾಗಿ ಸಾಕಷ್ಟು ನಿರೀಕ್ಷೆಗಳನ್ನು ಸೂಚಿಸುತ್ತಿತ್ತು.
ಯಶಸ್ಸನ್ನು ಅತೀವವಾಗಿ ಹಚ್ಚಿಕೊಂಡಿಲ್ಲದೆ ಕಾಯಕದಲ್ಲಿ ಸಂತಸವನ್ನು ಅನುಭವಿಸುತ್ತಾ ಮುಂದುವರೆದಿದ್ದರು ಪುನೀತ್. ಇವರಿಂದ ಇನ್ನೂ ಹೆಚ್ಚು ಹೆಚ್ಚು ನಿರೀಕ್ಷಿಸಬಹುದು ಎಂದೆಣಿಸಿದ್ದಾಗ, ನನಗಿಷ್ಟೇ ಸಾಕು ಎಂಬಂತೆ 2021 ಅಕ್ಟೋಬರ್ 29ರಂದು ತನ್ನ ಬದುಕಿನ ರಂಗಪರದೆಯನ್ನು ಎಳೆದು ಈ ಹುಡುಗ ಬಿರ ಬಿರನೆ ಓಡಿಬಿಟ್ಟ….

ಅಪ್ಪು ನಮಗೆ ನೀನು ಸದಾ ಸ್ಮರಣೀಯ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕತ್ರಿನಾ ಕೈಫ್ ತನ್ನ 'ಗುರು' ಎಂದು ಮನ್ನಣೆ ನೀಡಿದಾಗ, ಆಕೆಯ ಹಿಟ್ ಸಂಖ್ಯೆಯಲ್ಲಿ ನೃತ್ಯವನ್ನು ನೆನಪಿಸಿಕೊಂಡ, ವಿಕ್ಕಿ ಕೌಶಲ್!

Thu Mar 17 , 2022
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾದ ದಿನದಿಂದಲೂ ತಮ್ಮ ಪ್ರಣಯದಿಂದ ಪಟ್ಟಣವನ್ನು ಕೆಂಪು ಬಣ್ಣ ಬಳಿಯುತ್ತಿದ್ದಾರೆ. ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಡಿಸೆಂಬರ್ 9, 2021 ರಂದು ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ನಡೆದ ಕನಸಿನ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ವಿವಾಹದ ಪ್ರತಿಜ್ಞೆ ಮಾಡಿದರು. ಇತರ ಪ್ರಸಿದ್ಧ ಜೋಡಿಗಳಂತೆ, ಕತ್ರಿನಾ ಮತ್ತು ವಿಕ್ಕಿ ತಮ್ಮ ಮದುವೆಗೆ ಮೊದಲು ತಮ್ಮ ಸಂಬಂಧವನ್ನು ದೃಢಪಡಿಸಲಿಲ್ಲ. ಗಾಸಿಪ್ ಗಿರಣಿಗಳು […]

Advertisement

Wordpress Social Share Plugin powered by Ultimatelysocial