ಜಗ್ಗೇಶ್

ನಮ್ಮ ಜಗ್ಗೇಶ್ ಅವರ ಹುಟ್ಟುಹಬ್ಬ. ಅವರು ಹುಟ್ಟಿದ್ದು 1963ರ ಮಾರ್ಚ್ 17ರಂದು. ಜೀವನದಲ್ಲಿ ತುಂಬಾ ಕಷ್ಟ ಪಟ್ಟು ಮೇಲೆ ಬಂದ ವ್ಯಕ್ತಿ. ಎಂಥಹ ಪ್ರಲೋಭನೆಗಳು ಬಂದರೂ ಕನ್ನಡ ಚಿತ್ರರಂಗ ಬಿಟ್ಟು ಹೊರಗಿನ ಭಾಷಾ ಚಿತ್ರರಂಗದತ್ತ ಕಣ್ಣು ಹಾಯಿಸದ ವ್ಯಕ್ತಿ.
ನಮಗೆ ಹಲವು ಕಲಾವಿದರು ಹಲವು ಕಾರಣಕ್ಕಾಗಿ ಇಷ್ಟ ಆಗುತ್ತಾರೆ. ಹಲವು ಕಾರಣಕ್ಕಾಗಿ ಹಲವು ಸಿನಿಮಾಗಳು ಇಷ್ಟ ಆಗುತ್ತವೆ. ಆದರೆ ಕೆಲವರನ್ನು ಕಂಡೊಡನೆ ಏಯ್ ಒಂದ್ನಿಮಿಷ ಇವರು ನಟಿಸಿರುವ ಸನ್ನಿವೇಶ ಬರ್ತಾ ಇದೆ ಅದನ್ನು ನೋಡಿಯೇ ಬಿಡೋಣ ಅನ್ನಿಸುತ್ತೆ. ಈ ಭಾವವನ್ನು ಉಕ್ಕಿಸಿರುವ ಕೆಲವೇ ಕೆಲವರಲ್ಲಿ ನರಸಿಂಹರಾಜು, ಚಿಕ್ಕ ವಯಸ್ಸಿನ ದ್ವಾರಕೀಶ್ ಮತ್ತು ನಮ್ಮ ಜಗ್ಗಣ್ಣ – ‘ಜಗ್ಗೇಶ್’ ಪ್ರಮುಖರಾಗಿ ನಿಲ್ಲುತ್ತಾರೆ.
ನಾನು ಹೇಳಿದ ಈ ಮೂವರಲ್ಲಿ ಇರುವ ವೈಶಿಷ್ಟ್ಯ ಅಂದ್ರೆ ಅವರು ಇರುವ ಚಿತ್ರ ಯಾವುದು, ಅವರ ಪಾತ್ರದ ಹೆಸರೇನು, ಅವರು ಯಾವ ನಟಿ ಜೊತೆ ನಟಿಸಿದರು, ಯಾವ ನಟನ ನಾಯಕತ್ವದ ಚಿತ್ರದಲ್ಲಿದ್ದರು ಇವೆಲ್ಲಾ ಯಾವುದೂ ಮುಖ್ಯವಾಗಿರೋಲ್ಲ. ಅವರ ‘ವೆರಿ ಪ್ರೆಸೆನ್ಸ್’ ಅಂತ ಏನು ಹೇಳ್ತೀವೋ ಆ ಉಪಸ್ಥಿತಿಯೇ ಏನೋ ಒಂದು ರೀತಿಯ ಮನಸೆಳೆಯುವಿಕೆಯನ್ನು ಹೊಂದಿರುತ್ತವೆ.
ಜಗ್ಗೇಶ್ ಅವರು ಇರುವ ಹಾಸ್ಯ ದೃಶ್ಯ ನೋಡೋಕೆ ತುಂಬಾ ತುಂಬಾ ಖುಷಿಯಾಗುತ್ತೆ. ಆತ ಅಭಿನಯ ಮಾಡ್ತಾರೆ ಅನ್ನೋದಕ್ಕಿಂತ ಅವರ ನಟನೆ ಎಂಬ ಕ್ರಿಯೆಯಲ್ಲಿ ಒಂದು ರೀತಿಯ ಅಪೂರ್ವ ಸಹಜತೆ ಇದೆ. ಆತನ ಸಂಭಾಷಣೆ ಹೇಳುವ ಕ್ರಿಯೆ, ಮುಖ ಚರ್ಯೆ, ಹಾವ ಭಾವ ಸಂಜ್ಞೆಗಳಲ್ಲಿರುವ ದೈಹಿಕ ಭಾಷಾ ಚತುರತೆ ಅಪ್ರತಿಮವಾದದ್ದು.
