ನಾಲ್ಕು ತಲೆಮಾರಿಂದ ಗಣೇಶನ ಸೇವೆ: 94 ವರ್ಷಗಳಿಂದ ಗಣಪತಿ ಮೂರ್ತಿ ಮಾಡುವ ಅಪರೂಪದ ಕುಟುಂಬ

ಮಂಗಳೂರು, ಸೆಪ್ಟೆಂಬರ್‌ 16: ಗಣೇಶೋತ್ಸವದ ಸಂದರ್ಭ ಗಣಪನ ಮೂರ್ತಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಆದರೆ ಗಣೇಶನ ವಿಗ್ರಹ ತಯಾರಿಸುವುದು ಒಂದು ವಿಶಿಷ್ಟವಾದ ಕಲೆ. ಈ ವಿದ್ಯೆ ಎಲ್ಲರಿಗೂ ಒಲಿದಿರುವುದಿಲ್ಲ. ಯಾವುದೋ ತರಬೇತಿ ತರಗತಿಯಿಂದ ಕಲಿಯಲು ಸಾಧ್ಯವಿಲ್ಲ ಶೃದ್ಧೆ ಹಾಗೂ ಭಕ್ತಿಯಿಂದ ಮಾತ್ರ ಇದು ಸಾಧ್ಯ.

ಆದರೆ ಮಂಗಳೂರಿನ ಕುಟುಂಬವೊಂದು ಬರೋಬ್ಬರಿ ನಾಲ್ಕು ತಲೆಮಾರುಗಳಿಂದ ಗಣಪನ ಮೂರ್ತಿ ತಯಾರಿಯಲ್ಲಿ ತಮ್ಮನ್ನು ತೊಡಗಿಸಿದೆ.

ಗಣೇಶೋತ್ಸವ ಬರುತ್ತಿದ್ದಂತೆ ಈ ಮನೆಮಂದಿಯೆಲ್ಲಾ ಗಣಪನ ಮೂರ್ತಿಮಾಡುವ ಕಾಯಕದಲ್ಲಿ ನಿರತರಾಗುತ್ತಾರೆ. ವಿಶೇಷವೆಂದರೆ ಇವರ ಗಣಪನಿಗೆ ಅಮೇರಿಕಾದಲ್ಲೂ ಬೇಡಿಕೆಯಿದೆ. ಈಗಾಗಲೇ ಇವರ ಮನೆಯಲ್ಲಿ ತಯಾರಾದ ಈ ಗಣಪ ವಿಮಾನ ಹತ್ತಿ ಕ್ಯಾಲಿಫೋರ್ನಿಯಾಕ್ಕೆ ಹಾರಾಟ ಮಾಡಿಯಾಗಿದೆ.

ಮಂಗಳೂರಿನ ಮಣ್ಣಗುಡ್ಡ ನಿವಾಸಿ ರಾಮಚಂದ್ರ ರಾವ್ ಅವರ ಮುಂದಾಳತ್ವದಲ್ಲಿ ವರ್ಷಂಪ್ರತಿ ಗಣಪನ ಮೂರ್ತಿ ರಚನಾ ಕಾರ್ಯ ಈ ಮನೆಮಂದಿಯಿಂದ ನಡೆಯುತ್ತದೆ. ಸುಮಾರು 94 ವರ್ಷಗಳ ಹಿಂದೆ ರಾಮಚಂದ್ರ ರಾಯರ ತಂದೆ ಮೋಹನ್ ರಾವ್ ಗಣೇಶನ ವಿಗ್ರಹ ತಯಾರಿಯನ್ನು ಆರಂಭಿಸಿದ್ದರು. ಬಳಿಕ ಅವರ ನಾಲ್ವರು ಮಕ್ಕಳು, ಬಳಿಕ ಮೊಮ್ಮಕ್ಕಳು, ಇದೀಗ ಮರಿಮಕ್ಕಳು ಸೇರಿ ನಾಲ್ಕು ತಲೆಮಾರುಗಳಿಂದ ಈ ಕಾರ್ಯದಲ್ಲಿ ನಿರತವಾಗಿದೆ. ಇವರಲ್ಲಿ 9 ಇಂಚಿನ ಗಣಪನಿಂದ 10 ಅಡಿ ಎತ್ತರದ ಗಣಪ ತಯಾರಾಗುತ್ತಾನೆ.

