ಸರ್ಕಾರ ಪರಿಗಣಿಸಬೇಕಾದ ಅಂಶಗಳು,

ಬೆಂಗಳೂರು, ಫೆಬ್ರವರಿ 28; ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕದ ಸರ್ಕಾರಿ ನೌಕರರು ಮಾರ್ಚ್ 1ರ ಬುಧವಾರದಿಂದ ಉದ್ಯೋಗಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕರೆ ನೀಡಿದ್ದಾರೆ. ಸರ್ಕಾರಿ ನೌಕರರು ಮುಷ್ಕರ ನಡೆಸುವುದು ಬೇಡ.

ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. 7ನೇ ವೇತನ ಆಯೋಗ ಶಿಫಾರಸು ಜಾರಿಗೆ ಅಗತ್ಯವಿರುವ ಹಣ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರು ಮುಷ್ಕರ ನಡೆಸಬಾರದು ಎಂದು ಮುಖ್ಯಮಂತ್ರಿನೌಕರರಿಗೆ ಮನವಿ ಮಾಡಿದ್ದಾರೆ.

ಸರ್ಕಾರಿ ನೌಕರರು ಏಕೆ ಮುಷ್ಕರ ನಡೆಸುತ್ತಿದ್ದೇವೆ. ಸರ್ಕಾರ ಪರಿಗಣಿಸಬೇಕಾದ ಅಂಶಗಳು ಏನು? ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಾಜ್ಯದ ಎಲ್ಲಾ ಸರ್ಕಾರಿ, ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ, ಅನುದಾನಿತ ಸಂಸ್ಥೆಗಳ ವೃಂದ ಸಂಘಗಳು) ಬೆಂಗಳೂರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದೆ. ಈ ಪತ್ರದಲ್ಲಿಯೂ ಮುಷ್ಕರ ನಡೆಸುವ ಕುರಿತು ಮಾಹಿತಿಯನ್ನು ನೀಡಿದೆ.

 

ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಬರೆದಿರುವ ಪತ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ-ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳುತ್ತಿರುವ ಬಗ್ಗೆ ಎಂದು ವಿಷಯ ಪ್ರಸ್ತಾಪಿಸಲಾಗಿದೆ. ಸರ್ಕಾರ ನೌಕರರ ಜೊತೆ ಮಾತುಕತೆ ನಡೆಸದಿದ್ದರೆ ಬುಧವಾರದಿಂದ ಮುಷ್ಕರ ಆರಂಭವಾಗಲಿದೆ.

 

ಪತ್ರದ ವಿವರ ಈ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವೃಂದ ಸಂಘಗಳ ನೌಕರರೂ ಸೇರಿ ಸುಮಾರು 10 ಲಕ್ಷ ನೌಕರರನ್ನು ಪ್ರತಿನಿಧಿಸುವ ಸಂಘಗಳು ಆಯಾ ನೌಕರರಿಗೆ ಕಾಲಾನುಕಾಲಕ್ಕೆ ಸಿಗಬೇಕಾಗಿರುವ ಹಕ್ಕುಗಳನ್ನು ಒದಗಿಸುವ ಕಾರ್ಯವನ್ನು ಹಲವಾರು ವರ್ಷಗಳಿಂದ ಈಡೇರಿಸುತ್ತಾ ಬಂದಿವೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಅದ್ಭುತವಾಗಿರುವಂತಹ ಸಂಘಟನೆಯನ್ನು ಹೊಂದಿದ್ದು, ನಮ್ಮ ರಾಜ್ಯದಲ್ಲಿ ಸಮಸ್ತ 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಸಂಘಟನೆಯಾಗಿದೆ. ಇದರ ಜೊತೆ 200ಕ್ಕೂ ಹೆಚ್ಚು ವೃಂದ ಸಂಘಗಳು ನಮ್ಮ ಸಂಘದ ಜೊತೆ ಸಂಯೋಜನೆಯನ್ನು ಹೊಂದಿರುತ್ತವೆ ಎಂದು ಹೇಳಿದೆ.

