ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು,

ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಮತ್ತೆ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದು ಸಾಮಾನ್ಯ ಕೋರಿಕೆ ವರ್ಗಾವಣೆ ಮೇಲೂ ಪರಿಣಾಮ ಬೀರಲಿದ್ದು, ಒಟ್ಟಾರೆ ವರ್ಗಾವಣೆ ಪ್ರಕ್ರಿಯೆಯೇ ಈ ಬಾರಿ ನಡೆಯುವುದಿಲ್ಲ ಎಂಬ ಸ್ಥಿತಿ ನಿರ್ವಣವಾಗಿದೆ.

ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಸೋಮವಾರ (ಜ.30) ಕೊನೆಯ ದಿನವಾಗಿದೆ. ಈ ಅವಧಿ ವಿಸ್ತರಣೆಯಾಗುತ್ತಾ? ಹೆಚ್ಚ್ಚುವರಿ ಪ್ರಕ್ರಿಯೆ ಬದಿಗಿಟ್ಟು ಕೋರಿಕೆ ವರ್ಗಾವಣೆ ನಡೆಸುತ್ತಾರಾ? ಅಥವಾ ಈಗ ಸಲ್ಲಿಸಿರುವ ಅರ್ಜಿಗಳು ನಿರುಪಯುಕ್ತವೇ? ಅರ್ಜಿ ಸಲ್ಲಿಸದಿದ್ದರೆ ಅವಕಾಶ ವಂಚಿತರಾಗುತ್ತೇವೆಯೇ?…. ಹೀಗೆ ಶಿಕ್ಷಕ ವರ್ಗದ ಹತ್ತಾರು ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿದೆ. ಇದಷ್ಟೇ ಅಲ್ಲದೆ, ಇಡೀ ಪ್ರಕ್ರಿಯೆಯಲ್ಲಿನ ಗೊಂದಲಗಳಿಗೆ ಪರಿಹಾರವೂ ಸಿಗುತ್ತಿಲ್ಲ. ಸೇವಾ ಮಾಹಿತಿ ವ್ಯತ್ಯಾಸ, ಅರ್ಜಿ ಸಲ್ಲಿಕೆಯಲ್ಲಿನ ಲೋಪದ ಕಾರಣ ಸಾವಿರಾರು ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರುಗಳ ಸಂಬಂಧಪಟ್ಟ ಬಿ.ಇ.ಒ ಲಾಗಿನ್​ನಲ್ಲಿನ ಇ.ಇ.ಡಿ.ಎಸ್(ಎಂಪ್ಲಾಯೀ ಡೇಟಾ ಸಿಸ್ಟಮ್ ನಲ್ಲಿ ಹಲವು ಶಿಕ್ಷಕರ ಸೇವಾ ಮಾಹಿತಿಯು ವ್ಯತ್ಯಾಸಗೊಂಡು ಅವರ ವೇಯ್ಟೇಡ್ ಸ್ಕೋರ್​ನಲ್ಲಿ ಏರುಪೇರಾಗಿದೆ. ಅರ್ಜಿ ಮಾಹಿತಿ ಲೋಪವಾಗುತ್ತಿರುವುದರಿಂದ ವರ್ಗಾವಣೆ ಅವಕಾಶ ಕೈತಪ್ಪಿಹೋಗಬಹುದೆಂಬ ಆತಂಕ ಮನೆ ಮಾಡಿದೆ. ಆನ್​ಲೈನ್ ವರ್ಗಾವಣೆ ಅರ್ಜಿ ಸಲ್ಲಿಸುವ ವೇಳೆ ಹಲವು ಅಂಗವಿಕಲರ, ದೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿರುವ, ನಿವೃತ್ತಿ ಅಂಚಿನಲ್ಲಿನಲ್ಲಿರುವ, ಹೆರಿಗೆ ರಜೆಯಲ್ಲಿರುವ ಮತ್ತು ಇತರೆ ಶಿಕ್ಷಕರ ಮಾಹಿತಿಯನ್ನು ಕಾಲಕಾಲಕ್ಕೆ ಅಪ್​ಡೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ವರ್ಗಾವಣಾ ಅರ್ಜಿಯಲ್ಲಿ ಲೋಪಗಳಾಗಿವೆ. ಈ ಮಾಹಿತಿ ಸರಿಪಡಿಸುವಂತೆ ಬಿ.ಇ.ಒ/ ಡಿ.ಡಿ.ಪಿ.ಐ ಹಾಗೂ ಆಯುಕ್ತರ ಕಚೇರಿಗಳಿಗೆ ಅಲೆದರೂ ಕೇಳುವವರೇ ಇಲ್ಲವಾಗಿದೆ.

