ಪ್ರೊ. ಆರ. ಪಿ. ಹೂಗಾರ ಅವರು ಗ್ವಾಲಿಯರ್ ಘರಾಣೆಯ ಮಹಾನ್ ಗಾಯಕರು.

 

ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ ಪ್ರೊ. ಆರ. ಪಿ. ಹೂಗಾರ ಅವರು ಗ್ವಾಲಿಯರ್ ಘರಾಣೆಯ ಮಹಾನ್ ಗಾಯಕರು.ಹೂಗಾರ ಮಾಸ್ತರ ಎಂದೇ ನಾದಲೋಕದಲ್ಲಿ ಪರಿಚಿತರಾಗಿದ್ದ ಪ್ರೊ. ರಾಚಪ್ಪ ಪರಪ್ಪ ಹೂಗಾರರು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಮಾರ್ಚ್ 6, 1922ರ ವರ್ಷದಲ್ಲಿ ಜನಿಸಿದರು. ತಂದೆ ಪರಪ್ಪ. ತಾಯಿ ಗಿರಿಯಮ್ಮ.ಇಟಗಿಯ ಹೂಗಾರ ಮನೆತನ ಸಂಗೀತ ಹಾಗೂ ಸಂಸ್ಕೃತಿಗೆ ಹೆಸರಾದುದು. ರಾಚಪ್ಪನವರ ತಾತ ಪರಪ್ಪನವರ ತಂದೆ ರುದ್ರಪ್ಪನವರು ಉತ್ತಮ ಸಂಗೀತಗಾರರಾಗಿದ್ದರು. ಸಿತಾರ್ ವಾದನದಲ್ಲಿ ಅವರಿಗೆ ವಿಶೇಷ ಪಾಂಡಿತ್ಯವಿತ್ತು. ರಾಚಪ್ಪನವರ ತಂದೆ ಪರಪ್ಪನವರಂತೂ ಆ ಭಾಗದ ನಾಮಾಂಕಿತ ಸಂಗೀತ ಕಲಾವಿದರು. ಗಾಯನ ಕಲೆಯ ಜೊತೆಗೆ ಪಿಟೀಲು, ಸಾರಂಗಿ, ಮದ್ದಳೆ ಮತ್ತು ಸಿತಾರ ನುಡಿಸುವುದರಲ್ಲಿ ಅವರು ನಿಷ್ಣಾತರಾಗಿದ್ದರು. ಕುದುರೆಯ ಮೇಲೆ ಕುಳಿತುಕೊಂಡು ಒಂದು ಹೆಗಲಿಗೆ ಪಿಟೀಲು, ಇನ್ನೊಂದು ಹೆಗಲಿಗೆ ಸಾರಂಗಿ ವಾದ್ಯಗಳನ್ನು ಹಾಕಿಕೊಂಡು ಹಳ್ಳಿಯಿಂದ ಹಳ್ಳಿಗೆ ಸಂಗೀತ ಕಾರ್ಯಕ್ರಮಕ್ಕೆ ಹೊರಡುತ್ತಿದ್ದ ಇವರನ್ನು ಕಂಡ ಜನ ಬಂದೂಕುಧಾರಿ ಢಕಾಯಿತನೆಂದು ಹೆದರಿಕೊಳ್ಳುತ್ತಿದ್ದುದೂ ಇತ್ತು. ಅವರೊಬ್ಬ ಉತ್ತಮ ಸಂಗೀತ ಕಲಾವಿದರೆಂಬುದು ಗೊತ್ತಾದ ಮೇಲೆ ಜನ ಅಚ್ಚರಿಪಡುತ್ತಿದ್ದರು. ಕಳೆದ ಶತಮಾನದ ಹೆಸರಾಂತ ಸಾಹಿತಿ ಡಾ. ಸಿದ್ಧಯ್ಯ ಪುರಾಣಿಕರ ತಂದೆ ದ್ಯಾಂಪುರದ ಪಂಡಿತ ಕಲ್ಲಿನಾಥ ಶಾಸ್ತ್ರಿಗಳು ನಡೆಸುತ್ತಿದ್ದ ಪುರಾಣ ಕೀರ್ತನಕ್ಕೆ ಪರಪ್ಪನವರ ಸಂಗೀತ ಸಾಥಿ ಹೇಳಿಮಾಡಿಸಿದಂತಹಜೋಡಿ ಎಂದು ಪ್ರಖ್ಯಾತಿ ಪಡೆದಿತ್ತು. ಕಲ್ಲಿನಾಥ ಶಾಸ್ತ್ರಿಗಳ ಪುರಾಣ ಇದ್ದಲ್ಲೆಲ್ಲಾ ಪರಪ್ಪನವರ ಸಂಗೀತ ಅವಶ್ಯವಾಗಿ ಜೊತೆಗೂಡಿರುತ್ತಿತ್ತು.
ರಾಚಪ್ಪನವರಿಗೆ ಸಂಗೀತದಲ್ಲಿ ಅವರ ತಂದೆಯವರಾದ ಪರಪ್ಪನವರೇ ಪ್ರಥಮ ಗುರು. ರಾಚಪ್ಪನವರ ಬದುಕಿಗೆ ಬೆಳಕನ್ನಿತ್ತವರು ಹಾಲಕೇರಿಯ ಶ್ರೀ. ನಿ. ಪ್ರ. ಲಿಂ. ಅನ್ನದಾನೇಶ್ವರ ಮಹಾಸ್ವಾಮಿಗಳು. ಪರಪ್ಪನವರು ಹಾಗೂ ಅನ್ನದಾನೇಶ್ವರ ಮಹಾಸ್ವಾಮಿಗಳೂ ಬಾಲ್ಯದ ಗೆಳೆಯರು ಮತ್ತು ಸಹಪಾಠಿಗಳು. ಹೀಗಾಗಿ ಇವರ ಮನೆತನದ ಮೇಲೆ ಸ್ವಾಮಿಗಳಿಗೆ ತುಂಬು ಪ್ರೀತಿ, ವಿಶ್ವಾಸ. ಒಂದು ರೀತಿಯಲ್ಲಿ ಸ್ವಾಮಿಗಳ ಆಶೀರ್ವಾದ ಪರಪ್ಪನವರ ಕುಟುಂಬಕ್ಕೊಂದು ವರದಾನ.