ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡ ಬಡವರಿಗೆ ಗುಡ್ ನ್ಯೂಸ್.

 

 

ಬೆಂಗಳೂರು : ಸರ್ಕಾರಿ ಜಮೀನು ಹಾಗೂ ಅರಣ್ಯದ ಅಂಚಿನ ಜಾಗೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಅರ್ಹ ಬಡ ಜನರನ್ನು ಅಲ್ಲಿಂದ ಎತ್ತಂಗಡಿ ಮಾಡಲು ಅವಕಾಶ ನೀಡುವುದಿಲ್ಲ.94 ಸಿ ಹಾಗೂ 94 ಸಿಸಿ ಅಡಿ ಅವರು ಅರ್ಜಿ ನೀಡಿದರೆ ಅವರಿಗೆ ನಿವೇಶನದ ಹಕ್ಕುಗಳನ್ನು ನೀಡಲಾಗುವುದು.ಬರುವ ತಿಂಗಳಿನಿಂದ ಪಡಿತರೆ ವಿತರಣೆ ಪ್ರಮಾಣವನ್ನು ಪುನಃ 10 ಕೆಜಿಗೆ ಹೆಚ್ಚಿಸಲಾಗುವುದು.ಹೊಸಕೋಟೆ ನಗರದವರೆಗೆ ಮೆಟ್ರೊ ಹಾಗೂ ಕಾವೇರಿ ನೀರು ಪೂರೈಕೆ ವಿಸ್ತರಿಸುವ ಕಾರ್ಯವನ್ನು ಸಚಿವಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕಂದಾಯ ಸಚಿವರಾದ ಆರ್.ಅಶೋಕ ಹೇಳಿದರು.

ಜಿಲ್ಲಾಡಳಿತ,ಜಿಲ್ಲಾಪಂಚಾಯತ್ ಸಹಯೋಗದಲ್ಲಿ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ರಾಗಿಯ ರಾಶಿಪೂಜೆ ಸಲ್ಲಿಸಿ,ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು,

