ಬಿ. ಜಿ. ಎಲ್. ಸ್ವಾಮಿ ಮಹಾನ್ ಸಸ್ಯಶಾಸ್ತ್ರಜ್ಞರಾಗಿ, ವೈಜ್ಞಾನಿಕ ಮಹಾನ್ ಬರಹಗಾರರಾಗಿ ಪ್ರಸಿದ್ಧರಾಗಿದ್ದಾರೆ.

A Botanist with big ‘B’ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಾರ್ನರ್ ಅವರಿಂದ ಪ್ರಶಂಸಿತರಾದ ಬಿ.ಜಿ.ಎಲ್. ಸ್ವಾಮಿ (ಬೆಂಗಳೂರು ಲಕ್ಷ್ಮೀನಾರಾಯಣ ಸ್ವಾಮಿ) ಕನ್ನಡದ ಒಬ್ಬ ವಿಶಿಷ್ಟ ಬರಹಗಾರ, ಚಿಂತಕ ಹಾಗೂ ಸಂಶೋಧಕ. ಅವರ ವ್ಯಂಗ್ಯಬರಹಗಳಲ್ಲಾಗಲೀ, ಪ್ರವಾಸ ಕಥನಗಳಲ್ಲಾಗಲಿ, ಸಂಶೋಧನ ಗ್ರಂಥಗಳಲ್ಲಾಗಲಿ ಅವರ ‘ಸ್ವಾಮಿತನ’ ಎನ್ನಬಹುದಾದ ವಿಶಿಷ್ಟತೆ ಎದ್ದುಕಾಣುವಂಥದು. ಸಾಹಿತ್ಯದಲ್ಲಿ ಈ ಬಗೆಯ ಸಾವಯವ ಶಿಲ್ಪ ಅಪೂರ್ವವಾದದ್ದು. ಯಾವ ವಿಷಯವನ್ನೇ ಆರಿಸಿಕೊಂಡರೂ ಅದರ ಮೂಲ ಬೇರುಗಳನ್ನೇ ಅಲುಗಾಡಿಸುವ ಸ್ವಭಾವ ಅವರದು. ಅವರು ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾವನ್ನು ರೇಖಿಸುತ್ತಾ ನಮ್ಮ ದೇಶಕ್ಕೆ ದಕ್ಷಿಣ ಅಮೆರಿಕಾದಿಂದ ಬಂದ ತರಕಾರಿಗಳನ್ನೆಲ್ಲ ಗುರುತಿಸುತ್ತಾರೆ. ಅವರು ದಕ್ಷಿಣ ಭಾರತದ ಶಾಸನಗಳ ಕೂಲಂಕಷ ಅಧ್ಯಯನ ಮಾಡುವುದು ಅವುಗಳಲ್ಲಿ ಉಕ್ತವಾದ ಗಿಡಮರಗಳ ಹಿನ್ನೆಲೆಯಲ್ಲಿ. ಕರ್ನಾಟಕದ ಸಂಗೀತದ ಬಗೆಗೆ ಚಿಂತಿಸುವುದರ ಜತೆಗೇ ವಿಜಯನಗರದ ಪತನದ ವಾಸ್ತವಗಳ ಶೋಧನೆಗೆ ಹೊರಡುತ್ತಾರೆ. ತಂಬಾಕಿನಂಥ ಮಾದಕ ವಸ್ತುವಿನ ಕಥನವನ್ನು ಅಷ್ಟೇ ಮಾದಕವಾದ ಮೋಹಕ ಶೈಲಿಯಲ್ಲಿ ಮಂಡಿಸುತ್ತಾರೆ. ಅವರು ಕೊಡುವ ವ್ಯಕ್ತಿಚಿತ್ರಗಳೂ, ತಮಿಳು ಅನುವಾದಗಳೂ ಸ್ವಾಮಿಯವರದೇ ಎಂದು ಹೇಳಬಹುದಾದ ಒಂದು ಗಡಸುತನದಿಂದ ಕೂಡಿರುತ್ತವೆ. ‘ಪಂಚಕಲಶಗೋಪುರ’ದಲ್ಲಿ ಅವರು ಬಿ.ಎಂ.