ಚಿದಾನಂದಮೂರ್ತಿ ಚರಿತ್ರಾರ್ಹ ಸಾಧನೆಗಾರರು

ಎಂಬತ್ತರ ದಶಕದಲ್ಲಿ ಅಲ್ಲಿ ಇಲ್ಲಿ ಓಡಾಡಿದರೆ, ಕನ್ನಡ, ಸಂಸ್ಕೃತಿ ಮತ್ತು ಚಳುವಳಿ ಅಂತ ಹೋದರೆ, ಏನೋ ಕೋಡಿರುತ್ತೆ ಅಂತ ಭ್ರಮಿಸಿದ್ದೆ. ಮಾತಾಡುವುದು ಕನ್ನಡ ಅನ್ನೋದು ಬಿಟ್ಟು ಏನೂ ಗೊತ್ತಿಲ್ಲದ ಮಂಕುಬಡಿದಿದ್ದ ಅಪ್ರಾಪ್ತ ತಾರುಣ್ಯ ನನ್ನದು. ಒಂದಷ್ಟು ಗೆಳೆಯರು ನಡೀ ಅಂದರೆ ಅವರ ಹಿಂದೆ ಹೊರಟುಬಿಡುತ್ತಿದ್ದೆ. ಮೊದಲ ಸಲ ಹೋದಾಗ ಸೆಂಟ್ರಲ್ ಕಾಲೇಜು ಬಳಿ ನಿಂತಿದ್ದ ಮೂರುನಾಲ್ಕು ಜನರಲ್ಲಿ ಒಬ್ಬರ ಬಳಿ ಗೆಳೆಯ ರಾಮಚಂದ್ರ, “ನಮಸ್ಕಾರ ಸಾರ್” ಅಂತ ಹೇಳಿ ನನ್ನನ್ನು ಅವರಿಗೆ ಪರಿಚಯ ಮಾಡಿಕೊಟ್ಟ. ಬನ್ನಿ ಶ್ರೀಧರ್ ಎಂದು ಆಪ್ತವಾಗಿ ಬರಮಾಡಿಕೊಂಡ್ರು. ಅವರೇ ಮಹಾನ್ ಸಂಶೋಧಕ ಮತ್ತು ವಿದ್ವಾಂಸ ಚಿದಾನಂದಮೂರ್ತಿ ಅಂತ ಗೊತ್ತಾಯ್ತು. ಅವರ ಜೊತೆ ಹಲವು ಸಲ ಗೋಕಾಕ್ ಚಳುವಳಿ, ನಬಾರ್ಡ್ ಚಳುವಳಿ, ದೂರದರ್ಶನದಲ್ಲಿ ಉರ್ದುವಾರ್ತೆ ಹೇರಿಕೆ ಇತ್ಯಾದಿ ಏನೇನೋ ಅಂತ ಮೆರವಣಿಗೆ ಹೋದಾಗಲೂ ಇರುತ್ತಿದ್ದದ್ದು ಒಂದು ಹತ್ತಿಪ್ಪತ್ತು ಜನ. ಇಲ್ಲಿ ಭಾಗವಹಿಸುವುದು ಜನಪ್ರಿಯತೆಯ ಕೋಡು ತರಿಸುವುದಿಲ್ಲ ಅಂತ ಬೇಗ ಗೊತ್ತಾಯ್ತು. ಆದರೆ, ಈ ಮಹಾನ್ ಚೇತನದ ಹಿಂದೆ ಆಗಾಗ ನಡೆಯುವ ಸೌಭಾಗ್ಯ ಕಳೆದುಕೊಳ್ಳುವುದನ್ನು ಮನ ಇಷ್ಟಪಡಲಿಲ್ಲ. ಮುಂದೆ ಗೋಕಾಕ್ ಚಳುವಳಿ ಅನ್ನೋದು ಕನ್ನಡದ ದೊಡ್ಡ ಬೆಳವಣಿಗೆ ಆಗಿ ಅಲ್ಲಿ ಪ್ರಚಾರ ದೊಡ್ಡದಾಗಿ ನಾವೆಲ್ಲ ಸೊಳ್ಳೆಗಳ ಹಾಗೆ ಅಲ್ಲಿ ಮೂಡಿದ ಧೂಳಿನ ಹೊಗೆಯಿಂದ ಹಾರಿಹೋಗಬೇಕಾಯ್ತು. ಆದರೆ ಚಿದಾನಂದಮೂರ್ತಿ ಅವರ ಅನನ್ಯ ಸಾತ್ವಿಕ ಗುಣಮೌಲ್ಯ ಸಾನ್ನಿಧ್ಯ ನನ್ನಲ್ಲಿ ಕನ್ನಡದ ಕಂಪನ್ನು ಆಸ್ವಾದಿಸುವ ಗುಣವನ್ನು ಶಾಶ್ವತವಾಗಿ ಉಳಿಸಿದೆ ಎಂಬುದರಲ್ಲಿ ಸಂದೇಹ ಉಳಿದಿಲ್ಲ. 2020ರ ಜನವರಿ 11ರಂದು ಅವರು ಹೋಗಿಬಿಟ್ಟರು ಎಂದು ನನ್ನ ಆತ್ಮೀಯರು ಸಂದೇಶ ಕಳಿಸಿದಾಗ ಅಂತರಂಗದಲ್ಲಿ ತಕ್ಷಣ ಮೂಡಿದ್ದು “ಅಷ್ಟು ದೊಡ್ಡ ಹೃದಯ, ಸಣ್ಣ ಮೂರ್ತಿ, ಚಿದಾನಂದ ಈ ಮೂರ್ತಿ”.1982ರ ಮೊದಲ ತಿಂಗಳುಗಳು. ಬೆಂಗಳೂರಿನ ದಂಡು ಪ್ರದೇಶದ ಒಂದು ಸಿನಿಮಾ ಮಂದಿರದಲ್ಲಿ ಮುಂಗಡ ಟಿಕೆಟ್ಟಿಗಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ಗಿಡ್ಡು ಎತ್ತರದ ಒಬ್ಬ ಕನ್ನಡ ಪ್ರಾಧ್ಯಾಪಕರು, “ನಾಲ್ಕು ಟಿಕೆಟ್ ಕೊಡಿ” ಎಂದು ಕೇಳಿದರು. ಕೌಂಟರಿನಲ್ಲಿದ್ದಾತ ಇಂಗ್ಲಿಷ್ನಲ್ಲಿ ಮಾತನಾಡಲು ಒತ್ತಾಯಿಸಿದ. ಕೇಳಿದವರು ಮತ್ತೆ ಕನ್ನಡದಲ್ಲಿ ಕೇಳಿದರು. ಮಾತಿಗೆ ಮಾತು ಬೆಳೆಯಿತು. ಸಿನಿಮಾ ಮಂದಿರದ ಮ್ಯಾನೇಜರ್ ಬಂದ. ಕನ್ನಡದಲ್ಲಿ ಮಾತನಾಡಿದುದಕ್ಕೆ ಅವರನ್ನು ಆವರಣದಿಂದ ಹೊರಹಾಕಿಸುತ್ತೇನೆ ಎಂದು ಅಬ್ಬರಿಸಿದ. ಸುತ್ತಲೂ ಇದ್ದ ಕನ್ನಡಿಗರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು. ಇಡೀ ಘಟನೆ ಪ್ರಾಧ್ಯಾಪಕರಲ್ಲಿ ನೋವು, ಕುಪಿತ, ಅಪಮಾನದ ಬೇಗೆ ಉಂಟುಮಾಡಿತ್ತು. ಕನ್ನಡದ ದುಃಸ್ಥಿತಿಯ ಬಗ್ಗೆ ಸಂಕಟ ತರಿಸಿತ್ತು. ಕರ್ನಾಟಕದ ಆದ್ಯಂತ ಕನ್ನಡ ಎಚ್ಚರ ಮೂಡಿಸುವ, ಕನ್ನಡಕ್ಕಾಗಿ ತಮ್ಮ ಉಳಿದ ಬದುಕಿನ ವೇಳೆ, ಆಯಸ್ಸುಗಳನ್ನು ಮೀಸಲಿಡುವ, ಕನ್ನಡಕ್ಕಾಗಿ ಅಹರ್ನಿಶಿ ದುಡಿಯುವ ದೃಢ ಸಂಕಲ್ಪವನ್ನು ಆ ಪ್ರಾಧ್ಯಾಪಕರು ಮಾಡಿದರು. ಇದಕ್ಕೆಂದೇ ಹಂಪಿಯ ಕನ್ನಡ ಭುವನೇಶ್ವರಿಯ ಮುಂದೆ ಪ್ರತಿಜ್ಞೆ ಕೈಗೊಂಡರು. ಪ್ರಾಣತ್ಯಾಗಕ್ಕೆ ಕೂಡ ಸಿದ್ಧರಾಗಿ ತಮ್ಮನ್ನು “ಕನ್ನಡ ಗರುಡ’” ಎಂದು ಭಾವಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೇಣು ಬಿಗಿದ ಸ್ಥಿತಿಯಲ್ಲಿ ಶವಪತ್ತೆ

Wed Jan 11 , 2023
              ಬೆಂಗಳೂರು: ಐಟಿಸಿಟಿ ಬೆಂಗಳೂರಿನಲ್ಲಿ ಕೋಲಾರದ ಬಾಡಿ ಬಿಲ್ಡರ್‌ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರ್ ಪುರಂ ಬಳಿಯ ಹೀರಂಡಹಳ್ಳಿಯಲ್ಲಿ ಶ್ರೀನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಾಡಿ ಬಿಲ್ಡರ್‌ ಎಂದು ಗುರುತಿಸಲಾಗಿದೆ. ಮೂಲತಃ ಕೋಲಾರದ ಶ್ರೀನಿವಾಸಪುರದ ಶ್ರೀನಾಥ್, ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಫಾರ್ಮಾ ಡಿ ಓದುತ್ತಿದ್ದರು. ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ […]

Advertisement

Wordpress Social Share Plugin powered by Ultimatelysocial