ಏಕೆ ಹೀಗೆ..?: ಅನೇಕ ಶಿಕ್ಷಕರಿಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ತಿಳಿವಳಿಕೆ ಇಲ್ಲ. ಅಂತಹವರು ಬ್ರೌಸಿಂಗ್ ಸೆಂಟರ್ ಮೊರೆ ಹೋಗಿದ್ದಾರೆ. ಮಾಹಿತಿ ಅಪ್​ಲೋಡ್ ಆಗಿದ್ದರೂ ಕೆಲವರು ಸಬ್​ವಿುಟ್ ಮಾಡಿಲ್ಲ. ಸಲ್ಲಿಕೆ ಬಳಿಕ ಆಗಿರುವ ಲೋಪ ಸರಿಪಡಿಸಲು ಕಚೇರಿ ಅಲೆದರೂ ಅಧಿಕಾರಿಗಳು ಸೊಪ್ಪು ಹಾಕುತ್ತಿಲ್ಲ.

ಕಿರಿಯ ಶಿಕ್ಷಕರೇ ಹೆಚ್ಚುವರಿ!: ಶಾಲೆಯಲ್ಲಿ ನಿಯಮಾನುಸಾರವೇ ಹೆಚ್ಚುವರಿ ಪಟ್ಟಿ ಮಾಡಿದ್ದರೂ ಕಿರಿಯ ಶಿಕ್ಷಕರೇ ಹೆಚ್ಚುವರಿಯಾಗಿದ್ದಾರೆ. ಆದರೆ ಅಂತಹ ಶಿಕ್ಷಕರಿಗೆ ಏಕೆ ಹೀಗೆ ಎಂಬ ಸ್ಪಷ್ಟನೆ ಇಲ್ಲ. ಕಲ್ಯಾಣ ಕರ್ನಾಟಕ ಹಾಗೂ ಬೆಳಗಾವಿ ಭಾಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ವರ್ಗಾವಣೆ ಮಾನದಂಡ ಒಂದು ರೀತಿಯಾದರೆ ಚಿಕ್ಕಮಗಳೂರು, ಮಡಿಕೇರಿ ಭಾಗದಲ್ಲಿ ಇನ್ನೊಂದು ಮಾನದಂಡ ಅನುಸರಿಸಲಾಗಿದೆ ಎಂಬ ಆರೋಪವೂ ಕೇಳಿ ಬರುತ್ತಿವೆ.

ಮಂಜೂರಾದ ಹುದ್ದೆ ಪರಿಗಣನೆ ಇಲ್ಲ: ಹೆಚ್ಚುವರಿ ಪಟ್ಟಿ ಮಾಡಿ, ಅವರ ಮರು ಹೊಂದಾಣಿಕೆ ಮಾಡಿ ಬಳಿಕ ಕೋರಿಕೆ ವರ್ಗಾವಣೆ ಮಾಡಲಾಗುತ್ತದೆ. ಆದರೆ, ಮಂಜೂರಾದ ಹುದ್ದೆಗಳನ್ನು ಆಧರಿಸಿ ವರ್ಗಾವಣೆ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪವಿದೆ.

ಚುನಾವಣಾ ಆಯೋಗದ ನಿರ್ಬಂಧ:ವಿಧಾನಸಭೆ ಚುನಾವಣೆ ಹತ್ತಿರ ಬಂದಿರುವುದರಿಂದ ಚುನಾವಣಾ ಆಯೋಗ 35 ರಿಂದ 40 ಸಾವಿರ ಶಿಕ್ಷಕರನ್ನು ಈ ಪ್ರಕ್ರಿಯೆಗೆ ಬಳಸಿಕೊಳ್ಳಲು ಸನ್ನದ್ಧವಾಗಿದೆ. ಹೀಗಾಗಿ ಹೆಚ್ಚುವರಿ ವರ್ಗಾವಣೆ ಬಗ್ಗೆಯೂ ಶಿಕ್ಷಕರಿಗೆ ನಿಖರತೆ ಇಲ್ಲ, ಸಾಮಾನ್ಯ ಶಿಕ್ಷಕರ ವರ್ಗಾವಣೆಯ ಬಗ್ಗೆಯೂ ಮಾಹಿತಿ ಇಲ್ಲ.

