ಅನಂತ ಸಂಸ್ಮರಣೆ

 
ಕನ್ನಡದ ಮೋಹಕ ಗಾಯಕರಾದ ಮೈಸೂರು ಅನಂತಸ್ವಾಮಿ ಕನ್ನಡ ಸುಗಮ ಸಂಗೀತಲೋಕದ ಪ್ರಧಾನ ಅಚಾರ್ಯರು. ಇಂದು ಈ ಆಚಾರ್ಯರ ಸಂಸ್ಮರಣಾ ದಿನ.
ಮೈಸೂರು ಅನಂತಸ್ವಾಮಿ ಅವರು 1936ರ ಅಕ್ಟೋಬರ್ 25ರಂದು ಜನಿಸಿದರು. ಅದು ವಿಜಯದಶಮಿಯ ದಿನ. ಹಾಗಾಗಿ ಅವರನ್ನು ಅವರ ತಾಯಿ ದೊರೆ ಎಂದು ಕರೆಯುತ್ತಿದ್ದರಂತೆ. ಸುಗಮ ಸಂಗೀತಲೋಕದಲ್ಲಿ ಅವರು ದೊರೆಯೇ ಹೌದು. ಅವರ ಹೆಸರಿನ ಜೊತೆಯೇ ಅವರ ಹುಟ್ಟೂರು ಮೈಸೂರು ಕೂಡಾ ಚಿರಸ್ಮರಣೀಯವಾಗಿದೆ. ಮೈಸೂರಿನ ಕೃಷ್ಣಮೂರ್ತಿಪುರದ ಬಡಾವಣೆಯಲ್ಲಿ ಅವರ ಹೆಸರಿನ ಉದ್ಯಾನವನವೊಂದನ್ನು ಪ್ರತಿನಿತ್ಯ ನೋಡುವ ಸೌಭಾಗ್ಯ ಕೂಡಾ ನನ್ನಂತಹವನಿಗೆ ದೊರೆತಿತ್ತು. ನಮ್ಮ ಮನೆಯ ಬಳಿಯ ಮರದಲ್ಲಿ ಆಗಾಗ ಬಂದು ಕಚೇರಿ ನಡೆಸುವ ಕೋಗಿಲೆಯನ್ನು ಕಂಡಾಗಲೆಲ್ಲಾ ಸಂಗೀತದ ಅಲೆ ಅಲೆಯೂ ಎಷ್ಟು ಅನಂತ ಎಂದುಕೊಳ್ಳುತ್ತಿರುತ್ತೇನೆ. ಈ ಅನಂತತೆಯ ನೆನಪಾದಾಗಳೆಲ್ಲಾ ಈ ಅನಂತತೆಯ ದರ್ಶನವನ್ನು ನಮ್ಮ ಪ್ರೀತಿಯ ಭಾಷೆಯಲ್ಲಿ ನಮಗಾವರಿಸುವಂತೆ ಮಾಡಿದ ಮೈಸೂರು ಅನಂತಸ್ವಾಮಿ ಅವರು ಕೂಡಾ ನೆನಪಾಗುತ್ತಾರೆ.