ಮೋಹನ್ ರಾವ್ ಆವೆ ಮಣ್ಣಿನ ಸಾಂಪ್ರದಾಯಿಕ ಗಣಪನ ತಯಾರಿಗೆ ಒತ್ತು ನೀಡಿದ್ದರು. ಅವರು ಗತಿಸಿದ ಬಳಿಕ ನಾಲ್ಕು ತಲೆಮಾರುಗಳಿಂದ ಮೋಹನ್ ರಾವ್ ರವರು ತೋರಿದ ದಾರಿಯಲ್ಲಿ ನಡೆಯುತ್ತಿದ್ದಾರೆ. ಸಂಪೂರ್ಣ ಕುಟುಂಬ ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿ ರಚನೆ ಮಾಡುತ್ತಿದೆ‌. ಕುಟುಂಬದಲ್ಲಿ ಕೆಲವರು ದೊಡ್ಡ ಹುದ್ದೆಯಲ್ಲಿದ್ದರೂ, ಒಂದು ತಿಂಗಳು ರಜೆ ಹಾಕಿ ಗಣಪತಿ ಮೂರ್ತಿ ತಯಾರು ಮಾಡುತ್ತಾರೆ.‌

ಈ ಬಾರಿ ಬರೋಬ್ಬರಿ 260 ರಷ್ಟು ಗಣಪನನ್ನು ಈ ಕುಟುಂಬ ತಯಾರಿಸಿದೆ. ಬರೀ ಆವೆಮಣ್ಣು, ಬೈಹುಲ್ಲು, ಪರಿಸರ ಪೂರಕ ಬಣ್ಣ ಬಳಸಿ ಮೂರ್ತಿ ರಚನೆಯಾಗಿದೆ. ಸುಮಾರು 2,500 ಹಂಚಿಗಾಗುವಷ್ಟು ಆವೆಮಣ್ಣಿನಲ್ಲಿ ಗಣಪ ತಯಾರಾಗಿದ್ದಾನೆ. ಮಂಗಳೂರು ನಗರದ ಆಸುಪಾಸಿನಲ್ಲಿ ಕೂರಿಸುವ ಪ್ರಖ್ಯಾತ ಸಾರ್ವಜನಿಕ ಗಣಪನ ಮೂರ್ತಿಯನ್ನು ಈ ಕುಟುಂಬವೇ ತಯಾರಿಸುತ್ತದೆ. ಅಲ್ಲದೆ ಮನೆಮನೆಯಲ್ಲಿ ಕೂರಿಸುವ ಸುಮಾರು 200ಕ್ಕಿಂತಲೂ ಅಧಿಕ ಸಾಂಪ್ರದಾಯಿಕ ಗಣಪನನ್ನು ತಯಾರಿಸುತ್ತಾರೆ.

ಆಧುನಿಕ ಕಾಲಘಟ್ಟದಲ್ಲೂ ತಲೆಮಾರುಗಳಿಂದ ಕುಟುಂಬವೊಂದು ಇಂತಹ ಕಾರ್ಯದಲ್ಲಿ ತೊಡಗಿರುವುದು ವಿಶೇಷವೇ ಸರಿ. ಗಣಪತಿ ಮೂರ್ತಿಯನ್ನು ಈ ಕುಟಂಬ ಗಣೇಶ ಚತುರ್ಥಿ ಗೆ ಎರಡು ತಿಂಗಳು ಇರುವಾಗಲೇ ತಯಾರಿಸಲು ಆರಂಭಿಸುತ್ತದೆ. ಗಣಪತಿಯ ಜನ್ಮ ನಕ್ಷತ್ರ ವಾದ ಚಿತ್ರಾ ನಕ್ಷತ್ರದಂದು ಮೂಹೂರ್ತ ಮಾಡುತ್ತಾರೆ. ಬಳಿಕ ಆವೆ ಮಣ್ಣನ್ನು ಮೂಡಬಿದಿರೆ ಮತ್ತು ಉತ್ತರ ಕನ್ನಡದಿಂದ ತಂದು ಪ್ರಕಿಯೆ ಆರಂಭಿಸುತ್ತಾರೆ.