ಶ್ರೀಯವರ ಭಾಷಣ ಶ್ರದ್ಧೆ-ಗೀಳು ಎರಡನ್ನೂ ಹಾಸ್ಯ-ಮೆಚ್ಚಿಕೆಗಳ ವಿಚಿತ್ರ ಮಿಶ್ರಣದಿಂದ ಪರಿಚಯ ಮಾಡಿಕೊಟ್ಟಿರುವ ಬಗೆಯನ್ನು ನೋಡಬೇಕು. ಬಿ.ಜಿ.ಎಲ್. ಸ್ವಾಮಿಯವರು ಸ್ವಯಂ ರೇಖಾಚಿತ್ರಕಾರರೂ ಆಗಿರುವುದರಿಂದ ತಮ್ಮ ವಿವರಣೆಯ ಕಲಾತ್ಮಕ ದೃಶ್ಯಚಿತ್ರಗಳನ್ನು ತಮ್ಮದೇ ಅದ ದೃಷ್ಟಿಕೋನದಿಂದ ಬಿಡಿಸುವ ಹವ್ಯಾಸವನ್ನು ಪ್ರದರ್ಶಿಸಿ ತಮ್ಮ ಬರಹಗಳಿಗೆ ಒಂದು ಹೊಸ ಅಯಾಮವನ್ನು ಒದಗಿಸುತ್ತಾರೆ. ವಿವಾದಾತ್ಮಕ ವಿಷಯಗಳ ಸುಳಿಯಲ್ಲಿ ಸಿಲುಕಬಯಸುವುದೂ ಅವರಿಗೆ ಒಂದು ಪ್ರಿಯವಾದ ಹವ್ಯಾಸ. ತಮಿಳು ಭಾಷೆಯ ಪ್ರಾಚೀನತೆಯನ್ನು ತೋರಿಸುವ ವಿಷಯದಲ್ಲಿ ತಮಿಳು ವಿದ್ವಾಂಸರು ಮಾಡಿರುವ ಆತುರದ ತೀರ್ಮಾನಗಳನ್ನು ಪ್ರಬಲ ಸಾಕ್ಷಾಧಾರಗಳಿಂದ ಖಂಡಿಸಿ ತಮಿಳರ ಅಸಹನೆಗೆ ಪಾತ್ರರಾದದ್ದನ್ನಾಗಲಿ, ಪುರಂದರ ದಾಸರ ಕೀರ್ತನೆಗಳ ಕೆಲವು ಮಿತಿಗಳನ್ನು ಶುದ್ಧ ಸಂಗೀತದ ದೃಷ್ಟಿಯಿಂದ ಚರ್ಚಿಸಿ ಕನ್ನಡದಲ್ಲಿ ದೊಡ್ಡ ವಿವಾದದ ಸುಳಿಯನ್ನು ಎಬ್ಬಿಸುವುದನ್ನಾಗಲಿ, ಚಿದಂಬರದ ನಟರಾಜನ ಆನಂದ ತಾಂಡವದ ಮೂಲವು ಕಾಶ್ಮೀರ ಶೈವದ ಪ್ರತ್ಯಭಿಜ್ಞಾದರ್ಶನದ ಪ್ರಭಾವದಿಂದ ಬಂದುದೆಂದು ಸಾಕ್ಷಾಧಾರಗಳಿಂದ ಗುರುತಿಸಿದ್ದುದನ್ನಾಗಲಿ ಇಲ್ಲಿ ನೆನಪಿಸಿಕೊಳ್ಳಬಹುದು. ಬೇರೆ ಬೇರೆ ಪ್ರಸಂಗಗಳ ವ್ಯಂಗ್ಯ ವಿಮರ್ಶೆ ಮಾಡುವ ಸಂದರ್ಭದಲ್ಲಿ ಆನುಷಂಗಿಕವಾಗಿ ತಮ್ಮ ಮನೋಧರ್ಮ ಯಾವ ಧಾತುವಿನದು ಎಂಬುದನ್ನು ಧ್ವನಿಸುತ್ತ ಹೋಗುವ ಜಾಯಮಾನ ಅವರದು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಂತಹ ಪ್ರತಿಷ್ಠಿತ ಕಾಲೇಜಿನ ಪ್ರಾಧ್ಯಾಪಕ, ಪ್ರಾಚಾರ್ಯ ಸ್ಥಾನಗಳಲ್ಲಿದ್ದೂ ದೊಗಲೆ ಜುಬ್ಬ, ಪೈಜಾಮಾ ಅಥವಾ ನಿಕ್ಕರ್ ಗಳಲ್ಲಿ ಓಡಾಡಿ ಕೆಲವು ಸಂಪ್ರದಾಯಸ್ಥ ಶಿಕ್ಷಕರಿಗೆ, ಶಿಕ್ಷಣಾಧಿಕಾರಿಗಳಿಗೆ ಅವರು ನುಂಗಲಾರದ, ಉಗುಳಲಾರದ ತುತ್ತಾಗಿದ್ದುದೂ ಉಂಟು. ‘ಆನೆ ನಡೆದುದೆ ಮಾರ್ಗ’ ಎಂದು ಕೇಶಿರಾಜ ಹೇಳಿರುವುದು ಇಂಥವರನ್ನೇ ಕುರಿತು ಎಂದು ಕಾಣುತ್ತದೆ.