ಉದಯಶಂಕರ್ ಮಹಾನ್ ನೃತ್ಯ ಕಲಾವಿದ.

 

ಸಾಮಾನ್ಯವಾಗಿ ಪ್ರದರ್ಶನ ನೃತ್ಯ ಕಲೆಯಲ್ಲಿ ಹಿಂದಿನ ದಿನಗಳಲ್ಲಿ ಸ್ತ್ರೀಯರೇ ಹೆಚ್ಚು ಪ್ರಾಧಾನ್ಯತೆ ಪಡೆದಿದ್ದರು. ಪುರುಷರೂ ನೃತ್ಯ ಕಲೆಯಲ್ಲಿ ನುರಿತವರೆಂಬ ಸಂಗತಿ ಸಾಮಾನ್ಯಜನರ ಅನುಭವಕ್ಕೆ ಬಂದದ್ದೇ ಉದಯಶಂಕರನನ್ನು ನೋಡಿದ ಮೇಲೆ ಎಂಬ ಪ್ರತೀತಿ ಇದೆ. ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ಭಾರತೀಯ. ನೃತ್ಯ ಕಲಾವಿದರಲ್ಲಿ ಬಹುಶಃ ಮೊಟ್ಟಮೊದಲನೆಯವರು ಉದಯಶಂಕರ್.
ಉದಯಶಂಕರ್ 1900ರ ಡಿಸೆಂಬರ್ 8ರಂದು ಉದಯಪುರದಲ್ಲಿ ಜನಿಸಿದರು. ಅವರ ತಂದೆ ರಾಜಸ್ಥಾನದ ಝಲವಾರಾ ಪ್ರಾಂತ್ಯದ ದಿವಾನರಾಗಿದ್ದರು. ಬಾಲ್ಯದಲ್ಲಿಯೇ ಕಲೆಯತ್ತ ಒಲವನ್ನು ತೋರಿದ್ದ ಉದಯಶಂಕರರ ಶಿಕ್ಷಣಕ್ಕೆ ತಂದೆ ವಿಶೇಷ ಗಮನ ನೀಡಿದರು. ಉದಯ ಶಂಕರರಿಗೆ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ. ಅವರ ಪ್ರಾರಂಭದ ವಿದ್ಯಾಭ್ಯಾಸ ವಾರಣಾಸಿಯಲ್ಲಿ ನಡೆಯಿತು. ತರುವಾಯ ಮುಂಬಯಿಯ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್ ಸೇರಿದರು.
ಜೆ.ಜೆ. ಶಾಲೆಯ ಅಭ್ಯಾಸ ಮುಗಿದ ಮೇಲೆ ಚಿತ್ರಕಲೆ ಮತ್ತು ವಾಸ್ತುವಿನ್ಯಾಸದಲ್ಲಿ ಪ್ರೌಢಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿದರು. ಅಲ್ಲಿ ರಾಯಲ್ ಕಾಲೇಜ್ ಆಫ್ ಆರ್ಟ್ಸ್ ಸೇರಿದರು. ರಾಯಲ್ ಕಾಲೇಜಿನ ಪ್ರಾಚಾರ್ಯ ಸರ್ ವಿಲಿಯಂ ರಾಡನ್‌ಸ್ಟೀನ್ ಅವರು ಚಿತ್ರಕಲೆಯಲ್ಲಿ ತುಂಬಾ ಕೀರ್ತಿಗಳಿಸಿದ್ದರು. ಅವರು, ‘‘ಭಾರತೀಯ ಸಂಸ್ಕೃತಿಯೂ ಕಲೆಯೂ ತುಂಬ ಶ್ರೀಮಂತವಾಗಿವೆ, ಭವ್ಯವಾಗಿವೆ. ನೀವು ಅವುಗಳಿಂದಲೇ ವಸ್ತುಗಳನ್ನಾರಿಸಿಕೊಂಡು ಚಿತ್ರಿಸಿ’’ ಎಂದು ಹುರಿದುಂಬಿಸಿದರು. ‘‘ನನ್ನ ಸಾಧನೆಗೆಲ್ಲ ಮುಖ್ಯ ಕಾರಣರಾದವರು ಆ ಮಹನೀಯರೇ’’ ಎಂದು ಉದಯಶಂಕರ್ ಪದೇ ಪದೇ ನೆನೆಯುತ್ತಿದ್ದರು.
ಚಿತ್ರಕಲಾಭ್ಯಾಸಕ್ಕೆ ಬದ್ಧರಾಗಿದ್ದ ಉದಯಶಂಕರರಲ್ಲಿ ನರ್ತನಕಲೆಯ ಬಗೆಗೆ ಉತ್ಸಾಹ ಚಿಗುರೊಡೆದದ್ದು 1922ರಲ್ಲಿ ರಾಯಲ್ ಕಾಲೇಜಿನಲ್ಲಿ ಮೂರನೆಯ ವರ್ಷ ವ್ಯಾಸಂಗದಲ್ಲಿ ತೊಡಗಿದ್ದಾಗ. ಆ ವರ್ಷ ವೆಂಬ್ಲಿ ರಂಗಮಂಟಪದಲ್ಲಿ ಲೇಡಿ ದೊರಾಬ್ಜಿ ಟಾಟಾ ಅವರು ‘ಭಾರತದಿನ’ ಉತ್ಸವದ ಸಂದರ್ಭದಲ್ಲಿ ನೃತ್ಯಕಾರ್ಯವೊಂದನ್ನು ಏರ್ಪಡಿಸಿದ್ದರು. ಅದರಲ್ಲಿ ಉದಯಶಂಕರ್ ಆಕಸ್ಮಿಕವಾಗಿ ಭಾಗವಹಿಸಿದರು. ನರ್ತನ ಶಿಕ್ಷಣ ಇಲ್ಲದಿದ್ದರೂ ಉದಯಶಂಕರ್ ತುಂಬಾ ಭಾವಪೂರ್ಣವಾಗಿ, ಪರಿಣಾಮಕಾರಿಯಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಈ ಸಂದರ್ಭವೇ ಅವರ ನೃತ್ಯಜೀವನಕ್ಕೆ ನಾಂದಿಯಾಯಿತು.
ಉದಯಶಂಕರರು ಚಿತ್ರಕಲೆ, ಸಂಗೀತ, ವಸ್ತು ವಿನ್ಯಾಸ, ನೃತ್ಯಸಂಯೋಜನೆ ಮುಂತಾದ ಹಲವು ಕ್ಷೇತ್ರಗಳ ಮೇಲೆ ಪ್ರಭುತ್ವ ಸಾಧಿಸಿಕೊಂಡರು. ಚಿತ್ರಕಲೆಯಲ್ಲಿ ಅವರು ಪಡೆದ ದೀರ್ಘಕಾಲದ ತರಬೇತಿ ಅವರ ನೃತ್ಯ ಕಲೆಯ ಸಾಫಲ್ಯಕ್ಕೆ ನೆರವಾಯಿತು.
ಚಿತ್ರಕಲೆಯಲ್ಲಿ ತೇರ್ಗಡೆಯಾದ ಮೇಲೆ ಉದಯಶಂಕರ್ ಅವರಿಗೆ ಆಕಸ್ಮಿಕವಾಗಿ ರಷ್ಯದ ಪ್ರಸಿದ್ಧ ಬ್ಯಾಲೆ ಕಲಾವಿದೆ ಆನಾ ಪಾವ್ಲೊವಾಳ ಭೇಟಿ ಆಯಿತು. ಪಾವ್ಲೊವಾ ಪರಿಚಯ ಉದಯಶಂಕರರ ಜೀವನಕ್ಕೆ ಹೊಸ ತಿರುವು ಕೊಟ್ಟಿತು. ಪಾವ್ಲೊವಾ ವಿಶ್ವವಿಖ್ಯಾತ ಬ್ಯಾಲೆನರ್ತಕ ವಾಸ್ಲಾವ್ ನಿಜಿನ್‌ಸ್ಕಿಯೊಡನೆ ನರ್ತಿಸಿದ್ದವಳು; ಆಕೆ ಬ್ಯಾಲೆಯ ಹೆಸರನ್ನೂ ಕೇಳಿರದ ಊರೂರು ಹಳ್ಳಿಹಳ್ಳಿಗೂ ನರ್ತನವನ್ನು ಒಯ್ಯಲು ಹಂಬಲಿಸಿದ್ದವಳು. ಸಂಚಾರಸೌಕರ್ಯಗಳಿಲ್ಲದ ಆ ಕಾಲದಲ್ಲಿ ಎಂಟುಲಕ್ಷ ಕಿಲೋಮೀಟರಿಗೂ ಹೆಚ್ಚು ಆಕೆ ಪಯಣಿಸಿದಳೆಂಬುದರಿಂದ ಆಕೆಯ ನರ್ತನೋತ್ಸಾಹವನ್ನು ಊಹಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಫಸ್ಟ್ ಲುಕ್ ನಲ್ಲೇ ಕುತೂಹಲ ಮೂಡಿಸಿದ "ಟೆರರ್".

