ಆಂಜನೇಯ ಸ್ವಾಮಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಭಕ್ತರಿದ್ದಾರೆ. ತೆಲಂಗಾಣದ ವಾರಂಗಲ್ನಲ್ಲಿ ನಿರ್ಮಿಸಲಾದ 25 ಅಡಿ ಎತ್ತರದ ಆಂಜನೇಯ ಸ್ವಾಮಿಯ ಪ್ರತಿಮೆ ಅಮೆರಿಕಾದ ಡೆಲಾವೆಯರ್ ನಲ್ಲಿ ಸ್ಥಾಪಿಸಲಾಗಿದೆ. ಇದು ಸದ್ಯ ಅಮೆರಿಕಾದಲ್ಲಿ ಸ್ಥಾಪನೆಯಾದ ಅತಿ ಎತ್ತರದ ಆಂಜನೇಯ ಪ್ರತಿಮೆ ಎಂದೇ ಖ್ಯಾತಿಯಾಗಿದ್ದು, ಈ ಆಂಜನೇಯ ಸ್ವಾಮಿಯ ಪ್ರತಿಮೆಯನ್ನು ಗ್ರ್ಯಾನೈಟ್ ಕಲ್ಲಿನಿಂದ ತಯಾರಿಸಲಾಗಿದೆ. ಮೂರ್ತಿಯ ಮೇಲೆ ಸುಂದರ ಕರಕುಶಲತೆಯನ್ನು ಕೆತ್ತಲಾಗಿದೆ. ಸುಮಾರು 12 ಕರಕುಶಲ ಕರ್ಮಿಗಳು ಒಂದು ವರ್ಷಗಳ ಸತತ ಪ್ರಯತ್ನದಿಂದಾಗಿ ಈ ಪ್ರತಿಮೆಯನ್ನು ರೆಡಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಹಿಂದೂ ಟೆಂಪಲ್ ಆಫ್ ಡೋಲಾವೆಯರ್ ಅಸೋಸಿಯೇಷನ್ ಅಧ್ಯಕ್ಷ ಪತಿಬಂದ್ ಶರ್ಮಾ, ಇದರ ತೂಕ 45 ಟನ್ ಗಳಷ್ಟಾಗಿದ್ದು, ಇದನ್ನು ತೆಲಂಗಾಣ ರಾಜ್ಯದ ವಾರಂಗಲ್ ನಿಂದ ಆಮದು ಮಾಡಿಕೊಳ್ಳಲಾಗಿದೆ, ಇನ್ನು ಈ ಪ್ರತಿಮೆಯ ನಿರ್ಮಾಣ ಮತ್ತು ಅಮೆರಿಕಾಕ್ಕೆ ತರಲು ಬರೋಬ್ಬರಿ 1 ಲಕ್ಷ ಅಮೆರಿಕನ್ ಡಾಲರ್ ವೆಚ್ಚ ತಗುಲಿದೆ ಎಂದು ಹೇಳಿದ್ದಾರೆ.