ಸಹಪಾಠಿಗೆ ಥಳಿಸಿದ ತೆಲಂಗಾಣ ಬಿಜೆಪಿ ಅಧ್ಯಕ್ಷನ ಮಗ.

ಹೈದರಾಬಾದ್‌: ತೆಲಂಗಾಣ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಅವರ ಪುತ್ರ ಭಗೀರಥ್‌ ಎಂಬಾತ ಸಹಪಾಠಿಯೊಬ್ಬನಿಗೆ ಅಮಾನವೀಯ ರೀತಿಯಲ್ಲಿ ಥಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈತ ಮಹೀಂದ್ರ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದು, ಇದಕ್ಕೆ ಸಂಬಂಧಿಸಿ ಈತ ಹಾಗೂ ಇನ್ನಿತರ ಐವರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಇದು ಈಗ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ.

ಯೂನಿವರ್ಸಿಟಿ ಕ್ಯಾಂಪಸ್‌ ಒಳಗೆ ಈ ಘಟನೆ ನಡೆದಿದೆ. ಭಗೀರಥ ಮತ್ತು ಆತನ ಗೆಳೆಯರು ಈ ಥಳಿತಕ್ಕೊಳಗಾದ ವಿದ್ಯಾರ್ಥಿಯನ್ನು ರ್ಯಾಗಿಂಗ್‌ ಮಾಡಿದ್ದಾರೆ ಎನ್ನಲಾಗಿದೆ. ತೆಲಂಗಾಣ ರಾಷ್ಟ್ರ ಸಮಿತಿಯ ಮಾಧ್ಯಮ ವಕ್ತಾರ ಸತೀಶ್‌ ರೆಡ್ಡಿ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ʼʼಇದೊಂದು ರ್ಯಾಂಗಿಂಗ್‌ ಪ್ರಕರಣ. ಬಂಡಿ ಸಂಜಯ್‌ ಅವರ ಮಗ ಸಹಪಾಠಿಯನ್ನು ಹೊಡೆಯುತ್ತಿದ್ದಾನೆ. ಮಿ.ಜೆ.ಪಿ. ನಡ್ಡಾ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಬಹುದೇ?ʼʼ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ಪ್ರಕರಣದ ಇನ್ನೊಂದು ವಿಡಿಯೋವನ್ನು ಹಂಚಿಕೊಂಡಿರುವ ಥಳಿತಕ್ಕೊಳಗಾದ ವಿದ್ಯಾರ್ಥಿ ಶ್ರೀರಾಮ್‌ ಎಂಬಾತ, ʼʼಇದೊಂದು ಸಣ್ಣ ಘಟನೆ. ಆತನ ಗೆಳೆಯನ ಸೋದರಿ ಮೇಲೆ ನಾನು ಕೈಮಾಡಿದ ವಿಷಯದಲ್ಲಿ ನಮಗಿಬ್ಬರಿಗೂ ಜಗಳ ಉಂಟಾಗಿ ಹೀಗಾಗಿದೆʼʼ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ. ʼʼಈ ಪ್ರಕರಣ ಇಲ್ಲಿಗೆ ಮುಕ್ತಾಯವಾಗಿದೆ. ನಾವು ಬ್ಯಾಚ್‌ಮೇಟ್‌ಗಳು ಮತ್ತು ಗೆಳೆಯರುʼʼ ಎಂದಿದ್ದಾನೆ.

ಬಂಡಿ ಸಂಜಯ್‌ ಅವರೂ ಈ ಬಗ್ಗೆ ಹೇಳಿಕೆ ನೀಡಿದ್ದು, ʼʼಈ ಪ್ರಕರಣ ನಡೆದಿರುವುದು ಎರಡು ತಿಂಗಳ ಹಿಂದೆ. ಈಗ ಕೆಸಿಆರ್‌ ಇದನ್ನು ಹಿಗ್ಗಿಸಿರುವುದು, ನನ್ನ ಮಗನ ಮೇಲೆ ಕ್ರಿಮಿನಲ್‌ ಕಂಪ್ಲೇಂಟ್‌ ನೀಡುವಂತೆ ಮಾಡಿರುವುದು ಹೀನ ರಾಜಕೀಯʼʼ ಎಂದು ಕೆಂಡ ಕಾರಿದ್ದಾರೆ.

ಆದರೆ ವೈರಲ್‌ ಆಗಿರುವ ಇನ್ನೊಂದು ವಿಡಿಯೋದಲ್ಲಿ, ಭಗೀರಥ್‌ ಮತ್ತೊಬ್ಬ ವಿದ್ಯಾರ್ಥಿಯನ್ನು ಥಳಿಸುತ್ತಿರುವುದು ಕಂಡುಬಂದಿದ್ದು, ಇದರ ಬಗ್ಗೆ ವಿವರಗಳು ದೊರೆತಿಲ್ಲ.

ನವದೆಹಲಿ: ಪಾಕಿಸ್ತಾನ- ಭಾರತದ ನಡುವಿನ ಕಾಶ್ಮೀರ ಸಮಸ್ಯೆ  ಬಗೆಹರಿಸಲು ಯುಎಇ ಮಧ್ಯಸ್ಥಿಕೆ ವಹಿಸಬೇಕೆಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಯುಎಇ (ದುಬೈ) ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರಿಗೆ, ಎರಡು ದೇಶಗಳನ್ನು ಮಾತುಕತೆ ಟೇಬಲ್‌ಗೆ ಕರೆತರುವಂತೆ ಮನವಿ ಮಾಡಿರುವುದಾಗಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

ನಾನು ಯುಎಇ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಅವರು ಪಾಕಿಸ್ತಾನದ ಸಹೋದರ. ಹಾಗೆಯೇ ಭಾರತದೊಂದಿಗೂ ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ಯಶಸ್ವಿಯಾಗಲು ಅವರು ಪ್ರಮುಖ ಪಾತ್ರ ನಿರ್ವಹಣೆ ಮಾಡಬಹುದು ಎಂದು ನಾನು ಹೇಳಿದ್ದೇನೆ.

ನಾವು(ಭಾರತ-ಪಾಕಿಸ್ತಾನ) ಅಣ್ವಸ್ತ್ರ ರಾಷ್ಟ್ರಗಳಾಗಿದ್ದೇವೆ. ಒಂದೊಮ್ಮೆ ಯುದ್ಧ ಸಂಭವಿಸಿದರೆ, ಏನಾಗಿತ್ತು ಎಂದು ಹೇಳಲು ಯಾರೂ ಉಳಿದಿರುವುದೇ ಇಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದಕ್ಕೂ ಮೊದಲು ಅವರು, ಭಾರತದ ಜತೆಗೆ ಯುದ್ಧ ಬದಲಿಗೆ ಮಾತುಕತೆ ಪಾಕಿಸ್ತಾನವು ಸಿದ್ಧವಾಗಿದೆ ಎಂದು ಹೇಳಿದ್ದರು. ಅಲ್-ಅರೇಬಿಯಾ ಟೆಲಿವಿಷನ್‌ಗೆ ನೀಡಿದ ಸಂದರ್ಶನದಲ್ಲಿ, ಷರೀಫ್ ಅವರು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಒಟ್ಟಿಗೆ ಕುಳಿತು ಕಾಶ್ಮೀರ ಸೇರಿದಂತೆ ಸಮಸ್ಯೆಗಳನ್ನು ಪರಿಹರಿಸಲು ಅವಕಾಶ ಕೋರಿದ್ದರು.

ನವದೆಹಲಿ: ಪಂಜಾಬ್‌ ಮಾಜಿ ಹಣಕಾಸು ಸಚಿವ ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ನೇತೃತ್ವದಲ್ಲಿ ಬಾದಲ್‌ ಅವರು ಬಿಜೆಪಿ ಸೇರ್ಪಡೆಯಾದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಬಾದಲ್‌ ಅವರು ರಾಜೀನಾಮೆ ಪತ್ರ ರವಾನಿಸಿದ್ದು, ‘ಪಕ್ಷದ ಆಂತರಿಕ ಚಟುವಟಿಕೆಗಳಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದೇನೆ’ ಎಂಬುದಾಗಿ ತಿಳಿಸಿದ್ದಾರೆ. ‘ಕಳೆದ ಏಳು ವರ್ಷದಲ್ಲಿ ಕಾಂಗ್ರೆಸ್‌ಗಾಗಿ ದುಡಿದಿದ್ದೇನೆ. ಅದರಂತೆ ಪಕ್ಷವೂ ನನಗೆ ಹಲವು ಜವಾಬ್ದಾರಿ ನೀಡಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.

‘ಕಳೆದ ಏಳು ವರ್ಷಗಳ ಹಿಂದೆ ಪೀಪಲ್ಸ್‌ ಪಾರ್ಟಿ ಆಫ್‌ ಪಂಜಾಬ್‌ಅನ್ನು ಕಾಂಗ್ರೆಸ್‌ ಜತೆ ವಿಲೀನಗೊಳಿಸಿದೆ. ಇದಾದ ಬಳಿಕ ನಾನು ಹಲವು ಜವಾಬ್ದಾರಿಗಳನ್ನು ನಿಭಾಯಿಸಿದೆ. ಆದರೆ, ಇತ್ತೀಚೆಗೆ ಪಕ್ಷದಲ್ಲಿ ನಡೆಯುತ್ತಿರುವ ಚಟುವಟಿಕೆಗಳು, ಸಂಸ್ಕೃತಿ ಕಂಡು ಬೇಸರಗೊಂಡಿದ್ದೇನೆ’ ಎಂದು ಹೇಳಿದ್ದಾರೆ.