ಮೈಸೂರು ಅನಂತಸ್ವಾಮಿಯವರು ಹಾಡಿರುವ ಗೀತೆಗಳಲ್ಲಿ ಯಾವುದಿಷ್ಟ ಎಂದರೆ ಹೇಳುವುದು ಬಲು ಕಷ್ಟದ ಕೆಲಸ. ಮುತ್ತು ರತ್ನಗಳ ರಾಶಿಯಲ್ಲಿ ಯಾವುದನ್ನು ತಾನೇ ತಕ್ಷಣವೇ ಆಯ್ದುಕೊಳ್ಳಲು ಸಾಧ್ಯ. ಅನಂತಸ್ವಾಮಿಗಳ ಒಂದು ಗೀತೆ ನನ್ನನ್ನು ಆಗಾಗ ಅಲುಗಾಡಿಸಿಬಿಡುತ್ತದೆ. ಅದೆಂತದ್ದೋ ದೈವ ಸಾಕ್ಷಾತ್ಕಾರ ಭಾವದ ಆಲಾಪನೆಯಲ್ಲಿ ಆಧ್ಯಾತ್ಮದ ಹೃದಯಾಳದ ಧ್ವನಿಯಲ್ಲಿ ಗಾಂಭೀರ್ಯ ಭಕ್ತಿಗಳೇ ಮೈದೆಳೆದು ಪ್ರಾರಂಭವಾಗುವ “ತನುವು ನಿನ್ನದು, ಮನವು ನಿನ್ನದು, ನನ್ನ ಜೀವನ ಧನವು ನಿನ್ನದು; ನಾನು ನಿನ್ನವನೆಂಬ ಹೆಮ್ಮೆಯ ತೃಣವು ಮಾತ್ರವೇ ನನ್ನದು” ಎಂದು ಮೈಸೂರು ಅನಂತಸ್ವಾಮಿಯವರು ಹಾಡಿದ ಆ ಗೀತೆಯನ್ನು ಕೆಳುತ್ತಿದ್ದಾಗಲೆಲ್ಲಾ, ಈ ಮಹಾನ್ ಗಾಯಕ ತಮ್ಮನ್ನು ಇಲ್ಲವಾಗಿಸಿಕೊಂಡು ನಾದವೇ ತಾನಾಗುವ ಪರಿಯನ್ನು ಅನುಭಾವಿಸಿದ ಪರಿ ನನ್ನನ್ನಾವರಿಸತೊಡಗುತ್ತದೆ.
‘ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬ ಅನಂತತೆಯ ಅನಿಕೇತನದಲ್ಲಿ ನಮ್ಮನ್ನು ಒಂದಾಗಿಸುವ ಪರಿ, ‘ಎದೆ ತುಂಬಿ ಹಾಡಿದೆನು ಅಂದು ನಾನು’ ಎಂಬುದನ್ನು ಕೇಳಿದಾಗಲೆಲ್ಲಾ ಆ ಗೀತೆ ಅಮರವಾಗಿರುವ ಪರಿ, ‘ಕುರಿಗಳು ಸಾರ್ ಕುರಿಗಳು’ ಎಂದಾಗ ನಮ್ಮನ್ನೇ ನಾವು ಕುರಿಮಂದೆಯಲ್ಲಿ ಕಂಡುಕೊಳ್ಳುವ ಆತ್ಮ ವಿಡಂಬನಾತ್ಮಕ ಭಾವ, ‘ನಾನು ಕೊಳೀಕೆ ರಂಗ’ ಹಾಡಿನಲ್ಲಿ ಬೆಪ್ ನನ್ಮಗ ಎಂದಾಗ ಬೆಚ್ಚುವ ತನ, ‘ಜೋಗದ ಸಿರಿ ಬೆಳಕಿನಲ್ಲಿ’ ಹಾಡಿದಾಗ ಸಾಮಾನ್ಯವಾಗಿ ಯಾವುದೇ ದೇಶಭಕ್ತಿ ಗೀತೆ ಕೇಳಿದಾಗಲೂ ಬೋಳುತನ ಅನುಭವಿಸುವ ಮನ, ಇದ್ದಕ್ಕಿದ್ದಂತೆ ನಾಡಿನ ಬಗ್ಗೆ ಪ್ರೀತಿ ಹುಟ್ಟಿಸಿಕೊಳ್ಳುವ ಪರಿ, ‘ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್ ಅವನ್ ಪೇಳ್ದಂತೆ ಪಯಣಿಗರು, ಮದುವೆಗೋ ಮಸಣಕೋ ನಡೆ ಹೋಗೆಂದ ಕಡೆ ಹೋಗು’ ಎಂದಾಗ ತಾನೇ ತಾನಾಗಿ ಹುಟ್ಟುವ ವಿರಕ್ತಭಾವ ಇಂತಹ ಅನಂತಸ್ವಾಮಿಯವರು ನೀಡಿರುವ ಸಹಸ್ರಾರು ಭಾವಗಳಿಗೆ ನಾವು ಮಾತು ಕೊಡುವುದಾದರೂ ಹೇಗೆ ಸಾಧ್ಯ. ಅದೆಲ್ಲಾ ನಮ್ಮ ಆಳದ ಅನುಭಾವಗಳಾಗಿ ನಿಲ್ಲುವಂತಹವು.
