ಇಂದಿನಿಂದ ಮೂರು ದಿನ ಕಾಂಗ್ರೆಸ್ ಚಿಂತನ ಶಿಬಿರ;

 

ಜೈಪುರ್, ಮೇ 13: ರಾಜಸ್ಥಾನದ ಉದಯಪುರ್‌ನಲ್ಲಿ ಇಂದು ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರ ಆರಂಭಗೊಳ್ಳುತ್ತಿದೆ. ಕಳೆದ ಎಂಟು ವರ್ಷದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಮೊದಲ ಪ್ರಮುಖ ಚರ್ಚಾಕೂಟ ಇದಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಚಿಂತನಾ ಶಿಬಿರದಲ್ಲಿ ಪಕ್ಷದ ಪುನಶ್ಚೇತನಕ್ಕಾಗಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವ್ಯಾಪಕ ಚರ್ಚೆಯಾಗುವ ನಿರೀಕ್ಷೆ ಇದೆ.

ದೇಶಾದ್ಯಂತ ವಿವಿಧ ರಾಜ್ಯಗಳಿಂದ 430 ಪ್ರಮುಖ ಕಾಂಗ್ರೆಸ್ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಹಲವು ಹಿರಿಯ ನಾಯಕರು ಇರಲಿದ್ದಾರೆ. ರಾಜ್ಯದಿಂದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮೊದಲಾದ ನಾಯಕರು ಉದಯಪುರಕ್ಕೆ ತೆರಳಿದ್ದಾರೆ.

ಸೋನಿಯಾ ಗಾಂಧಿ ಈ ಮೂರು ದಿನಗಳ ಚಿಂತನಾ ಶಿಬಿರದ ಉದ್ಘಾಟನೆ ಮಾಡಲಿದ್ದಾರೆ. ಮೇ ೧೫ರಂದು ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಶಿಬಿರದ ಕೊನೆಯ ದಿನವಾದ ಮೇ 16ರಂದು ಉದಯಪುರದಲ್ಲಿ ಎಸ್ಸಿ ಎಸ್ಟಿ ವರ್ಗಗಳ ಬೃಹತ್ ಸಮಾವೇಶವನ್ನೂ ಆಯೋಜಿಸಲಾಗಿದೆ.

ಚರ್ಚೆಯಾಗುವ ಪ್ರಮುಖ ವಿಚಾರಗಳು:
ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಚುನಾವಣೆಗಳಲ್ಲಿ ಸೋಲನುಭವಿಸಿರುವ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕಾಗಿ ಗಂಭೀರ ಪ್ರಯತ್ನಗಳಾಗುತ್ತಿರುವುದಕ್ಕೆ ದ್ಯೋತಕವಾಗಿ ಚಿಂತನಾ ಸಭೆ ಇದೆ. ಇತ್ತೀಚೆಗಷ್ಟೇ ಚುನಾವಣಾ ರಣನೀತಿ ತಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷದ ಅಮೂಲಾಗ್ರ ಬದಲಾವಣೆಗೆ ಬಹಳಷ್ಟು ಸಲಹೆಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ಕೆಲ ವಿಚಾರಗಳು ಚಿಂತನಾ ಶಿಬಿರದಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.

ಕಿರಿಯರಿಗೆ ಅವಕಾಶ:

ಕಾಂಗ್ರೆಸ್ ಪಕ್ಷಕ್ಕೆ ಯುವ ನಾಯಕರ ಅಗತ್ಯತೆ ಇದೆ ಎಂಬ ಮಾತು ರಾಹುಲ್ ಗಾಂಧಿ ಸಕ್ರಿಯ ರಾಜಕೀಯಕ್ಕೆ ಬಂದಾಗಿನಿಂದಲೂ ಬಲವಾಗಿ ಕೇಳಿಬರುತ್ತಿದೆ. ಆದರೆ, ಪಕ್ಷದ ಸಂಘಟನೆಯ ಅನೇಕ ಉನ್ನತ ಹುದ್ದೆಗಳಲ್ಲಿ 70 ವರ್ಷ ದಾಟಿದವರೇ ಹೆಚ್ಚಾಗಿ ಇದ್ದಾರೆ. ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳ ಸಂಘಟನೆಯಲ್ಲಿ ಇರುವ ಹಾಗೆ ಕಾಂಗ್ರೆಸ್ ಪಕ್ಷದೊಳಗೂ ವಯಸ್ಸಿನ ಮಿತಿ ಹಾಕಬೇಕೆಂಬ ಅಭಿಪ್ರಾಯ ಇದೆ. ಈ ವಿಚಾರ ಉದಯಪುರದಲ್ಲಿ ಚರ್ಚೆಗೆ ಬರಲಿದೆ. ಅಥವಾ ನಿರ್ಧಾರ ಕೂಡ ಹೊರಹೊಮ್ಮಬಹುದು.
ಪಕ್ಷ ಸಂಘಟನೆಯಲ್ಲಿ ವಯಸ್ಸಿನ ಮಿತಿ ಇರಬೇಕೆಂಬ ಅಭಿಪ್ರಾಯಕ್ಕೆ ಬಹುತೇಕ ಎಲ್ಲರ ಸಹಮತ ಇದೆ. ಆದರೆ, ಆ ಮಿತಿ 70 ವರ್ಷವಾ 75 ವರ್ಷವಾ ಎಂಬುದನ್ನು ನಿರ್ಧರಿಸಬೇಕು ಅಷ್ಟೇ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ಧಾರೆ.

