ದಾವಣಗೆರೆ: ಪರಿಸರ ಸ್ನೇಹಿ ಗಣಪ ಮೂರ್ತಿಗಳನ್ನು ತಯಾರಿಸಿ ಉತ್ತಮ ಸಂದೇಶ ಸಾರಿದ ಶಾಲಾ ಮಕ್ಕಳು

ದಾವಣಗೆರೆ, ಸೆಪ್ಟೆಂಬರ್‌, 17: ರಾಜ್ಯದೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ ಮನೆಮಾಡಿದೆ. ಅದೇ ರೀತಿ ದಾವಣಗೆರೆ ಜಿಲ್ಲೆಯಲ್ಲೂ ಕೂಡ ಗಣೇಶ ಹಬ್ಬವನ್ನು ಆಚರಣೆ ಮಾಡಲು ಯುವಕರು ತುದಿಗಾಲಲ್ಲಿ ನಿಂತಿದ್ದಾರೆ. ಮತ್ತೊಂದೆಡೆ ಜಿಲ್ಲಾಡಳಿತವು ಪಿಒಕೆ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿದ್ದು, ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಸೂಚಿಸಿದೆ.

ಈ ನಿಯಮದಂತೆಯೇ ದಾವಣಗೆರೆಯ ಸಿದ್ದಗಂಗಾ ಸ್ಕೂಲ್‌ನಲ್ಲಿ ವಿಶೇಷವಾದ ಗಣೇಶನ ಮೂರ್ತಿಯನ್ನು ತಯಾರು ಮಾಡಲಾಗಿದ್ದು, ಇದು ನೋಡುಗರ ಗಮನ ಸೆಳೆದಿದೆ.

ಈ ಗಣೇಶ ಮೂರ್ತಿ ತುಂಬಾನೇ ಸ್ಫೆಷಲ್. ಪರಿಸರ ಸ್ನೇಹಿ ಪೇಪರ್‌ ಗಣಪನ ನೋಡಲು ಚೆಂದವೋ ಚೆಂದ. ಹನ್ನೆರಡು ಅಡಿ ಎತ್ತರದ ಪರಿಸರ ಸ್ನೇಹಿ ಪೇಪರ್‌ ಗಣಪತಿಯನ್ನು ಸಿದ್ಧಗಂಗಾ ಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಚಿತ್ರಕಲಾ ಶಿಕ್ಷಕರಾದ ನಟರಾಜ್‌, ಸ್ವಾತಿ, ಹೀನಾ ಕೌಸರ್, ಪ್ರಿಯಾಂಕ, ಸಹನಾ ಅವರ ಸಹಕಾರದಿಂದ ಸಂಸ್ಥೆಯ ಸಿದ್ಧಲಿಂಗ ಮಂಟಪದಲ್ಲಿ ತಯಾರಿಸುತ್ತಿದ್ದಾರೆ.

ಹಳೆ ದಿನಪತ್ರಿಕೆ, ಡ್ರಾಯಿಂಗ್‌ ಪೇಪರ್‌, ಮೈದಾ ಅಂಟು, ಇದ್ದಿಲು ಪುಡಿ ಬಳಸಿ ನಿರ್ಮಿಸುತ್ತಿರುವ ಈ ಬೃಹತ್‌ ಗಣಪತಿ 20 ಕಿಲೋ ನಷ್ಟು ತೂಕವಿದ್ದು, ಇಬ್ಬರು ಸುಲಭವಾಗಿ ಎತ್ತಬಹುದಾಗಿದೆ. ಸುಂದರ ಮುಖ ಮುದ್ರೆಯ ಪ್ರಶಾಂತ ಪೇಪರ್‌ ಗಣಪತಿಯನ್ನು ನಿರ್ಮಿಸುವ ಕಾರ್ಯದಲ್ಲಿ ಮಕ್ಕಳು ಆಸಕ್ತಿ ಮತ್ತು ಭಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಸಂಸ್ಥೆಯ ನಿರ್ದೇಶಕ ಡಾ. ಜಯಂತ್‌ರವರ ಮಾರ್ಗದರ್ಶನ, ಕಾರ್ಯದರ್ಶಿ ಹೇಮಂತ್‌ ಅವರ ನೆರವಿನೊಂದಿಗೆ ವಿನ್ಯಾಸಗೊಳ್ಳುತ್ತಿರುವ ಈ ಪೇಪರ್‌ ಗಣಪತಿಯನ್ನು ಸೋಮವಾರದಂದು ಬೆಳಗ್ಗೆ 11 ಗಂಟೆಗೆ ಪ್ರತಿಷ್ಠಾಪಿಸಿ ಪೂಜಾಕಾರ್ಯವನ್ನು ನೆರವೇರಿಸಲಾಗುವುದು.

