ಪಿ ಯು ಪರೀಕ್ಷೆ ಏಪ್ರಿಲ್ 22ರಿಂದ ಫಿಕ್ಸ್. ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ ಪಠ್ಯೇತರ ನೈತಿಕ ಶಿಕ್ಷಣ.

ಬೆಂಗಳೂರುದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಏಪ್ರಿಲ್ 22ರಿಂದ ಫಿಕ್ಸ್. ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ ಪಠ್ಯೇತರ ನೈತಿಕ ಶಿಕ್ಷಣ. ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತು ಕೆಲವು ಅಂಶಗಳಿಗೆ ಕತ್ತರಿ ಪ್ರಯೋಗ. ಜೂನ್​ನಿಂದ ಶುರುವಾಗುವ ಒಂದು ಮತ್ತು ಎರಡನೇ ತರಗತಿಗೆ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಪಠ್ಯ ಅಳವಡಿಕೆ.

– ವಿಧಾನಸೌಧದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು.

ಮುಂದಿನ ಶೈಕ್ಷಣಿಕ ವರ್ಷ (2022-23)ದಿಂದ ಶಾಲಾ ಮಕ್ಕಳಿಗೆ ಪಠ್ಯೇತರ ನೀತಿ ಪಾಠ ಹೇಳಿಕೊಡಲಿದ್ದು, ಭಗವದ್ಗೀತೆ, ರಾಮಾಯಣ, ಮಹಾಭಾರತ ಒಳಗೊಂಡು ಎಲ್ಲ ಧರ್ಮಗಳ ಒಳ್ಳೆಯ ಅಂಶಗಳು ನೀತಿ ಪಾಠದಲ್ಲಿ ಇರಲಿವೆ. ಕುರಾನ್, ಬೈಬಲ್​ನಲ್ಲಿರುವ ಉತ್ತಮ ಅಂಶಗಳ ಸೇರ್ಪಡೆಗೆ ತಕರಾರಿಲ್ಲ. ಮಕ್ಕಳಲ್ಲಿ ನೈತಿಕತೆ ಹೆಚ್ಚಿಸುವಂಥ ವಿಚಾರಗಳು ನೀತಿಪಾಠದಲ್ಲಿರುತ್ತವೆ. ಆದರೆ ನಮ್ಮ ಶಾಲೆಗಳಿಗೆ ಯಾವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆಯೋ ಅದಕ್ಕೆ ಅನುಗುಣವಾಗಿ ನೈತಿಕ ಶಿಕ್ಷಣ ನೀಡಲಾಗುತ್ತದೆ. ಈ ಹಿಂದೆ ಪಂಚತಂತ್ರದಂತಹ ನೀತಿಪಾಠಗಳಿರುತ್ತಿದ್ದವು. ಇದರಿಂದ ಮಕ್ಕಳ ನೈತಿಕತೆ ಹೆಚ್ಚಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಠ್ಯೇತರ ನೀತಿಪಾಠ ಹೇಗಿರಬೇಕೆಂಬ ಬಗ್ಗೆ ವರದಿ ತರಿಸಿಕೊಳ್ಳಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ಸಚಿವರು ವಿವರಿಸಿದರು.

ಹೊಸ ನೀತಿ ಪಠ್ಯ: ಜೂನ್​ನಿಂದ ಶುರುವಾಗುವ ಒಂದು ಮತ್ತು ಎರಡನೇ ತರಗತಿಗೆ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಪಠ್ಯ ಅಳವಡಿಸಲಾಗುತ್ತಿದ್ದು, ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಸೇತುಬಂಧ ಮಾದರಿಯಲ್ಲಿ ಕಲಿಕಾ ಚೇತನಾ ಕಾರ್ಯಕ್ರಮ ಮೇ 16ರಿಂದ ಪ್ರಾರಂಭವಾಗಲಿದೆ.

