ರಾಳ್ಲಪಲ್ಲಿ ಅನಂತ ಕೃಷ್ಣಶರ್ಮ

ಪ್ರೊ. ರಾಳ್ಲಪಲ್ಲಿ ಅನಂತ ಕೃಷ್ಣಶರ್ಮರು ಮಹಾನ್ ಬಹುಭಾಷಾ ವಿದ್ವಾಂಸರಾಗಿ, ಸಂಶೋಧಕರಾಗಿ, ಸಂಗೀತಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾದವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಒಂದು ಸಣ್ಣ ಗ್ರಾಮವಾದ ರಾಳ್ಲಪಲ್ಲಿಯಲ್ಲಿ 1893ರ ಜನವರಿ 23ರಂದು ಜನಿಸಿದ ಅನಂತ ಕೃಷ್ಣಶರ್ಮರು ವಿದ್ಯಾಭ್ಯಾಸದ ನಿಮಿತ್ತ ಮೈಸೂರು ಸೇರಿದರು. ವ್ಯಾಕರಣ ಅಲಂಕಾರ ಶಾಸ್ತ್ರಗಳಲ್ಲಿ ಪಾಂಡಿತ್ಯ ಗಳಿಸುವುದರ ಜೊತೆಗೆ ಕರಿಗಿರಿರಾಯರು, ಚಿಕ್ಕರಾಮರಾಯರು ಹಾಗೂ ಬಿಡಾರಂ ಕೃಷ್ಣಪ್ಪ ಇವರುಗಳ ಮಾರ್ಗದರ್ಶನದಲ್ಲಿ ಸಂಗೀತದಲ್ಲಿ ಅತ್ಯುತ್ತಮ ಮಟ್ಟದ ಜ್ಞಾನ ಸಂಪಾದಿಸಿಕೊಂಡರು. ಮೈಸೂರು ವಿಶ್ವವಿದ್ಯಾಲಯದಲ್ಲಿ ತೆಲುಗು ಪ್ರಾಧ್ಯಾಪಕರಾಗಿ ವೃತ್ತಿಯಲ್ಲಿದ್ದ ಶ್ರೀಯುತರು ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಅಪಾರ. ಕರ್ನಾಟಕದಂತೆ ಆಂಧ್ರಪ್ರದೇಶದಲ್ಲಿಯೂ ಹಿರಿದಾದ ಜನ ಮನ್ನಣೆ ಪಡೆದಿದ್ದವರು. ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಹಿರಿಯ ಪ್ರಾಧ್ಯಾಪಕರು ಮತ್ತು ಪ್ರಿನ್ಸಿಪಾಲರಾಗಿದ್ದ ಆರ್. ಎ. ಫಣಿಶಾಯಿ ಅವರು ರಾಳ್ಲಪಲ್ಲಿ ಅನಂತಕೃಷ್ಣ ಶರ್ಮರ ಹಿರಿಯ ಪುತ್ರರು.
‘ಗಾನಕಲೆ’, ‘ಸಾಹಿತ್ಯ ಮತ್ತು ಜೀವನಕಲೆ’ ಅನಂತಕೃಷ್ಣ ಶರ್ಮರು ಕನ್ನಡದಲ್ಲಿ ಬರೆದಿರುವ ಅಮೂಲ್ಯ ಗ್ರಂಥಗಳು. ಸಂಸ್ಕೃತದಲ್ಲಿ ‘ಮಹಿಶೂರ ರಾಜಾಭ್ಯುದಯಾದರ್ಶಃ’ ಎಂಬ ಚಂಪೂ ಕಾವ್ಯವನ್ನು ಬರೆದು ಪ್ರಥಮ ಬಹುಮಾನವನ್ನು ಮೈಸೂರು ಸಂಸ್ಥಾನದಿಂದ ಪಡೆದಿದ್ದರು. ತಿರುಪತಿ ಪರಿಶೋಧನಾಲಯದ ರೀಡರ್ ಆಗಿದ್ದು ಅಣ್ಣಮಾಚಾರ್ಯರ ಆಧ್ಯಾತ್ಮಿಕ ಮತ್ತು ಶೃಂಗಾರ ಸಂಕೀರ್ತನಗಳನ್ನು ಸಂಪಾದಿಸಿ ಹೊರತಂದರು.
ಅನಂತ ಭಾರತಿ ಎಂಬ ಸಂಸ್ಕೃತ ರಚನೆಗಳ ಸಂಕಲನ; ತೆಲುಗಿನಲ್ಲಿ ಮೀರಾಬಾಯಿ ಖಂಡ ಕಾವ್ಯ, ತಾರಾದೇವಿ ಖಂಡ ಕಾವ್ಯ, ವೇಮನ, ನಾಟಕೋಪನ್ಯಾಸಾಲು, ಪ್ರಾಕೃತದಿಂದ ಅನುವಾದಿತ ಶಾಲಿವಾಹನ ಗಾಥಾಸಪ್ತಶತಿ ಸಾರಮು, ಸಾರಸ್ವತಲೋಕ, ಜಾಯಪಸೇನಾನೀ ನೃತ್ಯ ರತ್ನಾವಳಿ, ಸುಂದರ ಪಾಂಡ್ಯರ ಸಂಸ್ಕೃತದಿಂದ ಅನುವಾದಿತವಾದ ಆರ್ಯ ಮುಂತಾದವು ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮರ ಇನ್ನಿತರ ಪ್ರಮುಖ ಕೃತಿಗಳೆನಿಸಿವೆ.
