ಆದರ್ಶ ಪ್ರೇಮಿಯಾಗಿ ನೆನಪಿನಲ್ಲಿ ಉಳಿಯುವ ನೆನಪಿರಲಿ ಪ್ರೇಮ್!

“ಪ್ರೇಮಂ ಪೂಜ್ಯಂ’. ಟೈಟಲ್‌ಗೆ ಹೇಳಿ ಮಾಡಿಸಿದ ಸಿನಿಮಾ ಇದು. ಇದೊಂದು ಮ್ಯೂಸಿಕಲ್ ಲವ್‌ ಸ್ಟೋರಿ. ಪ್ರೇಮಂ ಪೂಜ್ಯಂ ಚಿತ್ರ ಪ್ರೇಮಿಗಳ ಕಥೆ ಅನ್ನೋಕ್ಕಿಂತ ಹೆಚ್ಚಾಗಿ ಒಬ್ಬ ಹುಚ್ಚು ಪ್ರೇಮಿಯ ಕಥೆ. ಹುಚ್ಚು ಪ್ರೇಮಿ ಅಂದರೆ ಪ್ರೀತಿ ಪಡೆಯಲು ಹೋರಾಡಿ, ಹಾರಾಡೋನಲ್ಲ.

ಇವನು ಪ್ರೇಮವನ್ನು, ಪ್ರೇಮಿಯನ್ನು ಮನಸಾರೆ ಪೂಜಿಸುವ ಡಾಕ್ಟರ್ ಶ್ರೀಹರಿ. ಶ್ರೀಹರಿಯ ಪಾತ್ರದಲ್ಲಿ ನಟ ನೆನಪಿರಲಿ ಪ್ರೇಮ್ ನೆನಪಿನಲ್ಲಿ ಉಳಿಯುವಂಥ ಪಾತ್ರ ಮಾಡಿದ್ದಾರೆ.

ಚಿತ್ರದ ಟೈಟಲ್‌ ಹೇಳುವ ಹಾಗೆ ಇದೊಂದು ಪ್ರೇಮ ಕಥೆ. ಪ್ರೇಮ ಕಥೆ ಅಂತ ಬಂದರೆ ಸಾಕು ಕೆಲವು ಸೂತ್ರಗಳನ್ನು ತಪ್ಪದೇ ಸಿನಿಮಾ ಮಂದಿ ಬಳಸುತ್ತಾರೆ. ಆದರೆ ಈ ಚಿತ್ರದಲ್ಲಿ ನಟಿ ಶ್ರೀಹರಿಯ ಪಾತ್ರವನ್ನು ವಿಭಿನ್ನವಾಗಿ ಕಟ್ಟಿ ಕೊಡಲಾಗಿದೆ. ಈ ಶ್ರೀಹರಿ ಎಲ್ಲಾ ಪ್ರೇಮಿಗಳಂತೆ ಅಲ್ಲಾ. ಇವನು ತುಂಬಾನೇ ಡಿಫರೆಂಟ್. ತನ್ನ ಪ್ರೇಮಿಯನ್ನು ಆನೆಯಷ್ಟು, ಆನೆ ಮೇಲಿನ ಅಂಬಾರಿಯಷ್ಟು, ಅಂಬಾರಿಯಲ್ಲಿನ ದೇವಿಯಷ್ಟು ಪ್ರೀತಿಸುತ್ತಾನೆ. ಆ ಪ್ರೇಮ ದೇವತೆ ನಟಿ ಶೆರ್ಲಿನ್‌ ಪಾತ್ರದಲ್ಲಿ ಅಭಿನಯಿಸಿರುವ ಬೃಂದಾ ಆಚಾರ್ಯ. ಚಿತ್ರದಲ್ಲಿ ಇನ್ನು ಏನೆನ್ನೆಲ್ಲ ಇದೆ? ಪಾತ್ರಗಳ ನಿರ್ವಹಣೆ, ನಿರ್ದೇಶನ, ಒಟ್ಟಾರೆ ಈ ಸಿನಿಮಾ ನೋಡಬಹುದಾ? ಎಂಬೆಲ್ಲ ವಿಷಯಗಳ ಬಗ್ಗೆ ವಿವರ ಮುಂದಿದೆ.

