ತೇಜಸ್ವಿನಿ ಅನಂತಕುಮಾರ್

ಅದಮ್ಯ ಚೇತನ ಎಂಬ ಸಮಾಜಮುಖಿ ಸಂಸ್ಥೆಯನ್ನು ಕಟ್ಟಿ ಅಪೂರ್ವ ರೀತಿಯಲ್ಲಿ ಬದುಕನ್ನು ನಡೆಸುತ್ತಿರುವವರು ತೇಜಸ್ವಿನಿ ಅನಂತಕುಮಾರ್. ಇಂದು ಅವರ ಜನ್ಮದಿನ. ಪತಿ ಕೇಂದ್ರ ಮಂತ್ರಿಗಳಾಗಿ ರಾಜಕಾರಣದಲ್ಲಿ ದೊಡ್ದ ಹೆಸರಾಗಿದ್ದ ಅನಂತಕುಮಾರ್. ಜೊತೆಗೆ ಸ್ವಯಂ ತಾವೇ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಸರಳತೆ ಮತ್ತು ಸಾಮಾಜಿಕ ಸೇವೆಯನ್ನು ಆಯ್ಕೆಮಾಡಿಕೊಂಡವರು ತೇಜಸ್ವಿನಿ.
ತೇಜಸ್ವಿನಿ ಅನಂತ್ ಕುಮಾರ್ ಅವರು 1966ರ ಮಾರ್ಚ್ 11 ರಂದು ಬೆಳಗಾವಿ ಜಿಲ್ಲೆಯ ಹಿಡ್ಕಲ್ ಗ್ರಾಮದಲ್ಲಿ ಜನಿಸಿದರು. ತಂದೆ ಪ್ರಭಾಕರ ಎ. ಓಕ್. ತಾಯಿ ಪ್ರತಿಭಾ ಪಿ. ಓಕ್ ಅವರು. ಧಾರವಾಡ ಮತ್ತು ಬೆಳಗಾವಿಗಳಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ತೇಜಸ್ವಿನಿ ಅವರು ಕರ್ನಾಟಕ ವಿಶ್ವವಿದ್ಯಾಲಯದ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಸಾಧನೆ ಮಾಡಿದವರು.
ತೇಜಸ್ವಿನಿ ಅವರು 1988 ರಿಂದ 1993 ಅವಧಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ, ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿಯಲ್ಲಿ ವಿಜ್ಞಾನಿಯಾಗಿ, ಬೆಂಗಳೂರಿನ ಬಿಎಂಎಸ್ ಮತ್ತು ಧಾರವಾಡದ ಎಸ್ಡಿಎಂ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಹೀಗೆ ವಿವಿಧ ವೃತ್ತಿಗಳನ್ನು ಮಾಡಿದರು.
1989ರಲ್ಲಿ ತೇಜಸ್ವಿನಿ ಅವರು ಅನಂತ್ ಕುಮಾರ್ ಅವರೊಂದಿಗೆ ವಿವಾಹವಾದರು. 1998ರಲ್ಲಿ ‘ಅದಮ್ಯ ಚೇತನ’ವನ್ನು ಸ್ಥಾಪಿಸಿದರು. ತಮ್ಮ ಅತ್ತೆ ದಿ. ಗಿರಿಜಾ ಶಾಸ್ತ್ರಿ ಅವರ ನೆನಪಿಗಾಗಿ ಆರಂಭಿಸಿದ ಈ ಸಂಸ್ಥೆಯ ಮೂಲಕ ಬಡವರು, ಅಶಕ್ತರ ಸೇವೆ ಮತ್ತು ಪರಿಸರ ಕಾಳಜಿಯ ಆದ್ಯ ಉದ್ದೇಶಗಳತ್ತ ದೃಷ್ಟಿ ಇರಿಸಿ ಮುನ್ನಡೆದರು.
ಅದಮ್ಯ ಚೇತನದ ಮೂಲಕ ಹೆಣ್ಣು ಮಕ್ಕಳಿಗೆ ಔದ್ಯೋಗಿಕ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕೆಲಸ ನಡೆಯಿತು. ಹೀಗೆ ಆರಂಭವಾದ ಅದಮ್ಯ ಚೇತನ ನಂತರ ಅನ್ನ, ಅಕ್ಷರ, ಆರೋಗ್ಯ ಎಂಬ ಧ್ಯೇಯಗಳ ಸಾಕಾರಕ್ಕೆ ತನ್ನನ್ನು ತೊಡಗಿಸಿಕೊಂಡಿತು. ಸುಮಾರು 2 ಲಕ್ಷಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತವಾಗಿ ಮಧ್ಯಾಹ್ನದ ಬಿಸಿ ಊಟ ನೀಡುವ ಕೆಲಸವನ್ನು ಆರಂಭಿಸಿತು. ಅದಮ್ಯ ಚೇತನದಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಜೈವಿಕ ಇಂಧನ ಬಳಸುವ ಮತ್ತು ಆಹಾರ ತಯಾರಿಸಲು ಬಳಸುವ ತರಕಾರಿ ಇತ್ಯಾದಿ ತ್ಯಾಜ್ಯ ಪದಾರ್ಥಗಳಿಂದ ಸಾವಯವ ಗೊಬ್ಬರ ತಯಾರಿಸುವ ಯೋಜನೆಗೂ ತೇಜಸ್ವಿನಿ ಅನಂತ್ ಕುಮಾರ್ ನಾಂದಿ ಹಾಡಿದರು.
ಹಸಿರು ಬೆಂಗಳೂರು ಎಂಬ ಹೆಸರಿನಲ್ಲಿ ಉದ್ಯಾನನಗರಿಯ ಹಸಿರನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಿದ ತೇಜಸ್ವಿನಿ ಅನಂತಕುಮಾರ್, ಪ್ರತಿ ಭಾನುವಾರವೂ ಬೇರೆ ಬೇರೆ ಪ್ರದೇಶಗಳಲ್ಲಿ ಗಿಡ ನೆಡುವ, ಅದನ್ನು ಬೆಳೆಸುವ ಕಾರ್ಯದಲ್ಲಿ ಶ್ರದ್ಧೆಯಿಂದ ಶ್ರಮ ನೀಡುತ್ತ ಬಂದಿದ್ದಾರೆ. ಸರಳತೆ, ಪ್ರಕೃತಿಪರ ಜೀವನವನ್ನು ಬರೀ ಮಾತಿನಲ್ಲಿ ಮತ್ತು ಕಾರ್ಯದಲ್ಲಿ ತೋರಗೊಡದೆ ಅದನ್ನು ತಮ್ಮ ಪ್ರತಿ ನಡೆಯಲ್ಲೂ ಪಾಲಿಸಿಕೊಂಡು ಬಂದವರು ತೇಜಸ್ವಿನಿ ಅನಂತಕುಮಾರ್.
ತೇಜಸ್ವಿನಿ ಅನಂತಕುಮಾರ್ ಅವರ ನಡೆ ಮತ್ತು ಕಾರ್ಯಗಳು ಹೆಚ್ಚು ಜನರನ್ನು ಈ ಕಾರ್ಯದಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಲಿ, ಅವರ ಎಲ್ಲ ಕಾರ್ಯಗಳಿಗೆ ಹೆಚ್ಚಿನ ಬೆಂಬಲ ಬರಲಿ ಎಂದು ಆಶಿಸುತ್ತ ಅವರಿಗೆ ಹುಟ್ಟು ಹಬ್ಬದ ಶುಭಹಾರೈಕೆಗಳನ್ನು ಹೇಳೋಣ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿಕಾರಿಪುರ ಹರಿಹರೇಶ್ವರ

