ವೈರಮುಡಿ ಬ್ರಹ್ಮೋತ್ಸವ

 
ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಮೇಲುಕೋಟೆಯಲ್ಲಿನ ಬ್ರಹ್ಮೋತ್ಸವ ಕಾರ್ಯಕ್ರಮಗಳು ಪ್ರಸಿದ್ಧವಾಗಿವೆ.
ಭೂ ವೈಕುಂಠ ಎಂಬ ಖ್ಯಾತಿಯ ಮಂಡ್ಯ ಜಿಲ್ಲೆ ಮೇಲುಕೋಟೆ ಹಲವು ಹತ್ತು ಪುರಾಣೇತಿಹಾಸಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಪ್ರಮುಖ ಧಾರ್ಮಿಕ ಕ್ಷೇತ್ರ.
ಯಾದವಾದ್ರಿ, ನಾರಾಯಣಾದ್ರಿ, ಯತಿಶೈಲ, ತಿರುನಾರಾಯಣಪುರ, ಯದುಗಿರಿ, ದಕ್ಷಿಣ ಬದರಿ ಕ್ಷೇತ್ರ … ಹೀಗೆ ಹಲವಾರು ಹೆಸರುಗಳೂ ಇದಕ್ಕಿವೆ. ಇದು ದಕ್ಷಿಣ ಭಾರತದ ಬಹು ಮುಖ್ಯ ನಾಲ್ಕು ವೈಷ್ಣವ ಕ್ಷೇತ್ರಗಳಲ್ಲೊಂದು (ಇನ್ನುಳಿದವು ಶ್ರೀರಂಗಂ, ತಿರುಪತಿ, ಕಂಚಿ).
ಇಂಥ ಪುಣ್ಯಕ್ಷೇತ್ರದ ಆರಾಧ್ಯ ದೈವ ಶ್ರೀ ಚೆಲುವನಾರಾಯಣಸ್ವಾಮಿಗೆ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹತ್ತು ದಿನ ಬಹು ವಿಜಂಭಣೆಯಿಂದ ವೈರಮುಡಿ ಬ್ರಹ್ಮೋತ್ಸವ ನಡೆಯುತ್ತದೆ.
ಇದು ಕರ್ನಾಟಕದ ಅತ್ಯಂತ ಭವ್ಯ ಧಾರ್ಮಿಕ ಆಚರಣೆಯಲ್ಲೊಂದು. ಅಷ್ಟೇ ಅಲ್ಲ, ಒಡವೆ, ವೈಢೂರ್ಯಗಳಿಂದಲೇ ಆರಂಭವಾಗುವ ಇಲ್ಲಿನ ವಿಶೇಷ ಪೂಜಾ ಪದ್ಧತಿಗಳು ಮತ್ತು ಕಣ್ಮನ ಸೆಳೆವ ಅತ್ಯದ್ಭುತ ಆಭರಣಗಳು ವೈರಮುಡಿ ಉತ್ಸವದ ಆಕರ್ಷಣೆ. ಒಂದು ರೀತಿ ಆಭರಣಗಳ ಹೆಸರಿನಲ್ಲಿ ನಡೆಯುವ ವೈರಮುಡಿ ಉತ್ಸವವೇ ಹಾಗೆ; ಬಹು ವೈಭವೋಪೇತ, ಹಾಗಾಗಿ ಇದು ಜಗತ್ಪ್ರಸಿದ್ಧ.
ವೈರಮುಡಿ ಎಂಬುದು ಹೆಸರೇ ಹೇಳುವಂತೆ ವಜ್ರಾಭರಣವಾದ ಒಂದು ಕಿರೀಟ. ಆದರೆ ಅಂತಿಂಥದ್ದಲ್ಲ, ದೈವಶಕ್ತಿಯ ಮಹಾಮಹಿಮೆಯ ಕಿರೀಟವಿದು ಎಂಬ ನಂಬಿಕೆಯೂ ಇದೆ. ಇದರ ಹಿಂದೊಂದು ಪೌರಾಣಿಕ ಕಥೆಯುಂಟು.