Sat Dec 24 , 2022
ಆದಿತ್ಯ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಚಿತ್ರಕ್ಕೆ ಜನವರಿಯಲ್ಲಿ ಮುಹೂರ್ತ.ತಮ್ಮ ಅಭಿನಯದ ಮೂಲಕ ಜನಮನ ಗೆದ್ದಿರುವ ಆದಿತ್ಯ ನಾಯಕರಾಗಿ ನಟಿಸುತ್ತಿರುವ,”ಟೆರರ್” ಚಿತ್ರದ ಫಸ್ಟ್ ಲುಕ್ ಹಾಗೂ ಕ್ಯಾರೆಕ್ಟರ್ ಟೀಸರ್ ಲಹರಿ ಮ್ಯೂಸಿಕ್ ಯೂಟ್ಯೂಬ್ ಮೂಲಕ ಬಿಡುಗಡೆಯಾಗಿದೆ. ಜನವರಿಯಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಈ ಚಿತ್ರದ ಫಸ್ಟ್ ಲುಕ್ ಅದ್ದೂರಿಯಾಗಿ ಬಂದಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.ಉಪೇಂದ್ರ ಅಭಿನಯದ “A” ಚಿತ್ರ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳನ್ನು ನಿರ್ಮುಸಿರುವ ಸಿಲ್ಕ್ ಮಂಜು […]

Advertisement

Wordpress Social Share Plugin powered by Ultimatelysocial