ಬೀದಿಗೆ ಬಂತು ಬಾಳೆ ಬೆಳೆಗಾರರ ಬದುಕು

ಬೀದಿಗೆ ಬಂತು ಬಾಳೆ ಬೆಳೆಗಾರರ ಬದುಕು

ಲಕ್ಷ್ಮೇಶ್ವರ: ಪ್ರಸ್ತುತ ಮಾರುಕಟ್ಟೆಯಲ್ಲಿ ಬಾಳೆಹಣ್ಣಿಗೆ ಬೇಡಿಕೆ ಇಲ್ಲದ ಕಾರಣ ಬೆಲೆ ಕುಸಿತವಾಗಿ ಬಾಳೆ ಬೆಳೆದ ರೈತರ ಬದುಕು ಬೀದಿಗೆ ಬಿದ್ದಿದೆ. ಬೆಳೆದ ಹಣ್ಣನ್ನು ತಾವೇ ಮಾರಾಟ ಮಾಡಿ ಬದುಕಿನ ಬಂಡಿ ಸಾಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ಒಣ ಬೇಸಾಯದಿಂದ ಕೈ ಸುಟ್ಟುಕೊಳ್ಳುತ್ತಿರುವ ರೈತರು ತೋಟಗಾರಿಕೆಯತ್ತ ಚಿತ್ತ ಹರಿಸಿ ಲಾಭದಾಯಕ ಬೆಳೆಗಳನ್ನು ಬೆಳೆದು ಒಂದಿಷ್ಟು ಆರ್ಥಿಕ ಸುಧಾರಣೆಯ ಯೋಜನೆ, ಕನಸುಗಳನ್ನುರೈತರು ಕಾಣುತ್ತಿದ್ದಾರೆ. ತೋಟಗಾರಿಕೆಯಲ್ಲಿ ಬಾಳೆ,ದಾಳಿಂಬೆ, ದ್ರಾಕ್ಷಿ, ಕಬ್ಬು, ಅಡಕೆ, ಮಾವು, ಚಿಕ್ಕು ಸೇರಿಕೆಲ ಅಗ್ರಪಂಕ್ತಿಯ ಬಹು ವಾರ್ಷಿಕ, ಮಿಶ್ರ ಬೆಳೆ ಬೆಳೆಯಲು ಮುಂದಾಗುತ್ತಿರುವುದು ಕಂಡುಬರುತ್ತಿದೆ. ಆದರೆ ಕಳೆದ 2 ವರ್ಷದಿಂದ ಕೋವಿಡ್‌, ಅತಿವೃಷ್ಟಿ ಇತರೇ ಕಾರಣದಿಂದ ತೋಟಗಾರಿಕಾಬೆಳೆಗಾರರರೂ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಸದ್ಯ ನೆಚ್ಚಿದ ಬಾಳೆ ಬೆಳೆ ಬೆಲೆ ಕುಸಿತದಿಂದ ರೈತರ ಪರಿಸ್ಥಿತಿ ಅಯೋಮಯವಾಗಿದೆ.

ಮೊದಲು ಪ್ರತಿ ಕ್ವಿಂಟಲ್‌ ಬಾಳೆ 600 ರಿಂದ 800 ರೂ. ವರೆಗೂ ಮಾರಾಟವಾಗುತ್ತಿತ್ತು. ಕಳೆದ 6 ತಿಂಗಳಿಂದ ಪ್ರತಿ ಕ್ವಿಂಟಲ್‌ ಬಾಳೆ 300 ರಿಂದ 400 ರೂ. ಮಾತ್ರಮಾರಾಟವಾಗುತ್ತಿದೆ. ಅತಿಯಾದ ಮಳೆಯಿಂದಇಳುವರಿ ಕುಂಠಿತವಾಗಿದ್ದು, ನಿರ್ವಹಣೆ, ಕೂಲಿ ಆಳು, ಸಾಗಾಣಿಕೆ ವೆಚ್ಚ ಲೆಕ್ಕ ಹಾಕಿದರೆ ಬಾಳೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಲದಲ್ಲಿಯೇ ಬಿಟ್ಟರೆ ಕೊಳೆತು ಹೋಗುತ್ತದೆ ಎಂಬ ಕಾರಣದಿಂದ ಬೆಳೆಗಾರರೇ ಖರೀದಿದಾರರಿಗೆಒತ್ತಾಯಪೂರ್ವಕವಾಗಿ ಉದ್ರಿ ಮಾರಾಟ ಮಾಡಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮಾರಾಟ ಮಾಡಿ ಹೋದ ಮೇಲೆ ವ್ಯಾಪಾರಸ್ಥರುರೈತರಿಗೆ ಹಣ ಕೊಡಲು ಸತಾಯಿಸುತ್ತಿರುವ ಬಗ್ಗೆ ಕೇಳಿ ಬರುತ್ತಿವೆ.