ಶ್ರೀಹರಿಯ ಹೃದಯ ಬಡಿತದ ಕಥೆಯೇ ಪ್ರೇಮಂ ಪೂಜ್ಯಂ!
ಮಂಡ್ಯದ ಹಳ್ಳ ಹೈದ ಶ್ರೀಹರಿ ವೈದ್ಯನಾಗುವ ಕನಸಿನೊಂದಿಗೆ ಓದಲು ಬರ್ತಾನೆ. ಅಲ್ಲಿ ಲವ್‌ ಅಟ್‌ ಫಸ್ಟ್ ಸೈಟ್ ಆಗೇ ಬಿಡುತ್ತೆ. ಶೆರ್ಲಿಗೆ ಕ್ಲೀನ್ ಬೋಲ್ಡ್ ಆಗೋ ಶ್ರೀಹರಿ ಆಕೆಯನ್ನು ಅಂಬಾರಿಯಲ್ಲಿನ ದೇವತೆಯಂತೆ ಪೂಜಿಸುತ್ತಾನೆ. ಮೊದಲೇ ಹೇಳಿದ ಹಾಗೆ ಈ ಶ್ರೀಹರಿಯ ಪ್ರೀತಿ ಕೊಂಚ ಡಿಫರೆಂಟ್. ಮೋಹವಿಲ್ಲದ, ಕಾಮಮುಕ್ತ ಪವಿತ್ರ ಪ್ರೀತಿ ಇವನದ್ದು. ಇವನ ಪ್ರೀತಿ ಪರಿಗೆ ದೇವರೇ ಶರಣಾಗಿ ಬಿಡಬೇಕು. ಅಂತಹ ಪ್ರೀತಿ ಇವನದ್ದು. ಇಂತಹ ಪ್ರೇಮಿಗೆ ತನ್ನ ಪ್ರೀತಿ ಸಿಗುತ್ತಾ ಇಲ್ಲಾವಾ? ಅನ್ನೋದೇ ಸಿನಿಮಾ. ಸಿಗುವುದಿಲ್ಲ ಎಂದು ಕೊಂಡ ಪ್ರೀತಿ ಸಿಕ್ಕೂ ಸಿಗದೇ ಹೋದಾಗ ಏನಾಗುತ್ತದೆ ಎನ್ನುವುದನ್ನು ಸಿನಿಮಾದಲ್ಲಿ ಅಚ್ಚು ಕಟ್ಟಾಗಿ ಕಟ್ಟಿ ಕೊಡಲಾಗಿದೆ.

ಪ್ರೇಮಿಯಾಗಿ, ವೈದ್ಯನಾಗಿ ಪ್ರೇಮ್ ಇಷ್ಟವಾಗ್ತಾರೆ!!!

ಇಡೀ ಸಿನಿಮಾ ಒಂದು ಕಡೆ ಶ್ರೀಹರಿಯ ಪ್ರೀತಿ ಸುತ್ತಾ ಸುತ್ತಿದರೆ. ಮತ್ತೊಂದು ಕಡೆ ವೈದ್ಯನಾ ಪಾತ್ರದಲ್ಲೂ ನಟ ಪ್ರೇಮ್ ಇಷ್ಟ ಆಗಿ ಬಿಡುತ್ತಾರೆ. ನಟ ಪ್ರೇಮ್ ಇಲ್ಲಿಯ ತನಕ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಈ ಚಿತ್ರದಲ್ಲಿ ಹಳೆ ಪ್ರೇಮ್ ಎಲ್ಲೂ ಕಾಣಿಸುವುದಿಲ್ಲ. ಪ್ರತಿ ಫ್ರೇಮ್‌ನಲ್ಲೂ ಪ್ರೇಮ್ ಹೊಸದಾಗಿ ಕಾಣಿಸುತ್ತಾರೆ. ಪ್ರೇಮ್‌ ಅವರು ಇಷ್ಟು ದಿನ ತಮ್ಮ ಈ ಮುಖವನ್ನು ಯಾಕೆ ರಿವೀಲ್ ಮಾಡಿಲ್ಲ ಅಂತಲೂ ಅನಿಸಿ ಬಿಡುತ್ತದೆ. ಪ್ರೇಮ್ ಪಾತ್ರ ಮತ್ತು ಅಭಿನಯದ ಅಷ್ಟು ಭಿನ್ನ ಎನಿಸುತ್ತದೆ. ಚಿತ್ರದ ಕತೆ ಹಂತ ಹಂತವಾಗಿ ಸಾಗುವುದರಿಂದ, ಪ್ರೇಮ್‌ ಚಿತ್ರದಲ್ಲಿ ಬರುವ ಒಂದೊಂದು ಕಾಲಘಟ್ಟದಲ್ಲೂ ಲುಕ್‌ ಬದಲಿಸಿ ಕೊಂಡಿದ್ದಾರೆ. ಹ್ಯಾಂಡಸಮ್ ಆಗಿ ಲುಕ್‌ನಲ್ಲಿ ಪ್ರೇಮ್ ಶ್ರೀಹರಿಯಾಗಿ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರ ಆಗುತ್ತಾರೆ.