ಒಮ್ಮೆ ವಿಷ್ಣು ಭಕ್ತ ಪ್ರಹ್ಲಾದನ ಮಗ ವಿರೋಚನ ಈ ವೈರಮುಡಿಯನ್ನು ಅಪಹರಿಸಿ ಪಾತಾಳದಲ್ಲಿ ಅಡಗಿಸಿಟ್ಟುಕೊಳ್ಳುತ್ತಾನೆ. ವಿಷಯ ತಿಳಿದ ವಿಷ್ಣುವಿನ ವಾಹನನಾದ ವೈನತೇಯ (ಗರುಡ) ವೀರೋಚನನೊಡನೆ ಯುದ್ಧ ಮಾಡಿ ಗೆದ್ದು ವೈರಮುಡಿಯೊಡನೆ ಶರವೇಗದಲ್ಲಿ ಆಕಾಶ ಮಾರ್ಗವಾಗಿ ಬರುವಾಗ ಇದ್ದಕ್ಕಿದ್ದಂತೆ ವೇಗ ಕಡಿಮೆಯಾಗುತ್ತದೆ. ಈ ಸ್ಥಳ ಯಾವುದು ಎಂದು ಗಮನಿಸಿದಾಗ ಅದು ಮಥುರಾ ನಗರವಾಗಿರುತ್ತದೆ.
ಅಲ್ಲಿ ವೈನತೇಯನು ಭಗವಾನ್ ಕೃಷ್ಣನಿಗೆ ವೈರಮುಡಿಯನ್ನು ಅರ್ಪಿಸುತ್ತಾನೆ. ಆದರೆ ಶ್ರೀ ಕೃಷ್ಣನ ಶಿರದಲ್ಲಿ ವೈರಮುಡಿ ಸರಿಯಾಗಿ ಕೂರುವುದಿಲ್ಲ. ಆಗ ಕೃಷ್ಣನೇ ಇದನ್ನು ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ಒಪ್ಪಿಸಬೇಕೆಂದು ವೈನತೇಯನಿಗೆ ಹೇಳುತ್ತಾನೆ.
ಅದರಂತೆ ವೈನತೇಯ ಮೇಲುಕೋಟೆಗೆ ಬಂದು ವೈರಮುಡಿಯನ್ನು ಚೆಲುವನಾರಾಯಣಸ್ವಾಮಿಯ ಶಿರಕ್ಕೆ ಸಮರ್ಪಿಸಿದಾಗ ಅದು ಬಹು ಭವ್ಯವಾಗಿ ಅಲಂಕೃತಗೊಳ್ಳುತ್ತದೆ. ಇದರಿಂದ ಅತ್ಯಂತ ಹರ್ಷಗೊಂಡ ವೈನತೇಯನು ಚೆಲುವನಾರಾಯಣಸ್ವಾಮಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ದೇವಾಲಯದ ಸುತ್ತಲೂ ಮೆರವಣಿಗೆ ಮಾಡಿ ಭಕ್ತರಿಗೆ ಪರಮಾತ್ಮನ ದಿವ್ಯ ದರ್ಶನವನ್ನು ಮಾಡಿಸಿದನಂತೆ.
ಮತ್ತೊಂದು ಐತಿಹ್ಯದ ಪ್ರಕಾರ ದ್ವಾರಕೆಯಿಂದ ತಿರುನಾರಾಯಣಪುರಕ್ಕೆ ಸ್ವತಃ ಶ್ರೀ ಕೃಷ್ಣನೇ ಬಂದು ತನಗೆ ಅರ್ಪಿತವಾದ ವೈರಮುಡಿಯನ್ನು ಚೆಲುವರಾಯನಿಗೆ ಅರ್ಪಿಸುತ್ತಾನೆ. ಹೀಗೆ ಅಂದು ವೈನತೇಯ (ಗರುಡ) ಚೆಲುವನಾರಾಯಣಸ್ವಾಮಿಯನ್ನು ಹೆಗಲ ಮೇಲಿರಿಸಿಕೊಂಡು ಉತ್ಸವ ಮಾಡಿದ ಕಾರಣ ಇಂದಿಗೂ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ಗರುಡ ವಾಹನದ ಮೇಲೆಯೇ ಜರುಗುತ್ತದೆ. ಇದೇ ಬ್ರಹ್ಮೋತ್ಸವ.
ಸಮದ್ಧಿ ಮತ್ತು ಸಂಪತ್ತು ಹಾಗೂ ಸಂಭ್ರಮದ ಸಂಕೇತವಾದ ನವಧಾನ್ಯಗಳ ಅಂಕುರಾರ್ಪಣೆಯೊಂದಿಗೆ ಫಾಲ್ಗುಣ ಪುಷ್ಯ ನಕ್ಷತ್ರ (ಮೀನ) ದಲ್ಲೇ ವೈರಮುಡಿ ಪ್ರಾರಂಭವಾಗುತ್ತದೆ.
