ಸರಿತಾ ಜ್ಞಾನಾನಂದ ಕಥೆಗಾರ್ತಿ.

ಕಥೆಗಾರ್ತಿಯಾಗಿ ಸ್ವಂತ ಬರಹಗಳ ಜೊತೆಗೆ ವಿವಿಧ ಭಾಷೆಗಳ ಪ್ರಸಿದ್ಧರ ಕಥೆ, ಕಾದಂಬರಿಗಳನ್ನು ನಿರಂತರವಾಗಿ ಕನ್ನಡಕ್ಕೆ ತರುತ್ತಿರುವವರಲ್ಲಿ ಸರಿತಾ ಜ್ಞಾನಾನಂದ ಪ್ರಮುಖರು.
ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಕ್ರಿಯಾಶೀಲರಾಗಿರುವ ಸರಿತಾ ಜ್ಞಾನಾನಂದರು 1942ರ ಜನವರಿ 21ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎನ್. ಆರ್. ನಂಜುಂಡಸ್ವಾಮಿ ಅವರು ಮತ್ತು ತಾಯಿ ಸುಬ್ಬಮ್ಮನವರು.
ಸರಿತಾ ಅವರ ಪ್ರಾರಂಭಿಕ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಮುಂದೆ ಮ್ಯೆಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಮತ್ತು ಬಿ.ಎಡ್ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ. ಎಡ್. ಪದವಿಗಳನ್ನು ಪಡೆದರು. ಹಿಂದಿಯಲ್ಲಿ ರಾಷ್ಟ್ರಭಾಷಾ ಪ್ರವೀಣರಾಗಿರುವುದಲ್ಲದೆ ಕನ್ನಡ, ಇಂಗ್ಲಿಷ್, ತೆಲುಗು, ತಮಿಳು, ಮರಾಠಿ, ಮಲಯಾಳಂ ಮತ್ತು ಸಂಸ್ಕೃತ ಭಾಷೆಗಳಲ್ಲಿಯೂ ಅವರು ಪ್ರಾವೀಣ್ಯತೆ ಸಾಧಿಸಿದ್ದಾರೆ. ಸರಿತಾ ಅವರು ಬೆಂಗಳೂರು ಮತ್ತು ಕೆಜಿಎಫ್ಗಳಲ್ಲಿ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದಿದ್ದಾರೆ.
ಸಾಹಿತ್ಯದಲ್ಲಿ ಅಪಾರ ಒಲವುಳ್ಳ ಸರಿತಾ ಜ್ಞಾನಾನಂದರು ‘ಒಂದೂರಲ್ಲಿ ಒಬ್ಬ ನಿರ್ಮಲಾ’, ‘ಬೆಂಕಿ ಹೂ’, ‘ಪರಿಪೂರ್ಣ’, ‘ಬಂಧನಕೆ ಬಂದ ಗಿಳಿ’, ‘ಒಲಿದರೆ ನಾರಿ’ ಮುಂತಾದ ಕಾದಂಬರಿಗಳಲ್ಲದೆ ಪಾಕೀಸ್ತಾನದಲ್ಲಿ ಶಂಕರ್, ಪ್ರಪಾತ, ಗಾಜಿನ ಕಣ್ಣು, ಎ ಹೌಸ್ ಟುಲೆಟ್ ಮುಂತಾದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿದ್ದಾರೆ. ‘ತನ್ನ ಮೀನು ತಾನಾದ’ ವೈಜ್ಞಾನಿಕ ಕಾದಂಬರಿಯು ‘ಕನ್ನಡಪ್ರಭ’ದಲ್ಲಿ, ‘ಪ್ರಪಾತ’ ಕಾದಂಬರಿಯು ‘ಕರ್ಮವೀರ’ ವಾರಪತ್ರಿಕೆಯಲ್ಲಿ, ‘ಒಲಿದರೆ ನಾರಿ’ ಮತ್ತು ‘ಸುವರ್ಣ ಮಾಲಿ’ ಕಾದಂಬರಿಗಳು ‘ಪ್ರಜಾಮತ’ ವಾರಪತ್ರಿಕೆಯಲ್ಲಿ, ‘ವಿಷಗರ್ಭ’ ಕಾದಂಬರಿಯು ‘ತರಂಗ’ ವಾರಪತ್ರಿಕೆಯಲ್ಲಿ ಹೀಗೆ ಹಲವಾರು ಕಾದಂಬರಿಗಳು ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಜನಪ್ರಿಯ ಕಾದಂಬರಿಗಳೆನಿಸಿವೆ.