ಕರ್ನಾಟಕ ಶಾಸ್ತ್ರೀಯ ಸಂಗೀತದ ರಂಗದಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದ ಕಲಾವಿದರು ಚಿಕ್ಕರಾಮರಾಯರು. ಇವರು ಮೈಸೂರು ಒಡೆಯರ ಕಾಲದಲ್ಲಿ ರಾಜಾಸ್ಥಾನದ ಸಂಗೀತರತ್ನ ಎನಿಸಿಕೊಂಡವರು. ಇವರ ಮಗಳು ಕಮಲಮ್ಮ. ಕಮಲಮ್ಮ ಮತ್ತು ಜೆ.ಪಿ. ಸುಬ್ಬರಾವ್‌ ದಂಪತಿಗಳ ಸುಪುತ್ರನಾಗಿ ಅನಂತಸ್ವಾಮಿ ಹುಟ್ಟಿದರು. ಸಂಗೀತಾಮೃತಪಾನ ಮಗು ಅನಂತಸ್ವಾಮಿಗೆ ಹುಟ್ಟಿನಿಂದಲೇ ಆಗುತ್ತಿತ್ತು. ‘ತಾಳಬ್ರಹ್ಮ’, ಅಭಿಜಾತ ಸಂಗೀತ ಕಲಾವಿದ ಚಿಕ್ಕರಾಮರಾಯರು ಪ್ರತಿದಿನ ಪ್ರಾತಃಕಾಲ ತಂಬೂರಿ ಮೀಟಿ ಶ್ರುತಿ ಸೇರಿಸುತ್ತ ಹಾಡುತ್ತಿದ್ದರೆ ಇಡೀ ವಾತಾವರಣಕ್ಕೆ ಜೀವಕಳೆ ತುಂಬಿದಂತಾಗುತ್ತಿತ್ತು. ನಾದೋಪಾಸನೆಯೇ ಅವರ ಜೀವನದ ಗುರಿಯಾಗಿತ್ತು. ಮಗು ಅನಂತಸ್ವಾಮಿಗೆ ತಾತ ಚಿಕ್ಕರಾಮರಾಯರ ಸಂಗೀತೋಪಾಸನೆಯ ಜೊತೆ ಜೊತೆಗೇ ತಾಯಿ ಕಮಲಮ್ಮನವರು ದಿನವೂ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು, ದೇವರ ನಾಮಗಳು, ತುಳಸೀ ಪೂಜೆಯ ಹಾಡುಗಳು ಕಿವಿಗಳನ್ನು ತುಂಬುತ್ತಿದ್ದವು. ಸರ್ಕಾರಿ ಖಜಾನೆಯಲ್ಲಿ ಅಧಿಕಾರಿಯಾಗಿದ್ದ ಅನಂತಸ್ವಾಮಿಯವರ ತಂದೆ ಸುಬ್ಬರಾವ್‌ ಅವರಿಗೆ ಸಾಹಿತ್ಯ, ಸಂಸ್ಕೃತಿಗಳ ಬಗೆಗೆ ಅಪಾರ ಆಸಕ್ತಿ. ಇಂತಹ ಸಾಂಸ್ಕೃತಿಕ ಶ್ರೀಮಂತಿಕೆಯ ಹಿನ್ನೆಲೆಯಲ್ಲಿ ಜನಿಸಿದ ಅನಂತಸ್ವಾಮಿಯವರಿಗೆ ಸಂಗೀತವೆ ಉಸಿರಾದದ್ದು ಆಶ್ಚರ್ಯವೇನಲ್ಲ.
ಚಿಕ್ಕರಾಮರಾಯರ ಶಿಷ್ಯ ಕೃಷ್ಣಮೂರ್ತಿಯವರಲ್ಲಿ ಬಾಲಕ ಅನಂತಸ್ವಾಮಿಗೆ ಸಂಗೀತಪಾಠ ಆರಂಭವಾಯಿತು. ಆದರೆ ಶಾಸ್ತ್ರೀಯ ಸಂಗೀತದಲ್ಲಿ ವರ್ಣದ ಪಾಠವಾಗುವ ವೇಳೆಗೆ ತಾತ ಚಿಕ್ಕರಾಮಯರು ದೈವಾಧೀನರಾದರು. ಮುಂದೆ ಅನಂತಸ್ವಾಮಿ ಪಲ್ಲಡಂ ನಾಗರಾಜರಾಯರ ಬಳಿ ಕೊಳಲಿನ ಅಭ್ಯಾಸ ಶುರು ಮಾಡಿದರು. ಅದರಲ್ಲಿ ವರ್ಣಪಾಠಕ್ಕೆ ಬರುವ ವೇಳೆಗೆ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಆರಂಭವಾಯಿತು. ಅಲ್ಲಿಗೆ ಶಾಸ್ತ್ರೀಯ ಸಂಗೀತದ ಕಲಿಕೆಗೆ ಪೂರ್ಣವಿರಾಮವಾಯಿತು.
