ಚಿ. ಶ್ರೀನಿವಾಸರಾಜು ಕನ್ನಡಕ್ಕೆ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ

ಕನ್ನಡಕ್ಕೆ ಅಪಾರವಾದ ಸೇವೆಯನ್ನು ಸಲ್ಲಿಸಿ, ಕನ್ನಡಕ್ಕಾಗಿ ಯುವ ಪ್ರತಿಭೆಗಳ ಪಡೆಯನ್ನೇ ಸೃಷ್ಟಿಸಿ ಕನ್ನಡದ ಕಂಪು ಹೊಸ ತಲೆಮಾರುಗಳಲ್ಲಿ ಜೀವಂತವಾಗಿ ಉಳಿಯುವಂತೆ ಹಗಲಿರುಳು ದುಡಿದ ಮೇಷ್ಟ್ರು ಎಂದು ಪ್ರಖ್ಯಾತರಾದವರು ಚಿ. ಶ್ರೀನಿವಾಸರಾಜು. ಅವರು ವೃತ್ತಿಯಿಂದ ಪ್ರಾಧ್ಯಾಪಕರಾಗಿದ್ದರೂ, ಪ್ರವೃತ್ತಿಯಿಂದ ಸಾಹಿತ್ಯದ ಪರಿಚಾರಕರಾಗಿ ಬದುಕಿದವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.ಚಿ.ಶ್ರೀನಿವಾಸರಾಜು 1942ರ ನವೆಂಬರ್ 28ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ಇವರ ತಾಯಿ ಸಾವಿತ್ರಮ್ಮ, ತಂದೆ ವಿ. ಚಿಕ್ಕರಾಜು. ಕನ್ನಡದಲ್ಲಿ ಎಂ.ಎ. ಪದವಿ ಹಾಗು ಇಂಡಾಲಜಿಯಲ್ಲಿ ಡಿಪ್ಲೋಮಾ ಪಡೆದ ಶ್ರೀನಿವಾಸರಾಜು ಕ್ರೈಸ್ಟ್ ಕಾಲೇಜಿನಲ್ಲಿ ಪ್ರವಾಚಕರಾಗಿದ್ದರು. 1989ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದರು.ಚಿ.ಶ್ರೀನಿವಾಸರಾಜು ಅವರ ಶಾಲಾಭ್ಯಾಸ ಚಿಕ್ಕಬಳ್ಳಾಪುರದಲ್ಲೇ ನಡೆಯಿತು. ಹೈಸ್ಕೂಲು ಓದುತ್ತಿರುವ ದಿನಗಳಲ್ಲೇ ಕನ್ನಡದ ಗೀಳು ಹತ್ತಿಸಿಕೊಂಡ ಅವರು ‘ಶಾಲು ಜೋಡಿಗಳು’ ಎಂಬ ನಾಟಕ ರಚಿಸಿದ್ದರು.ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ. ಓದಿದ ಶ್ರೀನಿವಾಸರಾಜು, ನಂತರದಲ್ಲಿ ಕೆಲಕಾಲ ಲೋಹ ವಿಕಾಸ ಮಂಡಲಿಯಲ್ಲಿ ಸಾರಿಗೆ ಅಧಿಕಾರಿಯಾಗಿ ಉದ್ಯೋಗ ಮಾಡಿದರು. ಈ ಸಂದರ್ಭದಲ್ಲಿ ಅವರು ‘ಛಸನಾಲ ಬಂಧು’ ಎಂಬ ಕವನ ಸಂಕಲನ ಪ್ರಕಟಿಸಿದ್ದರು. ಮತ್ತೆ ಕನ್ನಡ ಓದುವ ಹಂಬಲದಿಂದ ಬಿ.ಎ., ಎಂ.ಎ. ಪದವಿ ಪಡೆದುದಲ್ಲದೆ, ಇಂಡಾಲಜಿಯಲ್ಲಿ ಡಿಪ್ಲೊಮ ಪದವಿಯನ್ನೂ ಪಡೆದರು. ಅವರು ಎಂ.ಎ. ತರಗತಿಯಲ್ಲಿದ್ದಾಗ ಜಿ.ಎಸ್. ಶಿವರುದ್ರಪ್ಪ, ಜಿ.ಪಿ.ರಾಜರತ್ನಂ. ಎಂ. ಚಿದಾನಂದ ಮೂರ್ತಿ ಅವರುಗಳು ಇವರ ಗುರುಗಳಾಗಿದ್ದರು.ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗಿಯಾಗುತ್ತಿದ್ದ ಚಿ.ಶ್ರೀನಿವಾಸರಾಜು ಅವರಿಗೆ ತಮ್ಮ ಗುರು ಜಿ.ಪಿ.ರಾಜರತ್ನಂ ಅವರಂತೆ ತಾವೂ ಕನ್ನಡದ ಪರಿಚಾರಕರಾಗಿ ದುಡಿಯಲು ಪ್ರೇರಣೆ ದೊರಕಿತು. ಕಾಲೇಜು ಹೊರಗೆ ಪಿ.ಪಿ (‘ಪ್ರೋಗ್ರೇಸಿವ್ ಪೀಪಲ್ಸ್’) ಎಂಬ ಬಳಗ ಕಟ್ಟಿ ಆ ಮೂಲಕ ‘ಅಂಕಣ’, ‘ಶೂದ್ರ’ ಪತ್ರಿಕೆಗಳ ಹುಟ್ಟಿಗೆ ಕಾರಣರಾದರು.ಎಂ. ಎ. ಪದವಿಯ ಫಲಿತಾಂಶದ ನಿರೀಕ್ಷೆಯಲ್ಲಿರುವಾಗಲೇ ಚಿ. ಶ್ರೀನಿವಾಸರಾಜು ಅವರಿಗೆ ಕ್ರೈಸ್ಟ್ ಕಾಲೇಜಿನಲ್ಲಿ ಅಧ್ಯಾಪಕರ ಹುದ್ದೆ ದೊರಕಿತು. ಕನ್ನಡದ ವಾತಾವರಣವೇ ಇಲ್ಲದ ಕಾಲೇಜಿನಲ್ಲಿ ಕನ್ನಡದ ಕಂಪನ್ನು ಹರಡಲು ಅವರು ಹತ್ತಾರು ಯೋಜನೆಗಳನ್ನು ಹಾಕಿಕೊಂಡರು. ‘ವಿಮೋಚನ’ ಪಾಕ್ಷಿಕ ಮತ್ತು ‘ಅಂಕಣ’ ಪತ್ರಿಕೆಗಳನ್ನು ಪ್ರಾರಂಭಿಸಿದ್ದಲ್ಲದೆ ‘ಕ್ರೈಸ್ತ್ ಕಾಲೇಜಿನ ಕನ್ನಡ ಸಂಘ’ದ ಹುಟ್ಟಿಗೆ ಕಾರಣರಾದರುಚಿ.ಶ್ರೀನಿವಾಸರಾಜು ಅವರು ಕ್ರೈಸ್ಟ್‌ ಕಾಲೇಜು ಕನ್ನಡ ಸಂಘದ ಮೂಲಕ, ದ.ರಾ. ಬೇಂದ್ರೆ ಕಾವ್ಯ ಸ್ಪರ್ಧೆ, ಅ.ನ.ಕೃ. ಲೇಖನ ಸ್ಪರ್ಧೆ ಮುಂತಾದ ಕಾರ್ಯ ಚಟುವಟಿಕೆಗಳ ಮೂಲಕ, ಹಾಗೂ ಇತರ ಹಲವಾರು ಸಂಘ ಸಂಸ್ಥೆಗಳ ಮೂಲಕ ಕನ್ನಡ ಸಾಹಿತ್ಯದ ಸೇವೆ ಮಾಡಿದರಲ್ಲದೆ, ಪುಸ್ತಕ ಪ್ರಕಟಣೆಯ ಸಂಸ್ಕೃತಿ ಅರಳಲು ಶ್ರಮಿಸಿದರು. ನೂರಾರು ಯುವ ಬರಹಗಾರರನ್ನು ಬೆಳಕಿಗೆ ತಂದರು. ಕನ್ನಡವನ್ನು ಬೆಳೆಸುವ, ಉಳಿಸುವ ಕೈಂಕರ್ಯವನ್ನು ತಮ್ಮ ಉಸಿರೆಂಬಂತೆ ಶ್ರದ್ಧೆಯಿಂದ ಮಾಡಿದ ಅವರು ಪರಿಚಾರಿಕೆಗೆ ಹೊಸ ಅರ್ಥ ತಂದು ಕೊಟ್ಟರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಶ್ರೀನಾಥ್ ಕನ್ನಡ ಚಿತ್ರರಂಗದ ಮೇರುನಟರಲ್ಲಿ ಒಬ್ಬರು.