Fri Mar 11 , 2022
ಶಿಕಾರಿಪುರ ಹರಿಹರೇಶ್ವರ ಅವರು ಕನ್ನಡ ಭಾಷೆ ಕಂಡ ಅತ್ಯಮೂಲ್ಯ ಪರಿಚಾರಕರಲ್ಲೊಬ್ಬರು. ಸುಮಾರು 4 ದಶಕಗಳ ಹಿಂದೆಯೇ ಅಮೆರಿಕದಲ್ಲಿ ಭಾರತೀಯರೆನ್ನುವರೇ ಅಲ್ಪಸ್ವಲ್ಪ ಎನ್ನಿಸುವ ಸಂಖ್ಯೆಯಲ್ಲಿದ್ದಾಗ ಆ ಪೈಕಿ ಇರುವ ಅಲ್ಪಸಂಖ್ಯೆಯ ಕನ್ನಡಿಗರನ್ನು ಒಟ್ಟು ಹಾಕಿ ಕನ್ನಡದ ತೇರನ್ನೆಳೆಯುವಲ್ಲಿ ಎಲ್ಲ ಆಸಕ್ತ, ಪ್ರೀತಿಯ ಅನಿವಾಸಿ ಕನ್ನಡಿಗರ ಕೊಡುಗೆ ಅನನ್ಯ. ಆ ಪೈಕಿ ಎಸ್. ಕೆ. ಹರಿಹರೇಶ್ವರ ಅವರು ಮುಂಚೂಣಿಯಲ್ಲಿದ್ದರು. ಇಂದು ಅಕ್ಕ, ನಾವಿಕದಂಥ ವೇದಿಕೆಗಳು ಅಮೆರಿಕದಲ್ಲಿ ಕನ್ನಡದ ಕಂಪನ್ನು ಸೂಸುತ್ತಿದ್ದರೆ, ಆ ಕಂಪಿನ […]

Advertisement

Wordpress Social Share Plugin powered by Ultimatelysocial