ಬಿಸಿಲ ಧಗೆ ಬಾಧಿಸದಿರಲಿ

ಬಿಸಿಲಿನ ತಾಪ ಹೆಚ್ಚಿದಂತೆ ಮಹಿಳೆಯರಲ್ಲಿ ಸೋಂಕು, ನೋವು, ಬೆವರುಗುಳ್ಳೆಯಂತಹ ಹಲವು ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಬೇಸಿಗೆ ಆರಂಭದಲ್ಲೇ ಮುನ್ನೆಚ್ಚರಿಕೆ ತೆಗೆದುಕೊಂಡರೆ, ಈ ಸಮಸ್ಯೆಗಳು ಬಾರದಂತೆ ತಡೆಗಟ್ಟಬಹುದು.

 

 ಕಳೆದ ಬೇಸಿಗೆಯಲ್ಲಿ ಧಗೆ ತುಸು ಹೆಚ್ಚಿತ್ತು.

ಒಂದು ದಿನ ಮಧ್ಯಾಹ್ನ ದೂರವಾಣಿ ಕರೆ ಮಾಡಿದ ಗೃಹಿಣಿ ರೇಖಾ, ‘ಡಾಕ್ಟ್ರೆ, ಪದೇ ಪದೇ ಮೂತ್ರಕ್ಕೆ ಹೋಗ್ಬೇಕು ಎನ್ನಿಸುತ್ತೆ. ಮೂತ್ರ ವಿಸರ್ಜನೆ ನಂತರ ಸಹಿಸಲಾಗದ ಉರಿ. ಇದಕ್ಕೆ ಏನು ಪರಿಹಾರ’ ಅಂತ ಕೇಳಿದರು.

ಅಂದು ವಾಕಿಂಗ್‌ನಲ್ಲಿ ಸಿಕ್ಕಿದ ಸುಮಾ ‘ಈ ಬೇಸಿಗೇಲಿ ಯಾಕಾದರೂ ಮುಟ್ಟಿನ ದಿನ ಬರುತ್ತಪ್ಪಾ ಅಂತ ಎನ್ನಿಸುತ್ತದೆ ಡಾಕ್ಟ್ರೆ. ಈ ಸಮಯದಲ್ಲಿ ತುಂಬಾ ಸುಸ್ತು, ಸಂಕಟ, ತಲೆನೋವು, ಹೊಟ್ಟೆನೋವು ಕಾಡುತ್ತದೆ. ಯಾವ ಆಹಾರ ತಿನ್ನಬೇಕು ಎನ್ನುವುದೇ ಗೊತ್ತಾಗಲ್ಲ’ ಎಂದು ಅವಲತ್ತುಕೊಂಡರು.

ರೇಖಾ, ಸುಮಾ ಮಾತ್ರವಲ್ಲ, ಹಲವು ಮಹಿಳೆಯರಲ್ಲಿ ಬೇಸಿಗೆಯಲ್ಲಿ ಇಂಥ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬೇಸಿಗೆ ಕಾಲದ ಆರಂಭದಲ್ಲೇ ಕೆಲವು ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಆಹಾರಕ್ರಮ, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಹೆಚ್ಚಿನ ತೊಂದರೆ ಬಾಧಿಸಿದಂತೆ ತಡೆಯಬಹುದು. ಹಾಗಾದರೆ, ಮಹಿಳೆಯರು ಯಾವ ರೀತಿಯ ಆಹಾರ ಕ್ರಮ ಅನುಸರಿಸಬೇಕು? ಇಲ್ಲಿದೆ ವಿವರ.

