ಆರ್ಯಾಂಬ ಪಟ್ಟಾಭಿ ಅವರು ಕನ್ನಡದ ಪ್ರಖ್ಯಾತ ಬರಹಗಾರ್ತಿ.

 
ಆರ್ಯಾಂಬ ಪಟ್ಟಾಭಿ ಅವರು ಕನ್ನಡದ ಪ್ರಖ್ಯಾತ ಬರಹಗಾರ್ತಿ.
ಆರ್ಯಾಂಬ ಪಟ್ಟಾಭಿ ಅವರು 1936ರ ಮಾರ್ಚ್ 12ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ. ಎಂ. ಶ್ರೀ ಅವರ ತಮ್ಮಂದಿರಾದ ಬಿ.ಎಂ.ಕೃಷ್ಣಸ್ವಾಮಿಯವರು. ತಾಯಿ ತಂಗಮ್ಮನವರು. ಪ್ರಾರಂಭಿಕ ಶಿಕ್ಷಣವನ್ನು ಮಂಡ್ಯದಲ್ಲಿ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪಡೆದ ಆರ್ಯಾಂಬ ಅವರು ಬಿ.ಎ. ಪದವಿ ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಬಾಲ್ಯದಿಂದಲೇ ಓದುವ ಹವ್ಯಾಸವನ್ನು ರೂಢಿಸಿಕೊಂಡಿದ್ದರು.ಹೈಸ್ಕೂಲಿನಲ್ಲಿದ್ದಾಗಲೇ ಲೇಖನಗಳು ಮತ್ತು ಕಥೆಗಳ ಬರವಣಿಗೆ ಪ್ರಾರಂಭ ಮಾಡಿದ್ದ ಆರ್ಯಾಂಬ ಅವರು ಶಾಲಾ ಕಾಲೇಜುಗಳಲ್ಲಿ ತಮ್ಮ ಬರಹಗಳಿಗಾಗಿ ಅನೇಕ ಬಹುಮಾನಗಳನ್ನೂ ಗಳಿಸುತ್ತ ಬಂದು, ಮುಂದೆ ಹಲವಾರು ಕಥೆಗಳನ್ನು ಪತ್ರಿಕೆಗಳಲ್ಲಿ ಪ್ರಕಟಪಡಿಸಿದರು. ಅಕ್ಕನಾದ ತ್ರಿವೇಣಿಯವರು ಹಲವಾರು ಕಾದಂಬರಿಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ತಂಗಿಯಾದ ಇವರಿಗೂ ಕಾದಂಬರಿ ಬರೆಯಲು ಪ್ರೇರೇಪಿಸಿದಾಗ, ಇವರು ಬರೆದ ಮೊದಲ ಕಾದಂಬರಿಯನ್ನು ಓದಿದ ತ್ರಿವೇಣಿಯವರೇ ‘ಹೊಂಗನಸು’ ಎಂದು ನಾಮಕರಣ ಮಾಡಿ ಪ್ರಕಟಣೆಗೂ ನೆರವಾದರು. “ಬೃಹತ್ ಕಾದಂಬರಿಯನ್ನು ಬರೆಯಬೇಡ, ಬರವಣಿಗೆಯನ್ನು ಎಂದೂ ನಿಲ್ಲಿಸಬೇಡ, ಓದುಗರ ಪ್ರೀತಿ-ಅಭಿಮಾನವೇ ಸಾಹಿತಿಗಳಿಗೆ ಶ್ರೀರಕ್ಷೆ” ಇದು ಅಕ್ಕ ತ್ರಿವೇಣಿ ಇವರಿಗೆ ಹೇಳಿದ ಕಿವಿಮಾತು. ಅವರಿರುವಾಗಲೇ ಮೂರು ಕಾದಂಬರಿ ಬರೆದು ಪ್ರಕಟಿಸಿದ್ದರು.
‘ಹೊಂಗನಸು’ ಪ್ರಕಟವಾದದ್ದು 1961ರಲ್ಲಿ. ನಂತರ ಆರಾಧನೆ, ಪ್ರಿಯಸಂಗಮ, ಎರಡುಮುಖ, ಬೀಸಿದ ಬಲೆ ಮುಂತಾದ 34 ಕಾದಂಬರಿಗಳು ಪ್ರಕಟಗೊಂಡಿವು. ಕಪ್ಪು-ಬಿಳುಪು ಕಾದಂಬರಿಯು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಚಲನಚಿತ್ರವಾಗಿದೆ. ಇದಲ್ಲದೆ ಎರಡು ಮುಖ, ಮರಳಿಗೂಡಿಗೆ, ಸವತಿಯ ನೆರಳು, ಕನ್ನಡ ಚಲನ ಚಿತ್ರಗಳಾಗಿವೆ. ಎರಡುಮುಖ ಮತ್ತು ಮರಳಿಗೂಡಿಗೆ ಚಲನಚಿತ್ರಗಳು ರಾಜ್ಯಪ್ರಶಸ್ತಿ ಪಡೆದ ಚಿತ್ರಗಳಾಗಿವೆ. ಇವರು ಬರೆದ ಹಲವಾರು ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡು ‘ಮರಳಿ ಬಂದ ಮಮತೆ’, ‘ಉದಯ ರವಿ’, ‘ನನ್ನವಳು’, ‘ತೆರೆ ಸರಿದಾಗ’ ಮುಂತಾದ ಕಥಾ ಸಂಕಲನಗಳಲ್ಲಿ ಸೇರಿವೆ.
