ಬಹುತೇಕ ಸಚಿವರ ಖಾತೆ ಬದಲಾವಣೆ ಸಾಧ್ಯತೆ!

ಬೆಂಗಳೂರು, ಮೇ 12- ಒಂದು ವೇಳೆ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ/ಪುನಾರಚನೆಯಾದರೆ ಹಲವು ಸಚಿವರ ಖಾತೆಗಳು ಅದಲು-ಬದಲಾಗುವ ಸಂಭವವಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸೋಮವಾರ ವಿಸ್ತರಣೆ ಇಲ್ಲವೇ ಪುನಾರಚನೆಯಾದರೆ ಪ್ರಭಾವಿ ಸಚಿವರ ಖಾತೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕತ್ತರಿ ಪ್ರಯೋಗ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಾರಿ ಸಂಪುಟದಲ್ಲಿರುವ ಸುಮಾರು 10ಕ್ಕೂ ಹೆಚ್ಚು ಸಚಿವರನ್ನು ಕೈ ಬಿಟ್ಟು ಪುನಾರಚನೆ ಮಾಡುವ ಲೆಕ್ಕಾಚಾರದಲ್ಲಿ ವರಿಷ್ಠರು ಕೂಡ ಇದ್ದಾರೆ.
ಜತೆಗೆ ಎರಡು ಖಾತೆಯನ್ನು ಹೊಂದಿರುವವರು ಹಾಗೂ ಪ್ರಮುಖ ಖಾತೆಗಳನ್ನು ಬದಲಾಯಿಸಿ ಯುವ ಮುಖಗಳಿಗೆ ಆದ್ಯತೆ
ನೀಡಬೇಕೆಂದು ದೆಹಲಿ ವರಿಷ್ಠರಿಂದ ಸೂಚನೆ ಬಂದಿದೆ ಎಂದು ತಿಳಿದು ಬಂದಿದೆ.

ಪ್ರಮುಖವಾಗಿ ಗೃಹ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಸಾರಿಗೆ, ಲೋಕೋಪಯೋಗಿ, ಇಂಧನ, ವಸತಿ, ನಗರಾಭಿವೃದ್ಧಿ, ಸಹಕಾರ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸೇರಿದಂತೆ ಹಲವು ಖಾತೆಗಳಲ್ಲಿ ಭಾರೀ ಬದಲಾವಣೆಯಾಗುವ ನಿರೀಕ್ಷೆ ಇದೆ.

ಅದರಲ್ಲೂ ಪದೇ ಪದೇ ವಿವಾದಕ್ಕೆ ಸಿಲುಕಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಖಾತೆ ಬದಲಾವಣೆಯಾಗುವವರ ಮೊದಲ ಪಟ್ಟಿಯಲ್ಲಿದೆ. ಬಹುನಿರೀಕ್ಷೆಯೊಂದಿಗೆ ಅತ್ಯಂತ ಪ್ರಭಾವಿ ಎನಿಸಿದ ಗೃಹ ಖಾತೆಯನ್ನು ಸಜ್ಜನ ಮತ್ತು ಸಚ್ಚಾರಿತ್ರ್ಯ ಹಿನ್ನೆಲೆ ಹೊಂದಿದ್ದ ಜ್ಞಾನೇಂದ್ರ ಅವರಿಗೆ ಈ ಖಾತೆ ನೀಡಿದ್ದರೂ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ ಎಂಬ ಅಸಮಾಧಾನ ಪಕ್ಷ ಮತ್ತು ಸರ್ಕಾರದ ವಲಯದಲ್ಲಿದೆ.

ಗೃಹ ಖಾತೆ ಬದಲಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಯಿಂದ ತೆರವಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲ್ಲವೇ ಕೃಷಿ ಖಾತೆಯನ್ನು ಆರಗ ಜ್ಞಾನೇಂದ್ರಗೆ ನೀಡುವ ಸಂಭವವಿದೆ. ಬಿಬಿಎಂಪಿ ಚುನಾವಣೆ ಹಿತದೃಷ್ಟಿಯಿಂದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಸಂಪುಟದಿಂದ ಕೈ ಬಿಟ್ಟು ಸಂಘಟನೆಗೆ ನಿಯೋಜನೆ ಮಾಡಬೇಕೆಂಬ ಬೇಡಿಕೆ ಇದೆ. ಆದರೆ, ಸಿಎಂ ಬೊಮ್ಮಾಯಿ ಅವರು ಅಶೋಕ್ ಅವರನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ.

