ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ;ನಿಟ್ಟುಸಿರು ಬಿಟ್ಟ ಪೋಷಕರು

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗುವ ಮೂಲಕ ನಾಪತ್ತೆ ಪ್ರಕರಣ ಈಗ ಸುಖಾಂತ್ಯ ಕಂಟಿದೆ. ಕಳೆದ ಭಾನುವಾರದಿಂದ ಹೆತ್ತವರ ನಿದ್ದಗೆಡಿಸಿದ್ದ 7 ಮಂದಿ ಮಕ್ಕಳಲ್ಲಿ ಮೂರು ಮಂದಿ ಸೋಮವಾರ ಬೆಂಗಳೂರಿನಲ್ಲಿ ಪತ್ತೆಯಾಗಿದ್ದರು. ಮತ್ತೆ ನಾಲ್ಕು ಮಂದಿ ಮಕ್ಕಳು ಮಂಗಳವಾರ ಬೆಳಗ್ಗೆ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಡಿದರೂ ಪತ್ತೆಯಾಗದ ಮಕ್ಕಳು, ಮಂಗಳೂರಿನ ಆಟೋ ಚಾಲಕರ ಸಮಯಪ್ರಜ್ಞೆಯಿಂದ ಪತ್ತೆಯಾಗಿರೋದು ವಿಶೇಷವಾಗಿದೆ. ಮಂಗಳೂರಿನಲ್ಲಿ ಅಮೃತವರ್ಷಿಣಿ, ರಾಯನ್ ಸಿದ್ದಾರ್ಥ, ಚಿಂತನ್, ಭೂಮಿ ಪತ್ತೆಯಾಗಿದ್ದಾರೆ. ಮಕ್ಕಳಿಗೆ 20 ಹರೆಯದ ಅಮೃತವರ್ಷಿಣಿ ಸೂಚನೆ ನೀಡುತ್ತಿದ್ದಳು. ಅವಳ ಮಾತು ಕೇಳಿಯೇ ಮಕ್ಕಳು ಮನೆಬಿಟ್ಟು ಬಂದಿದ್ದರು.

ಸೋಮವಾರ ರಾತ್ರಿ ಬೆಂಗಳೂರಿನಿಂದ ಖಾಸಗಿ ಬಸ್ ಹತ್ತಿದ್ದ ಅಮೃತವರ್ಷಿಣಿ ಮತ್ತು ಮೂವರು ಮಕ್ಕಳು ಮಂಗಳವಾರ ಬೆಳಗ್ಗೆ ಮಂಗಳೂರನ್ನು ಸೇರಿದ್ದರು. ಬೆಳಗ್ಗೆ 7 ಗಂಟೆ ಸುಮಾರಿಗೆ ಮಂಗಳೂರಿನ ಜ್ಯೋತಿ ವೃತ್ತದ ಬಳಿ ಬಸ್ನಿಂದ ಇಳಿದ ನಾಲ್ವರು ಪಕ್ಕದಲ್ಲೇ ಆಟೋ ಪಾರ್ಕ್ ಮಾಡಿದ್ದ ಆಟೋ ಚಾಲಕರ ಕಣ್ಣಿಗೆ ಬಿದ್ದಿದ್ದಾರೆ. ಮಕ್ಕಳು ಸಿಕ್ಕ ಸಿಕ್ಕವರಲ್ಲಿ ಮೊಬೈಲ್ ಕೇಳಿ ಕಾಲ್ ಮಾಡೋಕೆ ಪ್ರಯತ್ನ ಮಾಡುತ್ತಿದ್ದರು. ಕೆಲವರಲ್ಲಿ ಪಕ್ಕದಲ್ಲಿ ಲಾಡ್ಜ್ ಎಲ್ಲಿದೆ ಅಂತಾ ಕೇಳುತ್ತಿದ್ದರು. ಇನ್ನೂ ಕೆಲವರ ಬಳಿ ಇಲ್ಲಿ ಆಭರಣ ಒತ್ತೆ ಇಡುವ ಅಂಗಡಿ ಎಲ್ಲಿದೆ ಅಂತಾ ಕೇಳುತ್ತಿದ್ದರು.ಮಕ್ಕಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ ಆಟೋ ಚಾಲಕರಾದ ಪ್ರಶಾಂತ್ ಮತ್ತು ರಮೇಶ್ಗೆ ಇವರೇ ಬೆಂಗಳೂರಿನಿಂದ ನಾಪತ್ತೆಯಾದ ಮಕ್ಕಳು ಎಂಬ ಸಂಶಯ ಕಾಡಲಾರಂಭಿಸಿದೆ. ಆಟೋದಲ್ಲಿದ್ದ ಸೋಮವಾರದ ಪತ್ರಿಕೆಯನ್ನು ನೋಡಿದ ಬಳಿಕ ಇವರೇ ಅಂತಾ ಸ್ಪಷ್ಟವಾಗಿದೆ. ಮಕ್ಕಳ ಗುಂಪಿನಲ್ಲಿದ್ದ ಓರ್ವ ಬಾಲಕ ತನ್ನ ಬ್ಯಾಗ್ ಅನ್ನು ಅಲ್ಲೇ ಇದ್ದ ಡಸ್ಟ್ ಬಿನ್ಗೆ ಹಾಕಲು ಯತ್ನಿಸಿದ್ದರಿಂದ ಆಟೋ ಚಾಲಕ ಪ್ರಶಾಂತ್ ಮತ್ತು ರಮೇಶ್ ಮಕ್ಕಳ ಬಳಿಗೆ ಹೋಗಿ ಪ್ರಶ್ನೆ ಮಾಡಿದ್ದಾರೆ.

