ರಾಜಕಾಲುವೆ ಒತ್ತುವರಿ ಗುರುತಿಸಲು ಭೂ ಮಾಪಕರ ಕೊರತೆ!

ಬೆಂಗಳೂರು, ಮೇ 25: ಬೆಂಗಳೂರು ನಗರದಲ್ಲಿ ರಾಜಕಾಲುವೆ, ಮಳೆ ನೀರು ಚರಂಡಿ ಮೇಲೆ ಅತಿಕ್ರಮಣ ಮಾಡಿ ಕಟ್ಟಿದ್ದ 2,626 ಕಟ್ಟಡಗಳಲ್ಲಿ 1930 ಕಟ್ಟಡಗಳನ್ನು ಈ ವರೆಗೆ ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ.

ಒತ್ತುವರಿ ತೆರವು ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಎಸ್., “ಇನ್ನುಳಿದ ಅತಿಕ್ರಮಣ ಕಟ್ಟಡಗಳನ್ನು ತೆರವು ಮಾಡಲು ಪೌರಕಾರ್ಮಿಕ ಸಂಸ್ಥೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ” ಎಂದರು.

“ಗುರುತಿಸುವ 696 ಒತ್ತುವರಿ ಕಟ್ಟಡಗಳನ್ನು ತೆರವು ಮಾಡಬೇಕಿದೆ. ಇದರಲ್ಲಿ 52 ಅತಿಕ್ರಮಣದಾರರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ಮುಕ್ತಾಯವಾಗಿ ತೀರ್ಪು ಬರುವವರೆಗೆ ಇವುಗಳನ್ನು ತೆರವು ಮಾಡಲು ಅವಕಾಶವಿಲ್ಲ” ಎಂದು ತಿಳಿಸಿದರು.

ಒತ್ತುವರಿ ಗುರುತಿಸಲು ಭೂ ಮಾಪಕರ‌ ಕೊರತೆ
ಬಿಬಿಎಂಪಿ ಒತ್ತುವರಿಯಾದ ಪ್ರದೇಶಗಳನ್ನು ಗುರುತಿಸಲು ಭೂಮಾಪಕರ‌ ಕೊರತೆ ಇದೆ ಎನ್ನುವುದನ್ನು ರಂಗಪ್ಪ ಒಪ್ಪಿಕೊಂಡಿದ್ದಾರೆ. ರಾಜಕಾಲುವೆ ಗಡಿ ಗುರುತಿಸಲು ಭೂಮಾಪಕರನ್ನು ನಿಯೋಜಿಸುವಂತೆ ಸರ್ವೆ ಸೆಟ್ಲ್‌ಮೆಂಟ್ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

“ಭೂ ಮಾಪಕರ ನೇಮಕಾತಿಗೆ ಮನವಿ ಮಾಡಿದ್ದೇವೆ, ಅವರು ಒತ್ತುವರಿ ಪ್ರದೇಶವನ್ನು ಅಳೆದು, ಗಡಿ ಗುರುತಿಸಿದ ನಂತರ ನಾವು ಅತಿಕ್ರಮ ಪ್ರದೇಶವನ್ನು ತೆರವುಗೊಳಿಸಲು ಮುಂದಾಗಬಹುದು” ಎಂದು ಹೇಳಿದ್ದಾರೆ.

ರಾಜಕಾಲುವೆ ಹೂಳು ತೆಗೆಯಲು ಗುತ್ತಿಗೆದಾರರ ನೇಮಕ

ಒತ್ತುವರಿ ತೆರವು ಮಾಡುವುದರ ಜೊತೆಗೆ ರಾಜಕಾಳುವೆ ಸ್ವಚ್ಛಗೊಳಿಸಲು, ಹೂಳು ತೆಗೆಯುವ ಗುತ್ತಿಗೆದಾರರನ್ನು ನೇಮಿಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಈ ಮೂಲಕ ರಾಜಕಾಲುವೆಗಳನ್ನು ತೆರವು ಮಾಡಿ, ನೀರು ಸರಾಗವಾಗಿ ಹರಿಯುವಂತೆ ಮಾಡುವ ಪ್ರಕ್ರಿಯೆಗೆ ವೇಗ ದೊರೆಯುತ್ತದೆ.

“ಇದುವರೆಗೂ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಜಕಾಲುವೆಯ ಹೂಳು ತೆಗೆಯುವ ಜವಾಬ್ದಾರಿಯನ್ನು ಒಬ್ಬರೇ ಗುತ್ತಿಗೆದಾರರಿಗೆ ನೀಡಿದ್ದೇವೆ. ಈಗ ವಿಭಾಗೀಯ ಮಟ್ಟದಲ್ಲಿ ಗುರುತಿಸಿ ಗುತ್ತಿಗೆದಾರರನ್ನು ನೇಮಿಸಿಕೊಳ್ಳಲು ಯೋಜನೆ ರೂಪಿಸಿದ್ದೇವೆ” ಎಂದು ರಂಗಪ್ಪ ತಿಳಿಸಿದ್ದಾರೆ.

ಯಾವ ವಲಯದಲ್ಲಿ ಎಷ್ಟು ಒತ್ತುವರಿ?