ಗಮನ ಸೆಳೆಯುವ ಮಾಸ್ಟರ ಆನಂದ್!!

ಇನ್ನೂ ಚಿತ್ರದಲ್ಲಿ ಇಬ್ಬರು ನಾಯಕಿಯರು ಶೆರ್ಲಿನ್ ಪಾತ್ರಧಾರಿ ನಟಿ ಬೃಂದಾ ಆಚಾರ್ಯ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಟಿ ಐಂದ್ರಿತಾ ರೈ ಅವರ ಪಾತ್ರ ಸಿನಿಮಾ ಕಥೆಯಲ್ಲಿ ಅಷ್ಟು ಪರಿಣಾಮಕಾರಿಯಾಗಿ ಇಲ್ಲ. ನಾಯಕ ಡಾಕ್ಟರ್‌ ಶ್ರೀಹರಿಯ ಕಥೆ ಹೇಳಲು ಪೇಶಂಟ್ ಆಗಿ ಬರುತ್ತಾರೆ. ಇನ್ನು ಶ್ರೀ ಹರಿಯ ಸ್ನೇಹಿತನ ಪಾತ್ರದಲ್ಲಿ ಮಾಸ್ಟರ್ ಆನಂದ್ ಗಮನ ನಗಿಸುತ್ತಾರೆ. ಇವರ ಗ್ಯಾಂಗ್‌ನಲ್ಲಿ ತಲೈವನಾಗಿ ಸಾಧುಕೋಕಿಲ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಆನಂದ್, ಸಾಧುಕೋಕಿಲ ಜೋಡಿ ಆಗಾಗ ಪ್ರೇಕ್ಷಕರಿಗೆ ಕಾಮಿಡಿ ಕಚಗುಳಿ ಇಡುತ್ತೆ. ಪೋಷಕರ ಪಾತ್ರದಲ್ಲಿ ಅವಿನಾಶ್, ಮಾಳವಿಕಾ, ನಾಗಭರಣ ಕಾಣಿಸಿಕೊಂಡಿದ್ದಾರೆ.

ಮ್ಯೂಸಿಕಲ್‌ ಲವ್‌ ಸ್ಟೋರಿ!