ಟ್ರ್ಯಾಕ್ಟರ್‌ನಲ್ಲಿ ಮಾರಾಟಕ್ಕೆ ಮುಂದಾದ ರೈತರು: ಶಿರಹಟ್ಟಿ ತಾಲೂಕಿನ ಹಾಲಪ್ಪ ಬಡ್ನಿ, ಲಕ್ಷ್ಮಮ್ಮ ಬಡ್ನಿ, ಮಲ್ಲಪ್ಪ ಉಡಚಣ್ಣವರ ರೈತ ಕುಟುಂಬದವರು ತಾವೇ ಸ್ವತಃ ಕಟಾವು ಮಾಡಿ, ಸಾವಯವ ಪದ್ಧತಿಯಲ್ಲಿ ಹಣ್ಣು ಮಾಗಿಸಿ ಟ್ರ್ಯಾಕ್ಟರ್‌ನಲ್ಲಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಕಳೆದ ಕೆಲ ದಿನಗಳಿಂದ ಲಕ್ಷ್ಮೇಶ್ವರ, ಬೆಳ್ಳಟ್ಟಿ, ಶಿರಹಟ್ಟಿ ಸೇರಿ ದೊಡ್ಡ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ. ಈ ಕೆಲಸ ಹೆಚ್ಚಿನ ಲಾಭಕ್ಕೆ ಬದಲಾಗಿ ಜೀವನ ನಿರ್ವಹಣೆ ಮತ್ತು ಉಂಟಾಗಬಹುದಾದ ಹಾನಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ. 2 ಎಕರೆ ತೋಟದಲ್ಲಿನ ಬೆಳೆ ಸದ್ಯದ ದರಕ್ಕೆ ಮಾರಾಟ ಮಾಡಿದರೆ ಮಾಡಿದ ಖರ್ಚು ಕೂಡ ಸರಿದೂಗದು. ಖರ್ಚು ವೆಚ್ಚ ಸರಿದೂಗಿ ನಿತ್ಯದ ಜೀವನ ನಡೆದರೆ ಸಾಕು ಎನ್ನುವ ಉದ್ದೇಶದಿಂದ ನಾವೇ ಕುಟುಂಬದವರೆಲ್ಲ ಊರೂರು ಸುತ್ತಿ ಡಜನ್‌ಗೆ 15 ರಿಂದ 20 ರೂ.ವರೆಗೆ ಹಣ್ಣು ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ರೈತ ಕುಟುಂಬದವರು.

ತೋಟಗಾರಿಕೆ ಇಲಾಖೆ ಮಾಹಿತಿಯ ಪ್ರಕಾರ ರಾಷ್ಟ್ರೀಯ ತೋಟಗಾರಿಕಾ ಮಿಶನ್‌ ಮತ್ತು ರಾಷ್ಟ್ರೀಯ ಸಮಗ್ರ ಬೆಳೆ ಯೋಜನೆಯಡಿ ಶಿರಹಟ್ಟಿ/ಲಕ್ಷ್ಮೇಶ್ವರ ತಾಲೂಕಿನ ಉಂಡೇನಹಳ್ಳಿ, ಮುನಿಯನ ತಾಂಡಾ, ಶೆಟ್ಟಿಕೇರಿ, ಸೂರಣಗಿ, ದೊಡ್ಡೂರ, ಬನ್ನಿಕೊಪ್ಪ, ವಡವಿ, ಹೊಸೂರ, ತಾರಿಕೊಪ್ಪ, ಬೆಳ್ಳಟ್ಟಿ, ಕಡಕೋಳ ಸೇರಿ ಸುಮಾರು 350 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ಬೆಲೆ ಕುಸಿತದಿಂದಾಗಿ ಬಾಳೆ ಕಟಾವು ಮಾಡದ್ದರಿಂದ ಗೊನೆಗಳಲ್ಲಿಯೇ ಹಣ್ಣುಗಳಾಗಿ ತೋಟದ ತುಂಬೆಲ್ಲ ಕೊಳತು ಬಿದ್ದಿರುವ ದೃಶ್ಯ ಎಂತಹವರನ್ನೂ ಮಮ್ಮಲ ಮರಗಿಸುವಂತಿದೆ.

