ಪರಿಶಿಷ್ಟ ಜಾತಿ ಯುವತಿ ಕೊಲೆ?; ಲಿಂಗಾಯತ ಯುವಕನ ವಿರುದ್ಧ ಎಫ್‌ಐಆರ್

 

 

ಬೆಂಗಳೂರು: ವಿಜಯಪುರ ಜಿಲ್ಲೆಯ ತಾಳಿಕೋಟೆಯ ಉಪ ತಹಶೀಲ್ದಾರ್ ಅಶೋಕ ಶರ್ಮಾ ಅವರ ಮಗಳು ದಾನೇಶ್ವರಿ (23) ಅನುಮಾನಾಸ್ಪದ ರೀತಿಯಲ್ಲಿ ನಗರದಲ್ಲಿ ಮೃತಪಟ್ಟಿದ್ದಾರೆ. ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿ ಅವರ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ.’ವಿಜಯಪುರ ಬಿಎಲ್‌ಡಿಇಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ದಾನೇಶ್ವರಿ, ಉದ್ಯೋಗಕ್ಕೆ ಪೂರಕ ಕೋರ್ಸ್‌ ಅಧ್ಯಯನಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಬಿಟಿಎಂ ಲೇಔಟ್‌ನ ಪೇಯಿಂಗ್ ಗೆಸ್ಟ್‌ ಕಟ್ಟಡವೊಂದರಲ್ಲಿ ವಾಸವಿದ್ದರು.

ಶೇ 75ರಷ್ಟು ಸುಟ್ಟ ಗಾಯಗಳಾಗಿದ್ದ ಅವರನ್ನು ಮಾರ್ಚ್ 15ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಪರಿಶಿಷ್ಟ ಜಾತಿಯ ದಾನೇಶ್ವರಿ ಹಾಗೂ ಲಿಂಗಾಯತ ಸಮುದಾಯದ ಶಿವಕುಮಾರ್ ಹಿರೇಹಾಳ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವಂತೆ ಕೇಳಿದ್ದಕ್ಕಾಗಿ ಸಿಟ್ಟಾದ ಶಿವಕುಮಾರ್, ಕೊಲೆ ಮಾಡಿ ಪರಾರಿಯಾಗಿರುವ ಬಗ್ಗೆ ಯುವತಿಯ ಸಹೋದರಿ ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೊಲೆ ಆರೋಪದಡಿ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.

ಕಾಲೇಜು ಸಹಪಾಠಿಗಳು: ‘ಸಿಂದಗಿ ತಾಲ್ಲೂಕಿನ ಗೋಲಗೇರಿಯ ದಾನೇಶ್ವರಿ ಹಾಗೂ ಬಾದಾಮಿ ನಿವಾಸಿ ಶಿವಕುಮಾರ್, ವಿಜಯಪುರದ ಬಿಎಲ್‌ಡಿಇಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು.

ಇಬ್ಬರ ಸ್ನೇಹವು ಪ್ರೀತಿಯಾಗಿ ಮಾರ್ಪಟ್ಟಿತ್ತು. ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವ್ಯಾಸಂಗ ಮುಗಿಸಿದ್ದ ಶಿವಕುಮಾರ್, ಕೆಲಸಕ್ಕಾಗಿ ನಗರಕ್ಕೆ ಬಂದು ವೀರಸಂದ್ರದಲ್ಲಿ ವಾಸವಿದ್ದರು. ದಾನೇಶ್ವರಿ ಸಹ ಇತ್ತೀಚೆಗೆ ನಗರಕ್ಕೆ ಬಂದಿದ್ದರು. ಆರೋಪಿಯನ್ನು ಹಲವು ಬಾರಿ ಆತನ ಮನೆಯಲ್ಲೇ ಭೇಟಿಯಾಗಿದ್ದರು’ ಎಂದೂ ಹೇಳಿದರು.

ಮದುವೆ ವಿಚಾರವಾಗಿ ಗಲಾಟೆ: ‘ಶಿವಕುಮಾರ್‌ ಜತೆಗಿನ ಪ್ರೀತಿಯನ್ನು ದಾನೇಶ್ವರಿ ತಂದೆಗೆ ತಿಳಿಸಿದ್ದರು. ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದರು. ಇದೇ ವಿಷಯವನ್ನು ಯುವತಿ ಆರೋಪಿಗೆ ತಿಳಿಸಿದ್ದರು. ಮದುವೆಯಾಗಲು ನಿರಾಕರಿಸಿದ್ದ ಶಿವಕುಮಾರ್, ‘ನಿನ್ನದು ಕೀಳು ಜಾತಿ. ನಿನ್ನನ್ನು ಮದುವೆಯಾಗಲು ನಮ್ಮ ಮನೆಯಲ್ಲಿ ಒಪ್ಪುವುದಿಲ್ಲ. ನನ್ನನ್ನೂ ಮನೆಯಿಂದ ಹೊರಗೆ ಹಾಕುತ್ತಾರೆ’ ಎಂದಿದ್ದರು. ಕೆಲ ದಿನ ಮಾತನಾಡುವುದನ್ನೇ ಬಿಟ್ಟಿದ್ದ ಆತ, ಮೊಬೈಲ್ ಕರೆ ಸಹ ಸ್ವೀಕರಿಸುತ್ತಿರಲಿಲ್ಲವೆಂದು ದೂರಿನಲ್ಲಿ ಹೇಳಲಾಗಿದೆ’ ಎಂದೂ ವಿವರಿಸಿದರು.

