ತಮಿಳುನಾಡಿಗೆ ಕಾವೇರಿ ನೀರು: ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಸ್ಥಿತಿ ವಿವರಿಸಿದ ಡಿ.ಕೆ ಶಿವಕುಮಾರ್‌

ಬೆಂಗಳೂರು, ಸೆಪ್ಟೆಂಬರ್‌ 13: ಕರ್ನಾಟಕದಿಂದ ತಮಿಳುನಾಡಿಗೆ ಮತ್ತೆ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ.

ಸಭೆಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಸಂಕಷ್ಟ ಸೂತ್ರವನ್ನು ಇನ್ನೂ ಸಿದ್ಧಪಡಿಸಿಲ್ಲ.

ಆದ್ದರಿಂದ ಈ ಬಗ್ಗೆ ಚರ್ಚೆ ನಡೆಸಲು ಇಂದು ಸರ್ವಪಕ್ಷ ಸದಸ್ಯರ ವಿಶೇಷ ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.

ನಿನ್ನೆ ಸಂಜೆ ಕಾವೇರಿ ನೀರು ನಿರ್ವಹಣೆ ಸಮಿತಿ (CWMC) ಆದೇಶ ಬಂದ ಹಿನ್ನೆಲೆಯಲ್ಲಿ ಇಂದಿನ ಈ ತುರ್ತುಸಭೆ ಕರೆಯಲಾಗಿದೆ. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಜಲವರ್ಷದಲ್ಲಿನ ಪರಿಸ್ಥಿತಿ ಬಗ್ಗೆ ಈ ಹಿಂದೆ ದಿನಾಂಕ 28.08.2023ರಂದು ಸರ್ವಪಕ್ಷಗಳ ಮುಖಂಡರುಗಳ ಸಭೆಯನ್ನು ಕರೆಯಲಾಗಿತ್ತು. ದಿನಾಂಕ 12.09.2023 ರಂದು ಅಂದರೆ, ನಿನ್ನೆ ಕಾವೇರಿ ಜಲ ನಿಯಂತ್ರಣಾ ಸಮಿತಿಯ (CWRC) 86ನೇ ಸಭೆಯು ಜರುಗಿದ್ದು, ಸದರಿ ಸಭೆಯಲ್ಲಿ ದಿನಾಂಕ 13.09.2023 ರಿಂದ ಮುಂದಿನ 15 ದಿನಗಳವರೆಗೆ ಕರ್ನಾಟಕ ರಾಜ್ಯವು ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 5,000 ಕ್ಯೂಸೆಕ್ಸ್ ನೀರಿನ ಪ್ರಮಾಣವನ್ನು ಖಚಿತ ಪಡಿಸುವಂತೆ ನಿರ್ಣಯಿಸಿದೆ.

ಸದರಿ ವಿಷಯವು ರಾಜ್ಯದ ರೈತರ ಹಿತಾಸಕ್ತಿಯ ದೃಷ್ಟಿಯಿಂದ ಅತೀ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅತೀ ತುರ್ತಾಗಿ ಈ ದಿನ ಶಾರ್ಟ್‌ ನೋಟಿಸ್‌ನಲ್ಲಿ ಸಭೆ ಕರೆಯಲಾಗಿದೆ. ರಾಜ್ಯದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯು ಕಡಿಮೆಯಿದ್ದು, ಮೇ-2024ರವರೆಗೆ ನಮ್ಮ ನೀರಾವರಿ, ಕುಡಿಯುವ ನೀರು ಹಾಗೂ ಇತರೆ ಅಗತ್ಯತೆಗಳಿಗೆ ನೀರನ್ನು ಪೂರೈಸಬೇಕಾ’ಗಿದೆ ಎಂದರು.

ಈಗಾಗಲೇ ಮಾನ್ಸೂನ್‌ ಮುಗಿಯುವ ಹಂತದಲ್ಲಿದ್ದು, ರಾಜ್ಯದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣವು ಕ್ಷೀಣಿಸುತ್ತಿದೆ. ಈಗಿನ ಸಂಗ್ರಹಣೆಯನ್ನು ನಮ್ಮ ಅಗತ್ಯತೆಗಳಿಗೆ ಕಾಯ್ದಿರಿಸಬೇಕಾಗಿದೆ. ರಾಜ್ಯದ ಕಾವೇರಿ ಕೊಳ್ಳದ ಪರಿಸ್ಥಿತಿ ಅಧ್ಯಯನ ಮಾಡಲು ದಿಲ್ಲಿ ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ ಪರಿಶೀಲನೆ ನಡೆಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ನಮ್ಮ ಮುಖ್ಯಮಂತ್ರಿಗಳು ಸಹ ಕೇಂದ್ರ ಸಚಿವರನ್ನು ಭೇಟಿ ಮಾಡಿದಾಗ ರಾಜ್ಯದ ಪರಿಸ್ಥಿತಿ ವಿವರಿಸಿದ್ದಾರೆ. ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನ ಮಂತ್ರಿಗಳ ಸಮಯ ಕೇಳಲಾಗಿದೆ ಎಂದು ತಿಳಿಸಿದರು.