ಅಂದಿನ ಕಾಲದ ಬಹುತೇಕ ಚಿತ್ರಗೀತೆಗಳನ್ನು ಅನಂತಸ್ವಾಮಿಯವರು ಕೊಳಲಿನಲ್ಲಿ ಸುಶ್ರಾವ್ಯವಾಗಿ ನುಡಿಸುತ್ತಿದ್ದರು. ಕೊಳಲಿನ ಕೈ ಮ್ಯಾಂಡೊಲಿನ್‌ ಹಿಡಿಯಿತು. ತಬಲ, ಢೋಲಕ್‌, ಹಾರ್ಮೋನಿಯಂ ಎಲ್ಲದರ ಪರಿಚಯವಾಯಿತು. ಒಮ್ಮೆ ಮೈಸೂರು ಮಹಾರಾಜ ಕಾಲೇಜಿನ ಸಮಾರಂಭವೊಂದರಲ್ಲಿ ಹಾಡಲು ಬಂದಿದ್ದ ಕಾಳಿಂಗರಾಯರ ಗಾಯನದ ಮೋಡಿಗೆ ಮರುಳಾದ ಅನಂತಸ್ವಾಮಿ, ಕಾಳಿಂಗರಾಯರಂತೆ ತಾನೂ ಕನ್ನಡ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ ವಾದ್ಯದೊಂದಿಗೆ ಹಾಡುವ ನಿಟ್ಟಿನಲ್ಲಿ ಪ್ರಯತ್ನವನ್ನಾರಂಭಿಸಿದರು. ಅನಂತಸ್ವಾಮಿಯವರ ಮೊಟ್ಟಮೊದಲ ಕಾರ್ಯಕ್ರಮ ಮಹಾರಾಜಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರಕವಿ ಕುವೆಂಪುರವರ ಸಮ್ಮುಖದಲ್ಲಿ ಅವರದೇ ಅಧ್ಯಕ್ಷತೆಯಲ್ಲಿ ಅವರ ರಚನೆಯ ಕೆಲವು ಕವಿತೆಗಳ ಹಾಡುಗಾರಿಕೆ ಏರ್ಪಟ್ಟಿತು. ಹಿರಿಯ ಕವಿಯ ಆಶೀರ್ವಾದದೊಂದಿಗೆ ಆರಂಭವಾದ ಕವಿತಾ ಗಾಯನದಿಂದ ಅನಂತಸ್ವಾಮಿಯವರ ಭಾಗ್ಯದ ಬಾಗಿಲು ತೆರೆಯಿತು. ದಾರಿ ನಿಚ್ಚಳವಾಯಿತು.