ಯಾವ ರೀತಿಯ ಆಹಾರ

ಹೊಟ್ಟೆ ಭಾರವಾಗುವವರೆಗೂ ಊಟ ಮಾಡಬೇಡಿ. ಸುಲಭವಾಗಿ ಜೀರ್ಣವಾಗುವ ಜವೆಗೋಧಿ, ಬಾರ್ಲಿ, ಹೆಸರುಬೇಳೆ, ಹಳೆಯ ಅಕ್ಕಿ (ವರ್ಷದ ಹಿಂದಿನದ್ದು), ರಾಗಿಯಂತಹ ಧಾನ್ಯಗಳ ಖಾದ್ಯಗಳನ್ನು ತಿನ್ನಬೇಕು. ಹೀರೇಕಾಯಿ, ಮೂಲಂಗಿ, ನುಗ್ಗೆಕಾಯಿ, ಬೆಂಡೆಕಾಯಿ, ಸೌತೆಕಾಯಿ, ಬೂದುಗುಂಬಳದಂತಹ ತರಕಾರಿಗಳನ್ನು ಹೆಚ್ಚು ಸೇವಿಸಬೇಕು.

ಬೇಸಿಗೆಯಲ್ಲಿ ದಂಟು, ಹರಿವೆ, ಸಬ್ಸಿಗೆ, ಮೆಂತ್ಯೆ, ಚಕ್ರಮುನಿ ಸೊಪ್ಪುಗಳಿಂದ ತಯಾರಿಸಿದ ಖಾದ್ಯಗಳನ್ನು ತಿನ್ನಿ. ಮೊಸರಿನ ಬದಲಿಗೆ ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು, ಕರಿಬೇವು ಹಾಕಿದ ಮಜ್ಜಿಗೆಯನ್ನು ಹೆಚ್ಚು ಕುಡಿಯಿರಿ. ಕರಿದ ತಿಂಡಿ, ಜಿಡ್ಡಿನ ಪದಾರ್ಥಗಳು, ತುಪ್ಪದಲ್ಲಿ ಮಾಡಿದ ಸಿಹಿ ಪದಾರ್ಥಗಳ ಸೇವನೆ ಮಿತಿಯಲ್ಲಿದ್ದಷ್ಟು ಒಳ್ಳೆಯದು.

ಬಾಯಾರಿಕೆ ತಣಿಸಲು ಹಣ್ಣಿನ ರಸಕ್ಕೆ ಹೆಚ್ಚು ನೀರು ಬೆರೆಸಿ, ಬೆಲ್ಲ ಸೇರಿಸಿ ಕುಡಿಯಬೇಕು. ಇಲ್ಲವೇ ತುಂಡು ಬೆಲ್ಲ ಬಾಯಿಗೆ ಹಾಕಿ ನೀರು ಕುಡಿಯುತ್ತಿರಬೇಕು. ನಿಂಬೆಹಣ್ಣಿನ ರಸದ ಪಾನಕ ಸೇವನೆ ಒಳ್ಳೆಯದು. ಕುಡಿಯುವ ನೀರನ್ನು ಕುದಿಸಿ, ಆರಿಸಿ, ಕೊನ್ನಾರಿಗಡ್ಡೆ, ಸೊಗದೆಬೇರು ಅಥವಾ ಲಾವಂಚ ಇವುಗಳಲ್ಲಿ ಯಾವುದಾದರೂ ಒಂದನ್ನು ಹಾಕಿಟ್ಟುಕೊಂಡು, ಆಗಾಗ್ಗೆ ಕುಡಿಯಿರಿ.

ದ್ರಾಕ್ಷಿ, ಸೇಬು, ಬಾಳೆ, ಸಪೋಟ, ಕಲ್ಲಂಗಡಿ, ಕರಬೂಜ, ಮಾವು ಇವುಗಳಲ್ಲಿ ಯಾವುದೇ ಹಣ್ಣಿನ ರಸಕ್ಕೆ ಬೆಲ್ಲ ಬೆರೆಸಿ ಕುಡಿಯಬೇಕು. ಇದರಿಂದ ದೇಹ ನಿರ್ಜಲಗೊಳ್ಳುವುದು ತಪ್ಪುತ್ತದೆ.

ರಾಗಿಹಿಟ್ಟು, ಅಕ್ಕಿಹಿಟ್ಟಿನಿಂದ ತಯಾರಿಸಿದ ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದು. ಆಹಾರದೊಂದಿಗೆ ತುಪ್ಪ ಮತ್ತು ಹಾಲನ್ನು ಧಾರಾಳವಾಗಿ ಬಳಸಿ. ಹೆಸರುಬೇಳೆಯ ಪಾಯಸ ದೇಹಕ್ಕೆ ತಂಪು ನೀಡುತ್ತದೆ.

