ಅನಸೂಯಾ ರಾಮರೆಡ್ಡಿ ಸುಪ್ರಸಿದ್ಧ ಕಾದಂಬರಿಗಾರ್ತಿ.

ಅನಸೂಯಾ ರಾಮರೆಡ್ಡಿ ಚಿತ್ರದುರ್ಗದ ಬಳಿಯ ತುರುವನೂರು ಎಂಬಲ್ಲಿ 1929ರ ಡಿಸೆಂಬರ್‌ 25ರಂದು ಜನಿಸಿದರು. ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಂ. ರಾಮರೆಡ್ಡಿ. ತಾಯಿ ಮಂಗಳಮ್ಮ. ಇವರ ಮನೆತನವೇ ಒಂದು ರೀತಿಯ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ಯಾವಾಗಲೂ ಮನೆಯಲ್ಲಿ ಕಾಂಗ್ರೆಸ್ ನೇತಾರರು ತುಂಬಿರುತ್ತಿದ್ದರು. ಇದು ಬೆಳೆಯುತ್ತಿದ್ದ ಅನಸೂಯ ಅವರ ಮೇಲೂ ಪ್ರಭಾವ ಬೀರಿತು. ಬದುಕಿನುದ್ದಕ್ಕೂ ಗಾಂಧೀಜಿಯವರ ಆದರ್ಶಗಳನ್ನು ರೂಢಿಸಿಕೊಂಡರು.

ತುರುವನೂರು ಊರು ಚಿಕ್ಕದಾಗಿದ್ದರೂ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸರಳ ವಿವಾಹ, ಚರಕದಲ್ಲಿ ನೂಲುವುದು, ಕಾಂಗ್ರೆಸ್ ನಿಧಿ ಸಂಗ್ರಹ, ರಾಷ್ಟ್ರೀಯ ಸಮರ್ಪಣಾಭಾವ ಮುಂತಾದವುಗಳನ್ನು ಮೈಗೂಡಿಸಿಕೊಂಡಿದ್ದ ಊರಾಗಿತ್ತು. ಮನೆತನದ ಗಂಡಸರಿಗೆ ಸ್ವಾತಂತ್ರ್ಯ ಹೋರಾಟವೇ ಗುರಿಯಾಗಿದ್ದರೆ, ತಾಯಿ-ಅಜ್ಜಿ ಮುತ್ತಜ್ಜಿಯರಿಗೆ ಆಧ್ಯಾತ್ಮವೇ ಗುರಿಯಾಗಿತ್ತು. ಕವಿ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು ಅನಸೂಯಾ ಅವರಿಗೆ ಗುರುಗಳು. ಬೆಳಗೆರೆ ಜಾನಕಮ್ಮ ಇವರ ಸ್ನೇಹಿತೆ. ಇಂಥ ಪರಿಸರದಲ್ಲಿ ಬೆಳೆದ ಅನಸೂಯಾ ಅವರಿಗೆ ಓದಿನ ಗೀಳು ಹಿಡಿದು ಪುಸ್ತಕ ಹಿಡಿದು ಕುಳಿತರೆ ಮೈಮರೆತು ಬಿಡುತ್ತಿದ್ದರು. ವ್ಯಾಯಾಮ, ಯೋಗ, ಈಜು, ಸೈಕಲ್ ಸವಾರಿ, ಸಂಗೀತ, ಹಿಂದಿ, ಸಾಹಿತ್ಯ ಕೂಡ ಇವರಿಗೆ ಬಹುಪ್ರಿಯವಾದ ಹವ್ಯಾಸವಾಗಿತ್ತು. ಶಾಲೆಯ ಓದಿನ ಜೊತೆಗೆ ಮನೆ ಮೇಷ್ಟರಿಂದ ಹಿಂದಿ ಪರೀಕ್ಷೆಗೆ ಕುಳಿತು ರಾಷ್ಟ್ರಭಾಷಾ, ವಿಶಾರದ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಅನಸೂಯಾ ರಾಮರೆಡ್ಡಿ ಅವರು ಮದುವೆಯ ನಂತರ ಹಿಂದಿಯ ಪ್ರವೀಣ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಂತೆ ಚಿತ್ರದುರ್ಗದ ಬಾಲಕಿಯರ ಮಾಧ್ಯಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕಿಯ ಹುದ್ದೆ ದೊರೆಯಿತು. ಮೈಸೂರಿನ ಮಹಾರಾಣಿ ಶಿಕ್ಷಕರ ತರಬೇತಿ ಶಾಲೆಯಿಂದ ಟಿ.ಸಿ.ಎಚ್. ಟ್ರೈನಿಂಗ್ ಮತ್ತು ಅಂಚೆ ಶಿಕ್ಷಣದ ಮೂಲಕ ಇಂಟರ್‌ಪಾಸು ಮಾಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಪಡೆದರು.
ಅನಸೂಯಾ ರಾಮರೆಡ್ಡಿ ಅವರ ಮೊದಲ ಕೃತಿ ಗುರುಗೋವಿಂದ ಸಿಂಹರ ಜೀವನ ಚರಿತ್ರೆ. ನಂತರ 1965ರಿಂದ 95ರ ಅವಧಿಯಲ್ಲಿ ಹದಿನೇಳು ಕಾದಂಬರಿಗಳನ್ನು ರಚಿಸಿದರು. ‘ದೇವಿಯ ದರ್ಶನ’ ಇವರ ಮೊದಲ ಕಾದಂಬರಿ. ನಂತರ ಬರೆದದ್ದು ‘ಮಮತೆಯ ಮಡಿಲು’. ಚಲನ ಚಿತ್ರ ನಿರ್ಮಾಪಕ ಚಂದೂಲಾಲ್ ಜೈನರಿಂದ ಚಲನ ಚಿತ್ರವಾಗಿ ತೆರೆಕಂಡು ಅಪಾರ ಜನಮೆಚ್ಚುಗೆ ಪಡೆಯಿತು. ನಂತರ ಬಂದ ಕಾದಂಬರಿಗಳು. ಕುಲದೀಪಕ, ಪ್ರತೀಕ್ಷೆ, ಈಚಲು ಮರ, ಹರಿಗೋಲು, ಬೆಳಕಿನಬಳ್ಳಿ, ಮಧುರತರಂಗ, ಮಂದಾನಿಲ, ಮೂರು ದಾರಿ, ಒಡೆದ ಹಾಲು, ಇದಿರುಗಾಳಿ, ಪಂಜರ, ಮಡಿಲ ಮೊಗ್ಗು, ತೆರೆಗಳು, ಸಂಭಾವಿತರು ಮತ್ತು ಅಂತ್ಯ. ‘ದಾರಿತೋರಿದ ದೇವಿಯರು ಮತ್ತು ಇತರ ಕಥೆಗಳು’ ಇವರ ಸಣ್ಣ ಕಥೆಗಳ ಸಂಗ್ರಹವಾದರೆ, ಹಿಂದಿಯ ಲೇಖಕ ಪ್ರೇಮ ಚಂದ್‌ರ ‘ಬಂಧಿಯ ಬಿಡುಗಡೆ ಮತ್ತು ಇತರ ಕಥೆಗಳು’ ಅನುವಾದಿತ ಕಥಾ ಸಂಕಲನ. ಇದಲ್ಲದೆ ಕುಟುಂಬ ಯೋಜನೆಯ ವಸ್ತುವನ್ನೊಳಗೊಂಡ ‘ಮನೆಗೆ ಮೂರು ಮಾಣಿಕ್ಯ’ ಮತ್ತು ‘ಮುತ್ತಿನ ಹಾಗೆ ಎರಡು’ ಎಂಬ ಎರಡು ನಾಟಕಗಳ ಜೊತೆಗೆ ಸುಮಾರು 30 ಕವಿತೆಗಳನ್ನು ರಚಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ನೌಶಾದ್ ಅಲಿ ಶಾಸ್ತ್ರೀಯ ಸಂಗೀತದ‍ ಸವಿಯನ್ನು ಚಿತ್ರಸಂಗೀತದಲ್ಲಿ ತಂದವರಾಗಿ ಅವರು ಪ್ರಖ್ಯಾತರು.