ಭಾಷೆಯ ನೆಲದಲ್ಲಿ ವ್ಯಂಗ್ಯದ ಮಳೆಯನ್ನು ಹರಿಸಿದ್ದು, ಸಸ್ಯ ಜಗತ್ತಿನ ನರುಗಂಪನ್ನು ತುಂಬಿದ್ದು ಮತ್ತು ಶೋಧನೆಯ ತಂಗಾಳಿಯಿಂದ ಲವಲವಿಸುವಂತೆ ಮಾಡಿದ್ದು ಬಿ.ಜಿ.ಎಲ್ ಸ್ವಾಮಿಯವರ ಸಾಧನೆ ಎನ್ನಬಹುದು. ಸಸ್ಯವಿಜ್ಞಾನ ಕ್ಷೇತ್ರದಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡಿ ಲೇಖನಗಳನ್ನು ಪ್ರಕಟಿಸಿ ಅಂತರರಾಷ್ಟ್ರೀಯ ಖ್ಯಾತಿಗೊಳಿಸಿರುವ ಸ್ವಾಮಿಯವರು ‘ಹಸಿರು ಹೊನ್ನು’ ಗ್ರಂಥದಲ್ಲಿ ಓದುಗರನ್ನು ತಮ್ಮ ಪಾಂಡಿತ್ಯದ ಸಾಗರದಲ್ಲಿ ಮುಳುಗಿಸದೆ, ತಬ್ಬಿಬ್ಬು ಮಾಡುವ ಪರಿಭಾಷೆಯನ್ನು ಬಳಸದೆ, ಜತೆಯಲ್ಲಿ ಬಂದಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪ್ರಚಂಡ ಅಜ್ಞಾನವನ್ನು ಹಿಯಾಳಿಸದೆ ಸಲೀಲವಾಗಿ ನಮ್ಮೆದುರಿಗೆ ಒಂದು ಸುಂದರ ಸಸ್ಯಲೋಕವನ್ನು ಸೃಷ್ಟಿಸಿ, ಅದರ ಎಲ್ಲ ಜಟಿಲತೆಗಳೊಂದಿಗೆ ಪರಿಚಯಿಸಿಕೊಡುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಪ್ರಕೃತಿಯ ಸಸ್ಯವಿಸ್ಮಯಗಳನ್ನು ನೋಡುತ್ತ ನೋಡುತ್ತ ಅದರ ವಿಶ್ವರೂಪದರ್ಶನದಿಂದ ನಾವು ಬೆರಗಾಗುವಂತೆ ಮಾಡಬಲ್ಲ ಒಂದು ಕಲಾಮೋಡಿ ಅವರ ಬರಹದಲ್ಲಿದೆ. ಸಸ್ಯಜಗತ್ತಿನ ವಿಷಯಗಳ ಗಹನತೆಯನ್ನಾಗಲಿ, ಜಟಿಲತೆಯನ್ನಾಗಲಿ ಹಗುರಗೊಳಿಸದೆ ಎಷ್ಟು ತಿಳಿಯಾಗಿ ಹೇಳ ಬಹುದೆಂಬುದಕ್ಕೆ ‘ಹಸಿರು ಹೊನ್ನು’ ಗ್ರಂಥದ ಪ್ರವಾಸ ಕಥನ ವ್ಯಾಖ್ಯಾನಗಳು ಸಾಕ್ಷಿಯಾಗಿ ನಿಲ್ಲುತ್ತವೆ. “ಸ್ವಾಮಿ ನನಗೆ ಬಹು ದೊಡ್ಡವರಾಗಿ ಕಾಣಿಸಿದುದು ಸಂಶೋಧನೆಗಳ ಲವಲವಿಕೆಯಿಂದ ಮತ್ತು ಶಾಸ್ತ್ರಪ್ರೇಮವನ್ನು ಇನ್ನೊಬ್ಬರಿಗೆ ಅಂಟಿಸಬಲ್ಲ ಆಕರ್ಷಣೆಯಿಂದ” ಎಂಬ ಶಿವರಾಮ ಕಾರಂತರ ಮಾತು ಎಷ್ಟು ಸತ್ಯವೆಂಬುದು ಹಸಿರು ಹೊನ್ನಿನ ಪುಟಪುಟದಲ್ಲೂ ಕಂಡುಕೊಳ್ಳಬಹುದಾಗಿದೆ.ಹೊಸಗನ್ನಡದ ಆಚಾರ್ಯರಲ್ಲೊಬ್ಬರಾದ ಡಿ.ವಿ. ಗುಂಡಪ್ಪನವರ ಮಗ ಬಿ.ಜಿ.ಎಲ್.ಸ್ವಾಮಿ ಜನಿಸಿದ್ದು 1916ರ ಫೆಬ್ರವರಿ 5ರಂದು. ಅವರ ಐದನೆಯ ವಯಸ್ಸಿನಲ್ಲಿ ತಾಯಿ ಬೆಂಕಿ ಅಪಘಾತದಲ್ಲಿ ತೀರಿಕೊಂಡರು. ಡಿ.ವಿ.ಜಿಯವರಂಥ ಹಿರಿಯ ಚೇತನದ ಮೊದಲನೆಯ ಮಗನಾಗಿ ಬೆಳೆದ ಸ್ವಾಮಿ ತಂದೆಯವರಿಗಿಂತ ಹೆಚ್ಚಾಗಿ ತಂದೆಯವರ ಪುಸ್ತಕ ಭಂಡಾರದಿಂದ ಪ್ರಭಾವಿತರಾದ ವ್ಯಕ್ತಿ. ನೂರಾರು ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ಡಿ.ವಿ.ಜಿ. ಮಗನನ್ನು ಸ್ವತಂತ್ರವಾಗಿ ಬೆಳೆಯಲು ಬಿಡಬೇಕಾದದ್ದು ಅನಿವಾರ್ಯವಾಯಿತು. ಹೈಸ್ಕೂಲಿನಲ್ಲಿ ‘ಜಗಳಗಂಟ’ ಎಂದೇ ಪ್ರಸಿದ್ಧನಾಗಿದ್ದ ಸ್ವಾಮಿ, ಚರ್ಚೆ ಮಾಡದೆ ಯಾವುದನ್ನೂ ಒಪ್ಪಿಕೊಳ್ಳುತ್ತಿರಲಿಲ್ಲವೆಂದು ಅವರ ಜೀವನ ಚರಿತ್ರಕಾರ ಡಾ.ಬಿ.ಪಿ. ರಾಧಾಕೃಷ್ಣ ಹೇಳಿದ್ದಾರೆ. ಅಲ್ಲದೆ ಆ ವಯಸ್ಸಿನಲ್ಲೇ ಅವರಿಗೆ ನಾಟಕದ ಗೀಳೂ ಹಿಡಿದಿತ್ತಂತೆ. ಮರಣದ ಮಣೆಯ ಮೇಲೆ ಶಯನ. ಉಡುಪಿನಲ್ಲಿ ಅಂಥ ನಯ ನಾಜೂಕು ಇರುತ್ತಿರಲಿಲ್ಲವೆಂದು ರಾಧಾಕೃಷ್ಣ ಅವರು ಹೇಳುತ್ತಾರೆ. ಉದ್ದಕ್ಕೂ ಅಷ್ಟೇ. ದೊಗಲೆ ಜುಬ್ಬದ ಗಡಸು ನಡಿಗೆಯ ಧಡೂತಿ ಮನುಷ್ಯ ಸ್ವಾಮಿ. ತಿವಿಯುವ ಕಣ್ಣ, ಕೈ ಕಾಲುಗಳನ್ನು ವಿಲಕ್ಷಣವಾಗಿ ತಿರುಚುತ್ತ, ಚುರೋಟಿನ ಒಳಗೊಳವೆಯನ್ನು ಕೆಲದ ಒಸಡಿಗೆ ಸರಿಸುತ್ತ, ಗಟ್ಟಿಯಾಗಿ ಅರಚುತ್ತ, ಕೇಕೆ ಹಾಕುತ್ತ ಮಾತಾಡುವುದು ಅವರ ಸ್ವಭಾವ. ತುಂಟ ಗಂಭೀರ ಮುಖಮುದ್ರೆ. ಅವರ ಮುಖ ಒಬ್ಬ ಕೊಲೆಗಾರನ ಮುಖವನ್ನು ಅಭಿವ್ಯಕ್ತಿಸುವಂತಿದೆ ಎಂದು ಡಿ.