ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅಂಗಡಿ ಓಪನ್ ಆಗಿತ್ತು.

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅಂಗಡಿ ಓಪನ್ ಆಗಿತ್ತು. ಉಪ್ಪಿನಂಗಡಿ ಓಪನ್ ಇತ್ತು, ಕೊಳ್ಳಲು ಯುವಕರು ಹೋಗಿದ್ದರು. ಅಂಗಡಿ ಯಾರದ್ದು? ಎಂಬ ತನಿಖೆ ಆಗಲಿ. ಖರೀದಿ ಮಾಡಿದವರನ್ನು ಮಾತ್ರ ಬಂಧಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಲೇವಡಿ ಮಾಡಿದರು.

445 ಪಿಎಸ್​ಐ ಹುದ್ದೆಗಳ ನೇಮಕಾತಿ ಹಗರಣ ಪ್ರಕರಣದಲ್ಲಿ ಐಪಿಎಸ್​ ಅಧಿಕಾರಿ ಅಮೃತ್​ ಪೌಲ್​ ಅವರನ್ನ ಸಿಐಡಿ ಬಂಧಿಸಿದೆ. ಈ ಹಿನ್ನೆಲೆ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಸಿಎಂ ರಾಜೀನಾಮಗೆ ಆಗ್ರಹಿಸಿದರು. ಅಮೃತ್​ ಪೌಲ್​ರ ಬಂಧನ ಕೇವಲ ಕಣ್ಣೊರೆಸುವ ತಂತ್ರ. ಈ ಪ್ರಕರಣದಲ್ಲಿ ಸಚಿವರ ಪಾತ್ರ ಇದೆ, ದೊಡ್ಡವರ ಪಾತ್ರ ಇದೆ. ಎಲ್ಲವೂ ಬಹಿರಂಗವಾಗಲಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಮಾತನಾಡಿ, ಪಿಎಸ್​ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಹಾಲಿ ಸಿಎಂ ಮತ್ತು ಮಾಜಿ ಸಿಎಂ ಇದ್ದಾರೆ. ಬಿ.ವೈ.ವಿಜಯೇಂದ್ರ ಕೂಡ ಇದ್ದಾರೆ. ವಿಜಯೇಂದ್ರ ಅವರ ಹೆಸರನ್ನು ಬರೆದುಕೊಳ್ಳಿ. ಇವರ ಬಗ್ಗೆ ಮಾಹಿತಿ ಏನಿದೆ? ಎಂದು ಈಗ ಬಹಿರಂಗ ಪಡಿಸಲ್ಲ. ಎಲ್ಲಿ ಕೊಡಬೇಕೋ ಅಲ್ಲಿ‌ಯೇ ಕೊಡುತ್ತೇವೆ ಎನ್ನುವ ಮೂಲಕ ಕುತೂಹಲ ಮೂಡಿಸಿದರು.

ಡಿಕೆಶಿ ಮಾತನಾಡಿ, ಜಿಲ್ಲಾಧಿಕಾರಿ ಮತ್ತು ಎಡಿಜಿಪಿ ಅವರುಗಳ ಬಂಧನವಾಗಿದೆ. ಸಿಎಂ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ನ್ಯಾಯಾಂಗ ತನಿಖೆ ನಡೆಸಬೇಕು. ಸದನದಲ್ಲಿ ತಪ್ಪು ಮಾಹಿತಿ ನೀಡಿದ ಗೃಹ ಸಚಿವರ ಮೇಲೂ ಕೇಸು ದಾಖಲಿಸಬೇಕು. ಪ್ರಕರಣದ ತನಿಖಾ ವರದಿಯನ್ನು ಸೀಲ್ಡ್ ಕವರ್‌ನಲ್ಲಿ ಏಕೆ ಕೊಡಬೇಕು? ಬಹಿರಂಗವಾಗಿ ಕೊಡಲಿ. ನಮ್ಮ ವಕ್ತಾರರು ಪ್ರಕರಣವನ್ನು ಬಹಿರಂಗ ಪಡಿಸಿದರೆ ನಾಲ್ಕು ಬಾರಿ ನೋಟಿಸ್ ಕೊಟ್ಟಿದ್ದಾರೆ, ಈ ಮೂಲಕ ಬೆದರಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಮಾತನಾಡಿ, ಅಶ್ವತ್ಥನಾರಾಯಣ್ ಕಡೆಯವರು ಐದು ಜನ ಅಕ್ರಮವಾಗಿ ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅವರ ಸಂಬಂಧಿಕರೊಬ್ಬರು ಬಂಧಿತರಾಗಿದ್ದಾರೆ. ಅವರ ವಿರುದ್ಧವೂ ಕ್ರಮಕೈಗೊಳ್ಳಬೇಕು, ಅಶ್ವತ್ಥನಾರಾಯಣ್​ ವಿರುದ್ಧ ಸಿಐಡಿ ಕ್ರಮ ಕೈಗೊಳ್ಳುತ್ತಾ? ಒಂದೊಂದು ಹುದ್ದೆಗೆ ಮೂವತ್ತು ಲಕ್ಷದಿಂದ ಎಂಬತ್ತು ಲಕ್ಷದ ವರೆಗೆ ವಸೂಲಿ ಮಾಡಿದ್ದಾರೆ. ಈ ಹಣ ಯಾರ್ಯಾರಿಗೆ ಹೋಗಿದೆ? ಎಂದು ಗೊತ್ತಾಗಬೇಕು. ಯಾವ ಮಂತ್ರಿಗೆ ಹೋಗಿದೆ, ಸಿಎಂಗೆ ಹೋಗಿದೆಯೋ ಇಲ್ಲವೋ ಎಂಬುದೂ ಗೊತ್ತಾಗಬೇಕು. ರಾಜ್ಯದ ಮುಖ್ಯಮಂತ್ರಿಗಳು ಎಲ್ಲರನ್ನೂ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಐಎಎಸ್​ ಅಧಿಕಾರಿ ಮಂಜುನಾಥ್ ಪ್ರಕರಣದಲ್ಲಿ ನ್ಯಾಯಾಧೀಶರು ಸರ್ಕಾರದ ಮೇಲೆ ಏನೇನು ಮಾತನಾಡಿದ್ದಾರೆ ಎಂದು ವಿಡಿಯೋ ಇದೆ. ಇಲ್ಲಿ‌ ನ್ಯಾಯಾಧೀಶರು ಕೂಡ ಸೇಫ್​ ಅಲ್ಲ ಎಂದರೆ ಯಾರು ಸೇಫ್? ಜಡ್ಜ್ ಹೇಳದೇ ಹೋಗದಿದ್ದರೆ ಡಿಸಿ ಮೇಲೆ ಎಫ್​ಐಆರ್ ಕೂಡ ಆಗುತ್ತಿರಲಿಲ್ಲ ಎಂದರು.

ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವರು ಆರೂವರೆ ಕೋಟಿ ಜನರಿಗೆ ವಿಧಾನಸಭೆಯಲ್ಲಿ ಸುಳ್ಳು ಹೇಳಿದ್ದಾರೆ. ಈ ಹಿಂದೆ ಅನೇಕ ಬಾರಿ ಬೇಜವಾಬ್ದಾರಿಯಿಂದ ಉತ್ತರ ನೀಡಿದ್ದಾರೆ. ಸಿಎಂ ಇಂತಹ ಗೃಹ ಸಚಿವರ ಮೂಲಕ ಅಸಂಬದ್ಧ, ಬೇಜವಾಬ್ದಾರಿ ಹೇಳಿಕೆ ಕೊಡಿಸುತ್ತಿದ್ದಾರೆ. ಇಡೀ ಪ್ರಕರಣ ಮುಚ್ಚಿಹಾಕಲು ಸರ್ಕಾರ ಬಯಸಿತ್ತು.‌ ನಾವು ಮತ್ತು ಜನರು ತನಿಖೆಗೆ ಆಗ್ರಹಿಸಿದೆವು. ನ್ಯಾಯಾಂಗ ತನಿಖೆ ಆಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಎಸಿಬಿ ಇರುವುದು ಭ್ರಷ್ಟಾಚಾರ ಕಡಿಮೆ ಮಾಡಲಿ, ಭ್ರಷ್ಟರನ್ನು ಶಿಕ್ಷಿಸಲಿ, ಸಮಾಜದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಸೇವೆ ಸಿಗುವಂತೆ ಮಾಡಲೆಂದು. ಆದರೆ ಕುರಿಯನ್ನು ಕಾಯಿ ಎಂದರೆ ಸಂಬಳವೇ ಬೇಡ ಎಂದು ಹೇಳಿತಂತೆ ತೋಳ. ಹಾಗಾಗಿದೆ ಈಗಿನ ಸ್ಥಿತಿ. ಪಿಎಸ್​ಐ ಹುದ್ದೆ ಅಕ್ರಮದಲ್ಲಿ ವಿಜಯೇಂದ್ರ ಅವರ ಮೇಲೂ ಆರೋಪ ಇದೆ. ಅಶ್ವತ್ಥನಾರಾಯಣ್​ ಮೇಲೂ ಆರೋಪ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್​ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲಂಡನ್‌ ​ನಲ್ಲಿದ್ದಾರೆ !

Tue Jul 5 , 2022
  ಬಾಲಿವುಡ್​ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲಂಡನ್‌ ​ನಲ್ಲಿದ್ದಾರೆ ಅಥವಾ ಇತ್ತೀಚಿನ ದಿನಗಳಲ್ಲಿ ಆ ನಗರಕ್ಕೆ ಹೇಗೆ ಭೇಟಿ ನೀಡಿದ್ದಾರೆ ಎಂಬುದನ್ನು ನಟಿ ಶಬಾನಾ ಅಜ್ಮಿ ಗಮನಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಲಂಡನ್​ನಲ್ಲಿರುವ ಶಬಾನಾ, ನಗರದಲ್ಲಿರುವ ಎಲ್ಲಾ ಬಾಲಿವುಡ್​ ಸೆಲೆಬ್ರಿಟಿಗಳ ಪಟ್ಟಿ ಮಾಡಿದ್ದಾರೆ. ಲಂಡನ್​ನಿಂದ ಹೆಚ್ಚು ಹೆಚ್ಚು ಸೆಲೆಬ್ರಿಟಿಗಳು ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಈ ಅಸಾಮಾನ್ಯ ಕಾಕತಾಳೀಯತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. ಲಂಡನ್​ನಲ್ಲಿರುವ ನ್ಯಾಷನಲ್​ ಗ್ಯಾಲರಿಯ ಚಿತ್ರವನ್ನು ಹಂಚಿಕೊಳ್ಳಲು […]

Advertisement

Wordpress Social Share Plugin powered by Ultimatelysocial