ಈ ಮಧ್ಯೆ, ತಮಿಳುನಾಡು ರಾಜ್ಯವು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ದಾವೆ ಮತ್ತು ರಾಜ್ಯವು ಸಲ್ಲಿಸಿರುವ ಪ್ರತಿಕ್ರಿಯೆಗಳ ವಿಚಾರಣೆಯು ದಿನಾಂಕ 21.09.2023 ರಂದು ನಿಗದಿಯಾಗಿರುತ್ತದೆ. ರಾಜ್ಯದ ಕಾವೇರಿ ಜಲಾನಯನದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಬೆಳೆಗಳಿಗೆ ನೀರಾವರಿಗಾಗಿ 70.20 ಟಿಎಂಸಿ, ಸೆಪ್ಟೆಂಬರ್ 2023 ರಿಂದ ಜುಲೈ 2024 ರವರೆಗೆ ಕುಡಿಯುವ ನೀರಿಗೆ 33 ಟಿಎಂಸಿ ಮತ್ತು ಕೈಗಾರಿಕಾ ಬಳಕೆಗಾಗಿ 3 ಟಿಎಂಸಿ, ಹೀಗೆ ಒಟ್ಟು 106.20 ಟಿಎಂಸಿ ನೀರಿನ ಪ್ರಮಾಣದ ಅವಶ್ಯಕವಿರುತ್ತದೆ.

ಆದರೆ, ನಮ್ಮ ಕಾವೇರಿ ಕಣಿವೆಯ 4 ಜಲಾಶಯಗಳಲ್ಲಿನ ಇಂದಿನ ಒಟ್ಟಾರೆ ನೀರಿನ ಮಟ್ಟ 53.287 ಟಿಎಂಸಿ ಇದ್ದು, ಹಿಂದಿನ ವರ್ಷ ಇದೇ ದಿನದಂದು 103.348 ಟಿಎಂಸಿ ಆಗಿತ್ತು. ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದಲ್ಲಿ ನೀರಿನ ಒಳಹರಿವಿನಲ್ಲಿ ಒಟ್ಟಾರೆ ಕೊರತೆ 54% ಆಗಿರುತ್ತದೆ.

ಪ್ರಸಕ್ತ ಜಲವರ್ಷದಲ್ಲಿ ತಮಿಳುನಾಡಿಗೆ 01.06.2023ರಿಂದ 11.09.2023ರವರೆಗೆ ಒಟ್ಟು 37.718 ಟಿಎಂಸಿ ನೀರು ಹರಿದಿರುತ್ತದೆ. ಸಾಮಾನ್ಯ ವರ್ಷದಲ್ಲಿ ಸಿಡಬ್ಲ್ಯೂಡಿಟಿ ಆದೇಶದನ್ವಯ ಇದೇ ಅವಧಿಯಲ್ಲಿ 99.860 ಟಿಎಂಸಿ ನೀರನ್ನು ಬಿಡಬೇಕಾಗಿತ್ತು.

ಸಾಮಾನ್ಯ ವರ್ಷಗಳಲ್ಲಿ ರಾಜ್ಯದ ಜಲಾಶಯಗಳಿಗೆ ಒಳಹರಿವಿನ ಕೊರತೆಯುಂಟಾಗದೆ ತಮಿಳುನಾಡಿಗೆ ಈ ಹಿಂದೆ ಹಲವಾರು ವರ್ಷಗಳಲ್ಲಿ ನ್ಯಾಯಾಧಿಕರಣದ ಆದೇಶದ ಅನ್ವಯ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣವನ್ನು ಬಿಡಲಾಗಿದೆ. ಕಳೆದ ವರ್ಷ ನಿಗದಿತ 177.75 ಟಿಎಂಸಿ ಪ್ರಮಾಣಕ್ಕೆ ಎದುರಾಗಿ 650 ಟಿಎಂಸಿಗಿಂತ ಅಧಿಕವಾಗಿ ನೀರನ್ನು ಬಿಡಲಾಗಿದೆ ಎಂದರು.

ಪ್ರಸಕ್ತ ಜಲವರ್ಷದಲ್ಲಿನ ನೀರಿನ ಕೊರತೆಯ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ತಮಿಳುನಾಡು ರಾಜ್ಯವು ಸಲ್ಲಿಸಿರುವ ದಾವೆಯು ದಿನಾಂಕ 21.09.2023ರಂದು ವಿಚಾರಣೆಗೆ ಬರಲಿದೆ. ಇದಲ್ಲದೆ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ರಚಿತವಾಗಿರುವ ಸಿಡಬ್ಲ್ಯೂಆರ್‌ಸಿ & ಸಿಡಬ್ಲ್ಯೂಎಮ್‌ಎ ಇವುಗಳು ಕಾವೇರಿ ಕಣಿವೆಯ ನೀರಿನ ಪರಿಸ್ಥಿತಿಯನ್ನು ವಿಮರ್ಷಣೆ ಮಾಡಿ ಆದೇಶಗಳನ್ನು ನೀಡುತ್ತಿವೆ ಎಂದು ಹೇಳಿದರು.