ರಾಳ್ಲಪಳ್ಳಿ ಅವರ ವರ್ಚಸ್ಸು, ಪಾಂಡಿತ್ಯ, ಶ್ರೇಷ್ಠತೆಗಳನ್ನು ತಮ್ಮ ಕೃತಿ ‘ಕನ್ನಡ ಸಾಹಿತ್ಯಲೋಕದ ಸಾರಸ್ವತರು’ ಕೃತಿಯಲ್ಲಿ ಸ್ಮರಿಸಿರುವ ಪ್ರೊಫೆಸರ್ ಜಿ. ವೆಂಕಟಸುಬ್ಬಯ್ಯನವರು ‘ಆಕಾಶವಾಣಿ’ ಎಂಬ ಪದವನ್ನು ಸೂಚಿಸಿದ ಕೀರ್ತಿ ಸಹಾ ರಾಳ್ಲಪಳ್ಳಿ ಅವರದು ಎಂದು ಗುರುತಿಸಿದ್ದಾರೆ.
ರಾಳ್ಲಪಳ್ಳಿ ಅವರು ತಮ್ಮ ಪ್ರಾಧ್ಯಾಪನದಲ್ಲಿ ಹಾಗೂ ಸಂಗೀತದಲ್ಲಿ ತಯಾರು ಮಾಡಿದ ವಿದ್ಯಾರ್ಥಿಗಳು ಅನೇಕ. ಬಹಳಷ್ಟು ವಿದ್ಯಾರ್ಥಿಗಳಿಗೆ ಬಹಳಷ್ಟು ದಿನಗಳಲ್ಲಿ ಅವರ ಮನೆಯೇ ವಾಸ್ತವ್ಯವನ್ನೂ ನೀಡುತ್ತಿತ್ತು. ಒಮ್ಮೆ ಅವರ ಬಳಿ ಅವರ ಶಿಷ್ಯರಾಗಿದ್ದು ಮುಂದೆ ಆಕಾಶವಾಣಿಯಲ್ಲಿ ಪ್ರಸಿದ್ಧ ಕಲಾವಿದರಾದ ತಾತಾಚಾರ್ಯರಿಗೆ ರಾಳ್ಲಪಳ್ಳಿ ಅವರು “ನಾಳೆ ಪಾಠಕ್ಕೆ ಬೇಗ ಬಂದುಬಿಡು” ಅಂದರಂತೆ. ತಾತಾಚಾರ್ಯರು ರಾಳ್ಲಪಳ್ಳಿ ಅವರ ಮನೆ ಬಾಗಿಲು ತಟ್ಟಿದಾಗ “ಇದೇನಪ್ಪ ರಾತ್ರಿ ಈ ವೇಳೆಯಲ್ಲಿ!” ಎಂದು ಪ್ರಶ್ನಿಸಿದಾಗಲೇ ತಾತಾಚಾರ್ಯರಿಗೆ ಅರಿವಾದದ್ದು, ತಾವು ಬಾಗಿಲು ತಟ್ಟಿದ್ದು ಮಧ್ಯ ರಾತ್ರಿ ಎರಡೂವರೆಗೆ ಎಂದು. “ಕ್ಷಮಿಸಿ ಗುರುಗಳೇ ಆಮೇಲೆ ಬರುತ್ತೇನೆ” ಎಂದ ತಾತಾಚಾರ್ಯರಿಗೆ, “ಬಾ ಒಳಗೆ, ಪಿಟೀಲು ಶ್ರುತಿ ಮಾಡಿಕೋ” ಎಂದು ಕಿಂಚಿತ್ತೂ ಬೇಸರಿಸದೆ ಆ ವೇಳೆಯಲ್ಲೇ ಪ್ರೀತಿಯಿಂದ ಪಾಠ ಹೇಳಿದರಂತೆ.
