ಹಬ್ಬಕ್ಕೆ ಕಾಯಿ ಖರೀದಿಸಲು ಬಂದ ಗ್ರಾಹಕರು ಬೆಲೆ ಕೇಳಿ ಬೆಚ್ಚಿಬಿದ್ದರು.

ಶ್ರೀನಿವಾಸಪುರ:ಪಟ್ಟಣದ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅವರೆ ಕಾಯಿ ಬೆಲೆ ಗಗನಕ್ಕೇರಿದ್ದು, ಹಬ್ಬಕ್ಕೆ ಕಾಯಿ ಖರೀದಿಸಲು ಬಂದ ಗ್ರಾಹಕರು ಬೆಲೆ ಕೇಳಿ ಬೆಚ್ಚಿಬಿದ್ದರು.

ಇಷ್ಟು ದಿನ ಪಟ್ಟಣದ ಮಾರುಕಟ್ಟೆಯಲ್ಲಿ ಅವರೆ ಕಾಯಿ ಸಗಟು ಬೆಲೆ ಕೆ.ಜಿ.ಯೊಂದಕ್ಕೆ ₹ 28 ರಿಂದ ₹ 30ರ ಆಜೂಬಾಜು ಇತ್ತು.

ಚಿಲ್ಲರೆ ಬೆಲೆಯಲ್ಲಿ ಕೆಜಿಯೊಂದಕ್ಕೆ ₹ 40ರಂತೆ ಮಾರಾಟವಾಗುತ್ತಿತ್ತು. ಆದರೆ, ಸಂಕ್ರಾಂತಿ ಹಿನ್ನೆಲೆಯಲ್ಲಿ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿತು. ಕೆ.ಜಿ.ಯೊಂದಕ್ಕೆ ಸಗಟು ಬೆಲೆಯಲ್ಲಿ ₹ 60 ಇದ್ದರೆ, ಚಿಲ್ಲರೆ ಬೆಲೆ ₹ 70ಕ್ಕೆ ಮಾರಾಟವಾಯಿತು.

ಇಷ್ಟು ದಿನ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಗೊಣಗುತ್ತಿದ್ದ ರೈತರು ಶನಿವಾರ ದಿಢೀರ್ ಬೆಲೆ ಏರಿಕೆ ಕಂಡು ಖುಷಿಪಟ್ಟರು. ಅವರೆ ಕಾಯಿ ಬೆಲೆ ಕಂಡು ಹಿಗ್ಗಿದರು. ಆದರೆ, ಸಾಮಾನ್ಯ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿತು.

ಶ್ರೀನಿವಾಸಪುರ ಮಾವಿಗೆ ಮಾತ್ರವಲ್ಲದೆ ಅವರೆ ಕಾಯಿ ಬೆಳೆಯುವುದಕ್ಕೂ ಪ್ರಸಿದ್ಧಿ ಪಡೆದಿದೆ. ತಾಲ್ಲೂಕಿನ ರೈತರು ಪ್ರತಿವರ್ಷ ಸಾವಿರಾರು ಟನ್ ಅವರೆ ಕಾಯಿ ಬೆಳೆಯುತ್ತಾರೆ. ಕೋಲಾರ, ಬೆಂಗಳೂರಿನ ವ್ಯಾಪಾರಿಗಳು ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ವ್ಯಾಪಾರಿಗಳು ಬಂದು ಕಾಯಿ ಖರೀದಿಸಿ ಕೊಂಡೊಯ್ಯುತ್ತಾರೆ. ಶನಿವಾರವೂ ಅದೇ ನಡೆಯಿತು. ಹೊರಗಿನ ವ್ಯಾಪಾರಿಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಕಾಯಿ ಖರೀದಿಸಿದರು. ಒಂದು ಹಂತದಲ್ಲಿ ಸ್ಥಳೀಯ ಗ್ರಾಹಕರಿಗೆ ಕಾಯಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಳಿಗ್ಗೆಯಿಂದ ರಾತ್ರಿವರೆಗೆ ಅವರೆ ಕಾಯಿ ವಹಿವಾಟು ಜೋರಾಗಿ ನಡೆದ ಪರಿಣಾಮ ಎಂ.ಜಿ. ರಸ್ತೆಯಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿತ್ತು. ಅವರೆ ಕಾಯಿ ಹೊತ್ತು ತರುವ ಹಾಗೂ ಹೊತ್ತೊಯ್ಯುವ ವಾಹನಗಳ ದಟ್ಟಣೆ ಸಾಮಾನ್ಯ ಸಂಚಾರಕ್ಕೆ ಸಂಚಕಾರ ತಂದಿತ್ತು.

‘ಸಂಕ್ರಾಂತಿ ಹಬ್ಬಕ್ಕೆ ಅವರೆ ಕಾಳಿನಿಂದ ವಿವಿಧ ತಿನಿಸು ತಯಾರಿಸುತ್ತಾರೆ. ಹಿದಿಕಿದ ಬೇಳೆ ಸಾರು ಈ ಹಬ್ಬದ ವಿಶೇಷ. ಹಾಗಾಗಿ, ಪ್ರತಿಯೊಬ್ಬರು ಕಾಯಿ ಖರೀದಿಗೆ ಮುಗಿಬೀಳುತ್ತಾರೆ. ಈ ಬಾರಿ ಅಧಿಕ ಮಳೆ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಂದಿಲ್ಲ. ಇದರಿಂದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ’ ಮಂಡಿ ಮಾಲೀಕ ಅಕ್ರಮ್ ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಯಾಂಟ್ರೋ ರವಿಗೆ ಎಸ್ಕೇಪ್ ಆಗಲು ಹೇಳಿದ್ಯಾರು .

Sun Jan 15 , 2023
  ಮೈಸೂರು :ಗೆ ಎಸ್ಕೇಪ್ ಆಗಲು ಹೇಳಿದ್ಯಾರು ಗೊತ್ತಾ..? ಆ ಖತರ್ನಾಕ್ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ..? ಈ ಸ್ಟೋರಿ ಓದಿ. ಸ್ಯಾಂಟ್ರೋ ರವಿ ವಿರುದ್ದ ದೂರು ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಲು ಮೈಸೂರಿನ PSI ಸೂಚಿಸಿದ್ದಾರೆ. ಮೊಬೈಲ್ ಎಲ್ಲವನ್ನು ಬಿಟ್ಟು ಎಸ್ಕೇಪ್ ಆಗುವಂತೆ ಸೂಚಿಸಿದ್ಧಾರೆ. ಸ್ಯಾಂಟ್ರೋ ರವಿ ಪರಾರಿಯಾಗುವಂತೆ ಮೈಸೂರಿನ PSI ಒಬ್ಬರಿಂದ ಸೂಚನೆ ನೀಡಿದ್ದಾರೆ. ಆ PSI ಅನ್ನು ವಿಚಾರಣೆ ನಡೆಸಲು ತನಿಖಾ ತಂಡ ತಯಾರಿ ನಡೆಸಿದೆ. ಇನ್ಸ್​​ಪೆಕ್ಟರ್ […]

Advertisement

Wordpress Social Share Plugin powered by Ultimatelysocial