ಜೂ. 9ರಿಂದ ಪಿಯು ತರಗತಿ ಆರಂಭ, ಸಮವಸ್ತ್ರ ಕಡ್ಡಾಯ

ಬೆಂಗಳೂರು, ಮೇ 18: ಹಿಜಾಬ್ ವಿವಾದದಲ್ಲಿ ಕರ್ನಾಟಕ ಹೈಕೋರ್ಟ್‌ ಆದೇಶದ ನಂತರ, 2022-23ನೇ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಸೂಚಿಸಿದ ಸಮವಸ್ತ್ರ ಧರಿಸುವುದು ಕಡ್ಡಾಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಇಡೀ ದೇಶದ ಗಮನ ಸೆಳೆದಿದ್ದ ‘ಹಿಜಾಬ್’ ವಿವಾದದಂತ ಘಟನೆ ಮರುಕಳಿಸದಿರಲು ಸರ್ಕಾರ ಮುಂಜಾಗ್ರತೆ ವಹಿಸಲು ತೀರ್ಮಾನಿಸಿದೆ. ಸಮವಸ್ತ್ರ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಿದೆ. ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಸೂಚಿಸುವ ಸಮವಸ್ತ್ರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶ ನೀಡಿದೆ.

ಒಂದು ವೇಳೆ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಯಾವುದೇ ಸಮವಸ್ತ್ರ ಸೂಚಿಸದಿದ್ದರೆ, “ಸಮಾನತೆ ಮತ್ತು ಏಕತೆಯನ್ನು ಕಾಪಾಡುವ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದ” ಉಡುಪನ್ನು ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಮೇ 19ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದ್ದು, ಜೂನ್ 1ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜೂನ್ 9ರಿಂದ ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳು ಆರಂಭವಾಗಲಿವೆ. ದಂಡ ಶುಲ್ಕವಿಲ್ಲದೆ ಪಿಯು ತರಗತಿಗೆ ದಾಖಲಾತಿ ಪಡೆಯಲು ಜೂನ್ 15 ಕೊನೆಯ ದಿನಾಂಕವಾಗಿದೆ.

ಜೂನ್ 9ರಿಂದ ಸೆಪ್ಟಂಬರ್ 30ರವರೆಗೆ ಶೈಕ್ಷಣಿಕ ವರ್ಷದ ಮೊದಲ ಅವಧಿ ನಡೆಯಲಿದ್ದು, ಎರಡನೇ ಅವಧಿಯನ್ನು ಅಕ್ಟೋಬರ್ 13ರಿಂದ 2023ರ ಮಾರ್ಚ್‌ 31ರವರೆಗೆ ನಿಗದಿಪಡಿಸಲಾಗಿದೆ. ಅಕ್ಟೋಬರ್ 1ರಿಂದ 12 ರವೆರೆಗೆ ಮಧ್ಯಂತರ ರಜೆ ಇದ್ದು, 2023 ಏಪ್ರಿಲ್ 1ರಿಂದ ಬೇಸಿಗೆ ರಜೆ ಶುರುವಾಗಲಿದೆ.

ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ಸರ್ಕಾರ ಫೆಬ್ರವರಿಯಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ತಾನು ನಿಗದಿಪಡಿಸಿದ ಸಮವಸ್ತ್ರ ಅಥವಾ ಖಾಸಗಿ ಕಾಲೇಜು ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರ ಕಡ್ಡಾಯ ಎಂದು ಆದೇಶ ಮಾಡಿತ್ತು.