ಆರ್ಯಾಂಬ ಅವರು ಮಕ್ಕಳಿಗಾಗಿ 12 ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ ಚ. ವಾಸುದೇವಯ್ಯ, ರವೀಂದ್ರನಾಥ ಠಾಕೂರ್, ತಾಯಿ ತೆರೇಸ, ನಾಲ್ವಡಿ ಕೃಷ್ಣರಾಜ ಒಡೆಯರ್, ಮೇರಿ ಕ್ಯೂರಿ ಮತ್ತು ತ್ರಿವೇಣಿ ಮುಂತಾದವುಗಳು ಸೇರಿವೆ. ನಾಟಕ ಕ್ಷೇತ್ರದಲ್ಲಿಯೂ ಸಾಕಷ್ಟು ಕೃಷಿಮಾಡಿದ್ದ ಆರ್ಯಾಂಬ ಅವರು ಸಾಲುದೀಪ, ಬೆಕ್ಕಿನಕಣ್ಣು, ಬೆಳಕಿನತ್ತ, ದುಡ್ಡಿದ್ದವನೆ ದೊಡ್ಡಪ್ಪ, ಸಾಕುಮಗ, ಕಸ್ತೂರಿ ಮುಂತಾದ ನಾಟಕಗಳನ್ನು ರಚಿಸಿದ್ದು ಇವು ಆಕಾಶವಾಣಿ ನಾಟಕಗಳಾಗಿ ಪ್ರಸಾರಗೊಂಡಿವೆ.
ಇವಲ್ಲದೆ ‘ಭಾರತದ ಮಹಾಪುರುಷರು’ ಮಾಲಿಕೆಯಲ್ಲಿ ಆರ್ಯಾಂಬ ಅವರು ಬರೆದ ಆದಿಶಂಕರಾಚಾರ್ಯ, ಬಸವೇಶ್ವರ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಠಾಕೂರ್, ಗಾಂಧಿ ಮತ್ತು ಅರವಿಂದ ಘೋಷ್ ಮುಂತಾದ ಮಹನೀಯರ ಕಥೆಗಳು ಮೂಡಿ ಬಂದಿದ್ದು ಈ ಪುಸ್ತಕಗಳು ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳಾಗಿ ಮೂಡಿಬಂದಿವೆ.
ಆರ್ಯಾಂಬ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಕ್ರೀಡೆ, ಸಂಗೀತ, ನಾಟಕಾಭಿನಯಗಳಲ್ಲಿ ತೊಡಗಿಸಿಕೊಂಡಿದ್ದು ಅನೇಕ ಕನ್ನಡ, ಇಂಗ್ಲಿಷ್, ಸಂಸ್ಕೃತ ನಾಟಕಗಳಲ್ಲಿ ಅಭಿನಯಿಸಿದಂತೆ ಟೆಬಲ್ ಟೆನಿಸ್, ಟೆನಿಸ್, ಸಾಫ್ಟ್ ಬಾಲ್, ಬ್ಯಾಡ್‌ಮಿಂಟನ್ ಮುಂತಾದ ಕ್ರೀಡೆಗಳಲ್ಲೂ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದವರು.
ಟೆನಿಸ್ ಕ್ರೀಡೆಯ ಬಗ್ಗೆ ಸಮಗ್ರ ಅಧ್ಯಯನ ಮಾಡಿ ರಚಿಸಿದ ‘ಟೆನಿಸ್’ ಕೃತಿಯು 1987 ರಲ್ಲಿ ಪ್ರಕಟಗೊಂಡಿದ್ದು ಪರಿಷ್ಕೃತ ಎರಡನೆಯ ಮುದ್ರಣವನ್ನು ಮೈಸೂರು ವಿಶ್ವವಿದ್ಯಾಲವು 2012ರಲ್ಲಿ ಹೊರತಂದಿದೆ. ಇದು ಟೆನಿಸ್ ಬಗ್ಗೆ ಪ್ರಕಟವಾಗಿರುವ ಕನ್ನಡದ ಏಕೈಕ ಗ್ರಂಥವೆನಿಸಿದೆ. ಅಮೆರಿಕ, ಕೆನಡ, ಸಿಂಗಪುರ ದೇಶಗಳನ್ನು ಸುತ್ತಿ ಇವರು ಬರೆದ ಪ್ರವಾಸಾನುಭವ ಕೃತಿ ‘ವಿದೇಶ ಪ್ರವಾಸ’.
