ಡಿ. ಆರ್. ವೆಂಕಟರಮಣನ್ ಕನ್ನಡ ಸಾಹಿತ್ಯ ಲೋಕದ ಮಹಾನ್ ಆಚಾರ್ಯ.

 

ಡಿ. ಆರ್. ವೆಂಕಟರಮಣನ್ ಕನ್ನಡ ಸಾಹಿತ್ಯ ಲೋಕದ ಮಹಾನ್ ಆಚಾರ್ಯರಾದ ಡಿ.ವಿ.ಜಿ ಅವರಿಗೆ ಆಪ್ತ ಬಲಗೈ ಅಂತಿದ್ದು ಅವರ ಸಾಹಿತ್ಯ ಸ್ವಾದವನ್ನು ಲೋಕಕ್ಕೆ ನೀಡಿದ ಮಹಾನ್ ಋಷಿ ಸದೃಶ ವ್ಯಕ್ತಿ. ಅವರ ‘ಕಗ್ಗಕ್ಕೊಂದು ಕೈಪಿಡಿ’ ಬಹು ಪ್ರಖ್ಯಾತ ಕೃತಿ.ಡಿ. ಆರ್ ವೆಂಕಟರಮಣನ್ 1931ರ ಫೆಬ್ರವರಿ 21ರಂದು ಕೊಳ್ಳೇಗಾಲದ ಬಳಿ ಇರುವ ಹನೂರು ಗ್ರಾಮದಲ್ಲಿ ಜನಿಸಿದರು. ತಂದೆ ರಾಮಚಂದ್ರ ಅಯ್ಯರ್ ಮೂಲತಃ ದಾರಾಪುರಂ ಎಂಬ ಸ್ಥಳಕ್ಕೆ ಸೇರಿದವರಾಗಿದ್ದು ಸರ್ಕಾರಿ ಕೆಲಸದ ನಿಮಿತ್ತ ಕರ್ನಾಟಕದಲ್ಲಿ ನೆಲೆಸಿದರು. ತಾಯಿ ಸುಬ್ಬಲಕ್ಷ್ಮಿ. ಇವರಿಗೆ ಇಬ್ಬರು ತಮ್ಮಂದಿರು.
ವೆಂಕಟರಮಣನ್ ಅವರ ಪ್ರಾಥಮಿಕ ವಿದ್ಯಾಭ್ಯಾಸ ಮೈಸೂರಿನಲ್ಲಿ ನಡೆಯಿತು. ಬಿ.ಎ. ಪದವಿಯನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪಡೆದರು. ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದರು.ವೆಂಕಟರಮಣನ್ 21ನೆಯ ವಯಸ್ಸಿಗೆ ಹೈದರಾಬಾದಿನ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. 1956ರಲ್ಲಿ ಕೇಂದ್ರ ಸರ್ಕಾರವು ಭಾಷಾವಾರು ಪ್ರಾಂತ್ಯಗಳನ್ನಾಗಿ ರಾಜ್ಯಗಳನ್ನು ವಿಂಗಡಿಸಿದಾಗ ಕನ್ನಡಿಗರೆಲ್ಲ ಬೆಂಗಳೂರಿಗೆ ಹೋಗಿ ಕೆಲಸ ಮಾಡುಮಾಡುವ ಅವಕಾಶವನ್ನು ಕಲ್ಪಿಸಿತು. ಹೀಗೆ 1956ರಲ್ಲಿ ಸ್ನೇಹಿತರಾದ ಎಂ. ವಿ. ರಾಮ ಚೈತನ್ಯ ಅವರೊಡನೆ ಬೆಂಗಳೂರಿಗೆ ಬಂದು ನೆಲೆಸಿದರು.
ವೆಂಕಟರಮಣನ್ ಬೆಂಗಳೂರಿನ ಎನ್. ಆರ್. ಕಾಲೋನಿಯಲ್ಲಿ ಪ್ರೊ. ಕೆ. ಸಂಪತ್ ಗಿರಿರಾಯರ ಮನೆಯಲ್ಲಿ ವಾಸ ಮಾಡತೊಡಗಿದರು. ಈ ಮನೆಯ ಬಳಿಯಲ್ಲಿಯೇ ಡಿವಿಜಿಯವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ಸಂಸ್ಥೆ ಇತ್ತು. ಇಬ್ಬರು ಸ್ನೇಹಿತರೂ ದಿನವೂ ಸಂಸ್ಥೆಯ ವಾಚನಾಲಯ ಹಾಗೂ ಪುಸ್ತಕ ಭಂಡಾರಕ್ಕೆ ಹೋಗುತ್ತಿದ್ದರು. ತರುಣರನ್ನು ಗಮನಿಸಿದ ಪೂಜ್ಯ ಡಿವಿಜಿಯವರು ಈ ತರುಣರನ್ನು ತಾವೇ ಕರೆದು ಹೆಸರು, ಉದ್ಯೋಗ, ತಂದೆ-ತಾಯಿ ಮುಂತಾದ ವಿವರಗಳನ್ನು ವಿಚಾರಿಸಿದರು. ಸಂಸ್ಥೆಗೆ ಸದಸ್ಯರಾಗಿ ಎಂದು ಹೇಳಿದರು. ಹೀಗೆ ವೆಂಕಟರಮಣನ್ ಅವರಿಗೆ ಪೂಜ್ಯ ಡಿವಿಜಿಯವರ ಪರಿಚಯವಾಯಿತು. 1961ರ ಜೂನ್ 26ರಂದು ಸರಸ್ವತಿ ಅವರ ಜೊತೆ ಮದುವೆಯಾಯಿತು.
ವೆಂಕಟರಮಣನ್ ಅವರು ಒಂದು ಕಡೆ ಹೀಗೆ ಬರೆದಿದ್ದಾರೆ: “ನನ್ನ ಮನಸ್ಸಿನಲ್ಲಿದ್ದ ಜೀವನವನ್ನು ಕುರಿತ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಗುರುವನ್ನು ಡಿವಿಜಿ ಅವರಲ್ಲಿ ಕಂಡೆ. ನಾನು ಕೇಳದೆಯೇ ನನ್ನ ಪ್ರಶ್ನೆಗಳಿಗೆ ಉತ್ತರ ಅವರ ಬಳಿ ಸಿಗುತ್ತಿತ್ತು”.