ತರ್ಲೆ ನನ್ಮಗ, ಸರ್ವರ್ ಸೋಮಣ್ಣ, ಮಠ, ಎದ್ದೇಳು ಮಂಜುನಾಥ, ಬಾಡೀಗಾರ್ಡ್, ನೀರ್ ದೋಸೆ, ಪ್ರೀಮಿಯರ್ ಪದ್ಮಿನಿ ಇತ್ಯಾದಿ ಹೆಸರುಗಳು ಬಿಟ್ರೆ, ತರ್ಲೆ, ಭಂಡ, ಗಂಡ ಇವುಗಳನ್ನು ತುಂಬಿರುವ ಅವರ ಚಿತ್ರದ ಹೆಸರುಗಳು ನೂರಕ್ಕೂ ಹೆಚ್ಚಿರುವ ಸಂಗತಿ ಎಲ್ಲರಿಗೂ ತಿಳಿದಿರುವ ವಿಚಾರ. ಜೊತೆಗೆ ಅವರು ಯಾವ ಪಕ್ಷದಲ್ಲಿದ್ದರು, ಈಗ ರಾಜಕೀಯವಾಗಿ ಏನಾಗಿದ್ದಾರೆ, ಮಗನನ್ನು ಚಿತ್ರರಂಗದಲ್ಲಿ ಪ್ರತಿಷ್ಠಾಪಿಸುವುದರಲ್ಲಿ ಅವರೆಷ್ಟು ಯಶಸ್ವಿ, ಯಾವ ನಟಿ ಅವರ ಜೊತೆ ನಟಿಸುವುದಕ್ಕೆ ನಕಾರ ಹೇಳಿದಳು, ಅವರು ಯಾರ ಜೊತೆ ಹೇಗೆ ಜಗಳ ಮಾಡಿದರು ಇವೆಲ್ಲಾ ಅವರಿಗೆ ಸೇರಿದ್ದು, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವವರಿಗೆ ಸೇರಿದ್ದು. ನನ್ನ ಮಟ್ಟಿಗೆ ಅವರು ಯಾವ ಚಿತ್ರದಲ್ಲಿ ನಟಿಸಿದರು, ಆ ಚಿತ್ರದ ಹೆಸರೇನು ಎಂಬುದು ಕೂಡಾ ಮುಖ್ಯವಲ್ಲ. ಅವರಿರುವ ಹಲವಾರು ಹಾಸ್ಯ ಸನ್ನಿವೇಶಗಳು ಅವರ ಸ್ವಾಭಾವಿಕ ಪ್ರತಿಭೆಯಿಂದ ಮನಸೆಳೆಯುತ್ತದೆ ಎಂಬುದು ಮಾತ್ರ ಇಲ್ಲಿ ಪ್ರಧಾನವಾಗುತ್ತದೆ. ಮತ್ತೊಂದು ಮಾತು. ಇದನ್ನು ನಾನು ಅವರ ಹಾಸ್ಯ ಅಭಿನಯಕ್ಕೆ ಅನ್ವಯಿಸುತ್ತಿದ್ದೇನೆಯೇ ವಿನಃ ಕೆಲವರು ಹೇಳುವಂತೆ ಅವರ “ನವರಸ” ನಾಯಕತ್ವಕ್ಕೆ ಈ ಹೊಗಳಿಕೆಯನ್ನು ಅನ್ವಯಿಸುತ್ತಿಲ್ಲ.