ಮಹಾವಿನಯ ಸಂಪನ್ನರೂ, ನಿರ್ಲಿಪ್ತ ಜೀವಿಯೂ ಆಗಿದ್ದ ರಾಳ್ಲಪಳ್ಳಿ ಅನಂತಕೃಷ್ಣ ಶರ್ಮರನ್ನು ಕುರಿತು ಅವರ ಅಭಿಮಾನಿಯಾಗಿದ್ದ ಎನ್. ರಂಗನಾಥ ಶರ್ಮರು ವಿ.ಸೀ ಅವರ ಬಳಿ ಒಮ್ಮೆ ಮಾತನಾಡಿದಾಗ, ವಿ.ಸೀ ಭಕ್ತಿಭಾವ ಮಿಶ್ರಿತ ಸ್ವರದಲ್ಲಿ ನುಡಿದರಂತೆ, “ರಾಳ್ಲಪಲ್ಲಿ ಅವರ ಪಾದಗಳಿಗೆ ಒಂದು ಸಲ ನಮಸ್ಕರಿಸಿದರೆ ನಮ್ಮ ಆಯುಸ್ಸು ಹತ್ತು ವರ್ಷ ಹೆಚ್ಚುತ್ತದೆ” ಎಂದು.
ರಾಳ್ಲಪಲ್ಲಿ ಅನಂತ ಕೃಷ್ಣಶರ್ಮರು ಆಂಧ್ರಪ್ರದೇಶದ ಸಾಹಿತ್ಯ ಅಕಾಡೆಮಿಯಲ್ಲಿಯೂ ಸಂಗೀತ ನಾಟಕ ಅಕಾಡೆಮಿಯಲ್ಲಿಯೂ ಶರ್ಮರು ಸೇವೆ ಸಲ್ಲಿಸಿದ್ದರು. ‘ಗಾನಕಲಾಸಿಂಧು’, ‘ಗಾನಕಲಾ ಪ್ರಪೂರ್ಣ’, ‘ಸಂಗೀತ ಕಲಾರತ್ನ’, ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರ, ಗೌರವ ಡಾಕ್ಟರೇಟ್‌ ಮುಂತಾದ ಸನ್ಮಾನಗಳಿಗೆ ಅವರು ಭಾಜನರಾಗಿದ್ದರು.
ರಾಳ್ಲಪಲ್ಲಿ ಅನಂತ ಕೃಷ್ಣಶರ್ಮರು 1979ರ ಮಾರ್ಚ್ 11ರಂದು ತಿರುಪತಿ ತಿರುಮಲ ದೇವಸ್ಥಾನದ ‘ಸಂಗೀತ ಸಾಹಿತ್ಯ ಆಸ್ಥಾನ ವಿದ್ವಾನ್‌’ ಗೌರವ ಪಡೆದ ಒಂದೆರಡು ಘಂಟೆಗಳಲ್ಲೇ ಭಗವಂತನ ಚರಣಾರವಿಂದಗಳಲ್ಲಿ ಐಕ್ಯರಾದರು.
2008ರ ವರ್ಷದಲ್ಲಿ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮರ ಗೌರವಾರ್ಥ ತಿರುಪತಿಯಲ್ಲಿ ಅವರ ಪುತ್ಥಳಿಯೊಂದನ್ನು ನಿರ್ಮಿಸಲಾಗಿದೆ.
ಇಂತಹ ಮಹಾನುಭಾವರ ನೆನಪಿಗೆ ಅನಂತ ನಮಸ್ಕಾರಗಳು. 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್‌ನಿಂದ ಹಿಂತಿರುಗಿದವರು ತ್ರಿವರ್ಣದ 'ಆನ್ ಬಾನ್ ಶಾನ್' ನೋಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ

Sun Mar 13 , 2022
ಅಹಮದಾಬಾದ್‌ನ ಕಿಕ್ಕಿರಿದ ಕ್ರೀಡಾಂಗಣದಲ್ಲಿ ರಾಜ್ಯ ಪ್ರಾಯೋಜಿತ ಕ್ರೀಡಾ ಮಹೋತ್ಸವ “ಖೇಲ್ ಮಹಾಕುಂಭ”ವನ್ನು ಶನಿವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರು ವಿಶೇಷವಾಗಿ ಕ್ರೀಡಾಪಟುಗಳು ಯಶಸ್ಸಿಗೆ ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳದಂತೆ ಸಲಹೆ ನೀಡಿದರು. ಯಶಸ್ವಿಯಾಗಲು ದೀರ್ಘಾವಧಿ ಯೋಜನೆ ಹಾಗೂ ನಿರಂತರ ಬದ್ಧತೆ ಅಗತ್ಯ’ ಎಂದರು. ತಮ್ಮ ಭಾಷಣದಲ್ಲಿ ದೇಶಪ್ರೇಮವನ್ನು ಸಾರಿದ ಮೋದಿ, ವಿಶ್ವದಲ್ಲಿ ಭಾರತದ ಘನತೆ ಹೆಚ್ಚಿದೆ ಎಂದು ಹೇಳಿದ ಮೋದಿ, “ಸ್ನೇಹಿತರೇ, ಯುವಕರು ಉಕ್ರೇನ್‌ನಿಂದ, ಯುದ್ಧಭೂಮಿಯಿಂದ, ಬಾಂಬ್‌ಗಳ ಮಧ್ಯದಿಂದ ಹಿಂತಿರುಗಿದ್ದಾರೆ. […]

Advertisement

Wordpress Social Share Plugin powered by Ultimatelysocial