ದಯಾನಂದ ಸರಸ್ವತಿ ಆರ್ಯ ಸಮಾಜದ ಸಂಸ್ಥಾಪಕ

ದಯಾನಂದ ಸರಸ್ವತಿ ಗುಜರಾತಿನ ಟಂಕಾರಾ ಗ್ರಾಮದಲ್ಲಿ 1824ರ ಫೆಬ್ರವರಿ 12ರಂದು ಜನಿಸಿದರು. ಅವರ ಮೊದಲ ಹೆಸರು ಮೂಲಶಂಕರ. ತಂದೆ ಕೃಷ್ಣಜೀ ಲಾಲ್ಜಿ ಕಪಾಡಿ. ತಾಯಿ ಯಶೋದಾಬಾಯಿ. ಅವರದು ದಾನ ಧರ್ಮಗಳಿಗೆ ಹೆಸರಾದ ಶ್ರೀಮಂತ ಮನೆತನ. ಕುಲಪದ್ಧತಿಯಂತೆ ಬಾಲ್ಯದಲ್ಲಿಯೇ ಮೂಲ ಶಂಕರನ ವೇದಾಧ್ಯಯನ ಸಾಂಗವಾಗಿ ನೆರವೇರಿತು. ಶಿವರಾತ್ರಿಯ ದಿನ ಶಿವ ಲಿಂಗದ ಮೇಲೇರಿ ಅಕ್ಷತೆ ಕಾಳನ್ನು ಆರಿಸಿ ತಿನ್ನುತ್ತಿದ್ದ ಇಲಿ, ಪ್ರೀತಿಯ ಚಿಕ್ಕಪ್ಪ ಮತ್ತು ತಂಗಿಯ ಅಕಾಲಮೃತ್ಯು ಈ ಘಟನೆಗಳಿಂದ ಮೂಲಶಂಕರನ ಹೃದಯದಲ್ಲಿ ಬಗೆಬಗೆಯ ಪ್ರಶ್ನೆಗಳು ಎದ್ದುವು. ಜೀವಿತದಲ್ಲಿ ಇವಕ್ಕೆ ಉತ್ತರ ಪಡಯಲೇಬೇಕೆಂದು ಬಾಲಕ ದೃಢಸಂಕಲ್ಪ ಮಾಡಿದ. ಅದಕ್ಕಾಗಿ ತಂದೆ ತಾಯಿ ಸಂಪತ್ತು ಎಲ್ಲವನ್ನೂ ತೊರೆದ. ದುರ್ಗಮ ಅರಣ್ಯಗಳಲ್ಲಿ ಅಲೆದು ಯೋಗಿಗಳಿಂದ ಯೋಗ್ಯವಿದ್ಯೆಯ ಅನೇಕ ರಹಸ್ಯಗಳನ್ನರಿತ. 1848ರಲ್ಲಿ ಪೂರ್ಣಾನಂದ ಸರಸ್ವತಿಗಳು ಈ ಬ್ರಹ್ಮಚಾರಿಗೆ ಸಂನ್ಯಾಸದೀಕ್ಷೆಯನ್ನು ಕೊಟ್ಟು ದಯಾನಂದ ಸರಸ್ವತಿ ಎಂದು ಹೆಸರಿಟ್ಟರು.1858 ರಲ್ಲಿ ದಯಾನಂದರು ಮಥುರೆಗೆ ಬಂದು ವಿರಜಾನಂದ ಸರಸ್ವತಿಗಳಲ್ಲಿ ವೇದವೇದಾಂಗಗಳನ್ನು ಅಧ್ಯಯನ ಮಾಡಿದರು. ಮಧ್ಯಕಾಲದ ಸಂಕುಚಿತ ಮತಪಂಥಗಳು ದೇಶದಲ್ಲಿ ನೂರಾರು ಜಾತಿಪಂಗಡಗಳನ್ನು ಸೃಷ್ಟಿಸಿ, ರಾಗದ್ವೇಷಗಳನ್ನು ಬೆಳೆಸಿ ಭಾರತೀಯ ಸಮಾಜವನ್ನು ನುಚ್ಚುನೂರು ಮಾಡಿದವೆಂದು ವಿರಜಾನಂದರ ಭಾವನೆ. ಕುಲಜಾತಿ ಭೇದಗಳ ಸ್ವರ್ಶವಿಲ್ಲದ ವಿಶ್ವಮಾನತೆಯನ್ನು ಬೋಧಿಸುವ ಅತಿ ಪುರಾತನ ವೈದಿಕ ಧರ್ಮವನ್ನು ಪ್ರಚಾರ ಮಾಡಬೇಕೆಂದು ಶಿಷ್ಯನಿಗೆ ಅವರು ಆದೇಶ ನೀಡಿದರು.ದಯಾನಂದರು ಬದುಕಿರುವವರೆಗೆ ಗುರುಗಳ ಆದೇಶವನ್ನು ಪರಿಪಾಲಿಸಿದರು. ಯಜುರ್ವೇದ ಭಾಷ್ಯ, ಋಗ್ವೇದ ಭಾಷ್ಯ, ಸತ್ಯಾರ್ಥಪ್ರಕಾಶ, ವೇದಾಂಗಪ್ರಕಾಶ, ಮೊದಲಾದ ಗ್ರಂಥಗಳನ್ನು ರಚಿಸಿದರು. ಆ ಕಾಲದಲ್ಲಿ ಸುಪ್ರಸಿದ್ಧರಾಗಿದ್ದ ಶ್ರೀ ರಾಮಕೃಷ್ಣ ಪರಮಹಂಸ, ಕೇಶವಚಂದ್ರಸೇನ, ದೇವೇಂದ್ರನಾಥ ಠಾಕೂರ್ ಆಲ್ಕಾಟ್, ಈಶ್ವರಚಂದ್ರ ವಿದ್ಯಾಸಾಗರ ಮೊದಲಾದ ಮಹಾಪುರುಷರೊಡನೆ ವಿಚಾರವಿನಿಮಯ ನಡೆಸಿದರು. ಕ್ರಿ. ಶ. 1875ರಲ್ಲಿ ಮುಂಬಯಿಯಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು. ದೇಶದ ಬಹುಭಾಗಗಳಲ್ಲಿ ಸಂಚರಿಸಿ ವೈದಿಕ ಧರ್ಮವನ್ನು ಪ್ರಚಾರ ಮಾಡಿದರು. ಈ ಕಾಲದಲ್ಲಿ ಎಲ್ಲೆ ಮೀರಿದ ಕಷ್ಟಗಳನ್ನು ಅಪಮಾನಗಳನ್ನು ಸಹಿಸಿದರು.ದಯಾನಂದರು ಗುಜರಾತ್ ಪ್ರಾಂತದಲ್ಲಿ ಜನ್ಮ ತಾಳಿದವರಾದರೂ ಅವರ ಕಾರ್ಯಕ್ಷೇತ್ರ ವಿಶೇಷವಾಗಿ ಪಂಜಾಬ್ ಪ್ರಾಂತವಾಯಿತು. ಇಲ್ಲಿಯೇ ಅವರು ಆರ್ಯಸಮಾಜವೆಂಬ ದೊಡ್ಡ ಸಂಸ್ಥೆಯನ್ನು ಸ್ಥಾಪಿಸಿದರು. ವೇದಗಳ ಕಾಲದಿಂದೀಚೆಗೆ ಜನ್ಮ ತಾಳಿದ ಧರ್ಮಶಾಸ್ತ್ರಗಳು, ಗೃಹಸೂತ್ರಗಳು ಪುರಾಣಗಳು ವೇದದಷ್ಟು ಪ್ರಮಾಣಗ್ರಂಥಗಳೆಂದು ಗ್ರಹಿಸಬಾರದೆಂದು ಅವರು ವಾದಿಸಿದರು. ಅವು ಆರ್ಯರ ಅವನತಿಯ ಕಾಲದ ರಚನೆಗಳೆಂದು ಅವರು ಬಗೆದರು. ಮತ್ತೊಮ್ಮೆ ಭಾರತೀಯರು ವೇದಗಳ ಕಾಲದ ಉಪಾಸನೆಗಳನ್ನೂ ಆಚಾರಗಳನ್ನೂ ಸ್ವೀಕರಿಸಿ ತಮ್ಮ ಜೀವನ ಪದ್ಧತಿಗಳನ್ನು ಮಾರ್ಪಡಿಸಿಕೊಂಡರೆ ಮಾತ್ರ ಆರ್ಯ ಸಂಸ್ಕೃತಿ ಉಳಿದು ಪ್ರಪಂಚವನ್ನೆಲ್ಲ ಬೆಳಗುವುದೆಂಬ ದೃಢವಿಶ್ವಾಸವುಳ್ಳವರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಯುರ್ವೇದದ ಪ್ರಕಾರ ಮಲಗುವ ಮುನ್ನ ಹಾಲು ಕುಡಿಯಬಾರದು: ಯಾಕೆ ಗೊತ್ತಾ?

