ಆಳಂದ ಘರ್ಷಣೆ ಪೂರ್ವನಿಯೋಜಿತ: ಸಂದೇಹ

 

ಕಲಬುರಗಿ: ‘ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾರ್ಚ್‌ 1ರಂದು ಮಹಾಶಿವರಾತ್ರಿಯ ದಿನ ನಡೆದ ಘಟನಾವಳಿಗಳು ಪೂರ್ವನಿಯೋಜಿತ ಎಂಬ ಸಂದೇಹ ಬಂದಿದೆ. ಇದಕ್ಕೆ ಕುಮ್ಮಕ್ಕು ನೀಡಿದವರು ಯಾರು ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಅವರನ್ನು ಆದಷ್ಟು ಬೇಗ ಬಂಧಿಸುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಹೇಳಿದರು.’ಆಳಂದದ ಲಾಡ್ಲೆ ಮಶಾಕ ದರ್ಗಾದ ಪ್ರದೇಶದಲ್ಲಿ ಕಲ್ಲು ತೂರಾಟ, ಬಡಿಗೆ ಸಂಗ್ರಹ ಮಾಡಿದವರ ಬಗ್ಗೆ ನಮ್ಮಲ್ಲಿ ಸ್ಪಷ್ಟವಾದ ವಿಡಿಯೊ, ಫೋಟೊಗಳಿವೆ. ಘಟನೆಯಲ್ಲಿ ಕೆಲವರು ಹೊರಗಿನಿಂದಲೂ ಬಂದಿರಬಹುದು ಎಂಬ ಸಂಶಯವಿದೆ. ಯಾವುದೇ ಪಕ್ಷ, ಧರ್ಮ ಎನ್ನುವುದನ್ನು ನೋಡದೇ, ಕಾನೂನು ಮೀರಿದ ಎಲ್ಲರ ಮೇಲೂ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.’ಆಳಂದ ತಾಲ್ಲೂಕಿನಾದ್ಯಂತ 144 ಕಲಂ ಅನ್ವಯ ನಿಷೇಧಾಜ್ಞೆ ಇದ್ದರೂ ಅದನ್ನು ಉಲ್ಲಂಘಿಸಿದ 200 ಜನರ ಮೇಲೆ ನ್ಯಾಯಾಲಯಕ್ಕೆ ‘ವಿಚಾರಣಾರ್ಹ ವರದಿ (ಕಾಗ್ನಿಜೆನ್ಸ್‌ ರಿಪೋರ್ಟ್‌) ಸಲ್ಲಿಸಲಾಗಿದೆ. ಆಳಂದ ತಹಶೀಲ್ದಾರ್‌ ಅವರು ‘ಐಪಿಸಿ ಸೆಕ್ಷನ್‌ 188′ ಅಡಿಯಲ್ಲಿ ಇದನ್ನು ಸಲ್ಲಿಸಿದ್ದಾರೆ. ನಾಯಕರು, ಜನಸಮಾನ್ಯರು, ಪ‍ಕ್ಷ, ಧರ್ಮ ಯಾವುದನ್ನೂ ಪರಿಗಣಿಸದೇ ಕಾನೂನು ಪಾಲನೆ ದೃಷ್ಟಿಯಿಂದ ಏನು ಬೇಕೋ ಆ ಕ್ರಮ ತೆಗೆದುಕೊಂಡಿದ್ದೇವೆ’ ಎಂದೂ ಅವರು ಹೇಳಿದರು.’