ಆಸ್ಪತ್ರೆಗೆ ಸೇರಿಸಿ ಪರಾರಿ: ‘ಶಿವಕುಮಾರ್ ಕೆಲಸ ಮಾಡುತ್ತಿದ್ದ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯ ಕಚೇರಿಗೆ ಮಾ. 15ರಂದು ದಾನೇಶ್ವರಿ ಹೋಗಿದ್ದರು. ಕಚೇರಿಯಿಂದ ಹೊರಬಂದಿದ್ದ ಶಿವಕುಮಾರ್, ಯುವತಿಯನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದಿದ್ದ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಮದುವೆಯಾಗುವಂತೆ ಯುವತಿ ಬೇಡಿಕೊಂಡಿದ್ದರೆಂದು ಗೊತ್ತಾಗಿದೆ. ಅದಕ್ಕೆ ಒಪ್ಪದ ಶಿವಕುಮಾರ್, ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನೆಂದು ಸಂಬಂಧಿಕರು ದೂರಿದ್ದಾರೆ. ಸುಟ್ಟ ಗಾಯಗಳಾಗಿದ್ದ ದಾನೇಶ್ವರಿ ಅವರನ್ನು ಆರೋಪಿಯೇ ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಪರಾರಿಯಾಗಿದ್ದಾನೆ’ ಎಂದೂ ಹೇಳಿದರು.

‘ಹಲ್ಲೆಯಾದ ಯಾವುದೇ ಗುರುತುಗಳು ಮೃತದೇಹದ ಮೇಲಿಲ್ಲ. ಸುಟ್ಟಗಾಯಗಳು ಮಾತ್ರ ಇವೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ತನಿಖೆ ಪೂರ್ಣಗೊಂಡ ಬಳಿಕವೇ ಇದೊ ಕೊಲೆಯೋ ಅಥವಾ ಬೇರೆ ಏನಾದರೂ ಕಾರಣ ಇದೆಯಾ ಎಂಬುದು ಗೊತ್ತಾಗಲಿದೆ’ ಎಂದೂ ತಿಳಿಸಿದರು.

ಪೊಲೀಸರ ನಡೆಗೆ ಸಂಬಂಧಿಕರ ಅಸಮಾಧಾನ: ‘ದಾನೇಶ್ವರಿ ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ. ದೂರು ಕೊಟ್ಟವರನ್ನೇ ಪದೇ ಪದೇ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಆರೋಪಿಯನ್ನು ಬಂಧಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಕರಣವೂ ನಿಲ್ಲುವುದಿಲ್ಲವೆಂದು ನೇರವಾಗಿ ಹೇಳುತ್ತಿದ್ದಾರೆ. ನಮಗೆ ನ್ಯಾಯ ಬೇಕು’ ಎಂದು ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದರು.

*

ದಾನೇಶ್ವರಿ ಅವರದ್ದು ಕೊಲೆ ಎಂಬುದಾಗಿ ಸಹೋದರಿ ಮಾರ್ಚ್ 17ರಂದು ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಶಿವಕುಮಾರ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
-ಶ್ರೀನಾಥ್ ಜೋಶಿ, ಆಗ್ನೇಯ ವಿಭಾಗದ ಡಿಸಿಪಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Covid:ಭಾರತವು 2,075 ಹೊಸ COVID-19 ಪ್ರಕರಣಗಳನ್ನು ದಾಖಲಿಸಿದೆ, 71 ಸಾವುಗಳು!

Sat Mar 19 , 2022
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದ COVID-19 ಪ್ರಮಾಣವು 2,075 ತಾಜಾ ಸೋಂಕುಗಳೊಂದಿಗೆ ಶನಿವಾರ 4,30,06,080 ಕ್ಕೆ ಏರಿದೆ, ಆದರೆ ಸಕ್ರಿಯ ಪ್ರಕರಣಗಳು 27,802 ಕ್ಕೆ ಇಳಿದಿದೆ. 71 ಹೊಸ ಸಾವುಗಳೊಂದಿಗೆ ವೈರಲ್ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ 5,16,352 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತಿಳಿಸಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.06 ಪ್ರತಿಶತವನ್ನು ಒಳಗೊಂಡಿವೆ. ರಾಷ್ಟ್ರೀಯ COVID-19 ಚೇತರಿಕೆ ದರವು 98.73 […]

Advertisement

Wordpress Social Share Plugin powered by Ultimatelysocial