Mon Dec 26 , 2022
ನೌಶಾದ್ ಅಲಿ 1919ರ ಡಿಸೆಂಬರ್‌ 25ರ ಕ್ರಿಸ್‌ಮಸ್‌ ದಿನ ಲಖನೌನಲ್ಲಿ ಜನಿಸಿದರು. ಅವರ ತಂದೆ ವಾಹಿದ್ ಅಲಿ ಕೋರ್ಟಿನಲ್ಲಿ ಮುನ್ಷಿ ಅಗಿದ್ದರು. ನೌಶಾದ್ ಚಿಕ್ಕಂದಿನಲ್ಲಿ ಲಕ್ನೋದಿಂದ 25 ಕಿಲೋಮೀಟರ್ ದೂರದಲ್ಲಿದ್ದ ಬರಬಾಂಕಿ ಸಮೀಪದ ದೇವಾ ಷರೀಫ್ ವಾರ್ಷಿಕ ಉತ್ಸವದಲ್ಲಿ ಭಾಗಿಯಾಗುತ್ತಿದ್ದರು. ಅದು ಎಲ್ಲ ಪ್ರಸಿದ್ಧ ಸಂಗೀತಗಾರರೂ ಒಂದೆಡೆ ಕಾರ್ಯಕ್ರಮ ನೀಡುವ ತಾಣವಾಗಿತ್ತು. ಇದು ಚಿಕ್ಕಂದಿನಲ್ಲೇ ಇವರ ಮೇಲೆ ಸಂಗೀತದ ಪ್ರಭಾವ ಬೀರಿತು. ಅಲ್ಲಿ ಅವರು ಉಸ್ತಾದ್ ಗುರ್ಬತ್ ಅಲಿ ಯುಸುಫ್ […]

Advertisement

Wordpress Social Share Plugin powered by Ultimatelysocial