ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಅಂತಿಮ್’ ಸಿನಿಮಾ ಪಕ್ಕಾ ಮನೊರಂಜನಾ ಸರಕು:BOLLYWOOD

ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಅಂತಿಮ್’ ಸಿನಿಮಾ ಪಕ್ಕಾ ಮನೊರಂಜನಾ ಸರಕು. ಇಂದಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿರುವ ಈ ಸಿನಿಮಾ ಪಕ್ಕಾ ‘ಸಲ್ಮಾನ್ ಬ್ರ್ಯಾಂಡಿ’ನ ಸಿನಿಮಾ. ಮರಾಠಿಯ ಮೂಲ ಸಿನಿಮಾ ‘ಮುಶ್ಲಿ ಪಟೇರನ್’ ಅನ್ನು ಮನೊರಂಜನಾತ್ಮಕ ಸಿನಿಮಾವಾಗಿ ಬಗ್ಗಿಸಿದ್ದಾರೆ ನಿರ್ದೇಶಕ ಮಹೇಶ್ ಮಂಜ್ರೇಕರ್.

ಸಲ್ಮಾನ್ ಅಭಿಮಾನಿಗಳಿಗೆ ಬೇಕಾದ ಬಹುತೇಕ ಸರಕನ್ನು ನಿರ್ದೇಶಕ ಮಹೇಶ್ ಮಂಜ್ರೇಕರ್ ‘ಅಂತಿಮ್’ ಸಿನಿಮಾದಲ್ಲಿಟ್ಟಿದ್ದಾರೆ. ಖಾಕಿ, ಖಡಕ್ ಡೈಲಾಗ್‌ಗಳು, ಭರ್ಜರಿ ಫೈಟ್‌, ಹಾಡು ಎಲ್ಲಕ್ಕಿಂತಲೂ ಮುಖ್ಯವಾಗಿ ಸಲ್ಮಾನ್ ಅಭಿಮಾನಿಗಳ ಮೆಚ್ಚಿನ ಶರ್ಟ್‌ಲೆಸ್‌ ಫೈಟ್‌ ಸಹ ಇದೆ. ಜೊತೆಗೆ ಒಂದೊಳ್ಳೆ ಸಂದೇಶವೂ ಕತೆಯಲ್ಲಿ ಇಣುಕುತ್ತದೆ.

ಸಿನಿಮಾದಲ್ಲಿ ಒಳ್ಳೆಯದೇನಿದೆ?

ಸಲ್ಮಾನ್ ಖಾನ್ ನಟನೆ ಬಹಳ ಚೆನ್ನಾಗಿದೆ. ವಿಲನ್‌ ಪಾತ್ರದಲ್ಲಿ ಆಯುಷ್ಮಾನ್‌ನ ಖಡಕ್ ನಟನೆ ಸಹ ಉತ್ತಮವಾಗಿದೆ. ಅದ್ಭುತ ಸಂಭಾಷಣೆ ಮತ್ತು ರಿಯಾಲಿಟಿಗೆ ಹತ್ತಿರವೆನಿಸುವ ಕೆಲ ದೃಶ್ಯಗಳು ಮತ್ತು ಕತೆಯನ್ನು ಸಿನಿಮಾ ಒಳಗೊಂಡಿದೆ.

ಯಾವುದು ಚೆನ್ನಾಗಿಲ್ಲ?

ಚಿತ್ರಕತೆ ಇನ್ನಷ್ಟು ಸುಲಲಿತವಾಗಿ ಇರಬೇಕಿತ್ತು. ಜೊತೆಗೆ ಕೆಲವು ಕಡೆ ಸಾಮಾನ್ಯವಲ್ಲದ ಟ್ವಿಸ್ಟ್‌ಗಳನ್ನು, ಕತೆಗೆ ದೂರವೆನಿಸುವ ದೃಶ್ಯಗಳನ್ನು ಇಡಲಾಗಿದೆ.

ಕತೆ;

ರಾಹುಲ್ (ಆಯುಷ್ ಶರ್ಮಾ) ಹಳ್ಳಿಯಲ್ಲಿ ವಾಸಿಸುವ ಸೀದಾ-ಸಾದ ಹುಡುಗ. ಆದರೆ ಶ್ರೀಮಂತರ ಲಾಭದ ಆಸೆಗೆ ತನ್ನ ತಂದೆ ಹಾಗೂ ಗ್ರಾಮದ ಸಾಕಷ್ಟು ಮಂದಿ ತಮ್ಮ ಹಿರಿಯರಿಂದ ಬಂದ ಆಸ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ರಾಹುಲ್‌ನನ್ನು ವಿಲನ್ ಆಗುವಂತೆ ಮಾಡುತ್ತದೆ. ಎಳವೆಯಲ್ಲಿನ ಸಿಟ್ಟು ಅವನನ್ನು ಕ್ರೂರ ವಿಲನ್ ಆಗಿಸಿದೆ, ಅವನಿಗೆ ಒಬ್ಬ ಪ್ರೇಯಸಿ ಸಹ ಇದ್ದಾಳೆ. ರಾಜ್ವೀರ್ ಸಿಂಗ್ (ಸಲ್ಮಾನ್ ಖಾನ್) ಈ ಕ್ರೂರ ವಿಲನ್‌ ದಾರಿಗೆ ಎದುರಾಗಿ ಬರುತ್ತಾನೆ. ಇವರಿಬ್ಬರು ಎದುರಾದಾಗ ಇನ್ನಷ್ಟು ಅಪರಾಧ ಪ್ರಕರಣಗಳು ಸಂಭವಿಸುತ್ತವೆ ಅಂತಿಮವಾಗಿ ಏನಾಗುತ್ತದೆಂದು ಯಾರಾದರೂ ಸುಲಭವಾಗಿ ಊಹಿಸಬಹುದು.

ನಿರ್ದೇಶನ;

ನಿರ್ದೇಶಕ ಮಹೇಶ್ ಮಂಜ್ರೇಕರ್, ಸಲ್ಮಾನ್ ಖಾನ್‌ ಅನ್ನು ನಾಯಕನನ್ನಾಗಿರಿಸಿಕೊಂಡರೂ ಸಹ ಇತರೆ ಪಾತ್ರಗಳಿಗೆ ಅವುಗಳದ್ದೇ ಆದ ಸ್ಪೇಸ್ ನೀಡಿದ್ದಾರೆ. ಸಂಭಾಷಣೆಗಳ ಮೂಲಕ, ದೃಶ್ಯಗಳ ಹಿನ್ನೆಲೆಗಳ ಮೂಲಕ ಸಿನಿಮಾಕ್ಕೆ ಒಂದು ಬಗೆಯ ಕಚ್ಚಾತನ ನೀಡಿದ್ದಾರೆ ಅದು ಚೆನ್ನಾಗಿಯೂ ವರ್ಕ್‌ಔಟ್ ಆಗಿದೆ. ಸಿನಿಮಾದಲ್ಲಿ ಗ್ರಾಮೀಣ ಭಾರತದ ಮುಖ ತೋರಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಸಿನಿಮಾದ ಪ್ರತಿ ಪಾತ್ರವೂ ಭಿನ್ನವಾಗಿರುವಂತೆ ನೋಡಿಕೊಳ್ಳಲಾಗಿದೆ. ಸಿನಿಮಾದಲ್ಲಿನ ಪಾತ್ರಗಳು ಕತೆಯಿಂದ ಹೊರಗೆ ನಿಲ್ಲುವುದಿಲ್ಲ. ಅನವಶ್ಯಕ ಕಾಮಿಡಿ, ಅನವಶ್ಯಕ ಫೈಟ್‌ಗಳು ಇಲ್ಲ. ಫೈಟ್‌ಗಳಿವೆಯಾದರೂ ಸರಿಯಾದ ಸಮಯಕ್ಕೆ, ಉದ್ದೇಶಕ್ಕೆ ಇವೆ. ಸಲ್ಮಾನ್ ಖಾನ್‌ಗೆ ತುಸು ಹೀರೋಗಿರಿ ಸಹ ಇದೆ.

ಸಿನಿಮಾದಲ್ಲಿ ಸಮಸ್ಯೆ ಇರುವುದು ಚಿತ್ರಕತೆಯಲ್ಲಿ. ಇನ್ನಷ್ಟು ಗಟ್ಟಿಯಾದ ಚಿತ್ರಕತೆ ಸಿನಿಮಾಕ್ಕಿರಬೇಕಿತ್ತು. ಜೊತೆಗೆ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಫ್ಲ್ಯಾಷ್‌ಬ್ಯಾಕ್ ದೃಶ್ಯ ಸಿನಿಮಾದ ತೀವ್ರತೆಯನ್ನು ಕಡಿಮೆ ಮಾಡಿದೆ. ಸಿನಿಮಾ ತುಸು ವಾಚ್ಯವಾಗಿಯೂ ಹಾಗೂ ಕೆಲವು ದೃಶ್ಯಗಳು ಏಕತಾನತೆಯಿಂದಲೂ ಕೂಡಿವೆ. ಜೊತೆಗೆ ಕೆಲವು ಗೊಂದಲಮಯ ದೃಶ್ಯಗಳು ಸಹ ಇವೆ. ಒಮ್ಮೆಯಂತೂ ಸಲ್ಮಾನ್ ಖಾನ್, ರೌಡಿ ಗ್ಯಾಂಗ್‌ಗಳ ನಡುವೆ ಜಗಳ ಶುರುವಾಗಲೆಂದು ಮಫ್ತಿಯಲ್ಲಿ ಹೋಗಿ ಎನ್‌ಕೌಂಟರ್ ಮಾಡಿ ಬರುತ್ತಾನೆ. ಶಿಸ್ತಿನ ಪೊಲೀಸ್ ಒಬ್ಬ ಹಠಾತ್ತನೆ ಹೀಗೆ ಮೇಲಧಿಕಾರಿಗಳ ಅನುಮತಿ ಸಹ ಇಲ್ಲದೆ ಕಾನೂನು ಬಾಹಿರವಾಗಿ ಎನ್‌ಕೌಂಟರ್ ಮಾಡಲು ಹೇಗೆ ಸಾಧ್ಯ? ಇಂಥಹಾ ಇನ್ನಷ್ಟು ಪ್ರಶ್ನೆಗಳು ಸಿನಿಮಾ ನೋಡಿದ ಮೇಲೆ ಉಳಿಯುತ್ತವೆ.