ಬಗ್ಗೆ ಮಾತನಾಡಿರುವ ಆಟೋ ಚಾಲಕ ಪ್ರಶಾಂತ್, ಮಕ್ಕಳು ತುಂಬಾ ಗಾಬರಿಗೊಂಡಿದ್ದರು. ನಾವು ಮಕ್ಕಳಲ್ಲಿ ಮಾತನಾಡುವ ಸಂದರ್ಭದಲ್ಲಿ ಎಲ್ಲವನ್ನೂ ಬಾಯಿ ಬಿಟ್ಟರು. ಆಟೋ ಹತ್ತಿ ಕುಳಿತುಕೊಂಡರು. ಪೊಲೀಸ್ ಸ್ಟೇಷನ್ ಹೋಗೋದಾಗಿ ಅಂತಾ ಹೇಳಿದಾಗಲೂ ಸರಿ ಅಂತಾ ಹೇಳಿದರು. ಡಸ್ಟ್ ಬೀನ್ನಲ್ಲಿ ಹಾಕಿದ್ದ ಬ್ಯಾಗ್ ತರೋಕೆ ಹೇಳಿ, ಆಟೋ ಹತ್ತಿಸಿಕೊಂಡೆವು. ಬಳಿಕ ಪಾಂಡೇಶ್ವರ ಪೊಲೀಸ್ ಠಾಣೆಗೆ ಹೋಗಿ ಮಕ್ಕಳನ್ನು ಪೊಲೀಸರಿಗೆ ಒಪ್ಪಿಸಿದೆವು ಎಂದು ಹೇಳಿದ್ದಾರೆ.