ವಿ.ಜಿ ಆಗಾಗ ಹಾಸ್ಯಮಾಡುತ್ತಿದ್ದರಂತೆ. “ಇದು ನನ್ನ ತಪ್ಪಲ್ಲ. ಈ ಮಡಿಕೆ ಮಾಡಿದ ಕುಂಬಾರನ ತಪ್ಪು” ಎಂದು ಸ್ವಾಮಿಯವರು ಆ ವಿಧಾತನನ್ನೂ ಲೇವಡಿ ಮಾಡಿರುವುದುಂಟು. ಸೆಂಟ್ರಲ್ ಕಾಲೇಜಿನಲ್ಲಿ 1936ರಲ್ಲಿ ಪ್ರಾಣಿಶಾಸ್ತ್ರದ ಆನರ್ಸ್ ಗೆ ಸೇರಬೇಕಾಗಿದ್ದ ಸ್ವಾಮಿ ಎ. ಆರ್. ಕೃಷ್ಣಶಾಸ್ತ್ರಿಗಳ ಬಲವಂತಕ್ಕೆ ಸಸ್ಯಶಾಸ್ತ್ರದ ಕಡೆ ತಿರುಗಿದರು. ಇತ್ತ ಕನ್ನಡದ ಬಗೆಗೂ ಆಸಕ್ತಿ ಬಲಿತು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಕಾರ್ಯದರ್ಶಿಯಾದರು. ಅವರನ್ನು ಕನ್ನಡದ ವೈಜ್ಞಾನಿಕ ಬರವಣಿಗೆಯ ಕಡೆಗೆ ತಿರುಗಿಸಿದ ಶ್ರೇಯಸ್ಸು ಎ.ಆರ್. ಕೃ ಅವರಿಗೇ ಸಲ್ಲುತ್ತದೆ. ಅವರ ಒತ್ತಾಸೆಯಿಂದ “ಆರ್ಜಿತ ಗುಣಗಳೂ ಅನುವಂಶೀಯತೆಯೂ” ಎಂಬ ಪ್ರಥಮ ಲೇಖನವನ್ನು ಸ್ವಾಮಿಯವರು ಬರೆದದ್ದು 1939ರಲ್ಲಿ. ಅನಂತರ 1944ರಲ್ಲಿ ‘ವಿಜ್ಞಾನ ವಿಹಾರ’ ಎಂಬ ತಲೆಬರಹದ ನಾಲ್ಕು ಲೇಖನಗಳು (ಜೇಡಗಳ ಪ್ರಣಯ ಪ್ರಸಂಗ, ಆಸ್ಟ್ರೇಲಿಯಾದ ಪ್ಲಾಟಿಪಸ್ ಎಂಬ ಪ್ರಾಣಿಯ ಬಗೆಗೆ ಒಗಟಿನ ರೂಪದ ಪದ್ಯಗುಚ್ಚ, ಹಸಿವಿನ ಬಳ್ಳಿ ಇತ್ಯಾದಿ) ಕನ್ನಡ ನುಡಿಯಲ್ಲಿ ಬೆಳಕು ಕಂಡವು. ಮುಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಶೋಧಕ ಸಹಾಯಕ ವೃತ್ತಿ. ಈ ಅವಧಿಯಲ್ಲಿ ಇಂಗ್ಲೀಷಿನಲ್ಲಿ ಬರೆದ ವೈಜ್ಞಾನಿಕ ಬರಹಗಳಿಂದಾಗಿ ಸ್ವಾಮಿ ಸಸ್ಯಶಾಸ್ತ್ರದ ವಿಖ್ಯಾತ ವಿಜ್ಞಾನಿಗಳ ಗಮನವನ್ನು ಸೆಳೆದರು. ತಂದೆಯ ನೆರವಿನಿಂದ ಮನೆಯಲ್ಲೇ ಪ್ರಯೋಗಾಲಯ ಸ್ಥಾಪಿಸಿ ವಿಶ್ವದ ಪ್ರಸಿದ್ಧ ಪತ್ರಿಕೆಗಳಲ್ಲಿ ತಮ್ಮ ಸಂಶೋಧನ ಲೇಖನಗಳನ್ನು ಪ್ರಕಟಿಸಿ 1947ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದರು. ಮುಂದೆ ಸರ್ಕಾರದ ಶಿಷ್ಯವೇತನವನ್ನು ಪಡೆದು ಸುಪ್ರಸಿದ್ಧ ಸಸ್ಯವಿಜ್ಞಾನಿಯಾದ ಇರ್ವಿಂಗ್ ಬೈಲಿಯ ಶಿಷ್ಯರಾಗಿ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಸೇರಿದರು. ಅಮೇರಿಕಾ ಸಂಶೋಧನೆಗೆ ಹೆಸರಾದ ದೇಶ. ಸಂಶೋಧನೆಯಲ್ಲಿ ತೊಡಗಿದವರು ಹಗಲು ರಾತ್ರಿಗಳ ಲಕ್ಷವಿಲ್ಲದೆ ಬೇರೆ ಎಲ್ಲವನ್ನೂ ಮರೆತು ವಿಷಯದಲ್ಲಿ ತನ್ಮಯರಾಗುವುದು ಅಮೆರಿಕನ್ನರಿಗೆ ಆಶ್ಚರ್ಯದ ಸಂಗತಿಯೇನೂ ಆಗಿರಲಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಪ್ಪಿ ಲಹಿರಿ ಅವರು ತಮ್ಮ ಜೀವನಚರಿತ್ರೆಯಲ್ಲಿ ರಣವೀರ್ ಸಿಂಗ್ ಅವರ ಕಿರಿಯ ಆವೃತ್ತಿಯಲ್ಲಿ ನಟಿಸಬೇಕೆಂದು ಬಯಸಿದ್ದರು!!

Wed Feb 16 , 2022
ಬಪ್ಪಿ ಲಾಹಿರಿ ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ. ಫೆಬ್ರವರಿ 15 ರಂದು ಅವರ ನಿಧನದ ನಂತರ ಇಡೀ ದೇಶವೇ ಶೋಕದಲ್ಲಿ ಮುಳುಗಿದೆ. ಹಿರಿಯ ಗಾಯಕ-ಸಂಯೋಜಕ ಮಂಗಳವಾರ ಮುಂಬೈ ಆಸ್ಪತ್ರೆಯಲ್ಲಿ 69 ನೇ ವಯಸ್ಸಿನಲ್ಲಿ ನಿಧನರಾದರು. ಏತನ್ಮಧ್ಯೆ, ಅಭಿಮಾನಿಗಳು ಇಂದು ಅವರ ಹಾಡುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ, ನಾವು ಬಪ್ಪಿ ದಾ ಅವರ ಹಳೆಯ ಸಂದರ್ಶನವನ್ನು ನೋಡಿದ್ದೇವೆ, ಅಲ್ಲಿ ಅವರು ತಮ್ಮ ಜೀವನಚರಿತ್ರೆಯಲ್ಲಿ ರಣವೀರ್ […]

Advertisement

Wordpress Social Share Plugin powered by Ultimatelysocial