ಟಿಪ್ಪು ಪಾಠಕ್ಕೆ ಕತ್ತರಿ ಪ್ರಯೋಗ

ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತು ಕೆಲವು ಅಂಶಗಳಿಗೆ ಕತ್ತರಿ ಪ್ರಯೋಗವಾಗಿರುವುದು ನಿಜ. ಆಧಾರರಹಿತ ಸಂಗತಿಗಳನ್ನು ಮಾತ್ರ ಕೈಬಿಟ್ಟಿದ್ದು, ‘ಮೈಸೂರು ಹುಲಿ’ ಎನ್ನುವ ಬಿರುದು ಉಳಿಸಿಕೊಳ್ಳಲಾಗಿದೆ. ಟಿಪುಪ ಸುಲ್ತಾನ್ ಪಾಠವನ್ನು ಕೈಬಿಡಿ ಎಂದು ಒತ್ತಾಯಿಸಿದ್ದ ಶಾಸಕ ಅಪ್ಪಚ್ಚು ರಂಜನ್ ದಾಖಲೆ, ಸಾಕ್ಷಿ ಮತ್ತು ಪುರಾವೆಗಳನ್ನು ನೀಡಿದ್ದರು. ಪಠ್ಯದಲ್ಲಿ ಕೈಬಿಡಲಾಗದಿದ್ದರೆ ಕನ್ನಡಕ್ಕೆ ಅನ್ಯಾಯ, ಕೊಡಗರ ಮೇಲೆ ದೌರ್ಜನ್ಯಸಹಿತ ಟಿಪುಪವಿನ ಎಲ್ಲ ಮುಖವನ್ನೂ ಪರಿಚಯಿಸಿ ಎಂಬ ಬೇಡಿಕೆಯಿಟ್ಟಿದ್ದರು. ಪಠ್ಯ ಪುಸ್ತಕದಲ್ಲಿ ಟಿಪ್ಪು ಕುರಿತು ಪಾಠದಲ್ಲಿ ಅನಗತ್ಯ ಅಂಶಗಳನ್ನು ಮಾತ್ರ ತೆಗೆದು ಹಾಕಿದ್ದು, ಯಾವೆಲ್ಲ ಅಂಶ ಕೈಬಿಡಲಾಗಿದೆ ಎಂಬ ಬಗ್ಗೆ ಮುಂದಿನ ವಾರ ವಿವರಿಸುವೆ ಎಂದು ಬಿ.ಸಿ.ನಾಗೇಶ್ ಹೇಳಿದರು. ಮುಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳ ಪೈಕಿ ಶೇಕಡ 40 ಈಗಾಗಲೆ ರವಾನೆಯಾಗಿದ್ದು, ಉಳಿದವು ಶೈಕ್ಷಣಿಕ ವರ್ಷಾರಂಭ ಪೂರ್ವದಲ್ಲಿ ಪೂರೈಕೆಯಾಗಲಿವೆ.

ಧರ್ಮ ಸಂಕೇತಿಸುವ ವಸ್ತ್ರ ಧರಿಸುವಂತಿಲ್ಲ

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಏ.22ರಿಂದ ಮೇ 18ರವರೆಗೆ ನಡೆಯಲಿದ್ದು, ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಿಗದಿಯಾಗಿವೆ. ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಬಿ.ಸಿ.ನಾಗೇಶ್ ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರಕ್ಕೆ ಪೆನ್ನು ಹೊರತುಪಡಿಸಿ ಮೊಬೈಲ್, ಆಲಿಸುವ ಉಪಕರಣಗಳನ್ನು ತರುವಂತಿಲ್ಲ. ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಾಗಿದೆ. ಸುಸೂತ್ರವಾಗಿ ನಡೆಯುವುದಕ್ಕೆ ಜಾಗೃತ ದಳಗಳನ್ನು ನೇಮಿಸಲಾಗಿದೆ. ಜತೆಗೆ ಎಲ್ಲ ದಿನಗಳಲ್ಲೂ 24 ತಾಸು ಸಿಸಿ ಕ್ಯಾಮರಾ ಕಣ್ಗಾವಲೂ ಇರಲಿದೆ. ಈ ಹಿಂದೆ ನಕಲು ಪ್ರಯತ್ನ ನಡೆದಿರುವ ಪರೀಕ್ಷಾ ಕೇಂದ್ರಗಳ ಬಳಿ ಹೆಚ್ಚಿನ ಭದ್ರತಾ ವ್ಯವಸ್ಥೆ ಬಗ್ಗೆ ಆಯಾ ಜಿಲ್ಲಾ ಆಡಳಿತ ನಿರ್ಧರಿಸಲಿವೆ ಎಂದು ವಿವರಿಸಿದರು. ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಸುರಕ್ಷತಾ ಕ್ರಮಗಳೊಂದಿಗೆ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದ್ದು, ನಕಲು ಹಾಗೂ ಅವ್ಯವಹಾರ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ ಎಂದರು. ಆಯಾ ಕಾಲೇಜುಗಳ ಮೇಲುಸ್ತುವಾರಿ ಸಮಿತಿಗಳು ನಿಗದಿಪಡಿಸಿದ ಸಮವಸ್ತ್ರಗಳು ಪರೀಕ್ಷೆಗೂ ಅನ್ವಯಿಸಲಿದ್ದು, ಉಳಿದೆಡೆ ಯಾವುದೇ ಧರ್ಮವನ್ನು ಸಂಕೇತಿಸುವ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ನಾಗೇಶ್ ಸ್ಪಷ್ಟಪಡಿಸಿದರು. ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ಸಮವಸ್ತ್ರದಿಂದ ವಿನಾಯಿತಿ ಇರುತ್ತದೆ. ಆದರೆ ಸಾಮಾನ್ಯ ದಿರಿಸಿನಲ್ಲಿ ಪರೀಕ್ಷೆಗೆ ಹಾಜರಾಗುವವರು ಸರ್ಕಾರ ಮತ್ತು ಹೈಕೋರ್ಟ್ ಆದೇಶಗಳನ್ನು ಪಾಲಿಸಲೇಬೇಕು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಇಂದು ದಿಢೀರ್ ಏರಿಕೆ!

Wed Apr 20 , 2022
    ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಇಂದು ದಿಢೀರ್ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 2,067 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 2,067 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 40 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ […]

Advertisement

Wordpress Social Share Plugin powered by Ultimatelysocial