Sun Feb 12 , 2023
  ನಾವು ‘ಯಾವಾಗ ತಿನ್ನುತ್ತೇವೆ’ ಎಂಬುದು ನಾವು ‘ಏನು ತಿನ್ನುತ್ತೇವೆ’ ಎನ್ನುವಷ್ಟೇ ಮಹತ್ವದ ವಿಚಾರ. ಯಾವ ತರಹದ ಆಹಾರಗಳನ್ನು ಜೊತೆಗೂಡಿಸಿ ತಿನ್ನಬೇಕು? ಮತ್ತು ಯಾವುದನ್ನು ಯಾವ ಸಮಯದಲ್ಲಿ ತಿನ್ನಬೇಕು ಎನ್ನುವುದು ನಮ್ಮ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಮತ್ತು ದೇಹದೊಳಗೆ ಹೋಗುವ ಪೋಷಕಾಂಶಗಳು ಈ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ದೇಹ ಯಾವಾಗಲೂ ಕಾರ್ಯ ನಿರ್ವಹಿಸುತ್ತಾ ಇರುತ್ತದೆ. ಅದಕ್ಕೆ ತಡೆ ಒಡ್ಡದಂತೆ ಇರಲು ನಾವು ದಿನ ಪೂರ್ತಿ ತಿನ್ನುವ […]

Advertisement

Wordpress Social Share Plugin powered by Ultimatelysocial