ಸುಮಾರು 18 ವರ್ಷ ಕಾಲಪ್ರತಿದಿನ ವೆಂಕಟರಮಣನ್ ಅವರು ಬೆಳಿಗ್ಗೆ 7:00 ಗಂಟೆಗೆ ಗುಂಡಪ್ಪನವರ ಮನೆಗೆ ಹೋಗಿ ಅವರಿಗೆ ಓದು ಬರವಣಿಗೆ ಕಾಗದ-ಪತ್ರ ಇವುಗಳಲ್ಲಿ ನೆರವಾಗಿ ಸುಮಾರು 9:30 ಘಂಟೆಗೆ ವಿಧಾನಸೌಧದ ಬಳಿ ಇರುವ ತಾವು ಕೆಲಸ ಮಾಡುತ್ತಿದ್ದ ಅಕೌಂಟೆಂಟ್ ಜನರಲ್ ಕಚೇರಿಗೆ ತೆರಳುತ್ತಿದ್ದರು. ಕಚೇರಿ ಮುಗಿಸಿಕೊಂಡು ಬಂದ ನಂತರ ಗೋಖಲೆ ಸಂಸ್ಥೆಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಸುಮಾರು 40 ವರ್ಷಗಳ ಕಾಲ ಗೋಖಲೆ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ವೆಂಕಟರಮಣನ್ ಅವರು ಸರ್ಕಾರದ ಯಾವುದೇ ಉನ್ನತ ಪರೀಕ್ಷೆಗಳನ್ನು ತೆಗೆದುಕೊಳ್ಳಲಿಲ್ಲ. ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಹೆಚ್ಚಿನ ಅಧಿಕಾರದೊಂದಿಗೆ ವರ್ಗಾವಣೆ ಆಗಿ, ಗುಂಡಪ್ಪನವರ ಸಾನ್ನಿಧ್ಯವನ್ನು ತೊರೆಯಬೇಕಾಗುತ್ತದೆ ಎಂದು ತಾವು ಸೇರಿದ ಅದೇ ಶ್ರೇಣಿಯಲ್ಲಿ ನಿವೃತ್ತರಾದರು.ಡಿವಿಜಿಯವರು ತಮ್ಮ ಶಿಷ್ಯರಿಗೆ ತಮ್ಮಲ್ಲಿದ್ದ ವಿದ್ಯೆಯನ್ನೆಲ್ಲ ಪಕ್ಷಪಾತವಿಲ್ಲದೆ ಧಾರೆ ಎರೆದರು ಎಂದರೆ ಅತಿಶಯೋಕ್ತಿ ಅಲ್ಲ.ವೆಂಕಣರಮಣನ್ ಗುಂಡಪ್ಪನವರ ಆಪ್ತ ಶಿಷ್ಯರಾಗಿ ಸಂಸ್ಕೃತ, ಇಂಗ್ಲಿಷ್ ಕ್ಲಾಸಿಕ್ಸ್ , ರಾಜಕೀಯ, ವಿಜ್ಞಾನ, ಸಂಗೀತ, ಅದ್ವೈತ ತತ್ವ ಅಲ್ಲದೆ ಪಾಶ್ಚಾತ್ಯ ತತ್ವಶಾಸ್ತ್ರ ಹೀಗೆ ವೈವಿಧ್ಯಪೂರ್ಣ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. ಆಳವಾದ ಅಭ್ಯಾಸವನ್ನೂ ಮಾಡಿದರು. ಡಿವಿಜಿಯವರ ಒಡನಾಟದಿಂದ ಅಧ್ಯಯನ ಅವರ ಪ್ರಕೃತಿ ಸಹಜ ಗುಣವಾಯಿತು. ವಿದ್ವಾನ್ ಎನ್. ರಂಗನಾಥ ಶರ್ಮರಿಂದ ಸಂಸ್ಕೃತವನ್ನೂ ಕಲಿತರು.
ವೆಂಕಟರಮಣನ್ ಅವರ ಮತ್ತೊಂದು ಪ್ರೀತಿಯ ಕಾರ್ಯಕ್ಷೇತ್ರ ಗೋಖಲೆ ಸಾರ್ವಜನಿಕ ಸಂಸ್ಥೆಯ ಪುಸ್ತಕ ಭಂಡಾರ. ಸಂಸ್ಥೆಯ ಕನ್ನಡ, ಸಂಸ್ಕೃತ, ಇಂಗ್ಲಿಷ್ ವಿಭಾಗದ ಪುಸ್ತಕಗಳನ್ನು ಬಹಳ ಆಸಕ್ತಿಯಿಂದ ಒಂದು ವ್ಯವಸ್ಥಿತವಾದ ರೀತಿಯಲ್ಲಿ ಜೋಡಿಸುವುದನ್ನು ಅವರು ಹಲವಾರು ವರ್ಷಗಳ ಕಾಲ ವ್ರತದಂತೆ ಕೈಗೊಂಡರು. ಸಂಸ್ಥೆಗೆ ಪುಸ್ತಕಗಳನ್ನು ಹುಡುಕಿಕೊಂಡು ಜನರು, ಅದರಲ್ಲೂ ಪಿಎಚ್.ಡಿ ಮಾಡುವ ವಿದ್ಯಾರ್ಥಿಗಳಿಗೆ ಅವರ ಸಂಶೋಧನೆಯ ವಿಷಯವನ್ನು ತಿಳಿದುಕೊಂಡು ಅವರಿಗೆ ಬೇಕಾದ ಪುಸ್ತಕಗಳನ್ನು ಬಹಳ ಕಳಕಳಿಯಿಂದ ತೆಗೆದು ಕೊಡುಕೊಡುತ್ತಿದ್ದರು. ಶತಾವಧಾನಿ ಡಾ. ಆರ್. ಗಣೇಶ್ ಅವರು ವೆಂಕಟರಮಣನ್ ಅವರು ಪುಸ್ತಕಗಳನ್ನು ತೆಗೆದು ಕೊಡುವುದಲ್ಲದೆ ನಮಗೆ ಬೇಕಾದ ವಿಚಾರಗಳನ್ನು ಹುಡುಕಿ ಅದನ್ನು ಸೂಚಿಸಲು ಒಂದು ಚೀಟಿಯನ್ನು ಸಹ ಇರಿಸುತ್ತಿದ್ದರು ಎಂದು ಸ್ಮರಿಸುತ್ತಾರೆ.ಗೋಖಲೆ ಸಂಸ್ಥೆಗೆ ಬರುತ್ತಿದ್ದ ಗುಂಡಪ್ಪನವರ ಅಭಿಮಾನಿಗಳು ಶಿಷ್ಯರು ಎಲ್ಲರೊಡನೆ ವೆಂಕಟರಮಣನ್ ಅವರಿಗೆ ಆತ್ಮೀಯವಾದ ಸಂಬಂಧವಿತ್ತು. ಗುಂಡಪ್ಪನವರು ಸಮಾಜದ ಒಳಿತಿಗಾಗಿ ನಡೆಸುತ್ತಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುತ್ತಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್‌ಐಸಿ 'ಜೀವನ್ ಆನಂದ್ ಯೋಜನೆ': ಅರ್ಹತೆ, ಪ್ರಯೋಜನ, ಇತರ ವಿವರ ಇಲ್ಲಿದೆ