ವಿಶಿಷ್ಠವಾದ ಈ ಪೇಪರ್‌ ಗಣಪತಿಯನ್ನು ಸೆಪ್ಟೆಂಬರ್‌ 28ರಂದು ಅನಂತ ಪದ್ಮನಾಭ ವ್ರತದಂದು ವಿಸರ್ಜಿಸಲಾಗುವುದು. ಈ ಆಕರ್ಷಕವಾದ ಗಣಪನನ್ನು ಸಾರ್ವಜನಿಕರು ಮತ್ತು ಪಾಲಕರು ವೀಕ್ಷಣೆ ಮಾಡಬಹುದೆಂದು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ತಿಳಿಸಿದ್ದಾರೆ.

ಗಮನ ಸೆಳೆದ ಪುಟ್ಟ ಪುಟ್ಟ ಮಕ್ಕಳು

ಸೋಮವಾರದಂದು ಆಚರಿಸಲಿರುವ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಇಂದು ಸಿದ್ಧಗಂಗಾ ವಿದ್ಯಾಸಂಸ್ಥೆಯ ಒಂದು ಮತ್ತು ಎರಡನೇ ತರಗತಿ ಮಕ್ಕಳು ನೂರಾರು ಸಂಖ್ಯೆಯಲ್ಲಿ ಗೌರಿ-ಗಣೇಶ ವೇಷಧಾರಿಗಳಾಗಿ ಕಣ್ಮನ ಸೆಳೆದರು. ಪಾಲಕರು ಅತ್ಯಂತ ಸಂಭ್ರಮದಿಂದ ಈ ಮಕ್ಕಳಿಗೆ ಉಡುಗೆ-ತೊಡುಗೆ ಧರಿಸಿ ಕರೆ ತಂದಿದ್ದರು.

ವಿವಿಧ ರೀತಿಯ ಕಿರೀಟಗಳು, ಆನೆಯ ಮುಖವಾಡಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಆಕರ್ಷಕವಾಗಿತ್ತು. ಗಾಂಭೀರ್ಯದಿಂದ ನಡೆದು ಬಂದ ಗಣೇಶಗಳ ಜೊತೆಗೂಡಿದ ಪುಟ್ಟ ಪುಟ್ಟ ಗೌರಿಗಳು ಗಮನ ಸೆಳೆದವು. ಹೈಸ್ಕೂಲಿನ ಮಕ್ಕಳು ಈ ನಡೆದಾಡುವ ಗೌರಿ-ಗಣೇಶರಿಗೆ ಭಕ್ತಿಗೀತೆಯೊಂದಿಗೆ ಸ್ವಾಗತಿಸಿ ನಮಿಸಿದರು. ಪಾಲಕರ ನೆರವಿನಿಂದ ಶನಿವಾರ ಸಂಭ್ರಮದಿಂದ ಉಲ್ಲಾಸಮಯವಾಗಿತ್ತು.

ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್-ಗೈಡ್‌ ಮಕ್ಕಳು ಅವರವರ ತಂಡದ ಮೇಲ್ವಿಚಾರಕರ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ಪರಿಸರ ಸ್ನೇಹಿ ಗಣಪತಿಗಳನ್ನು ತಯಾರಿಸಿದರು. ಮನೆಯಿಂದ ತಂದ ಜೇಡಿಮಣ್ಣು ಗಣಪತಿಯ ಆಕಾರ ತಾಳಿತು. ಹೂಗಳಿಂದ, ಮಣಿಗಳಿಂದ ಗಣಪನನ್ನು ವಿಧ ವಿಧವಾಗಿ ಅಲಂಕರಿಸಿದರು.

ಮೈದಾ ಹಿಟ್ಟು, ಟೊಮೋಟೋ, ಸೋಪು ಇತ್ಯಾದಿಗಳನ್ನು ಬಳಸಿ ಮಕ್ಕಳು ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. ಮಕ್ಕಳ ಕೈ ಚಳಕದಿಂದ ಕೆಲವು ಸುಂದರಾಕೃತಿಯನ್ನು ಪಡೆದರೆ ಇನ್ನೂ ಕೆಲವು ಮಣ್ಣಿನ ಮುದ್ದೆಗಳನ್ನು ಅಂಟಿಸಿ ಗಣಪನ ಆಕಾರ ಪಡೆದಿದ್ದವು. ಶ್ರದ್ಧೆಯಿಂದ ಮಣ್ಣಿನ ಮುದ್ದೆಗಳನ್ನು ಅಂಟಿಸಿ, ತಿದ್ದಿ-ತೀಡಿ ನಿರ್ದಿಷ್ಠ ಆಕಾರ ಕೊಡುತ್ತಿರುವ ಸ್ಕೌಟ್-ಗೈಡ್‌ ಮಕ್ಕಳನ್ನು ಇತರರು ಕುತೂಹಲದಿಂದ ವೀಕ್ಷಿಸಿದರು.

ಶಿಕ್ಷಕರಾದ ರೇಖಾರಾಣಿ, ಶಶಿಕಲಾ, ಮಹೇಶ್‌, ಸುನೀತ, ದುಗ್ಗಪ್ಪ, ನಿರ್ಮಲ, ವೇದಾವತಿ, ಮಂಜುಳ, ಆರೋಗ್ಯಮ್ಮ, ಆಯೇಷಾ, ಬೀಬಿ ಆಯೇಷಾ ಇವರು ಮಕ್ಕಳ ಚಟುವಟಿಕೆಗೆ ಮಾರ್ಗದರ್ಶನ ನೀಡಿದರು. ಶಾಲೆಯಲ್ಲಿ ತಾವೇ ತಯಾರಿಸಿದ ಪರಿಸರ ಸ್ನೇಹಿ ಗಣಪನನ್ನು ಮಕ್ಕಳು ಮನೆಯಲ್ಲಿ ಪೂಜಿಸಲಿದ್ದಾರೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ಹಬ್ಬಕ್ಕೆ ಹೊಸ ಕಾರು ಕೊಳ್ಳಲು ಬಯಸುವವರಿಗೆ ಇಲ್ಲಿದೆ ಗುಡ್ ನ್ಯೂಸ್

Sun Sep 17 , 2023
ಹಬ್ಬಕ್ಕೆ ಹೊಸ ಕಾರು ಖರೀದಿಸಲು ಬಯಸುವವರಿಗೆ ಒಳ್ಳೆಯ ಸುದ್ದಿ. ಹೌದು. ಹೊಸ ಕಾರೊಂದು ಮಾರುಕಟ್ಟೆಗೆ ಪ್ರವೇಶಿಸಿದೆ. ಜೀಪ್ ಇಂಡಿಯಾ ಇತ್ತೀಚೆಗೆ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಜೀಪ್ 2023ರ ಮಾದರಿಯನ್ನು ಕಂಪಾಸ್ ನಲ್ಲಿ ಅನಾವರಣಗೊಳಿಸಿದೆ. ಇದರ ಬೆಲೆ ಹಿಂದಿನ ಮಾದರಿಗಳಿಗಿಂತ ತುಂಬಾ ಕಡಿಮೆ ಎಂದು ಹೇಳಬಹುದು. ಆದ್ದರಿಂದ ಜೀಪ್ ಕಾರನ್ನು ಖರೀದಿಸಲು ಬಯಸುವವರು ಈ ಹೊಸ ಮಾದರಿಯನ್ನು ನೋಡಬಹುದು. ಈ ಹೊಸ ಮಾದರಿ ಹೇಗಿದೆ? ವೈಶಿಷ್ಟ್ಯಗಳು ಹೇಗಿವೆ? ಬೆಲೆ […]

Advertisement

Wordpress Social Share Plugin powered by Ultimatelysocial