ಆರ್ಯಾಂಬ ಅವರು ಹಲವಾರು ಸಂಘಟನೆ, ಸಂಘ, ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ, ಪದಾಧಿಕಾರಿಗಳಾಗಿ ತಮ್ಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಹೀಗೆ ವಿಶಿಷ್ಟರೀತಿಯಲ್ಲಿ ಸಾಹಿತ್ಯ ಮತ್ತು ಸಮಾಜ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆರ್ಯಾಂಬ ಪಟ್ಟಾಭಿಯವರನ್ನು ಅರಸಿ ಬಂದಿರುವ ಪ್ರಶಸ್ತಿಗಳು ಹಲವಾರು. ‘ಟೆನಿಸ್’ ಗ್ರಂಥಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’, ಅತ್ತಿಮಬ್ಬೆ ಪ್ರತಿಷ್ಠಾನದ ‘ಅತ್ತಿಮಬ್ಬೆ ಪ್ರಶಸ್ತಿ’, ವಿದೇಶ ಪ್ರವಾಸ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲಿಂಗರಾಜ ಸಾಹಿತ್ಯ ಪ್ರಶಸ್ತಿ ಮತ್ತು ಕನ್ನಡ ಲೇಖಕಿಯರ ಪರಿಷತ್ತಿನ ಪ್ರಶಸ್ತಿಗಳು; ಸರ್.ಎಂ. ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಕರ್ನಾಟಕ ಚೇತನ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಬಿ. ಸರೋಜದೇವಿ ಸಾಹಿತ್ಯ ಪ್ರಶಸ್ತಿ, ಸಂಚಿ ಹೊನ್ನಮ್ಮ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಆರ್ಯಾಂಬ ಪಟ್ಟಾಭಿ ಅವರಿಗೆ ಸಂದಿವೆ. ಸ್ನೇಹಿತರು, ಅಭಿಮಾನಿಗಳು 2002 ರಲ್ಲಿ ಅರ್ಪಿಸಿದ ಅಭಿನಂದನ ಗ್ರಂಥ ‘ಉನ್ಮೀಲನ’.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹೇಂದ್ರನಾಥ ಗುಪ್ತ | On the birth anniversary of Mahendranath Gupta |

Sun Mar 13 , 2022
ಮಹೇಂದ್ರನಾಥ ಗುಪ್ತರು ರಾಮಕೃಷ್ಣ ಪರಮಹಂಸರ ಅನುಯಾಯಿಗಳಲ್ಲಿ ಅತ್ಯಂತ ಶ್ರೇಷ್ಠ ಸ್ಥಾನ ಪಡೆದವರಲ್ಲಿ ಒಬ್ಬರು. ಹೆಜ್ಜೆ ಹೆಜ್ಜೆಗೂ ರಾಮಕೃಷ್ಣ ಪರಮಹಂಸರೊಡನಿದ್ದು ಅವರ ಬದುಕನ್ನು ಗಮನಿಸಿ, ಪ್ರತಿಯೊಂದೂ ಮಾತನ್ನು, ಆಲಿಸಿ, ದಾಖಲಿಸಿ ‘ಶ್ರೀ ರಾಮಕೃಷ್ಣ ವಚನವೇದ’ (Gospel of Sri Ramkrishnaದ ಮೂಲವಾದ ಬಂಗಾಳಿ ಮೂಲ ಕಥಾಮೃತ) ಕೃತಿಯನ್ನು ಲೋಕಕ್ಕೆ ಕೊಡುಗೆ ನೀಡಿದ ಮಹಾನುಭಾವರೀತ. ರಾಮಕೃಷ್ಣ ಪರಮಹಂಸರ ಅನುಯಾಯಿಗಳಲ್ಲಿ ‘ಮ’ ‘ಮತ್ತು ‘ಮಾಸ್ಟರ್ ಮಹಾಶಯ’ ಮುಂತಾದ ಪ್ರಖ್ಯಾತ ಹೆಸರುಗಳಿಂದ ಗೌರವಿಸಲ್ಪಟ್ಟ ಮಹೇಂದ್ರನಾಥ ಗುಪ್ತರು […]

Advertisement

Wordpress Social Share Plugin powered by Ultimatelysocial