ಕೋಲ್ಕೊತಾ: ಪಾಕಿಸ್ತಾನ ಆಕ್ರಮಿತ ಪ್ರದೇಶ(ಪಿಒಕೆ)ವು ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ವಿವಾದಲ್ಲಿರುವ ಭೂಮಿ. ಭಾರತವು ಆ ಸ್ಥಳವನ್ನು ಭಾರತದ ಅವಿಭಾಜ್ಯ ಅಂಗವೆಂದು ಗುರುತಿಸಿ, ಅದಕ್ಕೆ ಪಿಒಕೆ ಎಂದು ಕರೆಯುತ್ತಿದ್ದರೆ, ಪಾಕಿಸ್ತಾನ ಅದನ್ನು ತಮ್ಮ ಸ್ಥಳವೆಂದು ಹೇಳುತ್ತಿದ್ದು, ಅದಕ್ಕೆ ಆಜಾದ್‌ ಕಾಶ್ಮೀರ್‌(ಸ್ವತಂತ್ರ ಕಾಶ್ಮೀರ) ಎಂದು ಕರೆಯುತ್ತಿದೆ. ಹೀಗಿರುವ ಪಶ್ಚಿಮ ಬಂಗಾಳದ (West Bengal) ಶಿಕ್ಷಣ ಇಲಾಖೆಯು ಹತ್ತನೇ ತರಗತಿ ವಿದ್ಯಾರ್ಥಿಗಳ ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ಪಿಒಕೆಯನ್ನು ಆಜಾದ್‌ ಕಾಶ್ಮೀರ ಎಂದು ಹೆಸರಿಸುವ ಮೂಲಕ ವಿವಾದವನ್ನು ಸೃಷ್ಟಿಸಿಕೊಂಡಿದೆ.

ಪ್ರತಿ ವರ್ಷ ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆಯು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆಂದು ಮಾದರಿ ಪ್ರಶ್ನೆ ಪತ್ರಿಕೆಗಳುಳ್ಳ ಪುಸ್ತಕವನ್ನು ಬಿಡುಗಡೆ ಮಾಡುತ್ತದೆ. ಅದಕ್ಕೆ ರಾಜ್ಯಾದ್ಯಂತ ಇರುವ ಸರ್ಕಾರಿ ಶಾಲೆಗಳು ಪ್ರಶ್ನೆಗಳನ್ನು ಕಳುಹಿಸಿಕೊಡುತ್ತವೆ. ಈ ಬಾರಿ ಬಿಡುಗಡೆ ಮಾಡಲಾಗಿರುವ ಪುಸ್ತಕ 132ನೇ ಪುಟದಲ್ಲಿನ ಒಂದು ಪ್ರಶ್ನೆ ವಿವಾದಕ್ಕೆ ಕಾರಣವಾಗಿದೆ. ಅದರಲ್ಲಿ ವಿದ್ಯಾರ್ಥಿಗಳಿಗೆ ಭಾರತದ ಭೂಪಟದಲ್ಲಿ ಆಜಾದ್‌ ಕಾಶ್ಮೀರವನ್ನು ಗುರುತಿಸಿ ಎಂದು ಕೇಳಲಾಗಿದೆ.

ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ, ಪ್ರಶ್ನೆಯಲ್ಲಿರುವ ‘ಆಜಾದ್‌ ಕಾಶ್ಮೀರ’ವನ್ನು ಕೇವಲ ‘ಕಾಶ್ಮೀರ’ ಎಂದು ಓದಿಕೊಳ್ಳಬೇಕೆಂದು ಪ್ರಕಟಣೆ ಹೊರಡಿಸಿದೆ.

ಪ್ರಶ್ನೆ ಪತ್ರಿಕೆಯಲ್ಲಾಗಿರುವ ಈ ತಪ್ಪು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ‘ಈ ಬುದ್ಧಿಯು ಮಮತಾ ಬ್ಯಾನರ್ಜಿ ಅವರ ಸರ್ಕಾರದ ಪ್ರತ್ಯೇಕತಾವಾದವನ್ನು ತೋರಿಸುತ್ತದೆ. ಈ ಸರ್ಕಾರ ಕೇವಲ ಉಗ್ರರಿಗೆ ಬೆಂಬಲಿಸುವುದಷ್ಟೇ ಅಲ್ಲದೆ ಮಕ್ಕಳ ಮನಸ್ಸಿನಲ್ಲಿ ದೇಶ ವಿರೋಧಿ ಭಾವನೆ ಬಿತ್ತುವುದಕ್ಕೂ ಪ್ರಯತ್ನಿಸುತ್ತಿದೆ’ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ದಿಲೀಪ್‌ ಘೋಷ್‌ ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರವಾಗಿ ಶಿಕ್ಷಣ ಇಲಾಖೆಯು ಪ್ರತಿಕ್ರಿಯಿಸಿದ್ದು, ‘ಪ್ರಶ್ನೆ ಪತ್ರಿಕೆಯಲ್ಲಾಗಿರುವ ತಪ್ಪಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಪ್ರಶ್ನೆಯನ್ನು ಕಳುಹಿಸಿದವರ ವಿರುದ್ಧ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದೆ.