ಆರಂಭದಿಂದ ಸರಾಗವಾಗಿ ಸಾಗುವ ಸಿನಿಮಾ. ಸೆಕೆಂಡ್ ಆಫ್‌ ಶುರುವಾದ ಮೇಲೆ ಸ್ಲೋ ಆಗಿದೆ. ಕೊಂಚ ಲ್ಯಾಗ್ ಅನಿಸೋ ಕಾರಣ ಮುಂದೇನು ಎನ್ನುವ ಕುತೂಹಲವನ್ನು ಕೊಂಚ ತಣ್ಣಗಾಗಿಸುತ್ತದೆ. ಚಿತ್ರದ ಮತ್ತೊಂದು ದೊಡ್ಡ ಶಕ್ತಿ ಅಂದರೆ ಲೊಕೇಷನ್‌ಗಳು ಮತ್ತು ಕ್ಯಾಮೆರಾ ವರ್ಕ್. ಸಿನಿಮಾದ ಪ್ರತಿ ಫ್ರೇಮ್‌ ಕೂಡ ಕಣ್ಣಿಗೆ ಹಬ್ಬದಂತಿದೆ. ಛಾಯಾಗ್ರಾಹಕ ನವೀನ್‌ ಕುಮಾರ್‌ ಕೈ ಚಳಕ ತೆರೆಯ ಮೇಲೆ ಚಮತ್ಕಾರ ಮಾಡಿದೆ. ಚಿತ್ರದಲ್ಲಿ ಸಾಲು ಸಾಲು ಹಾಡು ಇದ್ದರೂ, ಅಷ್ಟಾಗಿ ಮನಸಲ್ಲಿ ಉಳಿಯುವುದಿಲ್ಲ. ಮ್ಯೂಸಿಕಲ್‌ ಲವ್‌ ಸ್ಟೋರಿ ಆದ ಕಾರಣ ಸಂಗೀತಕ್ಕೆ ಇನ್ನಷ್ಟು ಒತ್ತು ಕೊಡಬೇಕಿತ್ತು. ಸಂಗೀತವೂ ಒಂದು ಪಾತ್ರವೇ ಆಗಿ ಬಿಟ್ಟಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು. ಸಿನಿಮಾದ ತಿರುವು ಪಡೆಯುವಾಗಲೆಲ್ಲಾ ಮುಖ್ಯ ಪಾತ್ರಗಳಿಗೆ ಒಂದಲ್ಲಾ ಒಂದು ಕಾಯಿಲೆ ಬಂದು ಬಿಡುತ್ತೆ. ಐಂದ್ರಿತಾ ಪಾತ್ರ, ಶೆರ್ಲಿ, ಶೆರ್ಲಿ ಪೊಷಕರು, ಕೊನೆಗೆ ನಾಯಕ ಶ್ರೀಹರಿ ಹೃದಯಕ್ಕೂ ಪ್ರೀತಿಯಿಂದ ಕಾಯಿಲೆ ಬಂದು ಬಿಡುತ್ತದೆ. ಬಹುಶಃ ನಿರ್ದೇಶಕ ಡಾಕ್ಟರ್ ಆದ ಕಾರಣ ಕಥೆಯಲ್ಲಿ ಈ ಅಂಶ ಸೇರಿರ ಬಹುದು.

ಪ್ರೇಮಂ ಪೂಜ್ಯಂ ಫೀಲ್‌ ಗುಡ್‌ ಸಿನಿಮಾ!

ಒಟ್ಟಾರೆ ಪ್ರೇಮಂ ಪೂಜ್ಯಂ ಫೀಲ್‌ ಗುಡ್‌ ಸಿನಿಮಾ. ಪ್ರೀತಿಯನ್ನು ದೇವರ ರೂಪದಲ್ಲಿ ಆರಾಧಿಸುವ ಪ್ರೇಮಿಯ ಕಥೆ. ಈ ಶ್ರೀಹರಿ ಕಥೆ ಒಂದಷ್ಟು ಪ್ರೇಮಿಗಳಿಗೆ ಸ್ಪೂರ್ತಿ ಆದರೂ ಅಚ್ಚರಿ ಇಲ್ಲ. ಅಷ್ಟರ ಮಟ್ಟಿಗೆ ಪರಿಣಾಮಕಾರಿ ಆಗ ಬಲ್ಲ ಸಿನಿಮಾ ಪ್ರೇಮಂ ಪೂಜ್ಯಂ. ಸಿನಿಮಾ ನೋಡಿ ಹೊರ ಬಂದ ಮೇಲೆ ಶ್ರೀಹರಿಯಾಗಿ ನೆನಪಿನಲ್ಲಿ ಉಳಿದು ಬಿಡುತ್ತಾರೆ ನಟ ನೆನಪಿರಲಿ ಪ್ರೇಮ್. ಒಂದು ಒಳ್ಳೆಯ ಲವ್ ಸ್ಟೋರಿ ನೋಡ ಬಯಸುವವರು ಪ್ರೇಮಂ ಪೂಜ್ಯಂ ಸಿನಿಮಾವನ್ನು ನೋಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2021-2022ರ ಶೈಕ್ಷಣಿಕ ಸಾಲಿನಿಂದ ಎಂಬಿಎ ಪ್ರವೇಶಾತಿ ಆರಂಭ|Speed News Kannada|

Wed Jan 5 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial