Garuda Gamana Vrishabha Vahana Review: ಮಂಗಳಾದೇವಿಗೆ ಸ್ವಾಗತ!

ಕೆಲವು ಸಿನೆಮಾಗಳು ಒಂದಿಷ್ಟು ಪ್ರೇಕ್ಷಕ ಸಮ್ಮೋಹನ ಸೂತ್ರಗಳನ್ನು ಆಸರೆಯಾಗಿ ಹಿಡಿದುಕೊಂಡು ನಿರ್ಮಾಣಗೊಳ್ಳುತ್ತವೆ. ಅದ್ಧೂರಿತನ, ದ್ವಂದ್ವಾರ್ಥದ ಸಂಭಾಷಣೆ, ಪ್ರಚೋದನೆ ಹೀಗೆ ಕೆಲವೊಂದು ಆಸರೆಗಳೊಂದಿಗೆ ಸಿನೆಮಾ ಪ್ರೇಕ್ಷಕರ ಮುಂದೆ ಬರುತ್ತವೆ. ಆದರೆ ‘ಗರುಡ ಗಮನ ವೃಷಭ ವಾಹನ’ ಸಿನೆಮಾ ಈ ಅನಿವಾರ್ಯತೆಗಳನ್ನು ಮೀರಿ ಒಂದು ವಾತಾವರಣವನ್ನು ನಮಗೆ ಸೃಷ್ಟಿಸಿಕೊಡುತ್ತದೆ.

ಈ ವಾತಾವರಣ ನಮಗೆ ಹೊಸದೇನು ಅಲ್ಲ, ತೀರ ಪರಿಚಿತ ಅಂತ ಹೇಳಲಿಕ್ಕೆ ಸಹ ಆಗುವುದಿಲ್ಲ. ಪಾತ್ರಗಳು ಪ್ರೇಕ್ಷಕರನ್ನು ತಲುಪುವ ಸಲುವಾಗಿ ಭಾಷೆಯನ್ನು ತಟಸ್ಥ ರೂಪಕ್ಕೆ ಇಳಿಸಿ ಮಾತನಾಡುವುದಿಲ್ಲ. ಸ್ಥಳೀಯವಾಗಿ ಸಹಜ ಎನಿಸುವ ಬೈಗುಳಗಳ ಜೊತೆಗೆ ಭಾಷೆಯನ್ನು ಅವುಗಳು ಮೈಮೇಲೆ ಎಳೆದುಕೊಳ್ಳುತ್ತವೆ.

ಮಂಗಳೂರಿನ ಜೊತೆ ಕಡಿಮೆ ಒಡನಾಟ ಇರುವವರಿಗೆ ಸಿನೆಮಾದ ಕೆಲವೊಂದು ವಿಚಾರಗಳನ್ನು ದಕ್ಕಿಸಿಕೊಳುವಲ್ಲಿ ಕಷ್ಟ ಆಗಬಹುದು. ಸೇಡಿನ ಚೂರಿ ಹೀರಿಕೊಳ್ಳುವ ರಕ್ತಕ್ಕೆ ಭಾಷೆ ಇಲ್ಲ, ಆದರೆ ಸೇಡಿನ ಹಿಂದೆ-ಮುಂದೆ ಪ್ರಕಟಗೊಳ್ಳುವ ಮಂಗಳಾದೇವಿ ಹಾಗು ಕದ್ರಿಯ ಭಾವಕ್ಕೆ ಭಾಷೆ ಅನಿವಾರ್ಯ. ಆ ಸ್ಥಳೀಯ ಭಾಷೆಯನ್ನು ತನ್ನದೇ ಎಂದು ಒಪ್ಪಿಕೊಂಡು ಸಿನೆಮಾ ನೋಡಿದರೆ ನಿರ್ದೇಶಕ ರಾಜ್ ಬಿ ಶೆಟ್ಟಿ ಸುರಿದು ಜೋಡಿಸಿಟ್ಟ ಮಂಗಳಾದೇವಿಯ ಭಾವ-ಬಣ್ಣ ಬಹಳ ಬೇಗೆ ನಮ್ಮೆದೆಗೆ ಇಳಿಯುತ್ತದೆ.

ಮಂಗಳಾದೇವಿ ಕೋದಂಡರಾಮ ಹೋಟೆಲಿನ ಮುಂದೆ ಹಾಗು ಮಸೀದಿಯ ಮುಂದಿನ ಬೀದಿ ಎರಡರ ಮುಂದೆಯೂ ಆ ಹುಡುಗನ ಅಸಹಾಯಕತೆ ಒಂದೇ ತೆರನಾದದ್ದು. ತ್ರಿಶೂಲದಂತೆ ಕಾಣುವ ಊರುಗೋಲು, ಹಸಿದ ಹೊಟ್ಟೆ, ಒಂಟಿ ಬೀದಿಯ ನಡುವೆ ನಿಂತು ಮುಂದೇನು ಎನ್ನುವ ಗೊಂದಲ.. ನಮ್ಮ ಪ್ರಾರ್ಥನೆಯಲ್ಲಿ ಬರುವ ಶಿವ ಈ ಪರಿಸ್ಥಿಯಲ್ಲಿ ಇದ್ದಿದ್ದರೆ ಹೀಗೆ ಈ ಹುಡುಗನಂತೆ ಕಾಣಿಸುತ್ತಿದ್ದನೋ ಏನೋ ಅನಿಸಿ ಬಿಡುತ್ತದೆ.

ಒಂದು ದುಬಾರಿ ಬೆಲೆಯ ನಾಯಿಯ ಅಗತ್ಯ ಹಾಗು ಒಂದು ದೀರ್ಘ ಕಾಲದ ಗೆಳೆತನದ ಅವಶ್ಯಕತೆ ಇನ್ನಿಲ್ಲ ಎನ್ನುವ ಗಾಢ ವಿಚಾರಗಳನ್ನು ಪರಸ್ಪರ ಜೋಡಿಸಿ ಬಿಸಿ ಗಾಳಿಯಂತೆ ತೇಲಿ ಬಿಡುವ ನಿರ್ದೇಶಕರು ಮೌನದಲ್ಲೇ ಬಹಳಷ್ಟನ್ನು ಹೇಳಿದ್ದಾರೆ.

ಹಾಕಿಕೊಂಡ ಚಪ್ಪಲಿಯೇ ಕಥೆ ಮುಂದುವರೆಸುವ ವಿಧಾನ
ಕ್ರಿಕೆಟ್ ಬ್ಯಾಟನ್ನು ಚಿತ್ರದುದ್ದಕ್ಕೂ ಬಳಸಿಕೊಂಡ ರೀತಿ, ಕ್ರಿಕೆಟ್ ಆಟ ಸ್ಥಳೀಯ ಸ್ವಾದವನ್ನು ತುಂಬಿಕೊಂಡು ಕಥೆಯ ಭಾಗವಾಗುವುದು, ಪಾತ್ರದ ಮುಖ ಹಾಗು ಮಾತಿಗಿಂತ ಮೊದಲು ಕಾಲಿಗೆ ಹಾಕಿಕೊಂಡ ಚಪ್ಪಲಿ ಕಥೆಯನ್ನು ಮುಂದುವರಿಸಿಕೊಂಡು ಹೋಗುವುದು ಎಲ್ಲವೂ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುತ್ತದೆ.

ಸಿನಿಮಾದಲ್ಲಿ ಕ್ರೌರ್ಯ ಸಾಕಷ್ಟಿದೆ

ಸಾವುಗಳಿಗೆ ಇಲ್ಲಿ ಸಮರ್ಥನೆ ಕೊಡಲಿಕ್ಕೆ ಆಗದಷ್ಟು ಕ್ರೌರ್ಯವಿದೆ. ಸಣ್ಣ ವಯಸ್ಸಿನವರ ಕಣ್ಣಲ್ಲೂ ಕ್ರೌರ್ಯ ಕಾಣಿಸುತ್ತದೆ. ಹಾಗಂತ ಇದು ರಕ್ತಪಾತದ ಸಿನೆಮಾ ಅಲ್ಲ. ಹಿಂಸೆಯ ವೈಭವೀಕರಣ ಕೂಡ ಇಲ್ಲ, ಆದರೆ ಸಿನೆಮಾದ ಚಿತ್ರಕಥೆ ಹರವಿಕೊಂಡ ಉದ್ದಗಲ ಒಂದು ಸಣ್ಣ ಊರಿಗೆ ಸೀಮಿತ ಆಗಿರುವುದರಿಂದ ಹರಿವ ರಕ್ತ ತುಸು ಹೆಚ್ಚೇ ತಲ್ಲಣವನ್ನು ನಮ್ಮೊಳಗೇ ಉಂಟು ಮಾಡುತ್ತದೆ.

ಸಿದ್ಧಸೂತ್ರಗಳನ್ನು ಕುಟ್ಟಿ ಪುಡಿ ಮಾಡಿ ಕಟ್ಟಿದ ಸಿನೆಮಾ

ಇಡೀ ಸಿನೆಮಾದಲ್ಲಿ ಇಂತದ್ದೊಂದು ಬೇಕಿತ್ತು ಎನ್ನುವುದು ಇದ್ದರೆ ಅದು ಮಹಿಳಾ ಪಾತ್ರಗಳ ಗೈರು ಹಾಜರಿ. ರೌದ್ರ ಶಿವನ ನೋವು ಸ್ವಲ್ಪವಾದರು ಕರಗಬೇಕಿತ್ತು, ಹಾಗೆ ಕರಗುವ ಕಣ್ಣೀರನ್ನು ಬಚ್ಚಿಡಲು ಒಂದು ಹೆಗಲು ಬೇಕಿತ್ತು ಎನಿಸಿದರು ನಿರ್ದೇಶಕರೇ ಹೇಳಿದಂತೆ ಇದು ಸಿದ್ಧಸೂತ್ರಗಳನ್ನು ಕುಟ್ಟಿ ಪುಡಿ ಮಾಡಿ ಕಟ್ಟಿದ ಸಿನೆಮಾ.

ನಟನಾಗಿ ಅಬ್ಬರಿಸಿದ್ದಾರೆ ರಾಜ್‌ ಬಿ ಶೆಟ್ಟಿ

ನಿರ್ದೇಶಕ ರಾಜ್ ಬಿ ಶೆಟ್ಟಿ ತಾನೆಷ್ಟು ಪ್ರತಿಭಾವಂತ ನಿರ್ದೇಶಕ ಎನ್ನುವುದನ್ನು ‘ಒಂದು ಮೊಟ್ಟೆಯ ಕಥೆ’ ಸಿನೆಮಾ ಮೂಲಕ ಸಾಬೀತು ಮಾಡಿದ್ದರು. ‘ಗರುಡ ಗಮನ ವೃಷಭ ವಾಹನ’ ಸಿನೆಮಾ ಮೂಲಕ ಪಾತ್ರ ಹಾಗು ಪರಿಸರವನ್ನು ಕಟ್ಟುವ ಕುಸುರಿ ಕಲೆಯಲ್ಲಿ ಮತ್ತಷ್ಟು ಪಕ್ವತೆ ಪಡೆದುಕೊಂಡು ನಮ್ಮ ಮುಂದೆ ಬಂದಿದ್ದಾರೆ. ನಟನಾಗಿ ಕೂಡ ಸಿನೆಮಾದುದ್ದಕ್ಕೂ ಅಬ್ಬರಿಸಿರುವ ರಾಜ್ ಬಿ ಶೆಟ್ಟಿ ಪಾತ್ರದ ಕುರಿತು ಎಷ್ಟು ಬರೆದರೂ ಕಡಿಮೆಯೇ. ‘ಅಮ್ಮಚ್ಚಿ ಎಂಬ ನೆನಪು’ ಸಿನೆಮಾದಲ್ಲಿ ತುಸು ಗಡುಸಾಗಿರುವ ಪಾತ್ರದಲ್ಲಿ ನಟಿಸಿದ್ದರು ಕೂಡ ಈ ಸಿನೆಮಾದ ಪಾತ್ರದ ಒರಟುತನ ಭಯ ಪಡಿಸುವಂತಾದ್ದು.

ರಿಶಬ್ ನಟನೆಯ ಹಸಿವಿಗೆ ಉದಾಹರಣೆ

ಸ್ಟಾರ್ ನಿರ್ದೇಶಕ ಹಾಗು ನಟ ರಿಶಬ್ ಶೆಟ್ಟಿ ಹರಿ ಎನ್ನುವ ಭಿನ್ನ ಪಾತ್ರದ ಮೂಲಕ ಸಮಾನ ಪೈಪೋಟಿ ನೀಡಿದ್ದಾರೆ. ಬೆಲ್ ಬಾಟಮ್ ಸಿನೆಮಾದ ಭರ್ಜರಿ ಯಶಸ್ಸು ಅವರನ್ನು ಅದೇ ತೆರನಾದ ಪಾತ್ರಗಳಿಗೆ ಬ್ರ್ಯಾಂಡ್ ಮಾಡಿ ಬಿಡುತ್ತದೆ ಎನ್ನುವ ಆತಂಕವಿತ್ತು. ಆದರೆ ಮಂಗಳಾದೇವಿಯ ಹರಿ ಪಾತ್ರ ಪೋಷಣೆ ರಿಶಬ್ ನಟನೆಯ ಹಸಿವನ್ನು ಇನ್ನಷ್ಟು ತೆರೆದಿಡುತ್ತದೆ.

ಬ್ರಹ್ಮಯ್ಯನ ತೂಕವೇ ಬೇರೆ

ಹರಿ ಹಾಗು ಶಿವ ಪಾತ್ರಗಳದ್ದೆ ಒಂದು ತೂಕವಾದರೆ ಬ್ರಹ್ಮಯ್ಯ ಎನ್ನುವ ಪಾತ್ರವನ್ನು ನಿಭಾಯಿಸಿರುವ ಗೋಪಾಲಕೃಷ್ಣ ದೇಶಪಾಂಡೆ ನಟನೆ ಮತ್ತೊಂದು ಹಂತದ್ದು. ಇಡೀ ಸಿನೆಮಾವನ್ನು ನಿರೂಪಿಸುವುದರ ಜೊತೆಗೆ ಈ ವ್ಯವಸ್ಥೆಯ ಭಾಗವೊಂದು ಅಭದ್ರತೆ ಹಾಗು ಅಸಹಾಯಕತೆಯಿಂದ ಮರುಗುವುದನ್ನು ಅವರ ಪಾತ್ರ ಧ್ವನಿಸುತ್ತದೆ. ಅದನ್ನು ಅವರು ನಿಭಾಯಿಸಿರುವ ರೀತಿ ಅನನ್ಯ. ರಂಗಭೂಮಿಯ ಪ್ರತಿಭೆ ದೀಪಕ್ ರೈ ಪಾಣಾಜೆ ಹಾಗು ಹರ್ಷದೀಪ್ ನಟನೆ ಕೂಡ ಗಮನೀಯ. ಜೊತೆಗೆ ಹೆಚ್ಚಿನ ಎಲ್ಲ ಪೋಷಕ ಪಾತ್ರಗಳು ಸಹಜಾಭಿನಯದ ಮೂಲಕ ಚಪ್ಪಾಳೆ ಗಿಟ್ಟಿಸುತ್ತಾರೆ.

ತಂತ್ರಜ್ಞರ ಕೆಲಸವೂ ಅದ್ಭುತ

ಅದ್ಭುತ ಪರಿಸರ ಸೃಷ್ಟಿಯ ಜೊತೆಗೆ ಆ ಪರಿಸರವನ್ನು ನಮಗೆ ಇನ್ನಷ್ಟು ರಂಜನೀಯ ಮಾಡುವುದು ಸಿನೆಮಾದ ಛಾಯಾಗ್ರಹಣ ಹಾಗು ಅದಕ್ಕೆ ತಕ್ಕುದಾಗಿ ಹೊಂದಿಕೊಳ್ಳುವ ಸಂಗೀತ ಸಂಯೋಜನೆ. ಛಾಯಾಗ್ರಾಹಕ ಪ್ರವೀಣ್ ಶ್ರೀಯಾನ್ ಹಾಗು ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಈ ಸಿನೆಮಾದ ತಾಂತ್ರಿಕ ಗುಣಮಟ್ಟವನ್ನು ತಮ್ಮ ಕೊಡುಗೆಗಳ ಮೂಲಕ ಹೆಚ್ಚಿಸಿದ್ದಾರೆ. ಸೇಡು, ಕ್ರೌರ್ಯ ಹಾಗು ದುರಾಸೆಗಳು ಪಯಣ ಆರಂಭಿಸಿದ ಜಾಗದಲ್ಲೇ ಹೊದ್ದು ಮಲಗುವ ರೂಪಕದೊಂದಿಗೆ ಸಿನೆಮಾ ಮುಗಿಯುತ್ತದೆ. ಚಿತ್ರಮಂದಿರದಿಂದ ಹೊರ ಬಂದರು ಕೊನೆಯ ದೃಶ್ಯಗಳು ಹೇಳದೆ ತಲುಪಿಸಿದ ಮಾತುಗಳು ಬಹಳ ದಿನ ಕಾಡುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

100 Movie Review: ಸೋಶಿಯಲ್ ಮೀಡಿಯಾಗೆ ಅಡಿಕ್ಟ್ ಆದವರು '100' ನೋಡಲೇಬೇಕು;

Fri Dec 31 , 2021
ಅದೆಷ್ಟು ಮರ ಸುತ್ತುವ ಕಥೆಯನ್ನೇ ನೋಡಬೇಕು. ಅದೆಷ್ಟು ಲವ್ ಸ್ಟೋರಿ ನೋಡಬೇಕು. ಕನ್ನಡದಲ್ಲಿ ಪ್ರೇಮ್ ಕಹಾನಿ, ರೌಡಿಸಂ ಬಿಟ್ಟರೆ ಬೇರೆ ತರಹದ ಕಥೆನೇ ಸಿಗುತ್ತಿಲ್ವಾ? ಹೀಗಂತ ಕಮೆಂಟ್ ಮಾಡುವವರಿಗೆ ರಮೇಶ್ ಅರವಿಂದ್ ನಿರ್ದೇಶಕನ ‘100’ ಸಿನಿಮಾ ಹೊಸದು ಅಂತ ಅನಿಸುತ್ತೆ. ಹಾಗಂತ, ಸೈಬರ್ ಕ್ರೈಂ ಕಹಾನಿಯನ್ನು ಇಟ್ಟುಕೊಂಡು ಹೆಣೆದ ಕಥೆ ಕನ್ನಡದಲ್ಲಿ ಬಂದೇ ಇಲ್ವಾ? ಅನ್ನುವ ಪ್ರಶ್ನೆನೂ ಸಹಜ. ಆದರೆ, ಈಗಿನ ಪರಿಸ್ಥಿತಿಗೆ ಸಮಾಜಕ್ಕೆ ಹೇಳಿ ಮಾಡಿಸಿದ ಸಿನಿಮಾ ಅಂತ […]

Advertisement

Wordpress Social Share Plugin powered by Ultimatelysocial