ಒತ್ತುವರಿ ಮಾಡಿ ನಿರ್ಮಿಸಿರುವ 714 ಕಟ್ಟಡಗಳ ಪಟ್ಟಿಯನ್ನು ಬಿಬಿಎಂಪಿ ಸಿದ್ಧಪಡಿಸಿತ್ತು. ಪೂರ್ವ ವಲಯದಲ್ಲಿ 110 ಕಟ್ಟಡ, ಪಶ್ಚಿಮ ವಲಯದಲ್ಲಿ 59, ದಕ್ಷಿಣ ವಲಯದಲ್ಲಿ 20, ಕೋರಮಂಗಲ ವ್ಯಾಲಿ ವಲಯದಲ್ಲಿ 3, ಯಲಹಂಕ ವಲಯದಲ್ಲಿ 103, ಮಹದೇವಪುರ ವಲಯದಲ್ಲಿ 184, ಬೊಮ್ಮನಹಳ್ಳಿ ವಲಯದಲ್ಲಿ 92, ಆರ್. ಆರ್. ನಗರ ವಲಯದಲ್ಲಿ 9 ಹಾಗೂ ದಾಸರಹಳ್ಳಿ ವಲಯದಲ್ಲಿ 134 ಕಟ್ಟಡಗಳನ್ನು ತೆರವು ಮಾಡಲು ಪಟ್ಟಿ ಮಾಡಲಾಗಿದೆ.

ರಾಜಾಜಿನಗರ, ಕೆ. ಆರ್. ಪುರ, ಕೆಂಗೇರಿ, ಆರ್.ಆರ್. ನಗರ, ಹೆಬ್ಬಾಳ, ಯಲಹಂಕ, ಲಗ್ಗೆರೆ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಜಕಾಲುವೆಗಳ ಒತ್ತುವರಿ ಆಗಿದೆ ಎನ್ನಲಾಗಿದೆ. ಆದರೆ ಈಗ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ 696 ಕಟ್ಟಡಗಳು ಎಂದು ಹೇಳಿದ್ದಾರೆ.

ತೆರವು ಮಾಡಲು ಜನಪ್ರತಿನಿಧಿಗಳ ವಿರೋಧ?

ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿರುವ 714 ಕಟ್ಟಡಗಳ ಪಟ್ಟಿ ಸಿದ್ಧಪಡಿಸಿರುವ ಬಿಬಿಎಂಪಿ ಶೀಘ್ರದಲ್ಲೇ ತೆರವು ಕಾರ್ಯಾಚರಣೆ ಆರಂಭಿಸಲಿದೆ. ಆದರೆ ಬಿಬಿಎಂಪಿ ನಿರ್ಧಾರಕ್ಕೆ ಇದೀಗ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.

ನಗರದ ಬಹುತೇಕ ಆಸ್ಪತ್ರೆಗಳು, ವಾಣಿಜ್ಯ ಕಟ್ಟಡಗಳು, ಉದ್ಯಮಿಗಳು, ರಾಜಕಾರಿಣಿಗಳು ಸೇರಿದಂತೆ ಹಲವು ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಒತ್ತುವರಿ ತೆರವು ಕಾರ್ಯಾಚರಣೆಗೆ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ತೆರವು ಮಾಡದಂತೆ ಬಿಬಿಎಂಪಿ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ ಒತ್ತುವರಿ ತೆರವು ಮಾಡದಿದ್ದರೆ ಮಳೆ ಬಂದಾಗ ನಗರದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಲಿದ್ದು ಜನಾಕ್ರೋಶಕ್ಕೆ ಕಾರಣವಾಗಲಿದೆ ಎನ್ನುವ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ರಾಜಕಾಲುವೆ ಒತ್ತುವರಿ ಮಾಡಿ ಹಲವೆಡೆ ಕಟ್ಟಡ ನಿರ್ಮಿಸಲಾಗಿದೆ. ಪರಿಣಾಮ ನಗರದಲ್ಲಿ ಮಳೆ ಸುರಿದಾಗ ರಸ್ತೆಗಳು ಜಲಾವೃತವಾಗುತ್ತಿವೆ, ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇದರಿಂದ ಜನರು ಸರ್ಕಾರ ಮತ್ತು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇ 27ರಿಂದ 29ರವರೆಗೆ ಪಣಂಬೂರು ಬೀಚ್ ನಲ್ಲಿ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ ಶಿಪ್

Wed May 25 , 2022
ಮಂಗಳೂರು, ಮೇ 25: ಪಣಂಬೂರು ಕಡಲ ತೀರದಲ್ಲಿ ಮೇ 27ರಿಂದ 29ರವರೆಗೆ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಮಂತ್ರ ಸರ್ಫ್ ಕ್ಲಬ್ ಸಹಭಾಗಿತ್ವದಲ್ಲಿ ಈ ಚಾಂಪಿಯನ್ ಶಿಪ್ ನಡೆಯಲಿದೆ ಎಂದರು. ಪ್ರವಾಸೋದ್ಯಮ ಇಲಾಖೆಯಿಂದ ‘ಇಂಡಿಯನ್ ಓಪನ್ ಆಫ್ ಸರ್ಫಿಂಗ್-2022’ಕ್ಕೆ 15 ಲಕ್ಷ ರೂ.ಗಳ ಪ್ರಾಯೋಜಕತ್ವವನ್ನು ನೀಡಲಾಗಿದೆ. […]

Advertisement

Wordpress Social Share Plugin powered by Ultimatelysocial