ಈ ಸಂಕಷ್ಟದ ಪರಿಸ್ಥಿತಿಯಲ್ಲಿ, ರಾಜ್ಯದ ಕಾವೇರಿ ಕಣಿವೆಯ ರೈತರುಗಳ ಹಿತಾಸಕ್ತಿಯನ್ನು ಕಾಪಾಡುವುದು ಮತ್ತು ಕುಡಿಯುವ ನೀರಿಗಾಗಿ ಅಗತ್ಯವಿರುವ ನೀರಿನ ಪ್ರಮಾಣವನ್ನು ಕಾಯ್ದಿರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ರಾಜ್ಯದ ನೆಲ, ಜಲ ಮತ್ತು ಭಾಷೆಗಳ ವಿಷಯಗಳಲ್ಲಿ ಯಾವತ್ತೂ ರಾಜ್ಯದ ಹಿತದೃಷ್ಟಿಯಿಂದ ಸರ್ವಪಕ್ಷಗಳ ಮುಖಂಡರುಗಳ ಅಭಿಪ್ರಾಯಗಳನ್ನು ಪಡೆದು ಮುಂದಿನ ಕ್ರಮಗಳನ್ನು ಎಲ್ಲಾ ಸರ್ಕಾರಗಳು ಕೈಗೊಳ್ಳುತ್ತಿದ್ದು, ಅದರಂತೆ, ಈ ಸಭೆಯನ್ನು ಕರೆಯಲಾಗಿದ್ದು, ತಮ್ಮೆಲ್ಲರ ಅಭಿಪ್ರಾಯವನ್ನು ಕೋರುತ್ತೇನೆ. ಅನ್ಯ ವಿಚಾರಗಳನ್ನು ಪಕ್ಕಕ್ಕಿಟ್ಟು ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಸಲಹೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ಸಭೆಗೆ ವಿವರಿಸಿದರು.

ಕಾವೇರಿಯಲ್ಲಿ ನೀರಿಲ್ಲ-ಸಿದ್ದರಾಮಯ್ಯ

ಇನ್ನು ಸರ್ವಪಕ್ಷ ಸಭೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ತಮಿಳುನಾಡಿಗೆ 5,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕೆಂದು ಸೂಚನೆ ಬಂದಿರುವ ಹಿನ್ನಲೆಯಲ್ಲಿ ಇಂದು ಸರ್ವಪಕ್ಷ ಸಭೆಯಲ್ಲಿ ಕರೆದು ಚರ್ಚಿಸಲಾಗುತ್ತದೆ. ತಮಿಳುನಾಡಿಗೆ 5000 ಕ್ಯೂಸೆಕ್ಸ್ ಕಾವೇರಿ ನೀರು ಬಿಡಬೇಕೆಂದು ಕಾವೇರಿ ನೀರು ನಿಯಂತ್ರಣಾ ಪ್ರಾಧಿಕಾರದವರು ಸೂಚಿಸಿರುತ್ತಾರೆ. ಆದರೆ ಕಾವೇರಿಯಲ್ಲಿ ನೀರಿಲ್ಲ. ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರು ಒದಗಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ 5000 ಕ್ಯೂಸೆಕ್ಸ್ ನೀರನ್ನು 15 ದಿನ ಬಿಡಬೇಕೆಂದು ಸೂಚನೆ ನೀಡಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

BREAKING : ಬಾಂಗ್ಲಾದ ಢಾಕಾ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ ; ನೂರಾರು ಅಂಗಡಿ ಭಸ್ಮ, ಲಕ್ಷಾಂತರ ರೂಪಾಯಿ ನಷ್ಟ

Thu Sep 14 , 2023
ಢಾಕಾ : ಬಾಂಗ್ಲಾದೇಶದ ರಾಜಧಾನಿ ಢಾಕಾದ ಮಾರುಕಟ್ಟೆಯಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಅಂಗಡಿಗಳು ಸುಟ್ಟುಹೋಗಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಮೊಹಮ್ಮದ್ಪುರ ಮಾರುಕಟ್ಟೆಯಲ್ಲಿ ಹರಡಿದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು ಆರು ಗಂಟೆಗಳು ಬೇಕಾಯಿತು. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ Please follow and like us:

Advertisement

Wordpress Social Share Plugin powered by Ultimatelysocial