ಬಡ ನಿವೇಶನ ರಹಿತರ ಹಕ್ಕುಗಳನ್ನು ಕಾಯಲು ಸರ್ಕಾರ ಬದ್ಧವಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬರುತ್ತಿದ್ದ ಪಡಿತರ ಸ್ಥಗಿತವಾಗಿರುವದರಿಂದ ಪಡಿತರ ವಿತರಣೆ ಪ್ರಮಾಣ ಇಳಿಕೆಯಾಗಿದೆ.ಪುನಃ ಈ ಪ್ರಮಾಣ ಹೆಚ್ಚಿಸಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅಗತ್ಯ ಕ್ರ‌ಮಕೈಗೊಳ್ಳಲಾಗುವುದು.ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪ್ರತಿ ತಿಂಗಳು ಸುಮಾರು 10 ಸಾವಿರ ಕೋಟಿ ರೂ.ಪಿಂಚಣಿಗಳ ವಿತರಣೆಯಾಗುತ್ತಿದೆ ಎಂದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರು ತಮ್ಮ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ತಕ್ಷಣ ಭೂ ಪರಿವರ್ತನೆ ಮಾಡಿಕೊಡಲು ಸುಧಾರಣೆ ಕಾಯ್ದೆ ತರಲಾಗಿದೆ.ಯುವಕರು,ವಿದ್ಯಾವಂತರು,ಐಟಿಬಿಟಿಗಳಲ್ಲಿ ತೊಡಗಿಸಿಕೊಂಡವರು ರಾಜ್ಯದ ಯಾವುದೇ ಭಾಗದಲ್ಲಿಯಾದರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ.ಕೃಷಿಯಲ್ಲಿ ಆಧುನಿಕತೆ ತರುವ ಉದ್ದೇಶದಿಂದ ಹಿಂದೆ ಇದ್ದ ಕಾಯ್ದೆಗಳನ್ನು ರದ್ದುಗೊಳಿಸಲಾಗಿದೆ. ತಾಂಡಾ,ಮುಜುರೆ,ಹಟ್ಟಿ,ಕ್ಯಾಂಪ್‌ಗಳಿಗೆ ಕಂದಾಯ ಹಕ್ಕುಗಳನ್ನು ನೀಡಿ ಗ್ರಾಮಗಳನ್ನಾಗಿ ಪರಿವರ್ತಿಸಿ ಬಡಜನರಿಗೆ ನ್ಯಾಯ ಒದಗಿಸಲಾಗುತ್ತಿದೆ.ಎಸ್.ಸಿ.ಹಾಗೂ ಎಸ್.ಟಿ.ಮೀಸಲು ಹೆಚ್ಚಳಕ್ಕೆ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ.ಹಿಂದುಳಿದ ಲಿಂಗಾಯತರು ಮತ್ತು ಒಕ್ಕಲಿಗರಿಗೂ ನ್ಯಾಯ ಒದಗಿಸಲು ಹೊಸ ಪ್ರವರ್ಗ ಸೃಜನೆಗೆ ಮುಂದಾಗಿರುವುದು ಸರ್ಕಾರದ ಸಾಮಾಜಿಕ ನ್ಯಾಯ ಬದ್ಧತೆಗೆ ಸಾಕ್ಷಿಯಾಗಿದೆ.ಬೆಂಗಳೂರಿಗೆ ಹೊಂದಿಕೊಂಡು ಅಭಿವೃದ್ಧಿ ಹೊಂದುತ್ತಿರುವ ಹೊಸಕೋಟೆಯವರೆಗೂ ಮುಂಬರುವ ದಿನಗಳಲ್ಲಿ ಮೆಟ್ರೋ ರೈಲು ವಿಸ್ತರಣೆ ಮಾಡಲಾಗುವುದು. ನಿವೇಶನ ರಹಿತರಿಗೆ ಹಕ್ಕುಪತ್ರ ನೀಡುವ ಸಂದರ್ಭದಲ್ಲಿ ಈಗಾಗಲೇ ಸಾಗುವಳಿ ಚೀಟಿ ಹೊಂದಿರುವ ಜನರ ಜಮೀನುಗಳನ್ನು ಪಡೆಯದಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ಸಚಿವರು ಬದಲಾಗಬಹುದು ಆದರೆ ಜಿಲ್ಲಾಧಿಕಾರಿಗಳು ನಿರಂತರವಾಗಿ ಇರುತ್ತಾರೆ. ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂಬ ಮಹತ್ವಾಕಾಂಕ್ಷೆಯಿಂದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಶೀರ್ಷಿಕೆ ನೀಡಲಾಗಿದೆ. ಈ ಕಾರ್ಯಕ್ರಮ ಇರದಿದ್ದರೆ ಯಾವುದೇ ಜಿಲ್ಲಾಧಿಕಾರಿಗಳು ಗ್ರಾಮಗಳಿಗೆ ಬಂದು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಿರಲಿಲ್ಲ.ರಾಜ್ಯದ ಎಲ್ಲಾ ಕಡೆ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಅನೇಕ ಸೌಕರ್ಯಗಳು ಬಡ,ಅರ್ಹ ಫಲಾನುಭವಿಗಳಿಗೆ ಅವರಿರುವ ಕಡೆಗಳಲ್ಲಿಯೇ ದೊರೆಯುತ್ತಿವೆ ಎಂದರು‌.