ಡಿ. ಆರ್. ನಾಗರಾಜ್ ಕನ್ನಡದ ಮಹತ್ವದ ವಿದ್ವಾಂಸರು.

ದೊಡ್ಡಬಳ್ಳಾಪುರ ರಾಮಯ್ಯ ನಾಗರಾಜ್ 1954ರ ಫೆಬ್ರವರಿ 20ರಂದು ದೊಡ್ಡಬಳ್ಳಾಪುರದಲ್ಲಿ ಜನಿಸಿದರು. ತಂದೆ ರಾಮಯ್ಯ. ತಾಯಿ ಅಕ್ಕಯ್ಯಮ್ಮ. ನಾಗರಾಜ್ ಪ್ರೌಢ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಅಂದಿನ ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯಾದ ಅವರು ಆನರ್ಸ್ ಪದವಿಯನ್ನು ಅಲ್ಲಿಯೇ ಪಡೆದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪ್ರಾಪ್ತವಾಯಿತು. ಸ್ವಲ್ಪ ಕಾಲ ಸಂಶೋಧಕ ವೃತ್ತಿಯಲ್ಲಿದ್ದು ಅವರು ಅಲ್ಲಿಯೇ ಕನ್ನಡ ಅಧ್ಯಾಪಕರಾದರು; ಪ್ರವಾಚಕರಾದರು, ಕೈಲಾಸಂ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಆದರು.ವಿದಾರ್ಥಿ ಜೀವನದಿಂದಲೂ ಅಧ್ಯಯನಶೀಲರೂ ಚಿಂತನಪರರೂ ಆದ ನಾಗರಾಜ್ ನಿರಂತರ ಅಧ್ಯಯನಶೀಲತೆಯನ್ನು ಕೊನೆಯವರೆಗೂ ಉಳಿಸಿಕೊಂಡು ಬಂದರು. ಮಾರ್ಕ್ಸ್ ವಾದದಿಂದ ಪ್ರಭಾವಿತರಾದರೂ, ಲೋಹಿಯಾವಾದ ಅವರ ಹೃದಯವನ್ನು ಗೆದ್ದರೂ, ಗಾಂಧೀವಾದದಿಂದ ವಿಮುಖರಾಗಲಿಲ್ಲ. ಆದ್ದರಿಂದಲೇ ಅವರು ತಮ್ಮನ್ನು ಎಡಪಂಥೀಯ ಗಾಂಧೀವಾದಿ ಎಂದು ಕರೆದುಕೊಳ್ಳುತ್ತಿದುದುಂಟು.ಅಧ್ಯಯನ ಅವಧಿಯಲ್ಲಿ ಚರ್ಚಾಸ್ಪರ್ಧೆಗಳಲ್ಲಿ ವಿಶೇಷವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ನಾಗರಾಜರಿಗೆ ಅವು ತಮ್ಮ ವ್ಯಾಪಕವಾದ ಅಧ್ಯಯನವನ್ನು ಒರೆಹಚ್ಚುವ ಸಾಣೆಗಲ್ಲಾದದ್ದು ಒಂದು ವಿಶಿಷ್ಟ ಅಂಶವಾಗಿದೆ. ಕನ್ನಡ ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅವರು ಪಡೆದಿದ್ದ ಪ್ರಭುತ್ವ ಅವರನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಉತ್ತಮ ವಾಗ್ಮಿಯಾಗಿಸಿತ್ತು. ಹೀಗಾಗಿ ಅವರು ಎರಡೂ ಭಾಷೆಗಳಲ್ಲಿ ವಿಮರ್ಶಿಸುವ ಸಾಮರ್ಥ್ಯವನ್ನು ಪಡೆದಿದ್ದರು.ನಾಗರಾಜ್ ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದ ದಕ್ಷಿಣ ಭಾರತೀಯ ವಿಭಾಗದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಆಹ್ವಾನಿತರಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ವಿಭಾಗದ ನಿರ್ದೇಶಕರಾಗಿಯೂ ಹಾಗೆಯೇ ದೆಹಲಿಯ ವಿಕಾಸಶೀಲ ಸಮಾಜಗಳ ಅಧ್ಯಯನ ಕೇಂದ್ರದ ಸೀನಿಯರ್ ಫೆಲೋ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಸಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಫೆಲೋ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ತೌಲನಿಕ ಸಾಹಿತ್ಯ ಕೇಂದ್ರದ ಸಂಶೋಧಕ ಸಹಾಯಕರಾಗಿ ಆಗಿ ಕಾರ್ಯನಿರ್ವಹಿಸಿದ ಅವರು, ಇಂಗ್ಲೆಂಡ್, ಅಮೆರಿಕೆಯ ಶಿಕಾಗೋ, ಜರ್ಮನಿ, ಇಟಲಿ, ಬ್ರೆಜಿಲ್, ರಷ್ಯ, ಚೀನಾ ದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಲ್ಲದೆ ಭಾರತದ ವಿವಿಧ ಕ್ಷೇತ್ರಗಳಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ ವ್ಯಾಪಕವಾದ ಹಾಗೂ ಆಳವಾದ ವಿದ್ವತ್ತಿನ ವ್ಯಕ್ತಿಯಾಗಿದ್ದರು.ಡಾ. ನಾಗರಾಜ್ ಅವರದು ಪ್ರಧಾನವಾಗಿ ಸ್ವೋಪಜ್ಞತೆಯ ಹಾದಿ. ಅವರು ಪ್ರಧಾನವಾಗಿ ಆಯ್ದುಕೊಂಡ ಕ್ಷೇತ್ರ ವಿಮರ್ಶೆಯೇ ಆದರೂ ಅಲ್ಲಿಯೇ ಅವರು ತಮ್ಮ ಸೃಜನಾತ್ಮಕತೆಯನ್ನೂ ತೋರಿದ್ದಾರೆ. ‘ಕತ್ತಲೆ ದಾರಿ ದೂರ’ ಎಂಬ ನಾಟಕವನ್ನು ಅವರು ಬರೆದಿದ್ದು, ರಂಗದ ಮೇಲೂ ಅದು ಯಶಸ್ವಿಯಾಗಿದೆ. ಅನುಭಾವಿಯಾದ ರೂಮಿ ಕವಿಯನ್ನು ಉಪಯುಕ್ತ ವಿಮರ್ಶೆಯೊಂದಿಗೆ ಕನ್ನಡಕ್ಕೆ ಅನುವಾದಿಸಿದ್ದಾರೆ.
ನಾಗರಾಜ್ ಅವರ ಪ್ರಮುಖ ಕೃತಿಗಳು ಅಮೃತ ಮತ್ತು ಗರುಡ (1983), ಶಕ್ತಿ ಶಾರದೆಯ ಮೇಳ (1987), ನಾಗಾರ್ಜುನ (1993), ಸಾಹಿತ್ಯ ಕಥನ (1995), ಅಲ್ಲಮಪ್ರಭು ಮತ್ತು ಶೈವಪ್ರತಿಭೆ (1998) (ಇದು ಮರಣೋತ್ತರ ಪ್ರಕಟಣೆ). ಈ ಕೃತಿಗಳಲ್ಲದೆ ಅಕ್ಷರ ಚಿಂತನ ಮಾಲೆಗಾಗಿ ಅವರು ಹದಿನಾಲ್ಕು ಪುಸ್ತಕಗಳನ್ನು ಉಪಯುಕ್ತವೂ, ಅಧ್ಯಯನಶೀಲವೂ ಆದ ಮುನ್ನುಡಿಗಳೊಂದಿಗೆ ಸಂಪಾದಿಸಿಕೊಟ್ಟು ಸಂಪಾದನೆಯೂ ಒಂದು ಸೃಜನಕ್ರಿಯೆಯೇ ಎಂಬುದನ್ನು ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೋಷಕರ ಆಕ್ರೋಶಕ್ಕೆ ಮಣಿಯದ ಶಿಕ್ಷಣ ಸಂಸ್ಥೆ!

Mon Feb 20 , 2023
ಬೆಂಗಳೂರು : ಪೋಷಕರು, ರಾಜಕಾರಣಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಸಂಸ್ಥೆ ಕೊನೆಗೂ ಫೇಲ್ ಮಾಡಿದ್ದ ಯುಕೆಜಿ ವಿದ್ಯಾರ್ಥಿಯನ್ನು ಪಾಸ್ ಮಾಡಿದೆ. ಆನೇಕಲ್ ತಾಲೂಕಿನ ಹುಸ್ಕೂರು ಗೇಟ್ ಸಮೀಪದ ಬಳಿ ಇರುವ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ವ್ಯಾಸಂಗ ಮಾಡುತ್ತಿರುವ ಯುಕೆಜಿ ವಿದ್ಯಾರ್ಥಿಯನ್ನು ಫೇಲ್ ಮಾಡಿತ್ತು. ಹೀಗಾಗಿ ಶಾಲೆ ಆಡಳಿತ ಮಂಡಳಿ ವಿರುದ್ಧ ಪೋಷಕರು ಸೇರಿ ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸೇಂಟ್ […]

Advertisement

Wordpress Social Share Plugin powered by Ultimatelysocial