ಬಂದಿರುವ ಬಾಳೆ ಫಸಲನ್ನು ಮಾರುಕಟ್ಟೆಯಲ್ಲಿನ ಈಗಿನ ದರಕ್ಕೆ ಮಾರಾಟ ಮಾಡಿದರೆ ಕೇವಲ ಕಟಾವು ಮಾಡಿದ ಆಳಿನ ಖರ್ಚು ಸಹ ಸಿಗುವುದಿಲ್ಲ. ಇದರಿಂದ ಬೇಸತ್ತು ತೋಟಕ್ಕೆ ಹೋಗುವುದನ್ನೇ ಬಿಟ್ಟಿರುವುದಾಗಿ ಉಂಡೇನಹಳ್ಳಿ ಗ್ರಾಮದ ಎಂ.ವೈ. ಹೊನ್ನಣ್ಣವರ, ಬಸವರಾಜ ಅಂಗಡಿ, ಚಂದ್ರಶೇಖರ ಈಳಗೇರ ಸಂಕಷ್ಟ ತೋಡಿಕೊಂಡರು.

ಕೋವಿಡ್‌, ತಂಪಾದ ವಾತಾವರಣದಿಂದ ಬಾಳೆ ಹಣ್ಣಿನ ಮಾರಾಟ ಸಂಪೂರ್ಣ ಕಡಿಮೆಯಾಗಿದೆ. ಲಕ್ಷ್ಮೇಶ್ವರ ಮಾರುಕಟ್ಟೆಗೆ ಬೇಡಿಕೆಗಿಂತ ಹೆಚ್ಚು ಬಾಳೆ ಹಣ್ಣು ಬರುತ್ತದೆ. ತಳ್ಳುವ ಗಾಡಿಯಲ್ಲಿಯೇ ಈ ಮೊದಲು ನಿತ್ಯ 3 ಕ್ವಿಂಟಲ್‌ ಬಾಳೆ ಹಣ್ಣು ಮಾರುತ್ತಿದ್ದ ನಾನೀಗ ಅರ್ಧ ಕ್ವಿಂಟಲ್‌ ಹಣ್ಣು ಮಾರುತ್ತಿಲ್ಲ. ಒಂದೊಂದು ದಿನ ಕೂಲಿ ಹಣವೂ ಬರದ ಸ್ಥಿತಿಯಿದೆ. ಖರೀದಿಸಿದ ಹಣ್ಣು ಮಾರಾಟವಾಗದೇ ನಿತ್ಯ ಅಷ್ಟಷ್ಟೇ ಕೊಳೆಯುತ್ತದೆ. ನಿತ್ಯ ಸಂಜೆ ಸಾಲಕ್ಕೆ ಕಂತು ಕಟ್ಟುವ ಅನಿವಾರ್ಯತೆಯಿಂದಾಗಿ ಕಡಿಮೆ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿಯಿದೆ. -ಮಲ್ಲಿಕ್‌ ಮುಂಡರಗಿ, ತಳ್ಳು ಗಾಡಿ ವ್ಯಾಪಾರಸ್ಥ, ಲಕ್ಷ್ಮೇಶ್ವರ

ಕಳೆದ 6 ತಿಂಗಳಿಂದ ಅತಿಯಾದ ಮಳೆ, ತಂಪು ವಾತಾವರಣ, ಹೊಸ ಸೋಂಕಿನ ಭೀತಿಯಿಂದ ಹಣ್ಣಿನ ವ್ಯಾಪಾರ ಸಂಪೂರ್ಣ ಕುಸಿತ ಕಂಡಿದೆ. 40 ಸಾವಿರ ಜನಸಂಖ್ಯೆಯಪಟ್ಟಣ ನೂರಾರು ಹಳ್ಳಿಗಳ ಜನರ ವ್ಯಾಪಾರಿ ಕೇಂದ್ರವಾಗಿದೆ. ಮೊದಲು ನಮ್ಮದೊಂದು ಅಂಗಡಿಯಿಂದಲೇ ನಿತ್ಯ 15 ಕ್ವಿಂಟಲ್‌ ಹಣ್ಣು ಮಾರಾಟವಾಗುತ್ತಿತ್ತು. ಈಗ 5 ಕ್ವಿಂಟಲ್‌ಹಣ್ಣು ಮಾರಾಟವಾಗುತ್ತಿಲ್ಲ. ಮಾರಾಟದಜತೆಗೆ ರೈತರ ಜಮೀನು ಲಾವಣಿ ಪಡೆದು 8 ಎಕರೆ ತೋಟದಲ್ಲಿ ಬಾಳೆ ಬೆಳೆದಿದ್ದು, ಕಟಾವುಮಾಡಿ ಮಾರಾಟ ಮಾಡಿದರೆ ಖರ್ಚು ಬಾರದಂತಹ ಸ್ಥಿತಿಯಿದೆ. ಬೆಲೆ ಕುಸಿತದಿಂದ ರೈತರಷ್ಟೇ ಅಲ್ಲದೇ, ವ್ಯಾಪಾರಸ್ಥರ ಬದುಕು ಸಹ ಸಂಕಷ್ಟದಲ್ಲಿದೆ. -ಎನ್‌.ಎ. ಹಳದಿಪುರ, ಸಗಟು ವ್ಯಾಪಾರಸ್ಥ