ಮೊದಲಿಗೆ ಗರುಡನಿಗೆ ಪೂಜೆ ಸಲ್ಲಿಸಿ ಮೇಲುಕೋಟೆ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಮೂರನೆಯ ದಿನ ಕಲ್ಯಾಣೋತ್ಸವ, ನಾಲ್ಕನೆಯ ದಿನ ವಸಂತೋಧ್ಯಾನ ಮತ್ತಿತರ ಮಂಟಪಗಳಿಗೆ ಚೆಲುವನಾರಾಯಣಸ್ವಾಮಿಯ ಮೆರವಣಿಗೆ ಹೋಗುತ್ತದೆ.
ಬ್ರಹ್ಮೋತ್ಸವದ ಬಹುಮುಖ್ಯ ದಿನವೇ ವೈರಮುಡಿ ಉತ್ಸವ. ಅಂದು ವೈರಮುಡಿ, ರಾಜ ಒಡೆಯರು ಕೊಟ್ಟಿರುವ ರಾಜಮುಡಿ, ಮುಮ್ಮಡಿ ಕೃಷ್ಣರಾಜ ಒಡೆಯರು ನೀಡಿರುವ ಕೃಷ್ಣಮುಡಿ ಮತ್ತು ರಾಜ ಪರಂಪರೆಯಿಂದ ಬಂದಿರುವ ನವರತ್ನ ಖಚಿತ ಪದ್ಮಪೀಠ, ಅರಳೆಲೆ ಪದಕ, ಮುತ್ತುರತ್ನಗಳ ಕರ್ಣಕುಂಡಲಗಳು, ಮುತ್ತಿನ ಮಣಿಕಟ್ಟು, ಗಂಡಭೇರುಂಡದ ವಜ್ರಾಹಾರ, ಮುತ್ತು ಮತ್ತು ಪಚ್ಚೆ ಕಲ್ಲಿನ ಕೂರಂಬ, ಶಂಖ, ಚಕ್ರ, ಗದೆ ಸೇರಿದಂತೆ ಬೆಲೆ ಕಟ್ಟಲಾಗದ ಅತ್ಯಮೂಲ್ಯ, ಅತ್ಯಪೂರ್ವ ಇಪ್ಪತ್ನಾಲ್ಕು ಆಭರಣಗಳನ್ನು ಭದ್ರತೆಯೊಡನೆ ಜಿಲ್ಲಾ ಖಜಾನೆಯಿಂದ ವಿಶೇಷ ಪೆಟ್ಟಿಗೆಯಲ್ಲಿ ತಂದು ಶ್ರೀ ರಾಮಾನುಜರ ಗುಡಿಯಲ್ಲಿ ಇಡುತ್ತಾರೆ.
ಅಂದು ಸಂಜೆಯ ಶುಭ ಮುಹೂರ್ತದಲ್ಲಿ ಪ್ರಧಾನ ಅರ್ಚಕರು ತಮ್ಮ ಕಣ್ಣಿಗೆ ರೇಷ್ಮೆ ವಸ್ತ್ರ ಕಟ್ಟಿಕೊಂಡು ವೈರಮುಡಿಯನ್ನು ಪೆಟ್ಟಿಗೆಯಿಂದ ಹೊರತೆಗೆದು ಶ್ರೀ ಚಲುವನಾರಾಯಣಸ್ವಾಮಿಯ ಶಿರದ ಮೇಲಿಟ್ಟು ಇತರ ಆಭರಣಗಳಿಂದ ಅಲಂಕರಿಸುತ್ತಾರೆ. ನಂತರ ಉತ್ಸವ ಹೊರಡುತ್ತದೆ. ಭಕ್ತರ ಪಾಲಿಗಂತೂ ಅದು ಸಾಕ್ಷಾತ್ ವೈಕುಂಠವೇ ಧರೆಗಿಳಿದಂತೆ. ಹೀಗೆ ಆರಂಭವಾಗುವ ವೈರಮುಡಿ ಬ್ರಹ್ಮೋತ್ಸವ ರಾತ್ರಿ ಸುಮಾರು 9 ಗಂಟೆಯಿಂದ ಬೆಳಗಿನ ಜಾವ 3 ಗಂಟೆವರೆಗೂ ಜರುಗುತ್ತದೆ.