ಬೆಲ್ಲ ಬೆರೆಸಿದ ಬೇಲದ ಹಣ್ಣಿನ ಪಾನಕ ‌ಸೇವನೆ ದಾಹ ನೀಗಿಸಿ, ಬಾಯಿಯಲ್ಲಿನ ದುರ್ಗಂಧ ವಸಡಿನ ರಕ್ತಸ್ರಾವ ನಿಲ್ಲಿಸುತ್ತದೆ. ಕಲ್ಲಂಗಡಿ ಹಣ್ಣಿಗೆ ಉಪ್ಪು ಹಾಕಿ ಸೇವಿಸಿ. ಇದರಿಂದ ದೇಹಕ್ಕೆ ‘ಸಿ’ ವಿಟಮಿನ್‌ ಸಿಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುವ ಜೊತೆಗೆ, ನೆಗಡಿಯಾಗದಂತೆ ತಡೆಯುತ್ತದೆ.

ಮಧುಮೇಹಿಗಳಿಗೆ ಪಾನೀಯಗಳು

ಮಧುಮೇಹದಿಂದ ಬಳಲುತ್ತಿರುವ ಮಹಿಳೆಯರು ಬೇಸಿಗೆಯಲ್ಲಿ ಹೆಚ್ಚು ಸಂಕಟಪಡುತ್ತಾರೆ. ಆದರೆ, ಬಳಲಿಕೆಯನ್ನು ನಿವಾರಿಸಿಕೊಳ್ಳಬೇಕಲ್ಲವೇ? ಇದಕ್ಕೆ ಏನು ಮಾಡಬೇಕು? ಚಿಂತಿಸಬೇಡಿ, ಹೀಗೆ ಮಾಡಿ.

ಕಿತ್ತಳೆ, ಕಲ್ಲಂಗಡಿ ಮತ್ತು ನಿಂಬೆಹಣ್ಣು – ಈ ಎಲ್ಲ ಹಣ್ಣುಗಳ ರಸಕ್ಕೆ ಶುಂಠಿ, ಮೆಣಸು, ಜೀರಿಗೆ ಸಮ ಪ್ರಮಾಣದಲ್ಲಿ ಸೇರಿಸಿ ತಯಾರಿಸಿದ ಪುಡಿಯನ್ನು ಒಂದು ಚಿಟಿಕೆಯಷ್ಟು ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುಡಿಯಬಹುದು.

ಕರಬೂಜ ರಸ, ಸೌತೆಕಾಯಿ ರಸ, ಪುದಿನ ರಸ, ರುಚಿಗೆ ತಕ್ಕಷ್ಟು ನಿಂಬೆರಸ ಬೆರೆಸಿಟ್ಟುಕೊಳ್ಳಿ. ಒಂದು ಚಿಟಿಕೆಯಷ್ಟು ಶುಂಠಿ, ಜೀರಿಗೆ ಪುಡಿಯನ್ನು ಬೆರೆಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕುಡಿಯಬಹುದು.

ಸೌತೆಕಾಯಿಯನ್ನು ತುರಿದು ಮಜ್ಜಿಗೆಗೆ ಹಾಕಿ. ಇಲ್ಲವೇ ಸೌತೆಕಾಯಿ ರಸ ತೆಗೆದು, ಅದಕ್ಕೆ ಉಪ್ಪು ಹಾಕಿ ಕುಡಿಯಬಹುದು.

ಬೆವರಿನ ಗುಳ್ಳೆಗೆ ಪರಿಹಾರ

ಬಿಸಿಲು ಹೆಚ್ಚಿರುವ ಎಲ್ಲ ಪ್ರದೇಶಗಳಲ್ಲೂ ಬೆವರುಗುಳ್ಳೆ ಸಮಸ್ಯೆ ಸಾಮಾನ್ಯ. ಅದರಲ್ಲೂ ಬಿಸಿಲು ಹೆಚ್ಚಿರುವ ಉತ್ತರ ಕರ್ನಾಟಕ ಭಾಗದಲ್ಲಿ ಈ ಸಮಸ್ಯೆ ಹೆಚ್ಚು‌.