ಕಾಂಗ್ರೆಸ್ ಪಕ್ಷ ಯುವ ನಾಯಕರಿಗೆ ಆದ್ಯತೆ ನೀಡುತ್ತದೆ ಎನ್ನುವುದಕ್ಕೆ ಚಿಂತನಾ ಶಿಬಿರ ಸಾಕ್ಷಿಯಾಗಿದೆ. ಇಲ್ಲಿ ಬಂದಿರುವ 430 ನಾಯಕರ ಪೈಕಿ 50 ವರ್ಷಕ್ಕಿಂತ ಕಡಿಮೆ ವಯೋಮಾನದವರ ಸಂಖ್ಯೆ ಅರ್ಧದಷ್ಟಿದೆ ಎಂದು ಈ ನಾಯಕರು ತಿಳಿಸಿದ್ದಾರೆ.

ಈಗ ಸಂಘಟನೆಯ ಪ್ರಮುಖ ಹುದ್ದೆಗಳಲ್ಲಿ ಹಿರಿಯ ನಾಯಕರೇ ಹೆಚ್ಚಾಗಿ ಇದ್ದಾರೆ. ಚಿಂತನಾ ಶಿಬಿರದಲ್ಲಿ ವಯಸ್ಸಿನ ಮಿತಿಗೆ ನಿರ್ಧಾರ ಮಾಡಿದರೂ ಏಕಾಏಕಿಯಾಗಿ ಎಲ್ಲರವನ್ನೂ ಬದಲಾವಣೆ ಮಾಡುವುದಿಲ್ಲ. ಹಂತ ಹಂತವಾಗಿ ಯುವಕರನ್ನು ಪ್ರಮುಖ ಹುದ್ದೆಗಳಿಗೆ ತಂದು ಕೂರಿಸುವ ಪ್ರಯತ್ನಗಳಾಗುತ್ತವೆ. ಯಾವುದೇ ಪಕ್ಷ ಸಂಘಟನೆಯ ಹುದ್ದೆಗೆ ಹೊಸದಾಗಿ ನೇಮಕವಾಗಬೇಕಾದರೆ ಯುವಕರಿಗೆ ಆದ್ಯತೆ ಕೊಡಲಾಗುತ್ತದೆ ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ರಾಜ್ಯಸಭಾ ಅವಧಿಗೆ ಮಿತಿ:

ಚಿಂತಕರ ಚಾವಡಿ ಎಂದು ಕರೆಯಲಾಗುವ ರಾಜ್ಯಸಭೆಗೆ ಕಾಂಗ್ರೆಸ್ ಪಕ್ಷದಿಂದ ಕೆಲವರು ಹಲವು ಅವಧಿಗಳವರೆಗೆ ಆಯ್ಕೆಯಾಗಿ ಹೋಗಿರುವುದುಂಟು. ಈಗ ಒಬ್ಬ ವ್ಯಕ್ತಿ ಎರಡು ಅಥವಾ ಮೂರು ಅವಧಿಗಿಂತ ಹೆಚ್ಚು ಬಾರಿ ರಾಜ್ಯಸಭಾ ಸದಸ್ಯರಾಗಲು ಅವಕಾಶ ಇರುವುದಿಲ್ಲ. ಈ ಬಗ್ಗೆ ಚಿಂತನಾ ಶಿಬಿರದಲ್ಲಿ ಗಂಭೀರ ಚರ್ಚೆಯಾಗಬಹುದು ಎಂದು ಹೇಳಲಾಗುತ್ತಿದೆ.