ಇಟಗಿಯಲ್ಲಿ ಕನ್ನಡ ನಾಲ್ಕನೇ ತರಗತಿ ಮುಗಿಸಿದ ರಾಚಪ್ಪನವರು ಮಾಧ್ಯಮಿಕ ಶಿಕ್ಷಣಕ್ಕಾಗಿ ನರಗುಂದದ ಎ. ವಿ. ಸ್ಕೂಲಿಗೆ ಬಂದರು. ಶಾಲೆಯ ಅಭ್ಯಾಸದೊಂದಿಗೆ ಸಂಗೀತ ಕಲೆಯ ವಿಕಾಸಕ್ಕೆ ವಿಶೇಷ ವೇಳೆ ಕಳೆದರು. ನರಗುಂದದ ಪಂಡಿತ ನಾರಾಯಣಾಚಾರ್ಯ ದಂಡಾಪೂರ ಹೆಸರಾಂತ ಗಾಯಕರೆನಿಸಿದ್ದರು. ಅವರು ಗ್ವಾಲಿಯರ್ ಘರಾಣೆಯ ಪಂಡಿತ್ ಬಾಲಕೃಷ್ಣ ಬುವಾ ಇಚಲ ಕರಂಜೀಕರ ಅವರ ಶಿಷ್ಯರು. ನಾರಾಯಣಾಚಾರ್ಯರು ಸಂಸ್ಕೃತ ವಾಜ್ಮಯದಲ್ಲೂ ಮಹಾನ್ ಪಂಡಿತರಾಗಿದ್ದರು. ರಾಚಪ್ಪನವರು ನಾರಾಯಣಾಚಾರ್ಯ ದಂಡಾಪೂರ ಅವರಲ್ಲಿ ಸಂಗೀತ ಕಲಿಕೆಗೆ ಪ್ರಾರಂಭಿಸಿ, ಗುರುಗಳ ನೆಚ್ಚಿನ ಶಿಷ್ಯರಾಗಿ ಸಂಗೀತ ಸಾಧನೆಯಲ್ಲಿ ತೊಡಗಿದರು.
ರಾಚಪ್ಪನವರು ನರಗುಂದದ ಶಾಲಾ ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ಶಾಲೆಯ ಜುಬಿಲಿ ಉತ್ಸವ ಏರ್ಪಾಡಾಗಿತ್ತು. ಆ ಉತ್ಸವದ ನಿಮಿತ್ತ ಅಲೌಕಿಕ ರಾಜನಿಷ್ಠಾ ಎಂಬ ನಾಟಕ ಅಭಿನಯಿಸಲ್ಪಟ್ಟಿತು. ಆ ನಾಟಕದಲಿ ಬಸ್ವಾರ್ಯನ ಪಾತ್ರದಲ್ಲಿ ರಾಚಪ್ಪನವರ ಪ್ರಬುದ್ಧ ಅಭಿನಯ ಮತ್ತು ಸುಮಧುರ ಕಂಠದ ಹಾಡುಗಾರಿಕೆ ಕೇಳಿದ ಅಂದಿನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಂಬೈ ಕರ್ನಾಟಕದ ಅಂದಿನ ಶಿಕ್ಷಣ ಸಚಿವ ಆರ್. ಸಿದ್ದಪ್ಪ ಕಂಬಳಿಯವರು ರಾಚಪ್ಪನವರನ್ನು ಕರ್ನಾಟಕದ ಕಿನ್ನರರೆಂದು ಉದ್ಘರಿಸಿ ಹರಸಿದರು.ಹೈಸ್ಕೂಲ್ ಶಿಕ್ಷಣಕ್ಕಾಗಿ ಗದುಗಿಗೆ ಆಗಮಿಸಿದ ರಾಚಪ್ಪನವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಮುಂದೆ ಅವರು ಸಂಗೀತ ವಿದ್ಯೆಯಲ್ಲಿ ಹೆಚ್ಚಿನ ಸಾಧನೆ ಮಾಡಿ ಮುಂಬೈನ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ಸಂಗೀತ ವಿಶಾರದ ಮತ್ತು ವಿಜಾಪುರದ ಕರ್ನಾಟಕ ಪ್ರದೇಶ ಸಂಗೀತ ಸೇವಾ ಸಮಿತಿಯ ಕೆಂದ್ರದ ಸಂಗೀತ ಅಲಂಕಾರ ಪದವಿ ಪಡೆದುಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೃಷ್ಣಕುಮಾರಿ ದಕ್ಷಿಣ ಭಾರತ ಚಲನಚಿತ್ರರಂಗದ ಸುಂದರ ಪ್ರತಿಭಾವಂತ ಕಲಾವಿದೆ.