ಅತಿ ಬೆವರಿನಿಂದ ರಕ್ಷಿಸಿಕೊಳ್ಳಲು ದಿನಕ್ಕೆರಡು ಬಾರಿ ತಣ್ಣೀರು ಸ್ನಾನ ಮಾಡಬೇಕು. ನೀರಿನ ಅಭಾವ ಇರುವ ಪ್ರದೇಶಗಳ ನಿವಾಸಿಗಳು, ಒದ್ದೆ ಬಟ್ಟೆಯಲ್ಲಿ ಆಗಾಗ್ಗೆ ಮೈ ಒರೆಸಿಕೊಳ್ಳುತ್ತಿರಬೇಕು.

ಅಳಲೆಕಾಯಿ, ಬೇವಿನ ಎಲೆ, ಲೋಧ್ರ, ದಾಳಿಂಬೆ ಸಿಪ್ಪೆಗಳನ್ನು ಸೇರಿಸಿ ಪುಡಿ ತಯಾರಿಸಿಟ್ಟುಕೊಳ್ಳಬೇಕು. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಮೈಗೆಲ್ಲ ತೆಳುವಾಗಿ ಲೇಪಿಸಿಕೊಂಡು ಒಂದು ಗಂಟೆಯ ನಂತರ ತಣ್ಣೀರಿನಲ್ಲಿ ಸ್ನಾನ ಮಾಡಬೇಕು.

ನೀರಿಗೆ ಸ್ವಲ್ಪ ಕರ್ಪೂರ ಹಾಕಿ ಸ್ನಾನ ಮಾಡಬೇಕು. ಮೈಗೆ ಬೇವಿನಎಲೆಯನ್ನು ಅರೆದು ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡಿದರೂ ಬೆವರು ಗುಳ್ಳೆ ಕಡಿಮೆಯಾಗುತ್ತದೆ.

ತೆಳುವಾದ ಹತ್ತಿಬಟ್ಟೆ ಧರಿಸುವುದು, ಸಡಿಲವಾದ ದಿರಿಸು ಧರಿಸುವುದರಿಂದಲೂ ಗುಳ್ಳೆಗಳ ಸಮಸ್ಯೆ ಕಾಡುವುದಿಲ್ಲ.‌

ಹಾಲಿನಲ್ಲಿ ಅರಿಸಿನ ಬೆರೆಸಿ ಮೈಗೆ ಲೇಪಿಸಿ ಒಂದು ಗಂಟೆಯ ನಂತರ ಸ್ನಾನ ಮಾಡುವುದರಿಂದ ಗುಳ್ಳೆಗಳು ನಿವಾರಣೆಯಾಗುತ್ತವೆ. ಚರ್ಮ ಕಾಂತಿಯುತವಾಗುತ್ತದೆ.

ಬೊಜ್ಜು ಕರಗಿಸಲು ಇದು ಸಕಾಲ

ದೇಹದ ತೂಕ ಹೆಚ್ಚಿರುವ ಮಹಿಳೆಯರು ಬೇಸಿಗೆಯಲ್ಲಿ ಒಂದೇ ಹೊತ್ತು ಊಟ ಮಾಡಿ. ಇನ್ನೆರಡು ಹೊತ್ತು ಹಣ್ಣುಗಳು ಅಥವಾ ದ್ರವಾಹಾರ ಸೇವಿಸಿ. ಆದಷ್ಟು ಸಕ್ಕರೆ ಬೆರೆಸದ ಪಾನೀಯಗಳನ್ನು ಕುಡಿಯುವುದರಿಂದ ಬೊಜ್ಜು ಕರಗುತ್ತದೆ.

ಇದರ ಜೊತೆಗೆ, ನಡಿಗೆ, ಯೋಗ ಅಥವಾ ವ್ಯಾಯಾಮ ನಿಯಮಿತವಾಗಿ ಮಾಡಿ. ಈ ಸಮಯದಲ್ಲಿ ಸಹಜವಾಗಿಯೇ ಬೆವರು ಹೆಚ್ಚು ಬರುವುದರಿಂದ ಕ್ಯಾಲೊರಿ ಕರಗಿಸಲು ಸಹಕಾರಿ. ಹಾಗಾಗಿ ತೂಕ ಇಳಿಯುತ್ತದೆ.

