ತಲತ್ ಮಹಮೂದ್ ಸಿನಿಮಾ ಗಾಯನ ಪ್ರತಿಭೆ

 

ತಲತ್ ಮಹಮೂದ್ ಕಳೆದ ಶತಮಾನದ ಮಹಾನ್ ಗಝಲ್ ಮತ್ತು ಸಿನಿಮಾ ಗಾಯನ ಪ್ರತಿಭೆಗಳಲ್ಲಿ ಒಬ್ಬರು. 1950 ಮತ್ತು 1960 ದಶಕಗಳಲ್ಲಿ ದೇಶದಲ್ಲಿ ಗಝಲ್ ಗಾಯನಕ್ಕೊಂದು ಮಾದರಿಯನ್ನು ರೂಪಿಸಿದ ಕೀರ್ತಿ ತಲತ್ ಮಹಮೂದ್ ಅವರದು.
ತಲತ್ ಮಹಮೂದ್ 1924ರ ಫೆಬ್ರವರಿ 24ರಂದು ಲಕ್ನೋನಲ್ಲಿ ಜನಿಸಿದರು. ತಂದೆ ಮನಜೂರ್ ಮಹಮೂದ್. ಬಾಲ್ಯದಲ್ಲೇ ಇವರ ಮನಸ್ಸು ಸಂಗೀತದೆಡೆಗೆ ವಾಲಿತ್ತು. ರಾತ್ರಿಯಿಡೀ ನಡೆಯುತ್ತಿದ್ದ ಸಂಗೀತ ಕಛೇರಿಗಳನ್ನು ತಲ್ಲೀನರಾಗಿ ಆಲಿಸುತ್ತಿದ್ದರು. ಧಾರ್ಮಿಕ ಕೌಟುಂಬಿಕ ವಾತಾವರಣದಲ್ಲಿ ಹಾಡುಗಾರಿಕೆಗೆ ಅವಕಾಶವಿರಲಿಲ್ಲ. ಮನೆಯನ್ನು ತೊರೆಯಬೇಕಾಯಿತು. ಚಿತ್ರರಂಗದಲ್ಲಿ ಗಣ್ಯ ಸ್ಥಾನ ಒಪ್ಪಿಕೊಂಡ ನಂತರವಷ್ಟೇ ಅವರ ಕುಟುಂಬ ಅವರನ್ನು ಪುನಃ ಒಪ್ಪಿಕೊಂಡಿತು.
ತಲತ್ ಮಹಮೂದ್ ಅಂದಿನ ಮಾರಿಸ್ ಸಂಗೀತ ವಿದ್ಯಾಲಯದ (ಈಗಿನ ಹೆಸರು ಭತ್ಖಾಂಡೆ ಸಂಗೀತ ವಿದ್ಯಾಲಯದ) ಪಂಡಿತ್ ಎಸ್. ಸಿ. ಆರ್. ಭಟ್ ಅವರಲ್ಲಿ ಕೆಲವು ಕಾಲ ಶಾಸ್ತ್ರೀಯ ಸಂಗೀತದ ಅಭ್ಯಾಸ ನಡೆಸಿದರು. 1939ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಗಝಲ್ ಗಾಯನವನ್ನು ಆಕಾಶವಾಣಿಯಲ್ಲಿ ಆರಂಭಿಸಿದರು. 1941ರಲ್ಲಿ ಎಚ್ಎಮ್ವಿ ಇವರಿಗೆ ಧ್ವನಿಮುದ್ರಿಕೆಗೆ ಹಾಡುವ ಆಹ್ವಾನ ನೀಡಿತು. ‘ಸಬ್ ದಿನ್ ಏಕ್ ನಹಿನ್ ಥಾ, ಬನ್ ಜಾವೂನ್ ಗ ಕ್ಯಾ ಸೆ ಕ್ಯಾ ಮೇನ್, ಇಸ್ಕಾ ತೊ ಕುಚ್ ಧ್ಯಾನ್ ನಹಿನ್ ಥಾ’ ಇವರು ಹಾಡಿದ ಗೀತೆ. ಅದೇ ಸಮಯದಲ್ಲಿ ಸಿನಿಮಾಗೂ ಹಾಡಿದರು. ಅವರ ಜನಪ್ರಿಯತೆ ಅಂದಿನ ಪ್ರಸಿದ್ಧ ಸಂಗೀತ ನಗರಿ ಕೊಲ್ಕತ್ತಾಗೆ ವ್ಯಾಪಿಸಿತು. 1944ರಲ್ಲಿ ‘ಶಿಕಸ್ತ್’ ಮತ್ತು ‘ಚಾಂದೀ ಕಿ ದೀವಾರ್’ ಚಿತ್ರಗಳಲ್ಲಿ ಶಾಸ್ತ್ರೀಯ ಗೀತೆಗಳನ್ನು ಹಾಡಿದರು. 1944ರಲ್ಲಿ ಇವರು ಹಾಡಿದ ‘ತಸ್ವೀರ್ ತೇರಿ ದಿಲ್ ಮೇರಾ ಬೆಹೆಲಾ ನಹ್ ಸಕೆ ಗಿ’ ಅವರಿಗೆ ಸಮಸ್ತ ಭಾರತದಲ್ಲಿ ಜನಪ್ರಿಯತೆ ತಂದು, ಕೊಲ್ಕತ್ತಾ ಸಿನಿಮಾ ನಗರಿ ಇವರನ್ನು ಕೂಗಿ ಕರೆಯಿತು. ಸುರದ್ರೂಪಿಯಾಗಿದ್ದ ತಲತ್ ಅವರಿಗೆ ಚಲನಚಿತ್ರಗಳಲ್ಲಿ ನಟಿಸುವ ಅನೇಕ ಅವಕಾಶಗಳೂ ದೊರೆತವು. ಅನೇಕ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದರು. ತಪನ್ ಕುಮಾರ್ ಎಂಬ ಬದಲಿ ಹೆಸರಿನಲ್ಲಿ ಅನೇಕ ಬಂಗಾಳಿ ಚಿತ್ರಗೀತೆಗಳನ್ನು ಹಾಡಿದರು. ಅವರು ಅಭಿನಯಿಸಿದ ಮೂರು ಬಂಗಾಳಿ ಚಿತ್ರಗಳು ಯಶಸ್ವಿಯಾದವು.
1949ರಲ್ಲಿ ತಲತ್ ಮುಂಬೈ ಚಿತ್ರರಂಗಕ್ಕೆ ಹಾಡಲು ಬಂದರು. ‘ಏ ದಿಲ್ ಮುಜೆ ಐಸಿ ಜಗಹ್ ಲೇ ಚಲ್ ಜಹಾನ್ ಕೊಯಿ ನ ಹೊ’ ಎಂಬ ಅರ್ಜೂ ಚಿತ್ರದಲ್ಲಿನ ಅನಿಲ್ ಬಿಶ್ವಾಸ್ ನಿರ್ದೇಶನದ ಗೀತೆ ಇವರಿಗೆ ದೊಡ್ಡ ಬ್ರೇಕ್ ನೀಡಿತು. ಹಿಂದೀ ಚಿತ್ರರಂಗದಲ್ಲಿ ಆಗಿನ ಖ್ಯಾತ ನಟಿಯರಾದ ನಾದಿರಾ, ಸುರಯ್ಯ, ಮಾಲಾ ಸಿನ್ಹಾ, ನೂತನ್ ಅವರುಗಳೊಡನೆ ನಾಯಕರಾಗಿ ನಟಿಸಿದರು. ಮುಂದೆ ತಮ್ಮ ಗಾಯನದ ಮೇಲೆ ಗಮನ ಹರಿಸಲು ನಟಿಸುವುದನ್ನು ಬಿಟ್ಟರು. 1971ರಲ್ಲಿ ಲಕ್ಷ್ಮೀಕಾಂತ್ ಪ್ಯಾರೆಲಾಲ್ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್ ಅವರೊಡನೆ ‘ವೋಹ್ ದಿನ್ ಯಾದ್ ಕರೊ’ವರೆಗೆ ಅನೇಕ ಗೀತೆಗಳನ್ನು ಹಾಡುತ್ತಾ ಸಾಗಿದರು. ತಲತ್ ಮಹಮೂದ್ ಖ್ಯಾತರಾಗಿದ್ದು ಗಝಲ್ ಗಾಯನದಿಂದ. ಪ್ರೇಮ ಭಾವ ಮತ್ತು ದುಃಖದ ವ್ಯಾಕುಲತೆ ತುಂಬಿದ ಗೀತೆಗಳನ್ನು ತಲತ್ ಅತ್ಯಂತ ಶಾಂತಭಾವದಲ್ಲಿ ಹಾಡುತ್ತಿದ್ದರು. ಅವರನ್ನು ‘ಕಿಂಗ್ ಆಫ್ ಗಝಲ್ಸ್’ ಎಂದೇ ಕರೆಯಲಾಗುತ್ತಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಿ. ಜಿ. ಶ್ರೀನಿಧಿ ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತು ಬರೆಯುತ್ತಿರುವ ಲೇಖಕರು.

