ಟಿ. ಎಸ್. ವೆಂಕಣ್ಣಯ್ಯ ವಿದ್ವಾಂಸರು.

 

ಟಿ. ಎಸ್. ವೆಂಕಣ್ಣಯ್ಯಹಲವು ದೀಪಗಳನ್ನು ಹಚ್ಚಿ ಅವುಗಳ ಪ್ರತಿಭೆಯಲ್ಲಿ ತಾನು ಹಿಂದೆ ನಿಂತ ದೀಪ ತಳುಕಿನ ವೆಂಕಣ್ಣಯ್ಯನವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.
ಕುವೆಂಪು, ತೀನಂಶ್ರೀ, ಡಿ. ಎಲ್. ನರಸಿಂಹಾಚಾರ್, ಎಂ.ವಿ. ಸೀತಾರಾಮಯ್ಯ, ಎಸ್. ವಿ. ಪರಮೇಶ್ವರ ಭಟ್ಟ, ಮಾನ್ಸಿ ನರಸಿಂಗರಾವ್, ಜಿ. ವೆಂಕಟಸುಬ್ಬಯ್ಯ ಇಂತಹ ವಿದ್ವಾಂಸರು, ಕವಿಗಳು ಎಷ್ಟೋ ದಶಕಗಳ ನಂತರವೂ ವೆಂಕಣ್ಣಯ್ಯನವರನ್ನು ಪ್ರೀತಿಯಿಂದ, ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಿದ್ದರು ಎನ್ನುವುದು; ಅವರ ಶಿಷ್ಯರಲ್ಲದೆ ಬಿ.ಎಂ.ಶ್ರೀ, ಮಾಸ್ತಿ, ಡಿ.ವಿ.ಜಿ ಇಂತಹವರೂ ಅವರನ್ನು ಅದೇ ಬಗೆಯ ಪ್ರೀತಿಯಿಂದ ಸ್ಮರಿಸುತ್ತಿದ್ದರು ಎನ್ನುವುದು ನವೋದಯ ಕನ್ನಡ ಸಾಹಿತ್ಯದ ಯುಗದಲ್ಲಿ ಅವರ ಸ್ಥಾನಕ್ಕೆ ಕನ್ನಡಿ. ದೈಹಿಕವಾಗಿ, ಮಾನಸಿಕವಾಗಿ ಎತ್ತರದ ವ್ಯಕ್ತಿಯಾಗಿದ್ದ ವೆಂಕಣ್ಣಯ್ಯನವರನ್ನು ಸ್ಮರಿಸಿಕೊಳ್ಳುತ್ತಿದ್ದವರು, ಅವರನ್ನು ಕುರಿತು ಅತ್ಯಂತ ಗೌರವದಿಂದ ಅವರಂತಹ ಮನುಷ್ಯರೇ ವಿರಳ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದರು.ವೆಂಕಣ್ಣಯ್ಯನವರು 1885ರ ಅಕ್ಟೋಬರ್ 1ರಂದು ಹುಟ್ಟಿದರು. ನಂಟರೊಬ್ಬರ ಮನೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ವಾಸಿಸಿದ ವೆಂಕಣ್ಣಯ್ಯ ಕಷ್ಟ, ತಿರಸ್ಕಾರಗಳ ನಡುವೆಯೂ ವ್ಯಾಸಂಗ ಮಾಡಿದರು. ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವರ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಫಸ್ಟ್ ಇನ್ ಆರ್ಟ್ಸ್ (ಎಫ್. ಎ) ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರ ಚಿಕ್ಕಪ್ಪನ ನೆರವಿನಿಂದ ಬಿ.