ಬೊಜ್ಜು ಕರಗಿಸಲು ಬೇಸಿಗೆ ಸೂಕ್ತ ಸಮಯ.

ಬೇಸಿಗೆ ವ್ಯಾಧಿಗಳಿಗೆ ಮನೆಮದ್ದು

ಕಣ್ಣುರಿ ನಿಯಂತ್ರಣ: ಗುಲಾಬಿ ಜಲ (ರೋಸ್‌ ವಾಟರ್‌) ಇಲ್ಲವೇ ಗುಲಾಬಿ ದಳಗಳಿಂದ ಮಾಡಿದ ಕಷಾಯದಿಂದ ಕಣ್ಣನ್ನು ಸ್ವಚ್ಛಗೊಳಿಸಿಕೊಳ್ಳಬೇಕು.

ಉರಿಮೂತ್ರ ನಿವಾರಣೆ: ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಯಬೇಕು. ಸೌತೆಕಾಯಿ ರಸಕ್ಕೆ ಮಜ್ಜಿಗೆ ಬೆರೆಸಿ ಕುಡಿಯಬೇಕು.

ತಲೆನೋವು: ಶ್ರೀಗಂಧವನ್ನು ಹಣೆಗೆ ಲೇಪಿಸಿಕೊಳ್ಳಬೇಕು. ಹುರುಳಿ ಬೇಯಿಸಿ ಕಟ್ಟು ತೆಗೆದು ಜೀರಿಗೆಪುಡಿ, ಉಪ್ಪು ಬೆರೆಸಿ ಕುಡಿಯಬೇಕು.

ಮೈಉರಿ: ಬಿಸಿಲಿನ ತಾಪದಿಂದ ಬೆವರು ಹೆಚ್ಚಾಗಿ ಮೈಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಇಂಥ ವೇಳೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಗುಲಾಬಿ ಜಲ ಅಥವಾ ನಿಂಬೆರಸ ಬೆರೆಸಿ ನಂತರ ಸ್ನಾನ ಮಾಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಾಂಕ್ರಾಮಿಕ ರೋಗವು ಅಮೀರ್ ಖಾನ್ ಜೀವನದ ದುರ್ಬಲತೆಯನ್ನು ಅರಿತುಕೊಂಡಿತು!

Mon Mar 14 , 2022
ಸಾಂಕ್ರಾಮಿಕ ರೋಗವು ತನ್ನ ಗಮನವನ್ನು ಬಹಳಷ್ಟು ವಿಷಯಗಳತ್ತ ಸೆಳೆದಿದೆ ಮತ್ತು ಅದು ತನ್ನ ಜೀವನವನ್ನು ಆಲೋಚಿಸಲು ಮತ್ತು ಪ್ರತಿಬಿಂಬಿಸಲು ಸಮಯವನ್ನು ನೀಡಿತು ಎಂದು ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಹಂಚಿಕೊಂಡಿದ್ದಾರೆ. ಅವರ ಜನ್ಮದಿನದ ಸಂದರ್ಭದಲ್ಲಿ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ‘ದಿಲ್ ಚಾಹ್ತಾ ಹೈ’ ನಟ ಹೀಗೆ ಹೇಳಿದರು: “ಬಹಳಷ್ಟು ಜನರಂತೆ, ಸಾಂಕ್ರಾಮಿಕ ರೋಗವೂ ನನಗೆ ಆಲೋಚಿಸಲು ಮತ್ತು ಇಲ್ಲಿಯವರೆಗೆ ಏನಾಯಿತು ಎಂಬುದರ ಕುರಿತು ಹಿಂತಿರುಗಿ ನೋಡಲು ಸಮಯವನ್ನು ನೀಡಿತು. ನನ್ನ […]

Advertisement

Wordpress Social Share Plugin powered by Ultimatelysocial