Wed Dec 28 , 2022
ಶ್ರೀನಾಥರ ಅಣ್ಣ ಸಿ. ಆರ್. ಸಿಂಹ ರಂಗಭೂಮಿ, ಸಿನಿಮಾಗಳಲ್ಲಿ ದೊಡ್ಡ ಹೆಸರು. ಮುಂದೆ ಶ್ರೀನಾಥ್ ಆದ ಅಂದಿನ ನಾರಾಯಣಸ್ವಾಮಿ ಚಿಕ್ಕವನಿದ್ದಾಗ ಒಬ್ಬ ಹುಡುಗ ಸಿನಿಮಾ ಪೋಸ್ಟರ್ ಬಳಿಯುತ್ತಿದ್ದುದನ್ನು ನೋಡಿ ಅಲ್ಲಿನ ಚಿತ್ರಕ್ಕೆ ಮಾರು ಹೋಗಿ, ಇದೇನು ಇಲ್ಲಿರೋದು ಯಾರು ಅಂತ ಮುಗ್ಧಾಗಿ ಕೇಳಿದ. ಇದು ಸಿನಿಮಾದ್ದು ಅಂದಾಗ, “ನೋಡ್ತಾ ಇರು, ಒಂದಿನ ನಾನೂ ಆ ಪೋಸ್ಟರಿನಲ್ಲಿ ಇರ್ತೇನೆ” ಅಂತ ಹೇಳಿ, ಅದನ್ನೇ ತನ್ನ ಕನಸನ್ನಾಗಿಯೂ ಮಾಡಿಕೊಂಡ. ಮನೆಯಲ್ಲಿ ಸೌದೆ ತರಲು […]

Advertisement

Wordpress Social Share Plugin powered by Ultimatelysocial