ಹೈಕೋರ್ಟ್ ಮೆಟ್ಟಿಲೇರಿದ್ದ ‘ಹಿಜಾಬ್’ ಪ್ರಕರಣ; ಸರ್ಕಾರದ ಆದೇಶ ವಿರೋಧಿಸಿ ತರಗತಿಯಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಬೇಕು ಎಂದು ವಿದ್ಯಾರ್ಥಿನಿಯರು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ ಮಾರ್ಚ್‌ 15ರಂದು ವಿದ್ಯಾರ್ಥಿಗಳ ಅರ್ಜಿಯನ್ನು ವಜಾಗೊಳಿಸಿ ಸರ್ಕಾರದ ಆದೇಶವನ್ನು ಪಾಲಿಸಲು ಸೂಚಿಸಿತ್ತು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಶಾಲಾ ಸಮವಸ್ತ್ರದ ನಿಯಮ ಸಾಂವಿಧಾನಿಕವಾಗಿದೆ. ಸಮವಸ್ತ್ರದ ನಿಯಮಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ ಎಂದು ಹೇಳಿತ್ತು.

ಹೈಕೋರ್ಟ್‌ ತೀರ್ಪಿನ ನಂತರವೂ 10ನೇ ತರಗತಿ, ಪ್ರಥಮ ಮತ್ತು ದ್ವಿತೀಯ ಪಿಯು ಪರೀಕ್ಷೆ ಬರೆಯಲು ಹಿಜಾಬ್ ಧರಿಸಲು ಅನುಮತಿ ನೀಡಬೇಕು ಎಂದು ಹಲವು ವಿದ್ಯಾರ್ಥಿನಿಯರು ಒತ್ತಾಯಿಸಿದ್ದರು. ಆದರೆ ಸರ್ಕಾರ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿದ ಕಾರಣ ಹಲವರು ಪರೀಕ್ಷೆಗೆ ಗೈರಾಗಿದ್ದರು.

ವಿವಾದದ ಕೇಂದ್ರವಾದ ಕರ್ನಾಟಕ; ರಾಜ್ಯದಲ್ಲಿ ‘ಹಿಜಾಬ್’ ವಿವಾದದ ನಂತರ ಹಲವು ಕಾರಣಳಿಂದಾಗಿ ಸುದ್ದಿಯಾಗುತ್ತಲೇ ಇದೆ. ರಾಜ್ಯದಲ್ಲಿ ಶುರುವಾದ ಧಾರ್ಮಿಕ ವಿವಾದಗಳು ದೇಶಾದ್ಯಂತ ಸದ್ದು ಮಾಡಿದ್ದವು. ರಾಷ್ಟ್ರ ಮಟ್ಟದಲ್ಲಿ ವಿವಾದಗಳ ಬಗ್ಗೆ ಪರ-ವಿರೋಧದ ಬಗ್ಗೆ ಚರ್ಚೆಯಾಯಿತು.

ಜಾತ್ರೆಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ, ಹಲಾಲ್ ಮಾಂಸ ನಿಷೇಧ, ಜಟ್ಕಾ ಕಟ್ ಮಾಂಸ ಮಾರಾಟ ಸೇರಿ ಬಿಜೆಪಿ ನಾಯಕರ ಹೇಳಿಕೆಗಳು, ಹಿಂದೂ ಪರ ಸಂಘಟನೆಗಳ ಮುಖಂಡರ ಹೇಳಿಕೆಗಳು ರಾಜ್ಯದಲ್ಲಿ ವಿವಾದದ ಕಿಡಿಯನ್ನು ಹೊತ್ತಿಸಿದ್ದವು.

ರಾಜ್ಯದಲ್ಲಿ ಮತ್ತೆ ‘ಹಿಜಾಬ್’ ವಿವಾದ ಮುನ್ನೆಲೆಗೆ ಬರದಂತೆ ತಡೆಯಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು. ಮುಂಜಾಗ್ರತಾ ಕ್ರಮವಾಗಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂದುವರಿದ ಭಾರೀ ಮಳೆ: ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ...

Thu May 19 , 2022
ಮಂಗಳೂರು/ ಶಿವಮೊಗ್ಗ: ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಮೈಸೂರು, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಒಂದು ದಿನ (ಮೇ.19) ರಜೆ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬುಧವಾರ ರಾತ್ರಿಯಿಂದ ನಿರಂತರವಾಗಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಸೇರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರ […]

Advertisement

Wordpress Social Share Plugin powered by Ultimatelysocial