ಜನವರಿ 19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ ಆಗಮನ.

ಲಬುರಗಿ,ಜ.13(ಕ.ವಾ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಜನವರಿ 19ಕ್ಕೆ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕಂದಾಯ ಸಚಿವ ಆರ್.ಅಶೋಕ ಅವರು ಕಲಬುರಗಿ ನಗರದ ಐವಾನ್-ಎ-ಶಾಹಿತಿ ಅತಿಥಿಗೃಹದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತೆ ಪರಿಶೀಲನಾ ಸಭೆ ನಡೆಸಿದರು.

ಪ್ರಧಾನಮಂತ್ರಿಗಳು ಅಂದು ಮಳಖೇಡ್‍ದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಇತಿಹಾಸದಲ್ಲಿಯೇ ಏಕಕಾಲದಲ್ಲಿ ಕಲಬುರಗಿ ಸೇರಿದಂತೆ ರಾಯಚೂರು, ಬೀದರ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಿದ್ದು, ಕಾರ್ಯಕ್ರಮ ಶಿಷ್ಠಾಚಾರದಂತೆ ಅಚ್ಚುಕಟ್ಟಾಗಿ ನೆರವೇರುವಂತೆ ಎಲ್ಲಾ ಪೂರ್ವಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳ ಫಲಾನುಭವಿಗಳ ಜೊತೆಗೆ ಮೋದಿ ಅಭಿಮಾನಿಗಳ ಸಹ ಆಗಮಿಸುವುದರಿಂದ, ಬೃಹತ್ ಜರ್ಮನ್ ವೇದಿಕೆ ನಿರ್ಮಾಣ, ಹೆಲಿಪ್ಯಾಡ್ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ, ಸುಗಮ ಸಂಚಾರ, ಸಾರ್ವಜನಿಕರ ಮತ್ತು ಗಣ್ಯರ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಊಟ, ಸ್ವಚ್ಛತೆ, ಭದ್ರತೆ ಹೀಗೆ ಎಲ್ಲವು ವ್ಯವಸ್ಥಿತವಾಗಿರಬೇಕು. ಅಂದು ಫಲಾನುಭವಿಗಳನ್ನು ಬೆಳಿಗ್ಗೆ ಊರಿನಿಂದ ಬಿಡುವಾಗಲೆ ಉಪಹಾರ ಮಾಡಿಕೊಂಡೇ ಕರೆತರಬೇಕು. ಮುನ್ನೆಚ್ಚರಿಕೆಯಾಗಿ ಕಾರ್ಯಕ್ರಮ ಸ್ಥಳದಲ್ಲಿ ಅಂಬುಲೆನ್ಸ್, ಅಗ್ನಿಶಾಮಕ ವಾಹನ ತೈನಾತಿಸಬೇಕು. ಬೇರೆ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರುವ ಅಧಿಕಾರಿಗಳೊಂದಿಗೆ ಹಿರಿಯ ಅಧಿಕಾರಿಗಳನ್ನು ಸಮನ್ವಯ ಅಧಿಕಾರಿಗಳನ್ನಾಗಿ ಸಾಧಿಸಬೇಕು ಎಂದು ಸೂಚಿಸಿದ ಸಚಿವರು, ಯಾವುದೇ ಲೋಪಕ್ಕೆ ಇಲ್ಲಿ ಅವಕಾಶ ನೀಡಕೂಡದು ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಹೆದ್ದಾರಿ-10ರಲ್ಲಿ ಅಂದು 60 ಕಿ.ಮಿ. ಅಂತರದಲ್ಲಿ ಅಂಬುಲೆನ್ಸ್ ಸೇವೆ(108) ಒದಗಿಸಬೇಕು. ವಿವಿಧ ಜಿಲ್ಲೆಗಳಿಂದ ಬಸ್‍ಗಳಲ್ಲಿ ಫಲಾನುಭವಿಗಳು ಬರುವುದರಿಂದ ಬಸ್‍ಗಳು ಕೆಟ್ಟಲ್ಲಿ ಕೂಡಲೆ ದುರಸ್ತಿಗೂ ಏರ್ಪಾಡು ಮಾಡಬೇಕು ಎಂದು ಸಚಿವ ಆರ್.ಅಶೋಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಜನದಟ್ಟನೆಯಾಗದಂತೆ ನೋಡಿಕೊಳ್ಳಿ: ವಿಶೇಷವಾಗಿ ಕಾರ್ಯಕ್ರಮಕ್ಕೆ ಫಲಾನುಭವಿಗಳ ಹೊರತಾಗಿ ಸಾರ್ವಜನಿಕರು, ಮೋದಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅಲ್ಲಲ್ಲಿ ಪ್ರವೇಶಕ್ಕೆ ಅವಕಾಶ ನೀಡಿ ಬ್ಯಾರಿಕೇಡ್ ಹಾಕಬೇಕು. ಇಡೀ ಪ್ರಾಂಗಣ ಸುತ್ತಾಕುವಂತಾಗಬಾರದು. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ತುಂಬಾ ಎಚ್ಚರಿಕೆಯಿಂದ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ಯಾವುದೇ ರೀತಿಯಲ್ಲಿ ಕಾರ್ಯಕ್ರಮ ಸುತ್ತಮುತ್ತ ಮತ್ತು ರಾಜ್ಯ ಹೆದ್ದಾರಿಯಲ್ಲಿ ಜನದಟ್ಟನೆಯಾಗದಂತೆ ಸುಗಮ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಎಸ್.ಪಿ. ಇಶಾ ಪಂತ್ ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿ, ಕಾರ್ಯಕ್ರಮ ಸುಗಮ ನಿರ್ವಹಣೆ ಮತು ಯಶಸ್ಸಿಗೆ 11 ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಊಟಕ್ಕೆ 200 ಕೌಂಟರ್ ಸ್ಥಾಪಿಸಲಾಗುತಿದ್ದು, 600 ಬಾಣಸಿಗರು ಇರಲಿದ್ದಾರೆ. ಜಿಲ್ಲೆಯ ವಿವಿಧ ಸ್ಥಳಗಳಿಂದ ಫಲಾನುಭವಿಗಳನ್ನು ಕರೆತರಲು 2,582 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಬಸ್‍ಗೆ ಮತ್ತು ಫಲಾನುಭವಿಗಳನ್ನು ನೋಡಿಕೊಳ್ಳಲು ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿದೆ. ಮುಖ್ಯ ವೇದಿಕೆ ಜರ್ಮನ್ ಟೆಂಟ್‍ನಿಂದ ಕೂಡಿರಲಿದ್ದು, ಐದು ಕಡೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಇದೂವರೆಗಿನ ಪೂರ್ವಸಿದ್ಧತೆ ಮಾಡಿರುವ ಕುರಿತು ಸಚಿವರಿಗೆ ವಿವರಣೆ ನೀಡಿದರು.