ಘಟನೆಯ ಮರುದಿನವೇ 165 ಜನರನ್ನು ಬಂಧಿಸಿದ್ದೇವೆ. ಇದರಲ್ಲಿ 9 ಮಹಿಳೆಯರೂ ಇದ್ದಾರೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಅವರನ್ನೂ ಪತ್ತೆ ಮಾಡಲಾಗುತ್ತಿದೆ. ನಮ್ಮ ಬಳಿ ಖಚಿತ ದಾಖಲೆಗಳನ್ನು ಪರಿಗಣಿಸಿಯೇ ಬಂಧಿಸಲಾಗಿದೆ. ಕೆಲವು ಅಪ್ರಾಪ್ತರೂ ಇದ್ದು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರ ಮೇಲೆ ಕಾನೂನು ಉಲ್ಲಂಘನೆ, ದೊಂಬಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದೂ ಎಸ್ಪಿ ವಿವರಿಸಿದರು.’ಅಹಿತಕರ ಘಟನೆ ನಡೆಯಬಹುದು ಎಂಬ ಸಂದೇಹದಿಂದಲೇ ಫೆಬ್ರುವರಿ 27ರಿಂದಲೇ ಆಳಂದದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 28ರಿಂದಲೇ ಪೊಲೀಸ್ ಪೆಟ್ರೋಲಿಂಗ್‌ ನಡೆಸಿದ್ದೇವೆ. ಪ್ರಚೋದನಕಾರಿ ಭಾಷಣದ ಕಾರಣ ಮೂವರು ಪ್ರಮುಖರು ಜಿಲ್ಲೆಗೆ ಪ್ರವೇಶ ನೀಡದಂತೆ ನಿರ್ಬಂಧ ಹೇರಲಾಗಿದೆ. ಅಲ್ಲದೇ, ಮಾರ್ಚ್ 1ರಂದು ದರ್ಗಾದ ಸುತ್ತಲಿನ ಕೆಲವು ಮನೆ ಹಾಗೂ ಪಕ್ಕದ ಶಾಲೆಯೊಂದರ ಮೇಲೆ ಕಲ್ಲು, ಬಡಿಗೆಗಳನ್ನು ಸಂಗ್ರಹಿಸಿದ್ದು ಗೊತ್ತಾಗಿದ್ದರಿಂದ, ಮುಂಚಿತವಾಗಿ ಅವರನ್ನು ಬಂಧಿಸಿದ್ದೇವೆ. ಸಶಸ್ತ್ರ ಮೀಸಲು ಪಡೆಯ 900 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಹೀಗಾಗಿ ದೊಡ್ಡ ಸನಾಹುತ ಸಂಭವಿಸದಂತೆ ತಡೆಯಲು ಸಾಧ್ಯವಾಯಿತು’ ಎಂದರು.’ದರ್ಗಾದೊಳಗೆ ಹೋಗಿ ಕೆಲವರು ರಾಘವಚೈತನ್ಯ ಲಿಂಗಕ್ಕೆ ಪೂಜೆ ಮಾಡಿ ಮರಳುವ ಸಂದರ್ಭದಲ್ಲಿ, ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಆದರೆ, ಎರಡೇ ನಿಮಿಷದಲ್ಲಿ ಅವರನ್ನು ವಶಕ್ಕೆ ಪಡೆದು ಕಲ್ಲುತೂರಾಟ ತಡೆದಿದ್ದೇವೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಘಟನೆಯ ಬಗ್ಗೆ ಇಲ್ಲಸಲ್ಲದ ಸುದ್ದಿ ಹರಡಿದ್ದೇ ಇಷ್ಟೊಂದು ಸಮಸ್ಯೆಗೆ ಕಾರಣವಾಯಿತು’ ಎಂದರು.