ಇದುವರೆಗೆ ಸುಮಾರು 15 ಗ್ರಾಮವಾಸ್ತವ್ಯ ಕೈಗೊಳ್ಳಲಾಗಿದ್ದು ಸುಮಾರು 1 ಲಕ್ಷ 18 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ವೈಯಕ್ತಿಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಎನ್.ನಾಗರಾಜ(ಎಂಟಿಬಿ) ಮಾತನಾಡಿ,ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಸೌಕರ್ಯಗಳನ್ನು ಪಡೆಯಲು ಜನಸಾಮಾನ್ಯರು ಪ್ರತಿನಿತ್ಯ ಕಚೇರಿಗಳಿಗೆ ಅಲೆಯುವದನ್ನು ಕಡಿಮೆಗೊಳಿಸುವ ಉದ್ದೇಶದಿಂದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಆಯೋಜಿಸುತ್ತಿರುವುದು,ಬಡವರಿಗೆ,ರೈತರಿಗೆ ಅನುಕೂಲವಾಗಿದೆ.ಹೊಸಕೋಟೆ ತಾಲೂಕಿನಲ್ಲಿ ಅಧಿಕವಾಗಿರುವ ಅನೇಕ ಬಡವರಿಗೆ ಸಮರ್ಪಕ ಸೂರು ಇಲ್ಲ ಅಂತಹವರಿಗೆ ನಿವೇಶನ ಒದಗಿಸಬೇಕು ಎಂದು ಕಂದಾಯ ಸಚಿವರಲ್ಲಿ ಮನವಿ ಮಾಡಿದಾಗ,ತಾಲೂಕಿನಲ್ಲಿ ಲಭ್ಯವಿರುವ ಗೋಮಾಳ,ಸರ್ಕಾರದ ಭೂಮಿ ಗುರುತಿಸಿ ಸುಮಾರು 10 ಸಾವಿರ ಜನ ನಿವೇಶನ ರಹಿತರಿಗೆ ಹಂಚಲು ಕ್ರಮವಹಿಸಿದ್ದಾರೆ.ಇದಕ್ಕಾಗಿ ತಾಲೂಕಿನ ಸುಮಾರಿ 290 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ಗುರುತಿಸಿ,ಹಸ್ತಾಂತರ ಮಾಡುತ್ತಿರುವುದು ಮಹತ್ವದ ಕಾರ್ಯವಾಗಿದೆ.ಈ ಕಾರ್ಯದಲ್ಲಿ ಯಾವುದೇ ಜಾತಿ,ಧರ್ಮಗಳ ಭೇದವಿಲ್ಲದೆ ಎಲ್ಲಾ ಬಡವರಿಗೆ ನಿವೇಶನ ಒದಗಿಸುವ ಸಂಕಲ್ಪ ಇದಾಗಿದೆ.ಫಲಾನುಭವಿಗಳ ಆಯ್ಕೆಯು ನಿಯಮಾನುಸಾರ ಪಾರದರ್ಶಕವಾಗಿ ನಡೆಯಲಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಸುಮಾರು 28 ಸಾವಿರಕ್ಕೂ ಹೆಚ್ಚು ವಿವಿಧ ವೈಯಕ್ತಿಕ ಸವಲತ್ತುಗಳು ಇಂದು ವಿತರಣೆಯಾಗುತ್ತಿವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಜನಸಾಮಾನ್ಯರ ಕಲ್ಯಾಣದ ಕನಸಿನೊಂದಿಗೆ ಸರ್ಕಾರ ಜನಪರ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ,ಸಾರ್ವಜನಿಕರ ತೆರಿಗೆಯಿಂದ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತದೆ.ಇಂದು ತೆರಿಗೆ ಪಾವತಿದಾರರ ಬಳಿಗೆ ಬಂದು ಸೌಲಭ್ಯಗಳನ್ನು ನೀಡುತ್ತಿರುವದು ಅಭಿನಂದನೀಯ ಕಾರ್ಯ.ಹೊಸಕೋಟೆ ತಾಲ್ಲೂಕಿನ ಸುಮಾರು 292 ಎಕರೆ ಸರ್ಕಾರಿ ಜಮೀನನ್ನು ಬಡ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಕ್ರಮವಹಿಸಿರುವುದು ಶ್ಲಾಘನೀಯ. ಸಾಗುವಳಿ ಚೀಟಿ ಹೊಂದಿರುವ ತಾಲೂಕಿನ ರೈತರಿಗೆ ಹಕ್ಕುಪತ್ರ ವಿತರಣೆಗೂ ಕ್ರಮವಹಿಸಬೇಕು. ಬಡರೈತರನ್ನು ಒಕ್ಕಲೆಬ್ಬಿಸಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವದಕ್ಕಿಂತ,ಖಾಲಿ ಇರುವ ಜಾಗೆಗಳನ್ನು ಗುರುತಿಸಿ ನಿವೇಶನದ ಹಕ್ಕು ಪತ್ರಗಳನ್ನು ವಿತರಿಸಬೇಕು.ಹೊಸಕೋಟೆ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಉಪನೋಂದಣಾಧಿಕಾರಿ ಕಚೇರಿ ಹಾಗೂ ತಾಲೂಕು ಆಡಳಿತ ಸೌಧ ನಿರ್ಮಿಸಬೇಕು.5 ಕೆಜಿಗೆ ಇಳಿಸಿರುವ ಪಡಿತರ ಪ್ರಮಾಣವನ್ನು 10 ಕೆಜಿಗೆ ಹೆಚ್ಚಿಸಬೇಕು ಎಂದರು.