ಮತ್ತೊರ್ವ ಆಟೋ ಚಾಲಕ ರಮೇಶ್ ಮಾತನಾಡಿ, ನನಗೆ ಪ್ರತಿ ದಿನ ದಿನಪತ್ರಿಕೆ ಓದುವ ಹವ್ಯಾಸ ಇದೆ. ಸೋಮವಾರದ ಪತ್ರಿಕೆಯಲ್ಲಿ ಮಕ್ಕಳು ನಾಪತ್ತೆಯಾದ ಸುದ್ದಿಯನ್ನು ಗಮನಿಸಿದ್ದೆ. ಮಂಗಳವಾರ ಬೆಳಗ್ಗೆ ಅದೇ ಮಕ್ಕಳು ಜ್ಯೋತಿ ವೃತ್ತದ ಬಳಿ ಗಮನಿಸಿದಾಗ ಇವರೇ ನಾಪತ್ತೆಯಾದ ಮಕ್ಕಳು ಅಂತಾ ಸಂಶಯ ಬಂತು. ಕೂಡಲೇ ಸೋಮವಾರದ ಪತ್ರಿಕೆ ನೋಡಿ ಧೃಡಪಡಿಸಿಕೊಂಡೆ. ಮತ್ತೆ ಮಕ್ಕಳ ಬಳಿ ಮಾತನಾಡಿದಾಗ ಬೆಂಗಳೂರಿನಿಂದ ನಾಪತ್ತೆಯಾದವರು ಅಂತಾ ಗೊತ್ತಾಯಿತು ಎಂದು ಹೇಳಿದರು.

ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಕ್ಕಳ ವಿಚಾರಣೆ ಮಾಡಿದ ಬಳಿಕ ಮಂಗಳೂರು ಡಿಸಿಪಿ ಹರಿರಾಂ ಶಂಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಕ್ಕಳು ಸ್ನೇಹಿತರಾಗಿದ್ದು, ಇವರ ಸ್ನೇಹ ಮನೆಯವರಿಗೆ ಹಿಡಿಸಿರಲಿಲ್ಲ. ತಮ್ಮನ್ನು ಹಾಸ್ಟೆಲ್ಗೆ ಹಾಕ್ತಾರೆ ಎಂಬ ಭಯದಿಂದ ಮನೆ ಬಿಟ್ಟು ಹಳ್ಳಿ ಸೇರಲು ನಿರ್ಧಾರ ಮಾಡಿದ್ದಾರೆ. ಎಲ್ಲಾ ಸಿದ್ಧತೆಗಳು ಯುವತಿ ಅಮೃತವರ್ಷಿಣಿಯ ನೇತೃತ್ವದಲ್ಲೇ ನಡೆದಿದೆ. ಮನೆಯಿಂದ ಹಣ ಕದ್ದು ರೈಲು, ಬಸ್ ಪ್ರಯಾಣಕ್ಕೆ ಉಪಯೋಗಿಸಿದ್ದಾರೆ. ಮಕ್ಕಳು ನಾಪತ್ತೆಯಾಗಿ ಆತಂಕ ಮೂಡಲು ಕಾರಣವಾದ ಯುವತಿ ಅಮೃತವರ್ಷಿಣಿ ವಿರುದ್ಧ ಕ್ರಮ ಕೈಗೊಂಡು ಮಕ್ಕಳನ್ನು ಹೆತ್ತವರ ಜೊತೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

2 ರಿಂದ 18 ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಡಿಸಿಜಿಐ ಗ್ರೀನ್ ಸಿಗ್ನಲ್

Tue Oct 12 , 2021
ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಡಿಸಿಜಿಐ ಗ್ರೀನ್ ಸಿಗ್ನಲ್ ನೀಡಿದೆ. 2 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವುದಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಇಂದು ಅನುಮತಿ ನೀಡಿದೆ. ಈ ಕುರಿತಂತೆ ವಿಷಯ ತಜ್ಞರ ಸಮಿತಿ ಸಭೆಯಲ್ಲಿ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಕ್ಕಳಿಗೂ ಕೊರೊನಾ ಲಸಿಕೆ ನೀಡಲು ತುರ್ತು ಅನುಮತಿ ನೀಡಿದೆ.2 ರಿಂದ 18 ವರ್ಷದ ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಕೋವ್ಯಾಕ್ಸಿನ್ ಬಳಸಲು ಡಿಸಿಜಿಐ ಅನುಮತಿಸಿದ್ದು, […]

Advertisement

Wordpress Social Share Plugin powered by Ultimatelysocial