ಕಾಳಿಂಗರಾಯರು ಸಂಗೀತ ನಿರ್ದೇಶನ ಮಾಡುತ್ತಿದ್ದ ‘ಅಬ್ಬಾ ಆ ಹುಡುಗಿ’ ಚಿತ್ರಕ್ಕೆ ವಾದ್ಯ ಸಂಗೀತ ನೀಡಲು ಅನಂತಸ್ವಾಮಿಗಳಿಗೆ ಆಹ್ವಾನ ದೊರೆತ ಸಂದರ್ಭದಲ್ಲಿ, ‘ಇಳಿದು ಬಾ ತಾಯಿ ಇಳಿದು ಬಾ’ ಗೀತೆಗೆ ತಾವು ರಾಗ ಸಂಯೋಜಿಸಿದ್ದನ್ನು ಅನಂತಸ್ವಾಮಿಯವರು ಹಾಡಿ ತೋರಿಸಿದಾಗ, ಅದರಿಂದ ಸಂತೋಷಗೊಂಡ ಕಾಳಿಂಗರಾಯರು, ಇನ್ನು ಮುಂದೆ ಈ ಹಾಡನ್ನು ನಾನೂ ಕೂಡ ಇದೇ ರಾಗದಲ್ಲಿ ಹಾಡುತ್ತೇನೆ ಎಂದು ಹೇಳಿದರಲ್ಲದೆ, ಹಾಗೆಯೇ ಮಾಡಿದರು. ಮುಂದೆ ಅನಂತಸ್ವಾಮಿಗಳು ಮದರಾಸಿಗೆ ಹೋಗಿ ಅನೇಕ ಚಲನಚಿತ್ರಗಳ ಸಂಗೀತದಲ್ಲಿ ಪಾಲ್ಗೊಂಡರಾದರೂ ಕೇವಲ ಪಕ್ಕವಾದ್ಯದ ಕೆಲಸ ಅವರಿಗೆ ಇಷ್ಟವಾಗಲಿಲ್ಲ. ಇದನ್ನು ಕಾಳಿಂಗರಾಯರ ಬಳಿ ತೋಡಿಕೊಂಡಾಗ ಕರ್ಣಾಟಕಕ್ಕೆ ವಾಪಸ್ಸು ಹೋಗಿ ಗಾಯಕನಾಗುವಂತೆ ಕಾಳಿಂಗರಾಯರು ಆಶೀರ್ವದಿಸಿದರು. ಮುಂದೆ ಕರ್ನಾಟಕಕ್ಕೆ ಬಂದ ಅನಂತಸ್ವಾಮಿ ಅವರು ಗಾಯಕರಾಗಿ ಮನೆ ಮಾತಾದರು. ಇದೇ ವೇಳೆ ಶಾಂತಾ ಅವರನ್ನು ಪ್ರೇಮಿಸಿ ವಿವಾಹವಾದರು. ಕೇವಲ ಕಚೇರಿ ಮಾಡುವನಿಗೆ ಹೆಣ್ಣು ಕೊಡುವುದೇ ಎಂಬ ಪ್ರಶ್ನೆಯನ್ನು ಹೆಣ್ಣು ಕೊಡುವ ಮಾವ ಮುಂದಿಟ್ಟಾಗ ಪ್ರೇಮಪರೀಕ್ಷೆಯಲ್ಲಿ ಗೆಲ್ಲುವುದಕ್ಕಾಗಿ ಎಲ್.ಆರ್.ಡಿ.ಇ ಕಚೇರಿಯಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡರು.
ಅಂದಿನ ಕಾಲದ ಆನಂತಸ್ವಾಮಿಯವರ ಸುಗಮ ಸಂಗೀತದ ಕಾರ್ಯಕ್ರಮಗಳೆಂದರೆ ಜನ ಹುಚ್ಚೆದ್ದು ಕುಣಿಯುವಷ್ಟು ಜನಪ್ರಿಯವಾಗಿದ್ದವು. ಒಮ್ಮೆ ಮೈಸೂರಿನ ವಿದ್ಯಾರಣ್ಯಪುರಂನ ಬೃಹತ್ ವೃತ್ತದಲ್ಲಿ ಮಳೆ ಉಕ್ಕಿ ಹರಿಯುತ್ತಿದ್ದರೂ ಜನ ಕೊಡೆಗಳ ಕೆಳಗೆ, ಮಾಳಿಗೆಗಳ ಆಶ್ರಯದಲ್ಲಿ ನಿಂತು ಗಂಟೆ ಗಟ್ಟಲೆ ಸಂಗೀತ ಕೇಳಿದ ನೆನಪು ಮಾಸದೆ ನನ್ನಲ್ಲಿ ಉಳಿದಿದೆ. ಭಾವಗೀತೆಗಳು, ಭಕ್ತಿಗೀತೆಗಳು, ವಚನಗಳಲ್ಲದೆ, ಜನಗಳನ್ನು ಹಾಸ್ಯದ ಹೊನಲಲ್ಲಿ ತೇಲಿಸುತ್ತಿದ್ದ ರತ್ನನ ಪದ, ಕೈಲಾಸಂ ಗೀತೆಗಳು, ಮತ್ತು ‘ನಮ್ಮೂರಲ್ಲಿರುವುದು ಜೋಗಿ ಮಠ, ರಾಮಕೃಷ್ಣ ಗೋವಿಂದ ನಾರಾಯಣ’ ಅಂತಹ ಹಾಡುಗಳು ಜನಸಾಗರವನ್ನು ಹರ್ಷದ ಹೊನಲಲ್ಲಿ ಕುಣಿಯುವಂತೆ ಮಾಡುತ್ತಿದ್ದವು.