ಜಿಲ್ಲಾಧಿಕಾರಿ ಆರ್.ಲತಾ ಪ್ರಾಸ್ತಾವಿಕ ಮಾತನಾಡಿ,ಕಂದಾಯ ಇಲಾಖೆಯು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ,ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಮತ್ತಿತರ ಜನಪರ ಕಾರ್ಯಕ್ರಮಗಳ ಮೂಲಕ ಜಿಲ್ಲಾಡಳಿತ ಜನರ ಬಳಿಗೆ ಬಂದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೆ 42 ಬಾರಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಗಳ ಮೂಲಕ ಸುಮಾರು 1 ಲಕ್ಷ 35 ಸಾವಿರಕ್ಕೂ ಅಧಿಕ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಸ್ವತಃ ಕಂದಾಯ ಸಚಿವರು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಎರಡನೇ ಕಾರ್ಯಕ್ರಮ ಇದಾಗಿದೆ.ಹೊಸಕೋಟೆ ತಾಲೂಕಿನ 10 ಸಾವಿರಕ್ಕೂ ಅಧಿಕ ನಿವೇಶನ ರಹಿತರಿಗೆ ವಿವಿಧೆಡೆ ಲಭ್ಯ ಇರುವ ಸುಮಾರು 290 ಎಕರೆ ಸರ್ಕಾರಿ ಜಮೀನಿನಲ್ಲಿ ಉಚಿತ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಲಾಗಿದೆ.ಹೊಸಕೋಟೆ ನಗರಸಭೆಯ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಉಚಿತ ವಸತಿ ಸೌಕರ್ಯ ಕಲ್ಪಿಸಲು 20 ಗುಂಟೆ ನಿವೇಶನ ಒದಗಿಸಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ,ಪೌತಿಖಾತೆ,ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು,ಅಸಂಘಟಿತ ವಲಯದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ,ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಮುಖ್ಯಮಂತ್ರಿ ರೈತವಿದ್ಯಾನಿಧಿ ಯೋಜನೆಯಡಿ ಶಿಷ್ಯವೇತನ ಒದಗಿಸಲಾಗಿದೆ.ಜಿಲ್ಲೆಯಲ್ಲಿ 1090 ಕ್ಕೂ ಹೆಚ್ಚು ಇ-ಸ್ವತ್ತು ಖಾತೆಗಳ ವಿತರಣೆಗೆ ಕ್ರಮವಹಿಸಲಾಗಿದೆ.ಇಂದಿನ ಕಾರ್ಯಕ್ರಮದಲ್ಲಿ ಜಲಜೀವನ ಮಿಷನ್ನಿನ 40 ಕೋಟಿ ರೂ.ಗಳ ವೆಚ್ಚದ ಮನೆ ಮನೆಗೆ ನಲ್ಲಿಗಳ ಸಂಪರ್ಕವೂ ಸೇರಿ ಸುಮಾರು 48 ಕೋಟಿ ರೂ.ಮೌಲ್ಯದ ಸೌಕರ್ಯಗಳನ್ನು ವಿತರಿಸಲಾಗುತ್ತಿದೆ.ಜಡಿಗೇನಹಳ್ಳಿ ಹಾಗೂ ಸುತ್ತಲಿನ ಜನರ ಅಹವಾಲುಗಳನ್ನು ಕಂದಾಯ ಸಚಿವರು ಇಂದು ಸ್ವತಃ ಸ್ವೀಕರಿಸಿ ಪರಿಹಾರ ಒದಗಿಸಲಿದ್ದಾರೆ ಎಂದರು.