ಕೋವಿಡ್‌ ಕಾರಣ, ತಂಪಾದ ವಾತಾವರಣದಿಂದ ನೆಗಡಿ,ಕೆಮ್ಮು ಬರುತ್ತದೆ ಎಂಬ ಕಾರಣದಿಂದಮಾರುಕಟ್ಟೆಯಲ್ಲಿ ಬಾಳೆ ಹಣ್ಣಿಗೆ ಬೇಡಿಕೆ ಕಡಿಮೆಯಾಗಿದೆ. ಅಲ್ಲದೇ, ನೆರೆಯಆಂಧ್ರ ಮತ್ತು ಮಹಾರಾಷ್ಟ್ರಗಳಿಂದ ಹೆಚ್ಚಿನ ಪ್ರಮಾಣದ ಬಾಳೆ ರಾಜ್ಯದ ಮಾರುಕಟ್ಟೆಗೆ ನುಗ್ಗಿದ್ದರಿಂದ ಬೆಲೆ ಕುಸಿತವಾಗಿದೆ. ರೈತರೇ ತಾವು ಬೆಳೆದ ಹಣ್ಣು, ತರಕಾರಿಗಳನ್ನು ನೇರವಾಗಿ ಮಾರಾಟ ಮಾಡಲು ತಳ್ಳು ಗಾಡಿ ಖರೀದಿಗಾಗಿ 15 ಸಾವಿರ ರೂ. ಸಹಾಯಧನ, ಹಣ್ಣು, ತರಕಾರಿಗಳ ಸಂಸ್ಕರಣೆ ಮತ್ತು ಕೋಲ್ಡ್‌ ಸ್ಟೋರೇಜ್‌ ಘಟಕ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತದೆ. ಅಲ್ಲದೇ, ಇದೀಗ ಸರ್ಕಾರ ತೋಟಗಾರಿಕಾ ಬೆಳೆ ಹಾನಿಗೆ ಪರಿಹಾರವನ್ನೂ ಸೂಚಿಸಿದೆ. -ಸುರೇಶ ಕುಂಬಾರ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಡಿಲೋಷನ್ ಅನ್ನು ಈ ಸಮಯದಲ್ಲಿ ಹಚ್ಚಿದರೆ ಚರ್ಮದ ಸಮಸ್ಯೆ ಕಾಡಲ್ಲ

Thu Dec 23 , 2021
ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ಸಮಯದಲ್ಲಿ ಚರ್ಮದ ಮೇಲೆ ತುರಿಕೆ, ಒಣಚರ್ಮ, ದದ್ದುಗಳು ಕಂಡುಬರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಚರ್ಮವನ್ನು ತೇವಗೊಳಿಸಲು ಬಾಡಿಲೋಷನ್ ಅನ್ನು ಹಚ್ಚುತ್ತಾರೆ. ಆದರೆ ಚರ್ಮಕ್ಕೆ ಬಾಡಿಲೋಷನ್ ಹಚ್ಚುವಾಗ ಕೆಲವು ವಿಚಾರಗಳು ತಿಳಿದಿರಲಿ. ಇಲ್ಲವಾದರೆ ಚರ್ಮದ ಸಮಸ್ಯೆಗಳು ಕಾಡುತ್ತವೆ. ಬೆಳಿಗ್ಗೆ ಚರ್ಮವನ್ನು ತೇವಗೊಳಿಸುವುದರಿಂದ ಚರ್ಮವನ್ನು ಹಾನಿಕಾರಕ ರಾಸಾಯನಿಕಗಳು ಮತ್ತು ಮಾಲಿನ್ಯಗಳಿಂದ ರಕ್ಷಿಸಬಹುದು. ಹಾಗಾಗಿ ನಿಯಮಿತವಾಗಿ ಬಾಡಿಲೋಷನ್ ಅನ್ನು ಹಚ್ಚಿ. ಸ್ನಾನ, ಶೇವಿಂಗ್, ಕೈಗಳನ್ನು ತೊಳೆದ ಬಳಿಕ […]

Advertisement

Wordpress Social Share Plugin powered by Ultimatelysocial