ಬಡ್ತಿ ನೀಡದಿರುವುದು ಅಡ್ಡಿ:ಹೆಚ್ಚುವರಿ ಶಿಕ್ಷಕರ ವರ್ಗಾವಣೆ, ಸಾಮಾನ್ಯ ಶಿಕ್ಷಕರ ವರ್ಗಾವಣೆ ಮಾತ್ರವಲ್ಲ, ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರಿಂದ ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಿಂದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡದಿರುವುದು ಅನೇಕ ಎಡವಟ್ಟುಗಳಿಗೆ ಕಾರಣವಾಗಿವೆ. ಈ ಎಲ್ಲ ಸಮಸ್ಯೆಗಳು ವರ್ಗಾವಣೆಗೆ ದೊಡ್ಡ ಅಡ್ಡಿಯಾಗಿವೆ.

ಕೆಲಸ ಮಾಡಿದವರಿಗೂ ಶಿಕ್ಷೆ?: ಒಂದು ವರ್ಷದ ಹಿಂದೆ ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆದ ಕೆಲವರು ಕಷ್ಟಪಟ್ಟು ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿಸಿದ್ದಾರೆ. ಈಗ ಅಂತಹ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 250 ದಾಟಿರುವುದರಿಂದ ಆ ಶಾಲೆಗಳಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆ ಮಂಜೂರಾಗಿದೆ. ಈ ನೆಪದಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಲು ಕಾರಣರಾದ ಶಿಕ್ಷಕರನ್ನೇ ಶಿಕ್ಷಣ ಇಲಾಖೆ ಎತ್ತಂಗಡಿ ಮಾಡಿದೆ!!

ಕೊನೇ ದಿನದವರೆಗಿನ ಮಾಹಿತಿ ಪರಿಗಣಿಸಿ: ವರ್ಗಾವಣಾ ಅರ್ಜಿಯಲ್ಲಿ ಶಿಕ್ಷಕರು ಮಾಹಿತಿಯನ್ನು ಖುದ್ದು ನಮೂದಿಸಲು ಅವಕಾಶ ಕಲ್ಪಿಸುವುದು ಅಥವಾ ಇ.ಇ.ಡಿ.ಎಸ್ (ಎಂಪ್ಲಾಯೀ ಡೇಟಾ ಸಿಸ್ಟಮ್ ಮಾಹಿತಿಯನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಬಿ.ಇ.ಒ ಲಾಗಿನ್​ನಲ್ಲಿ ಅಪ್​ಡೇಟ್​ವಾಡಲು ಅವಕಾಶ ಕಲ್ಪಿಸಿ, ಕೊನೆಯ ದಿನಾಂಕದ ತರುವಾಯ ಮಾಹಿತಿಯನ್ನು ಒಂದುಬಾರಿ ಅಂತಿಮವಾಗಿ ಪಡೆಯಬೇಕೆಂಬ ಒತ್ತಡವೂ ಶಿಕ್ಷಣ ಇಲಾಖೆ ಮೇಲಿದೆ.

ಹೆಚ್ಚುವರಿಗೆ ಅಳತೆಗೋಲು ಯಾವುದು?: ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸದೆ ಸಾಮಾನ್ಯ ವರ್ಗಾವಣೆ ನಡೆಸಬೇಕೆ? ಬೇಡವೇ ಎಂಬ ತೀರ್ಮಾನ ತೆಗೆದುಕೊಂಡಿಲ್ಲ. 2021 ಡಿಸೆಂಬರ್ 21ರ ಗಡುವು ಆಧರಿಸಿ ತಯಾರಿಸಲಾದ ಹೆಚ್ಚುವರಿ ಪಟ್ಟಿಯನ್ನು 2022 ಜನವರಿ ವೇಳೆ ನಡೆಸುವ ಕೌನ್ಸೆಲಿಂಗ್​ಗೆ ಪರಿಗಣಿಸಿರುವುದು ಅವೈಜ್ಞಾನಿಕವಾಗಿದೆ. ಒಂದು ವರ್ಷದ ಹಿಂದಿನ ಮಕ್ಕಳ ದಾಖಲೆ ಸಂಖ್ಯೆಯನ್ನು ಈಗ ಅನ್ವಯಿಸುವುದು ಎಷ್ಟು ಸರಿ? ಈ ವರ್ಷದ ಶಾಲಾ ದಾಖಲಾತಿ ಪ್ರಮಾಣ ಅಳತೆಗೋಲಾಗಬೇಕೆ? ಬೇಡವೇ? ಎಂಬ ಪ್ರಶ್ನೆಗಳೂ ಈಗ ತಲೆದೋರಿವೆ.

70,000 ಆಕಾಂಕ್ಷಿಗಳು?:ಕಳೆದ ಬಾರಿ ಅಂದಾಜು 75 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದವು. ಆ ಪೈಕಿ 22 ಸಾವಿರ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ಸಿಕ್ಕಿತ್ತು. ಈ ಬಾರಿಯೂ 70 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆಗಳಿವೆ.