ಸಭೆಯಲ್ಲಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಶಾಸಕ ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರಾದ ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ಎನ್.ರವಿಕುಮಾರ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದು ಪಾಟೀಲ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಮಹಾನಗರ ಪಾಲಿಕೆ ಅಯುಕ್ತ ಭುವನೇಶ ಪಾಟೀಲ ದೇವಿದಾಸ್, ಸಹಾಯಕ ಆಯುಕ್ತೆ ಮಮತಾ ಕುಮಾರಿ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನಪರ ಬಜೆಟ್ ಮಂಡನೆಗೆ ಸಿಎಂ ತಯಾರಿ

Sat Jan 14 , 2023
ರಾಜ್ಯದ ಈ ಸಾಲಿನ ಬಜೆಟ್ ಫೆ. ೧೭ಕ್ಕೆ ಮಂಡಿಸುವ ಸುಳಿವು ನೀಡಿರುವ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಈ ಬಾರಿಯ ಬಜೆಟ್ ಜನಪರ ಬಜೆಟ್ ಆಗಲಿದೆ. ಜನ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆಗಳನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ. ಬೆಂಗಳೂರಿನ ರೇಸ್‌ಕೋರ್ಸ್‌ನ ಅಧಿಕೃತ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು, ಮಹಿಳೆಯರು ಹಾಗೂ ಯುವ ಸಮುದಾಯದವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದರು. ಬಜೆಟ್ ಮಂಡನೆ ಹಾಗೂ ಅಧಿವೇಶನದ ದಿನಾಂಕವನ್ನು ಈ ತಿಂಗಳ ೧೭ ರಂದು ನಡೆಯುವ […]

Advertisement

Wordpress Social Share Plugin powered by Ultimatelysocial