 

ರಾಜ್ಯದಲ್ಲಿ ಶೇ 39ರಷ್ಟು ಹುದ್ದೆಗಳು ಖಾಲಿಯಿದ್ದಾಗ್ಯೂ ಸಹ ರಾಜ್ಯವು ದೇಶದ ಅಭಿವೃದ್ಧಿಯಲ್ಲಿ 5ನೇ ಸ್ಥಾನ, ಜಿಎಸ್‌ಟಿ ಸಂಗ್ರಹಣೆಯಲ್ಲಿ 2ನೇ ಸ್ಥಾನದಲ್ಲಿದೆ. ಕಳೆದ ವರ್ಷ 2.64 ಲಕ್ಷ ಕೋಟಿ ಹಾಗೂ ಈ ವರ್ಷ 3.09 ಲಕ್ಷ ಕೋಟಿ ಆಯವ್ಯಯದ ಗುರಿಯನ್ನು ಮುಟ್ಟುವಲ್ಲಿ ರಾಜ್ಯ ಸರ್ಕಾರಿ ನೌಕರರ ಪಾತ್ರ ಗಣನೀಯವಾಗಿದೆ. ರಾಜ್ಯ ಸರ್ಕಾರಿ ನೌಕರರು ರಾಜ್ಯದಲ್ಲಿ ಸಂಭವಿಸಿದ ಬರ, ಪ್ರವಾಹ, ಭೂಕಂಪಗಳು, ಅತಿವೃಷ್ಟಿ, ಅನಾವೃಷ್ಟಿ ಸಂದರ್ಭಗಳಲ್ಲಿ ದೇಣಿಗೆಯಾಗಿ ಸಾವಿರಾರು ಕೋಟಿ ರೂ.ಗಳನ್ನು ನೀಡಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಸರ್ಕಾರಿ ನೌಕರರು ತಮ್ಮ ಪ್ರಾಣವನ್ನು ಪಣಕಿಟ್ಟು ರಾಜ್ಯದ ಗೌರವವನ್ನು ಉಳಿಸಿರುತ್ತಾರೆ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ.

ರೂ. 200 ಕೋಟಿಗಳ ಒಂದು ದಿನದ ವೇತನ, ಕೋವಿಡ್ ಸಂದರ್ಭದ 18 ತಿಂಗಳ ತುಟ್ಟಿಭತ್ಯೆ ವ್ಯತ್ಯಾಸದ ಮೊತ್ತ ಸುಮಾರು ರೂ. 4 ಸಾವಿರ ಕೋಟಿ ಹಣವನ್ನು ಕೋವಿಡ್-19ರ ನಿರ್ವಹಣೆಗೆ ಬಿಟ್ಟುಕೊಡುವ ಮೂಲಕ ಸರ್ಕಾರದ ಜೊತೆ ಕೈಜೋಡಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುತ್ತೇವೆ. ಮಾನ್ಯ ಮುಖ್ಯಮಂತ್ರಿಗಳ ಕೋರಿಕೆ ಮೇರೆಗೆ ಅಶಕ್ತ ಗೋವುಗಳ ನಿರ್ವಹಣೆಗಾಗಿ ‘ಪುಣ್ಯಕೋಟಿ ದತ್ತು ಯೋಜನೆ’ಗೆ ರಾಜ್ಯ ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ಸುಮಾರು ರೂ. 40 ಕೋಟಿ ದೇಣಿಗೆಯನ್ನು ನೀಡಿರುತ್ತೇವೆ ಎಂದು ಸಂಘ ಪತ್ರದಲ್ಲಿ ತಿಳಿಸಿದೆ.

ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ನೌಕರರು, ನಿಗಮ/ ಮಂಡಳಿ/ ಪ್ರಾಧಿಕಾರದ 3 ಲಕ್ಷ ನೌಕರರು ಸರ್ಕಾರದ ಕಾರ್ಯಾಂಗ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಸುಮಾರು 5 ಲಕ್ಷ ನಿವೃತ್ತ ನೌಕರರು ಸೇರಿ ಒಟ್ಟು 14 ಲಕ್ಷ ನೌಕರರಿದ್ದಾರೆ. ನೌಕರರು ಉದ್ಯೋಗಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಕಳೆದ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಪರಿಗಣಿಸಬೇಕಾದ ಅಂಶಗಳು ರಾಜ್ಯದಲ್ಲಿ 4 ಕೋಟಿ ಜನಸಂಖ್ಯೆ ಇದ್ದಾಗ 7.63 ಲಕ್ಷ ಹುದ್ದೆಗಳಿದ್ದು, ಹಾಲಿ 6.50 ಕೋಟಿ ಜನಸಂಖ್ಯೆಗೆ 5.20 ಲಕ್ಷ ಹುದ್ದೆಗಳಲ್ಲಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು ಮಂಜೂರಾದ ಹುದ್ದೆಗಳಲ್ಲಿ ಶೇ. 39ರಷ್ಟು ಹುದ್ದೆಗಳು ಖಾಲಿಯಿದ್ದು, ನೌಕರರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನಸಂಖ್ಯೆ ಹಾಗೂ ಸರ್ಕಾರದ ಹೊಸ ಯೋಜನೆಗಳಿಗೆ ಅನುಗುಣವಾಗಿ ಹುದ್ದೆಗಳು ಭರ್ತಿ ಮಾಡದೇ ಇರುವುದರಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು ರೂ. 10 ಸಾವಿರ ಕೋಟಿ ಆರ್ಥಿಕ ಉಳಿತಾಯವಾಗುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯ ಜೊತೆಗೆ ಹೊಸ ತಾಲ್ಲೂಕು/ ಜಿಲ್ಲೆಗಳನ್ನು ಘೋಷಣೆ ಮಾಡಿರುವುದು ಸಹ ನೌಕರರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇದರ ನಡುವೆ ರಾಜ್ಯ ಸರ್ಕಾರದ ರಾಜಸ್ವ ಸಂಗ್ರಹ ಸಂಪನ್ಮೂಲ ಗುರಿ ಹಾಗೂ ಕ್ರೂಢೀಕರಣದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಕರ್ನಾಟಕ ರಾಜ್ಯವು ರಾಷ್ಟ್ರದಲ್ಲಿ ಜಿಎಸ್‌ಟಿ ಸಂಗ್ರಹಣೆಯಲ್ಲಿ 2ನೇ ಸ್ಥಾನ, ಅಭಿವೃದ್ಧಿ ಸೂಚ್ಯಾಂಕದಲ್ಲಿ 1 ನೇ ಸ್ಥಾನದಲ್ಲಿದೆ. ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯವು 5ನೇ ಸ್ಥಾನದಲ್ಲಿದೆ.

2018ರ ವಿಧಾನಸಭೆ ಚುನಾವಣೆಗೂ ಒಂದು ತಿಂಗಳ ಮುಂಚಿತವಾಗಿ 6ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಪಡೆದು ಶೇ 30 ವೇತನ ಹೆಚ್ಚಳ ಮಾಡಿ ಅಂದಿನ ಸರ್ಕಾರ ಸರ್ಕಾರಿ ಆದೇಶ ಹೊರಡಿಸಿತ್ತು ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲಾಗಿದೆ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ.

ಪ್ರಮುಖ ಬೇಡಿಕೆಗಳು

* ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ಕಾಲಕಾಲಕ್ಕೆ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಣೆಯೊಂದಿಗೆ ಪಡೆಯುವುದು ಅವರ ಮೂಲಭೂತ, ನ್ಯಾಯಸಮ್ಮತ ಹಕ್ಕಾಗಿರುತ್ತದೆ. ಪ್ರಸ್ತುತ ದಿನಗಳಲ್ಲಿ ನೌಕರರ ಜೀವನ ನಿರ್ವಹಣೆ, ಕೌಟುಂಬಿಕ ಬದುಕು, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನೌಕರರ ವೇತನ ಪರಿಷ್ಕರಣೆ ಮಾಡಿ ಆರ್ಥಿಕ ವ್ಯತ್ಯಾಸಗಳನ್ನು ಸರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ.

* ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ 5 ವರ್ಷಗಳಿಗೊಮ್ಮೆ ವೇತನ ಭತ್ಯೆಗಳನ್ನು ಪರಿಷ್ಕರಿಸಿ ನೀಡಬೇಕಾಗಿದ್ದು, ಅದರಂತೆ ದಿನಾಂಕ 01-07-2022 ರಿಂದ 7ನೇ ವೇತನ ಆಯೋಗದ ಆರ್ಥಿಕ ಸೌಲಭ್ಯಗಳನ್ನು ಜಾರಿಗೊಳಿಸಬೇಕಾಗಿತ್ತು. ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಸ್ಕೃತ ವರದಿಯನ್ನು ಸರ್ಕಾರಕ್ಕೆ ಹಾಗೂ ವೇತನ ಆಯೋಗಕ್ಕೆ ಈಗಾಗಲೇ ಸಲ್ಲಿಸಿರುತ್ತದೆ. ಆದಾಗ್ಯೂ ಸರ್ಕಾರ ಇದುವರೆವಿಗೂ ಅರ್ಹ ದಿನಾಂಕದಿಂದ ಸೌಲಭ್ಯ ನೀಡುವ ಯಾವುದೇ ಘೋಷಣೆಯನ್ನು ಮಾಡಿರುವುದಿಲ್ಲ.

* ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ದಿನಾಂಕ 01/07/2022ರಿಂದ ಪರಿಷ್ಕೃತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಆದಷ್ಟು ಬೇಗನೆ ಪಡೆದು, ಚುನಾವಣೆ ನೀತಿ ಸಂಹಿತೆಗಿಂತ ಮೊದಲು ಶೇ. 40 ಫಿಟ್‌ಮೆಂಟ್ ಸೌಲಭ್ಯವನ್ನು ದಿನಾಂಕ 01/07/2022ರಿಂದ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸುವುದು.

* ರಾಜ್ಯದ ಎನ್. ಪಿ. ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್. ಪಿ. ಎಸ್. ನೌಕರರನ್ನು ಓ. ಪಿ. ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್. ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು.

ಮೇಲ್ಕಂಡ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರು ದಿನಾಂಕ 01/03/2023ರ ಬುಧವಾರದಿಂದ ಅನಿರ್ಧಿಷ್ಟ ಅವಧಿಯವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ನಮ್ಮ ನ್ಯಾಯಯುತ ಹಕ್ಕು-ಬೇಡಿಕೆಗಳಿಗೆ ಆಗ್ರಹಿಸಿ ಹೋರಾಟವನ್ನು ಮಾಡುತ್ತೇವೆಂಬ ಅಂಶವನ್ನು ತಮ್ಮ ಗಮನಕ್ಕೆ ತರಲಾಗಿದೆ. ಪ್ರಮುಖ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವಂತೆ ದಿನಾಂಕ 21/02/2023 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಸುಮಾರು 6000 ಸಂಘದ ಚುನಾಯಿತ ಪ್ರತಿನಿಧಿಗಳು ಹಾಗೂ ರಾಜ್ಯದ ಎಲ್ಲಾ ವೃಂದ ಸಂಘಗಳ ಅಧ್ಯಕ್ಷರು, ಜಿಲ್ಲಾಧ್ಯಕ್ಷರುಗಳು ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಕುಟುಂಬದ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಯುಟ್ಯೂಬ್‌ನಲ್ಲಿ ಅತಿಹೆಚ್ಚು ಟ್ಯಾಗ್ ಆದ ಟಾಪ್ 10 ಬಿಗ್ಗೆಸ್ಟ್ ಸೌತ್ ಸ್ಟಾರ್ಸ್;

Tue Feb 28 , 2023
ಈ ಹಿಂದೆ ಚಿತ್ರವೊಂದರ ಹಾಡುಗಳು ಹಾಗೂ ಅದರ ವಿಶೇಷತೆಗಳೇನು ಎಂಬ ವಿಷಯ ಸಿನಿ ರಸಿಕರಿಗೆ ಮುಟ್ಟಬೇಕೆಂದರೆ ರೇಡಿಯೊ ಕ್ಯಾಸೆಟ್‌ಗಳು ಹಾಗೂ ದಿನಪತ್ರಿಕೆಗಳು ಅತಿಮುಖ್ಯದ್ದಾಗಿದ್ದವು. ಆದರೆ ಈಗಿನ ಮೊಬೈಲ್ ಡೇಟಾ ಯುಗದಲ್ಲಿ ಇವುಗಳಿಗೆ ಪರ್ಯಾಯವಾಗಿ ಯುಟ್ಯೂಬ್ ಹಾಗೂ ಆನ್‌ಲೈನ್ ನ್ಯೂಸ್ ಮತ್ತು ಎಂಟರ್‌ಟೈನ್‌ಮೆಂಟ್ ವೆಬ್‌ಸೈಟ್ ಹುಟ್ಟಿಕೊಂಡಿವೆ. ಚಿತ್ರಗಳ ಕುರಿತಾದ ಯಾವುದೇ ಮಾಹಿತಿ ಇರಲಿ ಈ ವೆಬ್‌ ತಾಣಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಲಭಿಸಲಿದೆ. ಇನ್ನು ಮುಂಬರುವ ಚಿತ್ರಗಳ ಹಾಡುಗಳು, ಟೀಸರ್ […]

Advertisement

Wordpress Social Share Plugin powered by Ultimatelysocial