ವಿ.ಕೆ. ರವೀಂದ್ರ ಕೊಪ್ಪಳ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೖೆಸ್) 2011ರಲ್ಲಿ ನಡೆಸಿದ ಶಿಕ್ಷಕರ ನೇಮಕಾತಿಯಡಿ ಕೃಪಾಂಕ ಆಧಾರದಲ್ಲಿ ಆಯ್ಕೆಯಾದ ಬೋಧಕ ಸಿಬ್ಬಂದಿಯನ್ನು ಟಿಇಟಿ ಕಡ್ಡಾಯಗೊಳಿಸುವ ಮೂಲಕ ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ, ಇದೇ ಅವಧಿಯಲ್ಲಿ ನೇಮಕವಾದ ಪ್ರಾಚಾರ್ಯರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ನಿಯಮ ಸಡಿಲಗೊಳಿಸಿದ್ದು, ವಿಷಯ ಶಿಕ್ಷಕರಿಗೆ ಮಾತ್ರ ಕಡ್ಡಾಯಗೊಳಿಸಿರುವುದು ತಾರತಮ್ಯಕ್ಕೆ ಎಡೆಮಾಡಿದೆ.

ರಾಜ್ಯದ ವಸತಿ ಶಾಲೆಗಳಲ್ಲಿನ ನಾಲ್ಕು ಸಾವಿರ ಬೋಧಕ ಹಾಗೂ ಪ್ರಾಚಾರ್ಯರ ಹುದ್ದೆಗಳನ್ನು 2011ರಲ್ಲಿ ಭರ್ತಿ ಮಾಡಲಾಗಿದೆ. ಸೇವಾ ಕೃಪಾಂಕ ಸಂಬಂಧ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯದ ಸೂಚನೆ ಮೇರೆಗೆ 2016ರಲ್ಲಿ ಸೇವಾ ಕೃಪಾಂಕದಡಿ 630 ಬೋಧಕ ಹಾಗೂ ಪ್ರಾಚಾರ್ಯರು ನೇಮಕವಾಗಿದ್ದಾರೆ. 2011ರಲ್ಲಿ ಸಿಇಟಿ ತೇರ್ಗಡೆಯಾಗಿದ್ದರೂ 2016ರ ನೇಮಕ ಸಮಯದಲ್ಲಿ ಟಿಇಟಿ ಪಾಸಾಗುವ ಷರತ್ತಿಗೆ ಒಳಪಟ್ಟು ಇವರನ್ನು ನೇಮಿಸಿಕೊಳ್ಳಲಾಗಿದೆ. ಇದಕ್ಕೆ ಶಿಕ್ಷಕರೂ ಒಪ್ಪಿದ್ದಾರೆ. ಅಲ್ಲಿಂದ ಈವರೆಗೆ ಹಲವರು ತೇರ್ಗಡೆಯಾಗಿದ್ದಾರೆ. ಆದರೆ, 263 ಶಿಕ್ಷಕರು ಪಾಸಾಗದೆ ಉಳಿದಿದ್ದಾರೆ. ಕ್ರೖೆಸ್ ಇದೀಗ ಕೊನೇ ಅವಕಾಶ ನೀಡಿದ್ದು, ಟಿಇಟಿ ಉತ್ತೀರ್ಣರಾಗುವಂತೆ ಸೂಚಿಸಿದೆ. ಅಲ್ಲದೇ ಪರೀಕ್ಷಾ ತರಬೇತಿಯ 20,153 ರೂ. (ಪ್ರತಿ ಅಭ್ಯರ್ಥಿಗೆ) ವೆಚ್ಚವನ್ನು ಶಿಕ್ಷಕರೇ ಭರಿಸುವಂತೆ ಸೂಚಿಸಿದ್ದು, ಜ.31ರ ಗಡುವು ವಿಧಿಸಿದೆ.