ಹೀಗೆ ಹಲವಾರು ಕಚೇರಿಗಳಿಂದ ಮನೆಮಾತಾಗಿದ್ದ ಅನಂತಸ್ವಾಮಿ ಅವರಿಗೆ ಮತ್ತಷ್ಟು ಪ್ರಚಾರ ಕೊಟ್ಟದ್ದು ಎಂ. ಎಸ್. ಐ.ಎಲ್ ಗೀತೆಗಳು ಮತ್ತು ಪ್ರಭಾತ್ ಕಲಾವಿದರು ನೃತ್ಯ ನಾಟಕಗಳಿಗೆ ನೀಡಿದ ಸಂಗೀತ ಸಂಯೋಜನೆಗಳು. ಭಾವಗೀತೆಗಳಿಗಷ್ಟೇ ರಾಗ ಸಂಯೋಜಿಸುತ್ತಿದ್ದ ಅನಂತಸ್ವಾಮಿಯವರಿಗೆ ‘ಪ್ರಭಾತ್‌ ‌ ಕಲಾವಿದರು’ ಸಂಸ್ಥೆಯಿಂದಾಗಿ ನೃತ್ಯ ನಾಟಕಗಳಿಗೆ ಸಂಗೀತ ಸಂಯೋಜಿಸುವ ಅವಕಾಶಗಳು ದೊರೆತು ಇಲ್ಲೂ ಅವರು ತಮ್ಮ ಪ್ರತಿಭೆಯನ್ನು ಮೆರೆದರು. ಈ ಸಂಸ್ಥೆಯ ‘ಕಿಂದರಿ ಜೋಗಿ’, ‘ಪುಣ್ಯಕೋಟಿ’, ‘ಸಿಂಡ್ರೆಲಾ’, ‘ಲವಕುಶ’, ‘ಧರ್ಮಭೂಮಿ’, ‘ಕರ್ನಾಟಕ ವೈಭವ’ ಇತ್ಯಾದಿ ನೃತ್ಯ ರೂಪಕಗಳು ಸಾವಿರಾರು ಪ್ರದರ್ಶನಗಳನ್ನು ಕಂಡರೂ ಇನ್ನೂ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.
ಸುಗಮ ಸಂಗೀತ ಕ್ಷೇತ್ರದಲ್ಲಿ ಧ್ವನಿಮುದ್ರಣಗಳ ಕ್ರಾಂತಿಗೆ ಅಡಿಪಾಯ ಹಾಕಿದವರು ಅನಂತಸ್ವಾಮಿಯವರು. ಅದರ ಪ್ರೇರಣೆ ಪ್ರೊ. ನಿಸಾರ್ ಅಹಮದ್‌ರವರಿಂದ. ಇದನ್ನು ಕ್ಯಾಸೆಟ್‌ ಕ್ರಾಂತಿಯೆಂದೇ ಕರೆಯಬಹುದು. ನಿಸಾರ್ ಅಹಮದ್‌ರವರ ಕವಿತೆಗಳನ್ನೊಳಗೊಂಡ ‘ನಿತ್ಯೋತ್ಸವ’ ಕ್ಯಾಸೆಟ್‌ ಕನ್ನಡ ಭಾವಗೀತೆಗಳ ಮೊಟ್ಟಮೊದಲ ಕ್ಯಾಸೆಟ್‌. ಇದು ಭಾವಗೀತಾ ವಲಯದಲ್ಲೇ ಒಂದು ವಿಕ್ರಮವೆಂದು ಹೇಳಬಹುದು. ಅದರ ಕೀರ್ತಿ ನಿಸಾರ್ ಅಹಮ್ಮದ್‌ ಹಾಗೂ ಅನಂತಸ್ವಾಮಿಯವರಿಗೆ ಸಲ್ಲಬೇಕು. ಇದರಿಂದಾಗಿ ಕವಿ, ಗಾಯಕ ಇಬ್ಬರೂ ಮನೆಮನೆಯನ್ನೂ ಮುಟ್ಟಿದರು. ಮನಮನಗಳನ್ನೂ ತಟ್ಟಿದರು. ಕರ್ನಾಟಕದಲ್ಲಿ ‘ಜೋಗದ ಸಿರಿ ಬೆಳಕಿನಲ್ಲಿ’, ‘ಬೆಣ್ಣೆ ಕದ್ದ ನಮ್ಮ ಕೃಷ್ಣ’, ‘ಕುರಿಗಳು ಸಾರ್ ಕುರಿಗಳು’ ಗೀತೆಗಳು ಬಹು ಪ್ರಖ್ಯಾತಿಯನ್ನು ಪಡೆದವು. ಚಿತ್ರಗೀತೆಗಳ ಪ್ರಾಬಲ್ಯವನ್ನೂ ಮೀರಿ ನಿಂತ ಕ್ಯಾಸೆಟ್‌ ಈ ‘ನಿತ್ಯೋತ್ಸವ’. ಇದರ ನಂತರ ಕ್ಯಾಸೆಟ್‌ ಯುಗವೇ ಪ್ರಾರಂಭವಾಯ್ತು.
‘ನಿತ್ಯೋತ್ಸವ’ ಕ್ಯಾಸೆಟ್ಟಿನ ಯಶಸ್ಸಿನಿಂದಾಗಿ ಅನಂತಸ್ವಾಮಿಯವರು ಇನ್ನೂ ಹಲವಾರು ಕ್ಯಾಸೆಟ್‌ಗಳನ್ನು ಮಾರುಕಟ್ಟೆಗೆ ತಂದರು. ‘ಭಾವಸಂಗಮ’, ‘ಕೆಂದಾವರೆ’, ‘ನಾಕುತಂತಿ’, ‘ದುಂದುಭಿ’, ‘ತಾರಕ್ಕ ಬಿಂದಿಗೆ’, ‘ದೀಪೋತ್ಸವ’, ‘ಹೇಳ್ತೀನಿ ಕೇಳಿ’, ‘ಸುಮಧುರ’ ಇತ್ಯಾದಿ ಅನೇಕ ಧ್ವನಿಸುರುಳಿಗಳು ಅವರ ಹೆಸರನ್ನು ಚಿರಂತನವಾಗಿಸುತ್ತ ನಿಂತಿವೆ. ಎಲ್ಲ ಧ್ವನಿಸುರುಳಿಗಳ ಹಾಡುಗಳನ್ನೂ ಅವರೊಬ್ಬರೇ ಹಾಡಲಿಲ್ಲ. ಅನೇಕ ಯುವಕಲಾವಿದರಿಗೂ ಹಾಡಲು ಅವಕಾಶ ಮಾಡಿಕೊಟ್ಟು, ಅವರುಗಳಿಂದಲೂ ಗೀತೆಗಳನ್ನು ಹಾಡಿಸಿರುವುದು, ಅನಂತಸ್ವಾಮಿಯವರ ಹೃದಯ ವೈಶಾಲತ್ಯಗೆ ಸಾಕ್ಷಿಯಾಗಿದೆ. ಅವರ ದೆಸೆಯಿಂದಾಗಿ ಅನೇಕ ಪ್ರತಿಭಾವಂತರು ಬೆಳಕಿಗೆ ಬರುವಂತಾಯ್ತು.
ಅನಂತಸ್ವಾಮಿಯವರನ್ನು ಸಂಗೀತ ನೃತ್ಯ ಅಕಾಡೆಮಿಯು ಕರ್ನಾಟಕ ಕಲಾತಿಲಕ ಬಿರುದು ನೀಡಿ ಗೌರವಿಸಿತು. ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಅಮೆರಿಕೆಯ ನೆಲದಲ್ಲಿ ಕನ್ನಡದ ಕಂಪನ್ನು ಹರಡಿದ ಇವರನ್ನು ಅನಂತಭಾವ ಚಕ್ರವರ್ತಿ, ಗಾನಗಾರುಡಿಗ ಎಂದು ಪ್ರಶಂಸಿಸಲಾಯಿತು. ಕೊಲ್ಲಿರಾಷ್ಟ್ರಗಳಲ್ಲೂ ಕನ್ನಡದ ಪರಿಮಳವನ್ನು ಬೀರಿಬಂದರು. ಬಹಳಷ್ಟು ಕಾರ್ಯಕ್ರಮಗಳಲ್ಲಿ ಸ್ನೇಹಪರತೆಯಿಂದ ಹಾಡುತ್ತಿದ್ದ ಅನಂತಸ್ವಾಮಿಯವರು ಸದುದ್ದೇಶದ ಕಾರ್ಯಕ್ರಮಗಳಲ್ಲಿ ಹಾಡುವಾಗ ಸಂಭಾವನೆಯೇ ಬೇಡವೆನ್ನುತ್ತಿದ್ದ ಹೃದಯವಂತರು.