ನಾನು ಮೇಲೆ ಹೇಳಿದ ಕೆಲವು ಮಾತುಗಳು “ಅವರ ಚಿತ್ರ ಯಾವುದಿದ್ದರೆ ಏನು” ಎಂಬ ಮಾತು ವಿಪರೀತದ್ದು ಎಂಬ ಅರಿವು ನನಗಿದೆ. ಈ ಮಾತನ್ನು ಯಾಕೆ ಹೇಳಿದೆ ಅಂದ್ರೆ ಜಗ್ಗೇಶ್ ಅವರಿಗಿರುವ ಪ್ರತಿಭೆ, ಅವರ ಚಿತ್ರಗಳ ಸೋಲು ಗೆಲುವುಗಳಿಗಿಂತ ವಿಭಿನ್ನವಾದದ್ದು ಮತ್ತು ಅವೆಲ್ಲವುಗಳಿಗಿಂತ ದೊಡ್ಡದು ಎಂಬರ್ಥದಲ್ಲಿ. ಒಂದು ಚಿತ್ರ ಕೆಟ್ಟದ್ದಾಗಿದ್ದರೂ ಪರವಾಗಿಲ್ಲ ಎಂಬ ನಿರ್ಣಯದ ಮಾತಲ್ಲ ಅದು.
ಒಂದು ಚಿತ್ರಕ್ಕೆ ಒಬ್ಬ ನಟನ ಸಹಜ ಪ್ರತಿಭೆ ಸಾಕೆ? ಖಂಡಿತ ಸಾಲದು. ಹಾಗೆ ಸಾಕು ಎಂದು ಹೇಳುವ ನಾವುಗಳು ಚಿತ್ರವನ್ನು ನೋಡಬೇಕೆಂದು ಚಿತ್ರಮಂದಿರಕ್ಕೆ ಹೋಗುವುದೇ ಇಲ್ಲ. ದೂರದರ್ಶನದಲ್ಲಿ ಬರುವ ಹಾಸ್ಯ ಸನ್ನಿವೇಶಗಳಿಗೋ ಇಲ್ಲವೇ ಯೂ ಟ್ಯೂಬ್ ನಲ್ಲಿನ ಕ್ಲಿಪ್ಪಿಂಗ್ ಗಳಿಗೋ ಸೀಮಿತರಾಗಿಬಿಡುತ್ತೇವೆ. ಇಂತಹ ಪ್ರತಿಭೆಗಳನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ನಮ್ಮ ಚಿತ್ರರಂಗ ನಿರ್ಣಯಿಸಬೇಕು. ಕೆಲವೊಂದು ಚಿತ್ರಗಳನ್ನು ಹೊರತುಪಡಿಸಿದರೆ, ಇಂತಹ ಒಂದು ಅಮೂಲ್ಯ ಪ್ರತಿಭೆಯನ್ನು ನಾವು ಸರಿಯಾದ ಚಿತ್ರಕತೆ, ನಿರ್ದೇಶನ ಉತ್ತಮ ನಿರ್ಮಾಣಗಳ ಮೂಲಕ ಉಪಯೋಗಿಸಿಲ್ಲ. ಹಾಗೆ ಉಪಯೋಗಿಸಿದ್ದಿದ್ದರೆ ಅದು ನಮ್ಮ ಕನ್ನಡ ಚಿತ್ರರಂಗವನ್ನು ಇನ್ನಷ್ಟು ಬೆಳೆಸುತ್ತಿತ್ತು ಎಂಬುದು ಮಾತ್ರ ನನ್ನ ಹೇಳಿಕೆ.
ಈ ಸಹಜ ಕಲಾವಿದನಿಗೆ ಹುಟ್ಟು ಹಬ್ಬದ ಶುಭಾಶಯ ಹೇಳುತ್ತಾ ಅವರಿಂದ ನಾವು ಮತ್ತಷ್ಟು ಉತ್ತಮ ಚಿತ್ರಗಳಲ್ಲಿ ಸಹಜ ಅಭಿನಯವನ್ನು ನೋಡುವ ಅವಕಾಶವನ್ನು ಆಶಿಸೋಣ. ಹಾಗೆಲ್ಲಾ ಹೇಳಿದರೆ ಸರಿ ಹೊಗಾಕಿಲ್ಲ “ಏನಣ್ಣ ಉಟ್ದಬ್ಬ ಅಂತೆ, ಒಸಿ ನಮ್ಮನ್ನು ನೋಡ್ಕಳಣ್ಣ’ ಅಂತ ಕೇಳೋಣವೇ?. ಆದ್ರೆ ಬೌ ಬೌ ಬಿರಿಯಾನಿ ಮಾತ್ರ ಬೇಡ. ನಾನು ಪೂರ್ಣ ಸಸ್ಯಾಹಾರಿ….. ಈ ಮನುಷ್ಯನ ಹತ್ರ ಏನನ್ನು ಕೇಳೋಕೂ ಹುಷಾರಾಗಿರಬೇಕು. ಇರು ಇಡ್ತೀನಿ ಫಿಟ್ಟಿಂಗು ಎಂದು ಬಿಟ್ಟಾನು. ಶುಭಾಶಯ ಜಗ್ಗೇಶರೆ.