*ಸುಳ್ಳು ಸುದ್ದಿ ಹರಡಬೇಡಿ: ಡಿಸಿ

‘ಫೆ. 24ರಂದು ಆಳಂದಲ್ಲಿ ಹಿಂದೂ- ಮುಸ್ಲಿಂ ಮುಖಂಡರು ಹಾಗೂ ದರ್ಗಾ ಸಮಿತಿಯ ಜತೆಗೆ ಶಾಂತಿ ಸಭೆ ನಡೆಸಲಾಗಿತ್ತು. ಸೌಹಾರ್ದ ಕಾಪಾಡಲು ಎರಡೂ ಕಡೆಯ ಮುಖಂಡರು ಒಪ್ಪಿದ್ದರು. ಇದರ ಮಧ್ಯೆ ಕೆಲವರು ಅಹಿತಕರ ಹೇಳಿಕೆ ನೀಡಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು. ಈ ರೀತಿ ಸೌಹಾರ್ದ ಕದಡುವ ಯತ್ನವನ್ನು ಯಾರೂ ಮಾಡಬಾರದು’ ಎಂದು ಎಂದು ಜಿಲ್ಲಾಧಿಕಾರಿ ಯಶವಂತ್‌ ವಿ. ಗುರುಕರ್‌ ಎಚ್ಚರಿಸಿದರು.’ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ, ಅವರ ಹೆಣ ಸುಡುವುದಕ್ಕೂ ಜಿಲ್ಲಾಡಳಿತ ಬಿಟ್ಟಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ್ದಾರೆ. ಇಂಥವರ ಮೇಲೂ ಕ್ರಮ ವಹಿಸಲಾಗುವುದು. ಜನರು ಗಾಳಿಮಾತಿಗೆ ಕಿವಿಗೊಡಬಾರದು’ ಎಂದರು.’ಲಾಡ್ಲೆ ಮಶಾಕ ದರ್ಗಾಗೆ ಬರುವವರಲ್ಲಿ ಶೇ 80ರಷ್ಟು ಹಿಂದೂಗಳೇ ಇದ್ದಾರೆ. ದರ್ಗಾ ಆವರಣದಲ್ಲಿನ ರಾಘವಚೈತನ್ಯ ಲಿಂಗಕ್ಕೆ ಶಾಸ್ತ್ರಿ ಎನ್ನುವವರು ಬಹಳ ವರ್ಷಗಳಿಂದ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಈಚೆಗೆ ಆರೋಪಿಯೊಬ್ಬ ಲಿಂಗದ ಬಳಿ ಗಲೀಜು ಮಾಡಿದ್ದು, ಆತನನ್ನು ಆಗಲೇ ಬಂಧಿಸಲಾಗಿದೆ’ ಎಂದೂ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡದ ಬೊಮ್ಮಾಯಿ ಬಜೆಟ್: ಡ್ಯಾಮೇಜ್ ಕಂಟ್ರೋಲ್​ಗೆ ಸಿಎಂ ಸರ್ಕಸ್?

Sat Mar 5 , 2022
ರಾಜ್ಯದಲ್ಲಿ 5.20 ಲಕ್ಷ ಸರ್ಕಾರಿ ನೌಕರರಿದ್ದಾರೆ. ಅವರ ಕುಟುಂಬದ ಸುಮಾರು 30 ಲಕ್ಷ ಸದಸ್ಯರಿದ್ದು, ಬಹುದೊಡ್ಡ ಮತ ಬ್ಯಾಂಕ್ ಆಗಿದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದು ಅಧಿಕಾರಿಗಳ ವೇತನ ಸಮಿತಿ ರಚನೆ ಕುರಿತು ಭರವಸೆ ನೀಡಿದ್ದಾರೆ.   ಬೆಂಗಳೂರು: ಮುಂಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ಕಾರಿ ನೌಕರರ ಮತಬುಟ್ಟಿ ಭದ್ರಪಡಿಸಿಕೊಳ್ಳಲು ಏಳನೇ ವೇತನ ಆಯೋಗ ಜಾರಿ ಮಾಡಲು ಅಧಿಕಾರಿಗಳ ವೇತನ ಸಮಿತಿ ರಚನೆ ಬಜೆಟ್​ನಲ್ಲಿ ಘೋಷಣೆ ಆಗಲಿದೆ […]

Advertisement

Wordpress Social Share Plugin powered by Ultimatelysocial