ಅಂಬಿಗರ ಚೌಡಯ್ಯ ಜಯಂತಿ ನಿಜಶರಣ ,ವಚನಕಾರ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ವೇದಿಕೆಯಲ್ಲಿ ಗೌರವ ಅರ್ಪಿಸಲಾಯಿತು.

28 ಸಾವಿರಕ್ಕೂ ಅಧಿಕಸೌಲಭ್ಯಗಳ ವಿತರಣೆ

ವಿಕಲಚೇತನರಿಗೆ ಕೃತಕ ಕಾಲುಗಳ ಜೋಡಣೆ,ಗಾಲಿ ಖುರ್ಚಿಗಳು,ಮುಜರಾಯಿ ಇ-ಸ್ವತ್ತು ದಾಖಲೆಗಳು,94 ಸಿ ಹಾಗೂ 94 ಸಿಸಿ ಅಡಿ ಅಕ್ರಮ-ಸಕ್ರಮಗಳ ಹಕ್ಕು ಪತ್ರಗಳು,ಮಾಜಿ ಸೈನಿಕರಿಗೆ ನಿವೇಶನ,ಹೊಸಕೋಟೆ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಉಚಿತ ವಸತಿ ಸೌಕರ್ಯ ಕಲ್ಪಿಸಲು ಗುರುತಿಸಿರುವ 20 ಗುಂಟೆ ನಿವೇಶನದ ವರ್ಗಾವಣೆ,ಇಂದಿರಾ ಗಾಂಧಿ ವೃದ್ಧಾಪ್ಯ ,ವಿಧವಾ,ಸಂಧ್ಯಾ ಸುರಕ್ಷಾ ವೇತನ ,ವಿವಿಧ ಮಾಸಾಶನಗಳ ಮಂಜೂರಾತಿ ಸೇರಿ ಸುಮಾರು 28 ಸಾವಿರಕ್ಕೂ ಅಧಿಕ ವೈಯಕ್ತಿಕ ಫಲಾನುಭವಿಗಳಿಗೆ ಹಕ್ಕು ಪತ್ರ ,ಮಂಜೂರಾತಿ ದಾಖಲೆಗಳನ್ನು ನೀಡಲಾಯಿತು.ವೇದಿಕೆಯಲ್ಲಿ ಸಚುವರುಸಾಂಕೇತಿಕವಾಗಿ ಫಲಾನುಭವಿಗಳಿಗೆ ಸೌಕರ್ಯಗಳನ್ನು ವಿತರಿಸಿದರು.

ಹೊಸಕೋಟೆ ನಗರಸಭೆ ಅಧ್ಯಕ್ಷ ಬಿ‌.ಕೆ.ನಾಗರಾಜ ,ಹೊಸಕೋಟೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಂಕರೇಗೌಡ,ಉಪಾಧ್ಯಕ್ಷೆ ಸುಗುಣಾ,ಜಡಿಗೇನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಪಲ್ಲವಿ ಅರುಣಕುಮಾರ್,ಉಪಾಧ್ಯಕ್ಷ ಹೆಚ್.ಎನ್.ರವಿಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ‌.ರೇವಣಪ್ಪ ,ಉಪವಿಭಾಗಾಧಿಕಾರಿ ತೇಜಸ್ ಕುಮಾರ,ತಹಸೀಲ್ದಾರ ಮಹೇಶಕುಮಾರ ಸೇರಿದಂತೆ ಜಡಿಗೇನಹಳ್ಳಿ ಗ್ರಾ.ಪಂ.ಸರ್ವ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರಿತಾ ಜ್ಞಾನಾನಂದ ಕಥೆಗಾರ್ತಿ.

Sun Jan 22 , 2023
ಕಥೆಗಾರ್ತಿಯಾಗಿ ಸ್ವಂತ ಬರಹಗಳ ಜೊತೆಗೆ ವಿವಿಧ ಭಾಷೆಗಳ ಪ್ರಸಿದ್ಧರ ಕಥೆ, ಕಾದಂಬರಿಗಳನ್ನು ನಿರಂತರವಾಗಿ ಕನ್ನಡಕ್ಕೆ ತರುತ್ತಿರುವವರಲ್ಲಿ ಸರಿತಾ ಜ್ಞಾನಾನಂದ ಪ್ರಮುಖರು. ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಕ್ರಿಯಾಶೀಲರಾಗಿರುವ ಸರಿತಾ ಜ್ಞಾನಾನಂದರು 1942ರ ಜನವರಿ 21ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎನ್. ಆರ್. ನಂಜುಂಡಸ್ವಾಮಿ ಅವರು ಮತ್ತು ತಾಯಿ ಸುಬ್ಬಮ್ಮನವರು. ಸರಿತಾ ಅವರ ಪ್ರಾರಂಭಿಕ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಮುಂದೆ ಮ್ಯೆಸೂರು ವಿಶ್ವವಿದ್ಯಾಲಯದಿಂದ ಬಿ. ಎ. […]

Advertisement

Wordpress Social Share Plugin powered by Ultimatelysocial