ನಟನೆ ಹೇಗಿದೆ?

ಪ್ರಮುಖ ವಿಲನ್ ರಾಹುಲ್ ಮಾತ್ರದಲ್ಲಿ ನಟಿಸಿರುವ ಆಯುಷ್ಮಾನ್ ನಟನೆ ಅದ್ಭುತವಾಗಿದೆ. ಲವರ್‌ಬಾಯ್ ಪಾತ್ರದಿಂದ ಹೊರಗೆ ಬಂದು ಕ್ರೂರ ವಿಲನ್‌ ಆಗಿ ಆಯುಷ್ಮಾನ್ ಕಾಣಿಸಿಕೊಂಡಿದ್ದಾರೆ. ಕ್ರೂರತೆ ಪ್ರದರ್ಶಿಸುವ, ಕೋಪ ಪ್ರದರ್ಶಿಸುವ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿರುವ ಆಯುಷ್ಮಾನ್, ಒಂಟಿತನ ಪ್ರದರ್ಶಿಸುವ ದೃಶ್ಯಗಳಲ್ಲಿ ಅಷ್ಟಾಗಿ ಕಾಡುವುದಿಲ್ಲ.

ಸಲ್ಮಾನ್ ಖಾನ್ ನಟನೆ ಚೇತೋಹಾರಿಯಾಗಿದೆ. ಚುಲ್‌ ಬುಲ್ ಪಾಂಡೆ ಆಗಿಯೂ ಸರಿ ಈಗ ರಾಜ್ವೀರ್ ಸಿಂಗ್ ಆಗಿಯೂ ಅವರ ನಟನೆ ಸಮತೋಲಿತ. ಆಯುಷ್ಮಾನ್‌ ಪಾತ್ರಕ್ಕೆ ಹೆಚ್ಚಿನ ಅವಕಾಶವನ್ನು ಸಲ್ಮಾನ್ ಖಾನ್ ನೀಡಿದಂತೆ ಕಾಣುತ್ತದೆ. ವಯಸ್ಸು 55 ಆದರೂ ಸಲ್ಮಾನ್ ಖಾನ್ ಉತ್ಸಾಹ ಕುಂದಿಲ್ಲ. ದೇಹದ ಹುರಿ ಕಡಿಮೆಯಾಗಿಲ್ಲ.

ನಟಿ ಮಹಿಮಾ ಮಕ್ವಾನಾ ತಮ್ಮ ಮೊದಲ ಬಾಲಿವುಡ್ ಸಿನಿಮಾದಲ್ಲಿಯೇ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಸಚಿನ್ ಖೇಡ್ಕರ್ ನಟನೆ ಸಿನಿಮಾದ ಪ್ರಮುಖ ಅಂಶಗಳಲ್ಲಿ ಒಂದು. ರೋಹಿತ್ ಹಲ್ಡೇಕರ್ ನಟನೆಯೂ ಚೆನ್ನಾಗಿದೆ. ಜೀಶು ಸೇನ್‌ಗುಪ್ತಾ ನಟನೆಯೂ ಗಮನಾರ್ಹ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದೆಲ್ಲೆಡೆ ಹೇಗಿದೆ ನ್ಯೂ ಇಯರ್​ ಸೆಲೆಬ್ರೆಷನ್? | New Celebration In Karnataka | Speed News Kannada

Fri Dec 31 , 2021
ರಾಜ್ಯದೆಲ್ಲೆಡೆ ಹೇಗಿದೆ ನ್ಯೂ ಇಯರ್​ ಸೆಲೆಬ್ರೆಷನ್? | New Celebration In Karnataka | Speed News Kannada Please follow and like us:

Advertisement

Wordpress Social Share Plugin powered by Ultimatelysocial