ನವದೆಹಲಿ: ಈಶಾನ್ಯ ಭಾರತದ ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16 ಮತ್ತು ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳ ವಿಧಾನಸಭೆಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು   ತಿಳಿಸಿದೆ. ಮಾರ್ಚ್ 2ರಂದು ಮತ ಏಣಿಕೆ ನಡೆಯಲಿದೆ. ಬುಧವಾರ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಈ ಮಾಹಿತಿಯನ್ನು ನೀಡಿದರು. ಜನವರಿ 30ಕ್ಕೆ ಚುನಾವಣಾ ಅಧಿಸೂಚನೆ ಹೊರ ಬೀಳಲಿದೆ.

ಮೂರೂ ರಾಜ್ಯದಲ್ಲಿ 62.8 ಲಕ್ಷ ಮತದಾರರು ಇದ್ದಾರೆ. 2.28 ಲಕ್ಷ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಮೂರೂ ರಾಜ್ಯಗಳು ಸೇರಿ 9120 ಬೂತ್‌ಗಳಿವೆ. ಶೇ.82 ಗ್ರಾಮೀಣ ಪ್ರದೇಶದಲ್ಲಿವೆ. 376 ಮಹಿಳಾ ಬೂತ್‌ಗಳಿವೆ. ಎಲ್ಲವೂ ಮಹಿಳೆಯರೇ ನಿರ್ವಹಣೆ ಮಾಡುತ್ತಾರೆ. ಈ ಮೂರು ರಾಜ್ಯಗಳು ತಲಾ 60 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿವೆ.

ನಾಗಾಲ್ಯಾಂಡ್ ವಿಧಾನಸಭೆ ಅವಧಿಯ ಮಾರ್ಚ್ 12ಕ್ಕೆ ಮುಕ್ತಾಯವಾಗಲಿದೆ, ಇದೇ ವೇಳೆ, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆ ಅವಧಿಯು ಕ್ರಮವಾಗಿ ಮಾರ್ಚ್ 15 ಮತ್ತು ಮಾರ್ಚ್ 22ಕ್ಕೆ ಕೊನೆಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ ಒಟ್ಟು 9 ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ಮಾತ್ರವಲ್ಲದೇ, ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಮ್, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈಗ ಬಳ್ಳಾರಿಯಲ್ಲಿ ಅಪ್ಪು ದೊಡ್ಡ ಪ್ರತಿಮೆ, ಕೆರೆಗೂ ಪುನೀತ್ ಹೆಸರು.

Wed Jan 18 , 2023
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೀವಂತವಾಗಿದ್ದ ಹಲವಾರು ಒಳ್ಳೆಯ ಕೆಲಸಗಳು ಹಾಗೂ ಮಾಡಿದ್ದ ಅದೆಷ್ಟೋ ಸಹಾಯಗಳು ಅಪ್ಪು ನಿಧನದ ನಂತರ ಆಚೆಗೆ ಬಂದವು. ಇಷ್ಟೆಲ್ಲಾ ಸಹಾಯ ಮಾಡಿ ಎಲ್ಲಿಯೂ ಸಹ ಪ್ರಚಾರ ತೆಗೆದುಕೊಳ್ಳದೇ ತಾನಾಯಿತು, ತನ್ನ ಪಾಡಾಯಿತು ಎಂದು ಬದುಕಿದ್ದ ರಾಜಕುಮಾರನ ಗುಣಕ್ಕೆ ಕನ್ನಡಿಗರು ಸೋತು ಹೋದರು.ಅಭಿಮಾನಿಗಳೇ ನಮ್ಮನೆ ದೇವ್ರು ಎಂದಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಕನ್ನಡ ಜನತೆ ಹಾಗೂ ಅಭಿಮಾನಿಗಳು ಈಗ ದೇವರೆಂದು ಆರಾಧಿಸುತ್ತಿದ್ದಾರೆ.ಪುನೀತ್ ಮರಣ ಹೊಂದಿದ ನಂತರ […]

Advertisement

Wordpress Social Share Plugin powered by Ultimatelysocial