ಒಂದು ಕುಟುಂಬ ಒಂದು ಟಿಕೆಟ್:

ಶಿಬಿರದಲ್ಲಿ ಚರ್ಚೆಯಾಗುವ ಮತ್ತೊಂದು ಗಂಭೀರ ವಿಚಾರ ಕುಟುಂಬ ರಾಜಕಾರಣದ್ದು. ಇಡೀ ಕಾಂಗ್ರೆಸ್ ಪಕ್ಷವೇ ಗಾಂಧಿ ಕುಟುಂಬದ ಮೇಲೆ ಅವಲಂಬನೆಯಾಗಿರುವುದು ಹೌಧಾದರೂ ಬೇರೆ ಬೇರೆ ಸ್ತರಗಳಲ್ಲಿ ಕುಟುಂಬ ರಾಜಕಾರಣ ಬಹಳ ವ್ಯಾಪಕವಾಗಿದೆ. ಈ ವಿಚಾರ ಚರ್ಚೆಯಾಗಲಿದೆ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ನೀತಿ ಜಾರಿಗೆ ತರುವ ಪ್ರಸ್ತಾಪ ಇದೆ. ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.

ಹಾಗೆಯೇ, ಪಕ್ಷ ಸಂಘಟನೆಯ ಎಲ್ಲಾ ಸ್ತರಗಳ ಪದಾಧಿಕಾರಿಗಳು ಸತತ ಎರಡು ಅವಧಿ ಅಧಿಕಾರ ಹೊಂದಿರಲು ಅವಕಾಶ ಕೊಡಬಾರದು. ಐದು ವರ್ಷ ಅಧಿಕಾರ ಆದ ಬಳಿಕ ಮೂರು ವರ್ಷ ಕಳೆದ ನಂತರವಷ್ಟೇ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ನಿಯಮ ಜಾರಿಗೆ ತರಬೇಕೆಂಬ ಪ್ರಸ್ತಾವವೂ ಇದೆ.

ಕಾಂಗ್ರೆಸ್ ಅಧ್ಯಕ್ಷರು ಯಾರಾಗ್ತಾರೆ?

ಪ್ರಶಾಂತ್ ಕಿಶೋರ್ ತಮ್ಮ ಪ್ರಸ್ತಾವದಲ್ಲಿ ಎತ್ತಿರುವ ಪ್ರಮುಖ ವಿಚಾರ ಇದು. ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರಿಗೆ ನೀಡಬೇಕು ಎಂಬುದು ಪಿಕೆ ಬಹಳ ಸ್ಪಷ್ಟವಾಗಿ ಮತ್ತು ಒತ್ತಿ ಹೇಳಿರುವ ಸಂಗತಿಯಾಗಿದೆ. ಇದು ಇಂದು ಆರಂಭವಾಗುವ ಮೂರು ದಿನಗಳ ಚಿಂತನಾ ಶಿಬಿರದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ. ಆದರೆ, ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅವರೇ ಚುಕ್ಕಾಣಿ ಹಿಡಿಯಬೇಕೆಂಬುದು ಬಹುತೇಕ ನಾಯಕ ಅಭಿಪ್ರಾಯ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೂಟದಿಂದ ಹೊರಬಿದ್ದ ಡೆಲ್ಲಿ ಓಪನರ್ ಪೃಥ್ವಿ ಶಾ!

Fri May 13 , 2022
  ಮುಂಬೈ: ಕಳೆದ ಎರಡು ವಾರಗಳಿಂದ ಈ ಜ್ವರದಿಂದ ಬಳಲುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ತಂಡದ ಕೊನೆಯ ಎರಡು ಲೀಗ್ ಪಂದ್ಯಗಳಿಗೆ ಲಭ್ಯರಾಗುವ ಸಾಧ್ಯತೆಯಿಲ್ಲ ಎಂದು ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ಗುರುವಾರ ಹೇಳಿದ್ದಾರೆ. ಪೃಥ್ವಿ ಶಾ ಕಳೆದ ಮೂರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಶಾ ಟೈಫಾಯಿಡ್‌ ನಿಂದ ಬಳಲುತ್ತಿದ್ದಾರೆ ಎಂದು ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಬಳಿಕ ಡಿಸಿ ನಾಯಕ ರಿಷಬ್ ಪಂತ್ […]

Advertisement

Wordpress Social Share Plugin powered by Ultimatelysocial