Mon Mar 6 , 2023
  ಕೃಷ್ಣಕುಮಾರಿ ದಕ್ಷಿಣ ಭಾರತ ಚಲನಚಿತ್ರರಂಗದ ಸುಂದರ ಪ್ರತಿಭಾವಂತ ಕಲಾವಿದೆ. ಭಕ್ತ ಕನಕದಾಸ ಚಿತ್ರದ “ಸಿಂಗಾರ ಶೀಲ, ಸಂಗೀತ ಲೋಲ”, ಸ್ವರ್ಣಗೌರಿ ಚಿತ್ರದ “ನುಡಿಮನ ಶಿವಗುಣ ಸಂಕೀರ್ತನ” ಮತ್ತು “ಜಯ ಗೌರಿ ಜಗದಶ್ವರಿ” ಗೀತೆಗಳಲ್ಲಿನ ಅವರ ಸುಂದರ ನೃತ್ಯ ಮತ್ತು ಭಾವಾಭಿವ್ಯಕ್ತಿ ಸೌಂದರ್ಯಗಳು ತಕ್ಷಣ ಕಣ್ಮುಂದೆ ಬರುತ್ತವೆ.ಕೃಷ್ಣಕುಮಾರಿ 1933ರ ಮಾರ್ಚ್ 6ರಂದು ಕೊಲ್ಕತ್ತಾ ಸಮೀಪದ ನೈಹಾತಿ ಎಂಬಲ್ಲಿ ಜನಿಸಿದರು. ಮತ್ತೋರ್ವ ಜನಪ್ರಿಯ ಕಲಾವಿದೆ ಸಾಹುಕಾರ್ ಜಾನಕಿ ಇವರ ಹಿರಿಯ ಸಹೋದರಿ.ರೂಪವತಿಯಾಗಿದ್ದ […]

Advertisement

Wordpress Social Share Plugin powered by Ultimatelysocial