ಗೃಹ ಖಾತೆಯನ್ನು ಅಶೋಕ್ ಅವರಿಗೆ ನೀಡಿ, ಕಂದಾಯವನ್ನು ಹೊಸದಾಗಿ ಸೇರ್ಪಡೆಯಾಗುವವರ ಹೆಗಲಿಗೆ ಹೊರಿಸಲು ಚಿಂತನೆಗಳು ನಡೆದಿವೆ.
ಎರಡು ಖಾತೆಯನ್ನು ಇಟ್ಟುಕೊಂಡು ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಖಾತೆಗೂ ಈ ಬಾರಿ ಕತ್ತರಿಬೀಳುವ ಸಂಭವವಿದೆ.

ವೃತ್ತಿಯಲ್ಲಿ ವೈದ್ಯರಾಗಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಗೆ ಸೀಮಿತಗೊಳಿಸಿ ವೈದ್ಯಕೀಯ ಖಾತೆಯನ್ನು ಸಿಎಂ ಹಿಂಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ವಿರೋಧ ಪಕ್ಷಗಳ ಆರೋಪಕ್ಕೆ ಸಿಲುಕಿರುವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಖಾತೆಯೂ ಬದಲಾದರೂ ಅಚ್ಚರಿ ಇಲ್ಲ. ಉನ್ನತ ಶಿಕ್ಷಣ ಖಾತೆ ಜತೆಗೆ ಹೆಚ್ಚುವರಿಯಾಗಿ ಐಟಿ-ಬಿಟಿ ಖಾತೆಯನ್ನೂ ಇಟ್ಟುಕೊಂಡಿದ್ದಾರೆ. ಅವರ ಖಾತೆಯಲ್ಲೂ ಬದಲಾಗುವ ನಿರೀಕ್ಷೆ ಇದೆ.

ಮೊದಲ ಬಾರಿಗೆ ಸಚಿವರಾಗಿದ್ದರೂ ಉತ್ತಮ ಕಾರ್ಯನಿರ್ವಹಣೆ ಮೂಲಕ ಗಮನ ಸೆಳೆದಿರುವ ಇಂಧನ ಸಚಿವ ವಿ.ಸುನೀಲ್‍ಕುಮಾರ್ ಬಳಿ ಇರುವ ಹೆಚ್ಚುವರಿ ಖಾತೆಯನ್ನು ಹಿಂಪಡೆಯಲಿದೆ. ಅವರಿಗೆ ಗ್ರಾಮೀಣಾಭಿವೃದ್ಧಿ ಇಲ್ಲವೇ ಪ್ರಮುಖ ಖಾತೆ ಸಿಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಉಳಿದಂತೆ ನಗರಾಭಿವೃದ್ಧಿ, ಕೃಷಿ, ಸಹಕಾರ ಸೇರಿದಂತೆ ಕೆಲವು ಪ್ರಮುಖ ಖಾತೆಗಳಲ್ಲಿ ಬದಲಾವಣೆಯಾಗುವ ಸಂಭವವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ!

Thu May 12 , 2022
ಬೆಂಗಳೂರು, ಮೇ 12- ಕಳೆದ ಮೂರು ದಿನಗಳಿಂದ ಎಡಬಿಡದೆ ಬೀಳುತ್ತಿರುವ ಜಿಟಿಜಿಟಿ ಮಳೆ ಸದ್ಯಕ್ಕೆ ಬಿಡುಗಡೆ ನೀಡುವ ಲಕ್ಷಣಗಳು ಗೋಚರಿಸುತ್ತಿಲ್ಲ. ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಅಸಾನಿ ಚಂಡಮಾರುತದ ಪರೋಕ್ಷ ಪರಿಣಾಮದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಆಗಾಗ್ಗೆ ತಂಪಾದ ಮೇಲ್ಮೈ ಗಾಳಿ ಬೀಸುವುದಲ್ಲದೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯು ಕಳೆದ ಮೂರು ದಿನಗಳಿಂದ ಬೀಳುತ್ತಿದೆ. ಇದೇ ರೀತಿಯ ವಾತಾವರಣ ನಾಳೆವರೆಗೂ ಮುಂದುವರೆಯುವ ಲಕ್ಷಣಗಳಿವೆ. ಅಸಾನಿ ಚಂಡಮಾರುತದ ಬೆನ್ನಲ್ಲೇ ಮತ್ತೊಂದು ಚಂಡಮಾರುತ […]

Advertisement

Wordpress Social Share Plugin powered by Ultimatelysocial