Fri Feb 24 , 2023
  ನಮ್ಮ ಟಿ.ಜಿ. ಶ್ರೀನಿಧಿ ಇದಾನಲ್ಲ ಅವನದ್ದೊಂದು ವಿಶಿಷ್ಟ ಹಾದಿ. ಎಲ್ಲ ಮಕ್ಕಳೂ ನಾವು ಇಂಗ್ಲಿಷ್ ಶಾಲೆಗೆ ಹೋಗ್ತೀವಿ ಅಂದ್ರೆ, ನಾನು ತನ್ನ ಶ್ರೀಮಂಗಲ ಗ್ರಾಮದ ಕನ್ನಡ ಮಾಧ್ಯಮ ಶಾಲೆಯಲ್ಲೇ ಓದೋದು ಅಂದ. ಕನ್ನಡ ಮೀಡಿಯಂ ಓದಿದವರು ಹೆಚ್ಚು ಏನು ಓದುಕ್ಕಾಗುತ್ತೆ ಅಂತ ಅನ್ನೋ ಸಮಯದಲ್ಲಿ ಬಿಇ, ಎಂಟೆಕ್ ಮಾಡ್ದಾ. ಈ ಇಂಜಿನಿಯರಿಂಗ್ ಓದೋ ಹುಡುಗರಿಗೆ ಕನ್ನಡ ಗೊತ್ತಿದ್ಯಾ ಅನ್ನೋ ಕಾಲದಲ್ಲೇ ಪತ್ರಿಕೆಗಳಲ್ಲಿ ಸಹಸ್ರಾರು ಲೇಖನಗಳನ್ನು ಬರೆದಿದ್ದ. ಕನ್ನಡದಲ್ಲಿ ತಂತ್ರಜ್ಞಾನವನ್ನು […]

Advertisement

Wordpress Social Share Plugin powered by Ultimatelysocial