ಕೈಯಿಂದಲೇ ಗಣಪತಿಯ ಮೂರ್ತಿ ರಚಿಸಲಾಗುತ್ತದೆ. ಸಾಂಪ್ರದಾಯಿಕ ಬದ್ಧವಾಗಿ ಮಾಡುವ ಗಣಪತಿ ಉತ್ಸವಕ್ಕೆ ಮಾತ್ರ ಗಣಪತಿಯನ್ನು ನೀಡುತ್ತಾರೆ. ಮಂಗಳೂರಿನ ಅತೀ ಪ್ರಸಿದ್ಧ ಸಂಘನಿಕೇತನ ಗಣಪತಿ, ಹಿಂದೂ ಯುವಸೇನೆ ಗಣಪತಿ, ಪದವಿನಂಗಡಿ ಗಣಪತಿ ಸೇರಿದಂತೆ ಹಲವು ಪ್ರಸಿದ್ಧ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಕುಟುಂಬದ ಗಣಪತಿಯೇ ಪೂಜಿತವಾಗೋದು ವಿಶೇಷ

ಗಣಪತಿಗೆ ಈ ಕುಟುಂಬ ದುಡ್ಡು ಕಟ್ಟೋದಿಲ್ಲ. ಎಷ್ಟೇ ದೊಡ್ಡ ಮೂರ್ತಿಯಾದರೂ ದರ ನಿಗದಿ ಮಾಡುವುದಿಲ್ಲ. ಗಣಪತಿ ಮೂರ್ತಿ ಬೇಕಾದವರು ಆರಂಭದಲ್ಲೇ ನೀಡುವ ವೀಳ್ಯದೆಲೆ ಬೂಳ್ಯದಲ್ಲಿ ನೀಡುವ ಹಣವನ್ನು ಮಾತ್ರ ಕುಟುಂಬ ಸ್ವೀಕಾರ ಮಾಡುತ್ತಾರೆ. ಅಲ್ಲದೆ ಕಳೆದ ಐದು ವರ್ಷದಿಂದ ಅಮೇರಿಕಾದ ಕ್ಯಾಲಿಪೋರ್ನಿಯಾದ ಒಂದು ಕುಟುಂಬ ಮಂಗಳೂರಿನ ಗಣಪತಿಯನ್ನೇ ತರಿಸಿಕೊಳ್ಳುತ್ತಿರೋದು ಕುಟುಂಬದ ಗಣಪತಿ ಮೂರ್ತಿ ರಚನೆಯ ಮೇಲಿರುವ ಪ್ರೀತಿಗೆ ನಿದರ್ಶನವಾಗಿದೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ಗುಜರಾತ್‌ನ ದಾಹೋದ್-ಆನಂದ್ ರೈಲಿನಲ್ಲಿ ಬೆಂಕಿ ಅವಘಡ, ತಪ್ಪಿದ ಭಾರೀ ಅನಾಹುತ

Sat Sep 16 , 2023
ದೋಹಾ: ಗುಜರಾತ್‌ನ ದಾಹೋದ್ ಜಿಲ್ಲೆಯ ಜಾಕೋಟ್ ನಿಲ್ದಾಣದಲ್ಲಿ ಶುಕ್ರವಾರ ದಾಹೋದ್-ಆನಂದ್ ಮೆಮು ರೈಲಿನ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಸಣ್ಣ ಮತ್ತು ಮಧ್ಯಮ-ದೂರ ಮಾರ್ಗಗಳಿಗೆ ಬಳಸಲಾಗುವ ಎಲೆಕ್ಟ್ರಿಕ್ ಬಹು-ಘಟಕ ರೈಲು MEMU, ಜಾಕೋಟ್ ನಿಲ್ದಾಣದಲ್ಲಿ ಬೆಂಕಿ ಸಂಭವಿಸಿದ ಸಂದರ್ಭದಲ್ಲಿ ಗೋಧ್ರಾ ಕಡೆಗೆ ಹೋಗುತ್ತಿತ್ತು.   ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ರೈಲು ಬೆಂಕಿಯಿಂದ ಧಗಧಗಿಸುತ್ತಿದ್ದು, ಪ್‌ರಯಾಣಿಕರೆಲ್ಲರೂ ರೈಲಿನಿಂದ ಕೆಳಗಿಳಿದು ಪ್ರಾಣಪಾಯದಿಂದ ಪಾರಾಗಿದ್ದಾರೆ. […]

Advertisement

Wordpress Social Share Plugin powered by Ultimatelysocial