2011ರಲ್ಲಿ ಕೇವಲ ಸಿಇಟಿ ಬರೆದು ನೇಮಕವಾದವರಿಗೆ ನಿಯಮದಂತೆ ಪರಿವೀಕ್ಷಣಾ ಅವಧಿ (ಪಿಪಿ) ಪೂರ್ಣಗೊಳಿಸಿದ್ದು, ಕಾಲಕಾಲಕ್ಕೆ ಬಡ್ತಿಯನ್ನೂ ನೀಡಲಾಗಿದೆ. ಆದರೆ, ಇವರೊಟ್ಟಿಗೆ ಸೇವಾ ಕೃಪಾಂಕದಡಿ ನೇಮಕವಾದ ಕೆಲವರಿಗೆ ಈವರೆಗೂ ಪಿಪಿ ಪೂರ್ಣಗೊಳಿಸಿಲ್ಲ, ಬಡ್ತಿಯನ್ನೂ ನೀಡಿಲ್ಲ. 630 ಅಭ್ಯರ್ಥಿಗಳ ಪೈಕಿ ಪ್ರಾಚಾರ್ಯರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಟಿಇಟಿ ನಿಯಮ ಸಡಿಲಿಕೆ ಮಾಡಿ ಪಿಪಿ ಪೂರ್ಣಗೊಳಿಸಿ, ಬಡ್ತಿಯನ್ನೂ ನೀಡಲಾಗಿದೆ. ಆದರೆ, 263 ವಿಷಯ ಶಿಕ್ಷಕರಿಗೆ ಷರತ್ತಿನಂತೆ ಶಿಕ್ಷಕರ ಅರ್ಹತಾ ಪರೀಕ್ಷೆ ತೇರ್ಗಡೆಯಾಗುವಂತೆ ತಾಕೀತು ಮಾಡಿದೆ.

ಅಸ್ಪಷ್ಟ ಭವಿಷ್ಯ: ಸಿಇಟಿ ಮೂಲಕ 2011ರಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. 2014ರಿಂದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಆರಂಭಿಸಿದ್ದು, ಅಲ್ಲಿಂದ ಪ್ರಸ್ತುತದವರೆಗೆ ಟಿಇಟಿ ತೇರ್ಗಡೆಯಾದವರಿಗೆ ಸಿಇಟಿ ಪರೀಕ್ಷೆ ನಡೆಸಿ ನೇಮಕಾತಿ ನಡೆಸಲಾಗುತ್ತಿದೆ. 2011ರ ನೇಮಕಾತಿ ಪ್ರಕರಣ ನ್ಯಾಯಾಲಯದಲ್ಲಿದ್ದ ಕಾರಣ 2016ರಲ್ಲಿ 630 ಜನರನ್ನು ನೇಮಿಸಲಾಗಿದೆ. ಅದರಲ್ಲಿ ಟಿಇಟಿ ತೇರ್ಗಡೆಯಾಗಬೇಕೆಂದು ಷರತ್ತು ವಿಧಿಸಿದೆ. ಒಂದೊಮ್ಮೆ ತೇರ್ಗಡೆಯಾಗದಿದ್ದರೆ ಮುಂದಿನ ಭವಿಷ್ಯ ಏನೆಂಬ ಬಗ್ಗೆ ಸ್ಪಷ್ಟನೆಯನ್ನೂ ನೀಡಿಲ್ಲ. ಇದರಿಂದ ಶಿಕ್ಷಕರು ಆತಂಕಕ್ಕೆ ಒಳಗಾಗಿದ್ದು ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಲು ಚಿಂತನೆ ನಡೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೂತನ ಮದ್ಯ ನೀತಿ ಬಿಜೆಪಿಗೆ ಅಧಿಕಾರ.

Mon Jan 30 , 2023
ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವು ತ್ವರಿತವಾಗಿ ಮದ್ಯ ನೀತಿ ಜಾರಿಗೊಳಿಸಿದರೆ, ಮತ್ತೊಮ್ಮೆ ಅಧಿಕಾರಕ್ಕೇರುವಲ್ಲಿ ಅನುಮಾನ ಇಲ್ಲ ಎಂದು ಪಕ್ಷದ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.ಭೋಪಾಲ್‌ನ ಅಯೋಧ್ಯ ನಗರದಲ್ಲಿರುವ ದೇವಾಲಯವೊಂದಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಒಂದುವೇಳೆ ನಿಯಂತ್ರಿತ ಮದ್ಯ ನೀತಿ ಜಾರಿಯಾದರೆ, ಬಿಜೆಪಿಯು ೨೦೦೩ರಲ್ಲಿ ಸಾಧಿಸಿದ ದಾಖಲೆಯ ಗೆಲುವನ್ನು ಪುನರಾವರ್ತಿಸಲಿದೆ ಎಂದು ಭವಿಷ್ಯ ನುಡಿದರು.ಇಲ್ಲಿನ ಸರ್ಕಾರವು ಹೊಸ ಮದ್ಯ ನೀತಿಯನ್ನು ಘೋಷಿಸಲು ಸಿದ್ಧತೆ ನಡೆಸಿದೆ. ಆದರೆ, ಯಾವಾಗ ಎಂದು […]

Advertisement

Wordpress Social Share Plugin powered by Ultimatelysocial