ಎ ಓದಿದರು. ಅವರು ಬಿ.ಎ ಪರೀಕ್ಷೆಯಲ್ಲಿ ಯಶಸ್ವಿಯಾದಾಗ ಇಡೀ ತಳುಕು ಹಳ್ಳಿಯೇ ಸಂಭ್ರಮದಿಂದ ಹಬ್ಬವನ್ನಾಚರಿಸಿತು. 1914ರಲ್ಲಿ ಖಾಸಗಿ ವಿದ್ಯಾರ್ಥಿಯಾಗಿ, ಕನ್ನಡ ಎಂ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆಗಿನ ದಿನಗಳಲ್ಲಿ ಕನ್ನಡ ಎಂದರೇ ತಾತ್ಸಾರ, ಕನ್ನಡದಲ್ಲಿ ಎಂ.ಎ ಪರೀಕ್ಷೆ ಮಾಡುವುದೆಂದರೆ ಹಾಸ್ಯಕ್ಕೆ ವಸ್ತು. ಅಂತಹ ದಿನಗಳಲ್ಲಿ ಅವರು ಕನ್ನಡಕ್ಕೆ ನಿಂತರು.ಧಾರವಾಡದ ಬೇಸಿಲ್ ಮಿಷನ್ ಹೈಸ್ಕೂಲಿನಿಂದ ಅಧ್ಯಾಪಕರಾದ ವೆಂಕಣ್ಣಯ್ಯ ಬಹುಬೇಗ ಉತ್ತಮ ಅಧ್ಯಾಪಕರೆಂದೂ, ಗೌರವಿಸಬೇಕಾದ ಮನುಷ್ಯ ಎಂದೂ ಹೆಸರಾದರು. ಅರವತ್ತು ರೂಪಾಯಿ ಸಂಬಳದಲ್ಲಿ ಇಪ್ಪತ್ತು ರೂಪಾಯಿಗಳನ್ನು ತಂದೆಗೆ ಕಳುಹಿಸುತ್ತಿದ್ದರು. ಮೂರು ವರ್ಷಗಳ ನಂತರ ಬೆಂಗಳೂರು ಸೇಂಟ್ ಜೋಸೆಫ್ ಹೈಸ್ಕೂಲಿನಲ್ಲಿ ಎಪ್ಪತ್ತೈದು ರೂಪಾಯಿಗಳ ಸಂಬಳದ ಮೇಲೆ ಅಧ್ಯಾಪಕರಾಗಿ ಬಂದರು. ಹದಿನೈದು ರೂಪಾಯಿ ಬಾಡಿಗೆಗೆ ದೊಡ್ಡ ಮನೆ ಸಿಕ್ಕುತ್ತಿದ್ದ ಕಾಲ. ಅವರು ಆರಿಸಿದ ಮನೆ ಎಷ್ಟು ದೊಡ್ಡದಾಗಿತ್ತೆಂದರೆ ಅಲ್ಲೇ ಎ. ಎಸ್. ನರಸಿಂಹಯ್ಯನವರು, ಎ. ಆರ್. ಕೃಷ್ಣಶಾಸ್ತ್ರಿಗಳು, ಎಂ. ಆರ್. ಶ್ರೀನಿವಾಸ ಮೂರ್ತಿಗಳು ಎಲ್ಲಾ ಸಂಸಾರ ಸಹಿತ ವಾಸ ಮಾಡುವುದು ಸಾಧ್ಯವಾಯಿತು. 1919ರಲ್ಲಿ ಸೆಂಟ್ರಲ್ ಕಾಲೇಜಿಗೆ ಕನ್ನಡ ಅಧ್ಯಾಪಕರಾಗಿ ನೇಮಿತರಾದ ವೆಂಕಣ್ಣಯ್ಯನವರು ಕ್ರಮೇಣ ಅಸಿಸ್ಟೆಂಟ್ ಪ್ರೊಫೆಸರ್ ಆದರು. ಪ್ರೊಫೆಸರ್ ಆದರು. 1927ರಲ್ಲಿ ಮಹಾರಾಜ ಕಾಲೇಜಿನಲ್ಲಿ ಪ್ರೊಫೆಸರಾಗಿ ನೇಮಕವಾದ ಬಳಿಕ ಅವರು ಎಂಟು ವರ್ಷ ಆ ವಿಭಾಗದ ಭಾಗ್ಯವನ್ನು ಬೆಳೆಸಿದರು. ಅದಕ್ಕೆ ಕೀರ್ತಿಯನ್ನು ತಂದುಕೊಟ್ಟರು. ಅದನ್ನು ಸಾಹಿತ್ಯಸ್ಪೂರ್ತಿಯ ನೆಲೆಯನ್ನಾಗಿ ಮಾಡಿದರು.