ಸರಿತಾ ಜ್ಞಾನಾನಂದ ಅವರು ಶಾಲಾಮಕ್ಕಳು ಅಭಿನಯಿಸಲು ಅನುಕೂಲವಾಗುವಂತಹ ‘ಹೆಣ್ಣೇ ಹೆಚ್ಚು’, ‘ಮೋಡಗಳು’, ನಾಯಿಕೊಡೆ’ ಮೊದಲಾದ ಅಸಂಗತ ನಾಟಕಗಳಲ್ಲದೆ ‘ರಾಕ್ಷಸ’, ‘ಥ್ಯಾಂಕ್ಯು ಮಿಸ್ಟರ್ ಗ್ಲಾಡ್’ (ಅನಿಲ್ ಬರ್ವೆಯವರ ಕಾದಂಬರಿ ಆಧಾರಿತ), ‘ನಾಳೆ ಯಾರದು ?’ ಮುಂತಾದ ಹಲವಾರು ನಾಟಕಗಳನ್ನು ರಚಿಸಿದ್ದಾರೆ.
ಸುಮಾರು ಮುನ್ನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ರಚಿಸಿದ್ದು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿರುವುದಲ್ಲದೆ ತೆಲುಗು, ತಮಿಳು, ಹಿಂದಿ ಭಾಷೆಗಳಿಗೂ ಅನುವಾದಗೊಂಡಿವೆ. ‘ಬೃಂದಾವನ’, ಹಾಗೂ ‘ತುಳಸೀ ಕಟ್ಟೆ’ ಎಂಬ ಎರಡು ಕಥಾಸಂಕಲನಗಳೂ ಪ್ರಕಟಗೊಂಡಿವೆ. ಇವರ ಹಲವಾರು ಕತೆಗಳು ದೂರದರ್ಶನದಲ್ಲೂ ಪ್ರಸಾರವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಣೆಯ ಭಾರತ-ಭಾರತಿ ಪುಸ್ತಕ ಮಾಲೆಗಾಗಿ, ಮೀರಾಬಾಯಿ, ಅಶ್ವಘೋಷ, ಗಡಿಯಾರ, ಮಿದುಳು, ಕಣ್ಣು ಮುಂತಾದ ಹಲವಾರು ಮಕ್ಕಳ ಪುಸ್ತಕಗಳನ್ನೂ ರಚಿಸಿದ್ದಾರೆ. ಸಂಪಾದಿತ ಕೃತಿಗಳಲ್ಲಿ ಪ್ರಮುಖವಾದವುಗಳೆಂದರೆ ಶರಭಾಂಕಲಿಂಗ ಶತಕಮು, ಡಾ. ಬಾ. ರಾ. ಗೋಪಾಲ್ ಅವರ ಕನ್ನಡ ಲೇಖನಗಳು, ಆಚಾರ್ಯ ಶ್ರೀ, ಆಚಾರ್ಯಾಭಿವಂದನೆ, ಜಕ್ಕಣಾಚಾರ್ಯ ಮುಂತಾದವು ಪ್ರಮುಖವಾದವುಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಒಲಿಂಪಿಕ್ಸ್, ಏಷ್ಯನ್, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದ ಕನ್ನಡಿಗರಿಗೆ ಸರ್ಕಾರಿ ಹುದ್ದೆ .

Sun Jan 22 , 2023
ಬೆಂಗಳೂರು : ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ವಿಜೇತ ಕನ್ನಡಿಗರಿಗೆ ಸರ್ಕಾರಿ ಉದ್ಯೋಗ ನೀಡುವ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಲಿಂಪಿಕ್ಸ್, ಪ್ಯಾರಾ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳುಗೆ ಸರ್ಕಾರಿ ಉದ್ಯೋಗ ನೀಡುದಾಗಿ ಸಿಎಂ ಬಸವರಾಜ ಈ ಹಿಂದೆ ಘೋಷಿಸಿದ್ದರು. ಅದರಂತೆ ಇದೀಗ ರಾಜ್ಯ ಸರ್ಕಾರವು ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್ […]

Advertisement

Wordpress Social Share Plugin powered by Ultimatelysocial