ಒಮ್ಮೆ ಜಗ್ಗೇಶ್ ಹೇಳಿದ ಮಾತು ತುಂಬಾ ನೆನಪಾಗುತ್ತೆ. “ಅಂದಿನ ದಿನದಲ್ಲಿ ತಿನ್ನಕ್ಕೆ ಇರಲಿಲ್ಲ. ಇಂದು ತಿನ್ನೋಕೆ ಇದೆ. ಆದರೆ ತಿನ್ನೋಕೆ ಆಗ್ತಾ ಇಲ್ಲ!” ಇಷ್ಟೆಲ್ಲಾ ಗೊತ್ತಿರುವ ಜಗ್ಗೇಶರಿಗೆ ಒಂದು ಮಾತು ಹೇಳಬೇಕೆನಿಸುತ್ತದೆ. “ಒಳ್ಳೆಯ ಚಿತ್ರ ಹುಡುಕಿ. ನೀವೇನೂ ಅಭಿನಯಿಸಬೇಕಿಲ್ಲ. ಅದು ನಿಮ್ಮಲ್ಲಿ ಯಾವಾಗಲೂ ಇದೆ. ಸಿನಿಮಾ ನಿರ್ಮಾಣ ಮಾಡಿ ದುಡ್ಡು ಹಾಳು ಮಾಡಿಕೋಬೇಡಿ. ಬೇಡದ ರಾಜಕೀಯ ಮಾಡಿ ಸಮಯ ಹಾಳು ಮಾಡಿಕೊಳ್ಳಬೇಡಿ. ನಿಮ್ಮಲ್ಲಿರುವ ಸಹಜ ಅಭಿನಯ ಶ್ರೇಷ್ಠತೆಯನ್ನು ತೋರುತ್ತಾ ಮುಂದೆ ಮುಂದೆ ಸಾಗುತ್ತಲೇ ಇರಿ.”ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು 2021 ರಲ್ಲಿ $49 ಶತಕೋಟಿಗಳಷ್ಟು ಬೆಳೆಯುತ್ತದೆ; ಜೆಫ್ ಬೆಜೋಸ್, ಎಲೋನ್ ಮಸ್ಕ್ ಗಿಂತ ಹೆಚ್ಚು!

Thu Mar 17 , 2022
  ದೇಶದ ಮತ್ತು ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿಯಾಗಿರುವ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, 2021 ರಲ್ಲಿ ತಮ್ಮ ನಿವ್ವಳ ಮೌಲ್ಯವು USD 49 ಶತಕೋಟಿಗಳಷ್ಟು ಏರಿಕೆ ಕಂಡಿದೆ – ಅಗ್ರ ಮೂರು ಜಾಗತಿಕ ಬಿಲಿಯನೇರ್‌ಗಳಾದ ಎಲೋನ್ ಮಸ್ಕ್, ಜೆಫ್ ಬೆಜೋಸ್ ಮತ್ತು ಬರ್ನಾರ್ಡ್ ಅರ್ನಾಲ್ಟ್ ಅವರಿಗಿಂತ ಹೆಚ್ಚಾಗಿದೆ. 2022 M3M Hurun Global Rich List. ಅದಾನಿ ಗ್ರೂಪ್‌ನ 59 ವರ್ಷದ ಸಂಸ್ಥಾಪಕರು ಬಂದರುಗಳು ಮತ್ತು ಏರೋಸ್ಪೇಸ್‌ನಿಂದ […]

Advertisement

Wordpress Social Share Plugin powered by Ultimatelysocial