ಮೈಸೂರು ಅನಂತಸ್ವಾಮಿಯವರು 1995ರ ಜನವರಿ 9ರಂದು ಈ ಲೋಕವನ್ನಗಲಿದರು. ಅವರ ಕಾಯಕವನ್ನು ಅವರ ಮಕ್ಕಳು ಸುಂದರವಾಗಿ ಮುನ್ನಡೆಸಿಕೊಂಡು ಬಂದರು. ಕಳೆದ ದಶಕದಲ್ಲಿ ಅವರ ಸುಪುತ್ರ ರಾಜು ಕೂಡಾ ಈ ಲೋಕವನ್ನಗಲಿದರು. ಅನಂತಸ್ವಾಮಿಯವರ ಪುತ್ರಿಯರಾದ ಸುನೀತಾ ಮತ್ತು ಅನೀತಾ ವಿದೇಶದಲ್ಲಿದ್ದೂ ಈ ಪರಂಪರೆಯನ್ನು ಮುಂದುವರೆಸುವಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಅನಂತಸ್ವಾಮಿ ಮತ್ತು ರಾಜು ಅನಂತಸ್ವಾಮಿ ಅವರ ಅನೇಕ ಶಿಷ್ಯರು ಕರ್ನಾಟಕದ ಉದ್ದಗಲಕ್ಕೂ ಆವರಿಸಿಕೊಂಡಿದ್ದಾರೆ. ಹೀಗಾಗಿ ಈ ಪರಂಪರೆ ಸುದೀರ್ಘ ಕಾಲದವರೆಗೆ ಜೀವಂತವಾಗಿರುತ್ತದೆ ಎಂಬ ಆಶಯ ಕನ್ನಡಿಗರಲ್ಲಿದೆ.
ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್, ರಾಜು ಅನಂತಸ್ವಾಮಿ ಅಂತಹ ಪ್ರತಿಭಾವಂತರು ಕಾಲಿ ಬಿಟ್ಟುಹೋಗಿರುವ ಸ್ಥಾನವನ್ನು ತುಂಬುವುದು ಸುಲಭಸಾಧ್ಯವಲ್ಲ. ಇಂಥಹ ಮಹನೀಯರೇ ಮತ್ತೊಮ್ಮೆ ಹುಟ್ಟಿಬಂದು ಆ ಸ್ಥಾನಗಳನ್ನು ತುಂಬಬೇಕು. ಅಂತಹ ಮಹನೀಯರ ಪುನರಾವತಾರ ಸಂಭವಿಸುತ್ತಿರಲಿ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸ್ ಬಾಲಿ

Wed Mar 9 , 2022
ಪ್ರಖ್ಯಾತ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಕಂಡು ಅನುಭಾವಿಸಿದವರಿಗೆ ಆ ಕಾರ್ಯಕ್ರಮಗಳಲ್ಲಿ ಕಾಣಬರುತ್ತಿದ್ದ ಒಬ್ಬ ತೇಜೋಮಯ ಪ್ರತಿಭಾವಂತ ವಾದ್ಯಗಾರರು ಕಣ್ತಪ್ಪಿರಲು ಸಾಧ್ಯವಿಲ್ಲ. ಅವರೇ ಬಹುವಾದ್ಯ ಪರಿಣಿತರಾಗಿ ಎಸ್. ಬಾಲಿ ಎಂದೇ ಪ್ರಖ್ಯಾತರಾಗಿರುವ ಎಸ್ ಬಾಲಸುಬ್ರಹ್ಮಣ್ಯಂ. ಬಾಲಿ ಅವರು 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್. ತಾಯಿ ಸಾವಿತ್ರಿ. ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಮೂಡಿಸಿಕೊಂಡ ಬಾಲಿ ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ […]

Advertisement

Wordpress Social Share Plugin powered by Ultimatelysocial