ಕಣ್ಣು ಕೋರೈಸುವ ಈ ವಜ್ರ ಕಿರೀಟವನ್ನು ಕಣ್ಣಿನಿಂದ ನೋಡಿ ಧನ್ಯರಾಗಬಹುದೇ ಹೊರತು ಯಾರೂ ಇದನ್ನು ಕೈಯಲ್ಲಿ ಮುಟ್ಟಬಾರದೆಂಬ ನಂಬಿಕೆ ಇಲ್ಲಿನದು. ಸಾಕ್ಷಾತ್ ಆದಿಶೇಷನೇ ವೈರಮುಡಿ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಒಂದು ಕಾಲದಲ್ಲಿ ಈ ವಜ್ರಮಯ ವೈರಮುಡಿ ದೆಹಲಿ ಸುಲ್ತಾನರ ಕೈವಶವಾಗಿತ್ತು. ಆಚಾರ್ಯ ಶ್ರೀರಾಮಾನುಜರೇ ಇದನ್ನು ದೆಹಲಿಯಿಂದ ಮೂಲ ವಿಗ್ರಹದೊಂದಿಗೆ ಇಲ್ಲಿಗೆ ತಂದರೆಂದು ಹೇಳಲಾಗುತ್ತದೆ. ನಂತರ ವೈರಮುಡಿಯನ್ನು ಮೈಸೂರು ಅರಸರ ವಶಕ್ಕೆ ಒಪ್ಪಿಸಲಾಗಿತ್ತು. ಮುಂದೆ ಮಂಡ್ಯ ಜಿಲ್ಲಾ ಖಜಾನೆಯಲ್ಲಿ ವಿಶೇಷ ಭದ್ರತೆಯಲ್ಲಿ ಇದನ್ನು ಇಡುತ್ತ ಬರಲಾಗುತ್ತಿದೆ.
ಆದಿಶೇಷನ ಅವತಾರಿ ಆಚಾರ್ಯ ಶ್ರೀರಾಮಾನುಜರು ಆರಂಭಿಸಿದ ವೈರಮುಡಿ ಉತ್ಸವ ಪ್ರತಿ ವರ್ಷ ಅದೇ ಮುಹೂರ್ತದಲ್ಲಿ ಮೇಲುಕೋಟೆಯಲ್ಲಿ ಸಾಂಗವಾಗಿ ನಡೆಯುತ್ತಾ ಬಂದಿದೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PAK vs AUS: ವಜಾಗೊಳಿಸಿದ ನಂತರ ಹಸನ್ ಅಲಿ ಅವರ ಟ್ರೇಡ್ಮಾರ್ಕ್ ಆಚರಣೆಯನ್ನು ಉಲ್ಲಾಸದಿಂದ ಅನುಕರಿಸಿದ,ಡೇವಿಡ್ ವಾರ್ನರ್!

Sat Mar 26 , 2022
ಲಾಹೋರ್‌ನಲ್ಲಿ ನಡೆದ ಕೊನೆಯ ಪಂದ್ಯದ ಐದನೇ ದಿನದಂದು 115 ರನ್‌ಗಳ ಜಯದೊಂದಿಗೆ ಮೂರು ಟೆಸ್ಟ್‌ಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಳ್ಳುವ ಮೂಲಕ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಜಯ ಸಾಧಿಸಿದೆ. ಮೊದಲ ಎರಡು ಟೆಸ್ಟ್‌ಗಳು ಡ್ರಾದಲ್ಲಿ ಕೊನೆಗೊಂಡ ನಂತರ, ಇತ್ತೀಚಿನದು ಗುರುವಾರ ಪ್ಯಾಟ್ ಕಮ್ಮಿನ್ಸ್ ಅವರ ದಿಟ್ಟ ಘೋಷಣೆಯನ್ನು ಕಂಡಿತು. ಆತಿಥೇಯ ಪಾಕಿಸ್ತಾನವು 351 ರನ್‌ಗಳ ಸವಾಲಿನ ಗುರಿಯನ್ನು ಜಯಿಸಬೇಕಾಗಿತ್ತು ಆದರೆ ನಾಥನ್ ಲಿಯಾನ್ ತಮ್ಮ 19 ನೇ ಐದು […]

Advertisement

Wordpress Social Share Plugin powered by Ultimatelysocial