Wed Feb 22 , 2023
  ಭಾರತದಲ್ಲಿ ಅತೀ ದೊಡ್ಡ ವಿಮಾ ಸಂಸ್ಥೆಯಾಗಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ನಿಮ್ಮ ಹೂಡಿಕೆಗೆ ಆದಾಯವನ್ನು ನೀಡುವುದರ ಜತೆಗೆ ಜೀವ ರಕ್ಷಣೆಯನ್ನು ನೀಡುತ್ತದೆ. ನಾವು ಯಾವುದೇ ರಿಸ್ಕ್ ಇಲ್ಲದೆ ಹೂಡಿಕೆ ಮಾಡುವ ವಿಚಾರಕ್ಕೆ ಬಂದಾಗ ಎಲ್‌ಐಸಿ ಅತೀ ಉತ್ತಮ ಆಯ್ಕೆ ಎಂದು ಹಲವಾರು ತಜ್ಞರುಗಳ ಅಭಿಪ್ರಾಯವಾಗಿದೆ. ಎಲ್‌ಐಸಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಇತ್ತೀಚೆಗೆ ಎಲ್‌ಐಸಿ”ಜೀವನ್ ಆನಂದ್ ಯೋಜನೆ” ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದು ಆ ಯೋಜನೆಯ […]

Advertisement

Wordpress Social Share Plugin powered by Ultimatelysocial