ವೆಂಕಣ್ಣಯ್ಯನವರು ಕನ್ನಡವು ಆಧುನಿಕ ಜಗತ್ತಿನಲ್ಲಿ ಗರಿಗೆದರಬೇಕಾದ ದಿನಗಳಲ್ಲಿ ಕನ್ನಡ ಕೆಲಸದ ಕೇಂದ್ರವಾಗಿದ್ದರು. 1918ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಕರ್ನಾಟಕ ಸಂಘವನ್ನು ಎ. ಆರ್. ಕೃಷ್ಣಶಾಸ್ತ್ರಿಗಳು ಪ್ರಾರಂಭಿಸಿದಾಗ ಅವರಿಗೆ ವೆಂಕಣ್ಣಯ್ಯನವರ ಬೆಂಬಲ ಸಂಪೂರ್ಣವಾಗಿತ್ತು. ಇದೇ ಪ್ರಾಯಶಃ ಮೊಟ್ಟ ಮೊದಲನೆಯ ಕರ್ನಾಟಕ ಸಂಘ. ಮರುವರ್ಷ ‘ಪ್ರಬುದ್ಧ ಕರ್ನಾಟಕ’ ಪ್ರಾರಂಭವಾಯಿತು. ಕೃಷ್ಣಶಾಸ್ತ್ರಿಗಳಿಗೆ ಮೈಸೂರಿಗೆ ವರ್ಗವಾದಾಗ ವೆಂಕಣ್ಣಯ್ಯನವರು ಸಂಘದ ಮತ್ತು ಪತ್ರಿಕೆಯ ನಿರ್ವಹಣೆಯನ್ನು ವಹಿಸಿಕೊಂಡರು. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದ ಆಚಾರ್ಯ ಶ್ರೀ ಅವರ ‘ಇಂಗ್ಲಿಷ್ ಗೀತೆಗಳು’ ವೆಂಕಣ್ಣಯ್ಯನವರು ಸಂಘವನ್ನು ನಿರ್ವಹಿಸುತ್ತಿದ್ದಾಗ ಪ್ರಕಟವಾಯಿತು. ಡಿ.ವಿ.ಜಿ ಅವರ ‘ವಸಂತ ಕುಸುಮಾಂಜಲಿ’ ಮತ್ತು ‘ನಿವೇದನ’ಗಳೂ ಈ ಕಾಲದ ಪ್ರಕಟಣೆಗಳೇ. ಅವರು ಮೈಸೂರು ಮಹಾರಾಜ ಕಾಲೇಜಿಗೆ ವರ್ಗವಾಗಿ ಹೋದ ನಂತರ ಅಲ್ಲಿನ ಕರ್ನಾಟಕ ಸಂಘದ ಮಾರ್ಗದರ್ಶನ, ಕಾರ್ಯನಿರ್ವಹಣೆ ಬಹುಮಟ್ಟಿಗೆ ಅವರ ಪಾಲಿಗೆ ಬಂದವು. ಪ್ರೊ. ಬಿ. ಎಂ. ಶ್ರೀ ಅವರು ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿ ಕವಿಗಳ ಕಾವ್ಯವಾಚನಕ್ಕೆ ಅವಕಾಶ ಮಾಡಿಕೊಟ್ಟ ವೆಂಕಣ್ಣಯ್ಯನವರು ಒಂದು ವಿಶಿಷ್ಟ ವಾತಾವರಣವನ್ನು ಸೃಷ್ಟಿಸಿದರು. ಈ ಕಾರ್ಯಕ್ರಮಗಳಲ್ಲಿ ವಾಚನವಾದ ಆಯ್ದ ಕವನಗಳ ಸಂಕಲನವೂ ಪ್ರಕಟವಾದವು. ‘ಕಿರಿಯ ಕಾಣಿಕೆ’ ಮತ್ತು ‘ತಳಿರು’ ಇವುಗಳಲ್ಲಿ ಪ್ರಮುಖವಾದವು. ಕುವೆಂಪು, ಪು.ತಿ.ನ, ಜಿ. ಪಿ. ರಾಜರತ್ನಂ, ದಿನಕರ ದೇಸಾಯಿ, ತೀ.ನಂ.ಶ್ರೀ, ಎಂ. ವಿ. ಸೀತಾರಾಮಯ್ಯ ಮೊದಲಾದವರ ಕವನಗಳು ಮೊದಲು ದಾಖಲಾಗಿದ್ದು ಈ ಸಂಕಲನಗಳಲ್ಲಿ. ಬಿ. ವೆಂಕಟಾಚಾರ್ಯರ ‘ಸಾವಿನ ಸಮಸ್ಯೆ’, ಎ. ಎನ್. ಮೂರ್ತಿರಾಯರ ‘ಆಷಾಡಭೂತಿ’ ಮತ್ತು ಅನಂತ ನಾರಾಯಣ ಶಾಸ್ತ್ರಿಗಳು ಶ್ರೀ ಹರ್ಷನ ನಾಟಕವನ್ನು ಅನುವಾದಿಸಿದ ‘ನಾಗಾನಂದ‘ ನಾಟಕ – ಎಲ್ಲ ಈ ಕಾಲದಲ್ಲಿ ಪ್ರಕಟವಾದವು. ಹಿರಿಯರೂ ಕನ್ನಡಕ್ಕಾಗಿ ಶ್ರಮಿಸಿದವರೂ ಆದ ಗಳಗನಾಥರಿಗೆ ಸನ್ಮಾನ ಮಾಡಿತು. ‘ಕುಮಾರವ್ಯಾಸ ಜಯಂತಿ’ಯನ್ನು ವ್ಯವಸ್ಥೆ ಮಾಡಿ ಗದುಗಿನ ಭಾರತದ ಭಾಗಗಳ ವಾಚನಗಳನ್ನೂ ಏರ್ಪಡಿಸಿ ಹೊಸ ಹೆಜ್ಜೆ ಹಾಕಿತು. ಮೈಸೂರಿನಲ್ಲಿ ನಡೆದ ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥೆ ಮಾಡಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಲತ್ ಮಹಮೂದ್ ಸಿನಿಮಾ ಗಾಯನ ಪ್ರತಿಭೆ

Fri Feb 24 , 2023
  ತಲತ್ ಮಹಮೂದ್ ಕಳೆದ ಶತಮಾನದ ಮಹಾನ್ ಗಝಲ್ ಮತ್ತು ಸಿನಿಮಾ ಗಾಯನ ಪ್ರತಿಭೆಗಳಲ್ಲಿ ಒಬ್ಬರು. 1950 ಮತ್ತು 1960 ದಶಕಗಳಲ್ಲಿ ದೇಶದಲ್ಲಿ ಗಝಲ್ ಗಾಯನಕ್ಕೊಂದು ಮಾದರಿಯನ್ನು ರೂಪಿಸಿದ ಕೀರ್ತಿ ತಲತ್ ಮಹಮೂದ್ ಅವರದು. ತಲತ್ ಮಹಮೂದ್ 1924ರ ಫೆಬ್ರವರಿ 24ರಂದು ಲಕ್ನೋನಲ್ಲಿ ಜನಿಸಿದರು. ತಂದೆ ಮನಜೂರ್ ಮಹಮೂದ್. ಬಾಲ್ಯದಲ್ಲೇ ಇವರ ಮನಸ್ಸು ಸಂಗೀತದೆಡೆಗೆ ವಾಲಿತ್ತು. ರಾತ್ರಿಯಿಡೀ ನಡೆಯುತ್ತಿದ್ದ ಸಂಗೀತ ಕಛೇರಿಗಳನ್ನು ತಲ್ಲೀನರಾಗಿ ಆಲಿಸುತ್ತಿದ್ದರು. ಧಾರ್ಮಿಕ ಕೌಟುಂಬಿಕ ವಾತಾವರಣದಲ್ಲಿ ಹಾಡುಗಾರಿಕೆಗೆ […]

Advertisement

Wordpress Social Share Plugin powered by Ultimatelysocial